ಕೃಪೆ ಪ್ರಜಾವಾಣಿ
ಬೆಂಗಳೂರು: ಕೊರೊನಾವೈರಸ್ ಹರಡುವ ಭೀತಿಯಿಂದಾಗಿ, ರಾಜ್ಯಕ್ಕೆ ಪ್ರವಾಸ ಬರುವ ಚೀನಾದ ವುಹಾನ್ ನಗರದ ಪ್ರಜೆಗಳ ಚಲನವಲನಗಳ ಮೇಲೆ ನಿಗಾ ಇಡುವ ಜತೆಗೆ ಅವರ ಆರೋಗ್ಯವನ್ನು ಪ್ರತಿನಿತ್ಯ ವಿಚಾರಿಸಲಾಗುತ್ತಿದೆ.
ರಾಜ್ಯಕ್ಕೆ ಬಂದ ಅಲ್ಲಿನ ಪ್ರಜೆಗಳು ವಾಪಸ್ ತೆರಳುವವರೆಗೂ ಅವರ ಆರೋಗ್ಯ ವಿಚಾರಿಸುವಂತೆ ಆರೋಗ್ಯ ಕಾರ್ಯಕರ್ತೆಯರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸೂಚಿಸಿದೆ.
ವುಹಾನ್ ನಗರದ ವ್ಯಕ್ತಿಯೊಬ್ಬರು ಈಗಾಗಲೇ ಬೆಂಗಳೂರಿಗೆ ಬಂದಿದ್ದಾರೆ. ಅವರಿರುವ ಸ್ಥಳಕ್ಕೆ ಆರೋಗ್ಯ ಕಾರ್ಯಕರ್ತೆಯರು ನಿತ್ಯ ಭೇಟಿ ನೀಡಿ, ಮಾಹಿತಿ ಕಲೆಹಾಕುತ್ತಿದ್ದಾರೆ. ಒಂದು ವೇಳೆ ಅವರಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸಿದಲ್ಲಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಜ್ವರ, ಕೆಮ್ಮು, ನ್ಯುಮೋನಿಯಾ, ಉಸಿರಾಟದ ಸಮಸ್ಯೆ ಕೊರೊನಾವೈರಸ್ ಲಕ್ಷಣಗಳಾಗಿದ್ದು, ವಿಮಾನ ನಿಲ್ದಾಣದಲ್ಲಿ ಯಾವುದೇ ವ್ಯಕ್ತಿಯಲ್ಲಿ ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡಲ್ಲಿ ನೇರವಾಗಿ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಗೆ ಆಂಬುಲೆನ್ಸ್ ಮೂಲಕ ಕರೆತರುವಂತೆ ಅಲ್ಲಿನ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚಿಸಿದೆ.
ಮಾಹಿತಿ ನೀಡುವಿಕೆ ಕಡ್ಡಾಯ: ‘ಆರೋಗ್ಯ ಕಾರ್ಯಕರ್ತೆಯರಿಗೆ ಅಲ್ಲಿನ ಪ್ರಜೆಗಳು ಕಡ್ಡಾಯವಾಗಿ ಮಾಹಿತಿಯನ್ನು ನೀಡಬೇಕು. ಒಂದು ವೇಳೆ ಮಾಹಿತಿ ನೀಡಲು ನಿರಾಕರಿಸಿದಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಅವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳುವುದಾದರೂ ತಿಳಿಸಬೇಕು’ ಎಂದು ಇಲಾಖೆಯ ಜಂಟಿ ನಿರ್ದೇಶಕ ಡಾ.ಪ್ರಕಾಶ್ ಕುಮಾರ್ ಅವರು ತಿಳಿಸಿದ್ದಾರೆ.
