ಮಕ್ಕಳಲ್ಲಿ ಅಪೌಷ್ಟಿಕಾಂಶತೆ

ಆಧುನಿಕತೆಯಲ್ಲಿ ವೈದ್ಯ ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಗ್ರಾಮೀಣ ಜನತೆಯ ಆರೋಗ್ಯವನ್ನು ಕಾಪಾಡಲು ಹಾಗೂ ಅವರಿಗೆ ಸಿಗಬೇಕಾದ ಪ್ರಥಮ ಆರೋಗ್ಯೊಪಚಾರ ಇನ್ನೂ ಕೈಗೆಟುಕದ ಚಂದಿರನಾಗಿ ಪರಿಣಮಿಸಿದೆ. ಭಾರತದಂತ ಅಭಿವೃದ್ದೀಶೀಲ ರಾಷ್ಟ್ರಗಳಲ್ಲಿ ಅನಕ್ಷರತೆ ಮತ್ತು ಬಡತನ ತಾಂಡವವಾಡಿ ಹಲವಾರು ಸಾಂಕ್ರಾಮಿಕ ರೋಗಗಳಿಗೆ ಹೆದ್ದಾರಿಯನ್ನು ನಿರ್ಮಿಸುತ್ತಿದೆ. ವಿಶ್ವದಾದ್ಯಂತ ಕಂಟಕಪ್ರಾಯವಾಗಿರುವ ಮಕ್ಕಳಲ್ಲಿನ ಅಪೌಷ್ಠಿಕಾಂಶತೆ ದೇಶದ ನೂರು ಜಿಲ್ಲೆಗಳ ಮಕ್ಕಳಲ್ಲಿ ಅಪೌಷ್ಟಿಕತೆ ತೀವ್ರವಾಗಿದೆ.

ಕರ್ನಾಟಕದಲ್ಲಿ ಒಂದು ಸಮೀಕ್ಷೆಯ ಪ್ರಕಾರ ಸುಮಾರು 70 ಲಕ್ಷ ಮಕ್ಕಳಿವೆ. ಅದರಲ್ಲಿಯೂ ಉತ್ತರ ಕರ್ನಾಟಕದ ಜಿಲ್ಲೆಗಳಾದ ರಾಯಚೂರ, ಕೊಪ್ಪಳ, ಬಳ್ಳಾರಿ, ಗುಲ್ಬರ್ಗಾ ಬಿಜಾಪೂರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿನ ಮಕ್ಕಳಲ್ಲಿ ಅಪೌಷ್ಠಿಕಾಂಶತೆ ತಾಂಡವವಾಡುತ್ತಿದೆ. ರಾಜ್ಯದಲ್ಲಿ 35ಕ್ಕೂ ಮೇಲ್ಪಟ್ಟು ವೈದ್ಯಕೀಯ ಮಹಾವಿದ್ಯಾಲಯಗಳಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆ ಲಭಿಸದೇ ಅನೇಕ ರೋಗಗಳು ಸೂಪ್ತವಾಗಿ ಹರಡುತ್ತಿವೆ. ಆದರೆ ವೈದ್ಯ ಮಹಾವಿದ್ಯಾಲಯಗಳು ಇವುಗಳ ಕುರಿತು ಲಕ್ಷ ವಹಿಸದೇ ಇರುವದು ಅತ್ಯಂತ ವಿಷಾದನೀಯ. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಯನ್ನು ಉತ್ತಮಗೊಳಿಸಲು ಸರಕಾರದೊಂದಿಗೆ ಮಹಾವಿದ್ಯಾಲಯಗಳು ಕೈಜೋಡಿಸಬೇಕು ಅಂದಾಗ ಮಾತ್ರ ರೋಗಗಳನ್ನು ತಡೆಗಟ್ಟಿ ಸುಭದ್ರ ಸಮಾಜ ನಿರ್ಮಿಸಲು ಸಾಧ್ಯ.

2011 ವಿಶ್ವ ಹಸಿವಿನ ಪಟ್ಟಿಯಲ್ಲಿ 15ನೇ ಸ್ಥಾನ ಪಡೆದಿದ್ದು, ಅಭಿವೃದ್ದಿ ಹೊಂದುತ್ತಿರುವ ಭಾರತದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗಿದೆ. ಗ್ರಾಮೀಣ ಭಾರತದ 5 ವರ್ಷದೊಳಗಿನ ಶೇ. 59 ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಸ್ವತಂತ್ರ ಭಾರತದಲ್ಲಿ ಬಡತನ ತಾಂಡವವಾಡುತ್ತಿದೆ. ಸಾಮಾಜಿಕ, ಆರ್ಥಿಕ ಏರುಪೇರುಗಳಿಂದ ಅನ್ನ ನೀರಿಗಾಗಿ ಪರದಾಡುವಂತಾಗಿದೆ. ಕಾರಣ ಸಾಮಕ್ರಾಮಿಕ ರೋಗಗಳು ಅದ್ಭುತವಾಗಿ ಬೆಳವಣಿಗೆ ಸಾಧಿಸುತ್ತಿವೆ. ಹೃದ್ರೋಗ, ಮಧುಮೇಹ, ಕ್ಯಾನ್ಸರ, ನ್ಯೂಮೋನಿಯಾ, ಟ್ಯುಬರಕೊಲೊಸಿಸ್ (ಕ್ಷಯ)ನಂತಹ ರೋಗಗಳು ತೀವ್ರಗತಿಯಲ್ಲಿ ಬೆಳೆಯುತ್ತಿರುವ ಅರ್ಥಿಕ ವ್ಯವಸ್ಥೆಗೆ ಪೆಟ್ಟು ನೀಡುತ್ತಿದೆ.

malnourishment
PC: DNAINDIA

ಅಪೌಷ್ಠಿಕತೆ ಎಂದರೇನು ?

ಬೆಳೆಯುತ್ತಿರುವ ಪ್ರತಿ ಮಕ್ಕಳ ತೂಕ ಹೆಚ್ಚಾಗುತ್ತಾ ದಪ್ಪಪುಷ್ಠವಾಗಿ ಬೆಳೆಯಬೇಕು. ಆದರೆ ಮಕ್ಕಳು ವಯಸ್ಸಿಗೆ ತಕ್ಕಂತೆ ಬೆಳವಣಿಗೆಯಾಗದೇ ತೂಕ ಕಳೆದುಕೊಳ್ಳುವದರಿಂದ ಅಪೌಷ್ಠಕಾಂಶತೆ ಬಂದೆರಗುತ್ತದೆ. ಇದರಲ್ಲಿ ಎರಡು ಹಂತಗಳಿದ್ದು, ಮೊದಲನೆಯದು ಪ್ರಾರಂಭಿಕ ಹಾಗೂ ಎರಡನೇಯದು ತೀವ್ರತರವಾದದ್ದು. ಇದು 6 ವರ್ಷದೊಳಗಿನ ಮಕ್ಕಳಲ್ಲಿ ಅತ್ಯಧಿಕವಾಗಿ ಕಂಡು ಬರುತ್ತದೆ. ಬೆಳೆಯುತ್ತಿರುವ ಮಕ್ಕಳಿಗೆ ಪೌಷ್ಠಿಕ ಆಹಾರ ಸರಿಯಾದ ಪ್ರಮಾಣದಲ್ಲಿ ಲಭಿಸದೇ ದೇಹದ ಬೆಳವಣಿಗೆಯಲ್ಲಿ ಅಸಮತೋಲನ ಉಂಟಾಗಿ ಅನೇಕ ರೋಗಗಳಿಗೆ ತುತ್ತಾಗುತ್ತಾರೆ. ಮಕ್ಕಳ ಬೆಳವಣಿಗೆಗೆ ತಕ್ಕಂತೆ ಅವಶ್ಯವಿರುವ ಸಮತೋಲಿತ ಆಹಾರ ಸಿಗುವುದಿಲ್ಲ. ಹುಟ್ಟಿನಿಂದ ಮಕ್ಕಳ ಪಾಲನೆ ಪೋಷಣೆ ಅಲ್ಲದೇ ನಿಯಮಿತ ಆಹಾರ ಸರಿಯಾಗಿ ನೀಡಲಾಗುವುದಿಲ್ಲ. ಅಲ್ಲದೇ ನೀಡಿದ ಆಹಾರವು ಮಕ್ಕಳಿಗೆ ಪಚಿನವಾಗದೇ ಇರುವದರಿಂದ ಸಣಕಲು ದೇಹವನ್ನು ಹೊಂದಿ ಅಶಕ್ತರಾಗುತ್ತಾರೆ. ಇದರಿಂದ ಮಕ್ಕಳು 6 ವರ್ಷ ತಲುಪುವದರೊಳಗೆ ಸಾವನ್ನಪ್ಪುತ್ತವೆ ಎಂದು ಎಚ್ಚರಿಸುತ್ತಾರೆ ಚಿಕ್ಕಮಕ್ಕಳ ತಜ್ಞವೈದ್ಯರಾದ ಡಾ. ಸುಜಾತಾ ಜಾಲಿ ಅವರು.