‘ಥಾಯ್ಲೆಂಡ್, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲೂ ವೈರಸ್ ಪ್ರಕರಣಗಳು ಪತ್ತೆಯಾಗಿದ್ದರಿಂದ ಅಲ್ಲಿಂದ ಬರುವವರನ್ನೂ ಒಂದು ವಾರದಿಂದ ತಪಾಸಣೆಗೆ ಒಳಪಡಿಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಈವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ವಿಮಾನ ನಿಲ್ದಾಣದ ಸಿಬ್ಬಂದಿಯ ಜತೆಗೆ ಇಲಾಖೆಯಿಂದಲೂ ನಾಲ್ವರು ಸಿಬ್ಬಂದಿಯನ್ನು ಒದಗಿಸಲಾಗಿದೆ’ ಎಂದರು.
ಸೋಂಕು ಬರದಂತೆ ಎಲ್ಲ ಮುಂಜಾಗ್ರತೆ ವಹಿಸಲಾಗಿದೆ. ಚಿಕಿತ್ಸೆ ಒದಗಿಸಲು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಮೀಸಲಿಟ್ಟಿದ್ದೇವೆ
ಡಾ.ಪ್ರಕಾಶ್ ಕುಮಾರ್, ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ
ವೈರಸ್‌ನಿಂದ ಸಾವಿಗೀಡಾದವರ ಸಂಖ್ಯೆ 9ಕ್ಕೆ
ಬೀಜಿಂಗ್ (ಪಿಟಿಐ/ಎಎಫ್‌ಪಿ): ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೊನಾವೈರಸ್‌ನಿಂದ ಸಾವಿಗೀಡಾದವರ ಸಂಖ್ಯೆ ಒಂಬತ್ತಕ್ಕೆ ಏರಿದೆ. ವೈರಸ್ ಮತ್ತೆ ಹರಡುತ್ತಿದ್ದು, ಇದುವರೆಗೆ 440 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಸಾವಿಗೀಡಾದ ಒಂಬತ್ತು ಮಂದಿ ಹುಬೈ ಪ್ರಾಂತ್ಯಕ್ಕೆ ಸೇರಿದ್ದಾರೆ. ಹುಬೈ ಪ್ರಾಂತ್ಯದ ವುಹಾನ್ ನಗರದಲ್ಲೇ ಅತಿ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿವೆ. ಚೀನಾದಲ್ಲಿ ಈಗ ಕಾಣಿಸಿಕೊಂಡಿರುವ ವೈರಸ್ ಈ ಮೊದಲು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈ ವೈರಸ್‌ನಿಂದ ಜ್ವರ, ಕೆಮ್ಮು, ಉಸಿರಾಟದ ತೊಂದರೆಯಿಂದ ನಾಗರಿಕರು ಬಳಲುತ್ತಿದ್ದಾರೆ.
ಜಪಾನ್‌ನಲ್ಲಿ ಒಂದು, ಥಾಯ್ಲೆಂಡ್‌ನಲ್ಲಿ ಮೂರು ಹಾಗೂ ಕೊರಿಯಾ ಮತ್ತು ಅಮೆರಿಕದಲ್ಲಿ ತಲಾ ಒಂದು ಕೊರೊನಾವೈರಸ್‌ನ ಪ್ರಕರಣಗಳು ಪತ್ತೆಯಾಗಿವೆ. ವುಹಾನ್ ನಗರದಿಂದ ಬಂದ ವ್ಯಕ್ತಿಯಲ್ಲೇ ವೈರಸ್ ಇರುವುದು ದೃಢಪಟ್ಟಿದೆ. ವಿದೇಶಿ ಪ್ರವಾಸಿಗರ ಭೇಟಿಯನ್ನು ಉತ್ತರ ಕೊರಿಯಾ ನಿಷೇಧಿಸಿದೆ.
ಒಂಬತ್ತು ಸಾವಿರ ಪ್ರಯಾಣಿಕರ ತಪಾಸಣೆ
ನವದೆಹಲಿ (ಪಿಟಿಐ): ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ 9,156 ಪ್ರಯಾಣಿಕರನ್ನು ಕೊರೊನಾವೈರಸ್‌ಗಾಗಿ ತಪಾಸಣೆ ಮಾಡಲಾಗಿದ್ದು, ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದಾನ್ ಬುಧವಾರ ತಿಳಿಸಿದ್ದಾರೆ.