ಕಾರಣಗಳು: ಪ್ರಥಮಾರ್ಧದಲ್ಲಿ ಸಮತೋಲಿತ ಆಹಾರ ಲಭಿಸದೇ ಇರುವದು. ಇದಕ್ಕೆ ಮುಖ್ಯ ಕಾರಣವೆಂದರೆ ಬಡತನ , ಸಾಮಾಜಿಕ, ಆರ್ಥಿಕ ತೊಂದರೆಗಳು. ಅತ್ಯಧಿಕವಾಗಿ ಬಡ ಕುಟುಂಬಗಳಲ್ಲಿ ಸಮಸ್ಯೆ ಇದೆ. ಚಿಕ್ಕ ವಯಸ್ಸಿನಲ್ಲಿ ಮದುವೆ ಹಾಗೂ ಮಕ್ಕಳಿಗೆ ಜನನ ನೀಡುವದು. ಅದರಲ್ಲೂ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಕೇವಲ 14 ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಮಕ್ಕಳಿಗೆ ಅಗತ್ಯವಿರುವ ಪೌಷ್ಠಿಕ ಆಹಾರಗಳಾದ ಹಾಲು, ಹಾಲಿನ ಉತ್ಪನ್ನಗಳು, ಹಣ್ಣು, ರಸವತ್ತಾದ ತರಕಾರಿ ಸೇರಿದಂತೆ ವಿವಧ ಪೌಷ್ಠಿಕಾಂಶಗಳುಳ್ಳ ಆಹಾರವನ್ನು ಒದಗಿಸಲು ಸಾಧ್ಯವಾಗುವುದಿಲ್ಲ.

ನವಜಾತ ಶಿಶುಗಳಿಗೆ ತಾಯಿಯು ತನ್ನ ಎದೆಹಾಲನ್ನು ಸುಮಾರು 6 ತಿಂಗಳವರೆಗೆ ಕಡ್ಡಾಯವಾಗಿ ಉಣಿಸಲೇಬೇಕು. ಎದೆಹಾಲಿಗಿಂತ ಒಳ್ಳೆಯ ಪೌಷ್ಠಿಕಾಂಶವುಳ್ಳ ಆಹಾರ ಬೇರೊಂದಿಲ್ಲ. ಮಕ್ಕಳಿಗೆ ಅಗತ್ಯವಿರುವ ಅತ್ಯುತ್ತಮ ಆಹಾರ ಇದಾಗಿದೆ. ಡಬ್ಲುಹೆಚ್ ಸಮೀಕ್ಷೆ ಪ್ರಕಾರ ಪ್ರತಿ ವರ್ಷ ಸುಮಾರು 1.5 ಮಿಲಿಯನ್ ಮಕ್ಕಳು ಸಾವನ್ನುಪ್ಪುತ್ತಿವೆ. ಆದ್ದರಿಂದ ಅವರಿಗೆ ರಾಗಿ, ಅನ್ನ, ಗಂಜಿಯೊಂದಿಗೆ ಹಾಲನ್ನು ಬೆರೆಸಿ ನೀಡಬೇಕು. ಕೆಲಸ ನಿರ್ವಹಿಸುತ್ತಿರುವ ತಾಯಂದಿರು ಮಕ್ಕಳ ಪಾಲನೆ ಪೋಷಣೆಯಲ್ಲಿ ಅತ್ಯಂತ ಜಾಗರೂಕತೆಯಿಂದ ಮಾಡಬೇಕು.

ಚಿಕಿತ್ಸೆ ಮತ್ತು ತಡೆಗಟ್ಟುವಿಕೆ:

ಅಪೌಷ್ಠಿಕಾಂಶತೆಯಿಂದ ಬಳಲುತ್ತಿರುವ ಮಕ್ಕಳನ್ನು ಆದಷ್ಟು ಬೇಗ ಕಂಡು ಹಿಡಿದು ಅವರಿಗೆ ಸರಿಯಾದ ಚಿಕಿತ್ಸೆ ನೀಡಬೇಕು. ಅಲ್ಲದೇ ಅನಿವಾರ್ಯವಾದರೆ ಸಮೀಪದ ಚಿಕ್ಕಮಕ್ಕಳ ತಜ್ಞವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು. ಅಪೌಷ್ಠಿಕಾಂಶತೆಯನ್ನು ತಡೆಗಟ್ಟಲು ಮುಖ್ಯವಾಗಿ ಜಾಗೃತೆ ಮೂಡಿಸುವದು ಅತ್ಯವಶ್ಯ. ಶಿಕ್ಷಣ ನೀಡುವದು. ಅಂಗನವಾಡಿ ಕೇಂದ್ರಗಳು ಮಕ್ಕಳನ್ನು ಗುರುತಿಸಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡುವದು. ಚುಚ್ಚುಮದ್ದು, ಅಗತ್ಯವಾದ ಔಷಧಿ ನೀಡುವದು. ಸ್ತನಪಾನ ಸೇರಿದಂತೆ ತಾಯಿ ಮಕ್ಕಳ ಆರೋಗ್ಯದ ಕುರಿತು ಜಾಗೃತೆ ಮೂಡಿಸಲು ರಹದಾರಿಯನ್ನು ನಿರ್ಮಿಸಿ, ಮಕ್ಕಳ ಸಾವಿನ ಸಂಖ್ಯೆಯನ್ನು ತಡೆಗಟ್ಟಬೇಕು. ಪೌಷ್ಠಿಕಾಂಶ ಕೇಂದ್ರಗಳನ್ನು ಸ್ಥಾಪಿಸಿ ಮಕ್ಕಳ ಪಾಲನೆ ಮಾಡುವದು. ಆಹಾರ ತಜ್ಞರು ಸೂಚಿಸುವ ಉತ್ಪನ್ನಗಳನ್ನು ನಿಯಮಿತವಾಗಿ ನೀಡಬೇಕು. ಹಾಲು ಮತ್ತು ಹಾಲಿನ ಉತ್ಪನ್ನ , ಕೋಳಿ ತತ್ತಿ, ಪೌಷ್ಠಿಕಾಂಶ ಭರಿತ ದವಸ ಧಾನ್ಯಗಳಿಂದ ಮಾಡಲ್ಪಟ್ಟ ಆಹಾರ ನೀಡುವದರಿಂದ ಅಪೌಷ್ಠಕಾಂಶತೆಯನ್ನು ತಪ್ಪಿಸಿ ಮಕ್ಕಳ ಸಾವಿನ ಪ್ರಮಾಣವನ್ನು ತಗ್ಗಿಸಬಹುದು.

Jali

Dr. Sujata M Jali, Pediatrician, Professor Dept. of Pediatric JN Medical College & Consultant, KLES Dr. Prabhakar Kore Hospital & MRC, Belagavi.
For any queries please send mail to myarogya.in@gmail.com

LEAVE A REPLY

Please enter your comment!
Please enter your name here