ನಾವು ಎಷ್ಟೇ ಸಂಪತ್ತನ್ನು ಹೊಂದಿದ್ದರೂ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದರೆ ಅದು ಪ್ರಯೋಜನಕ್ಕೆ ಬಾರದು. ನೆನಪಿರಲಿ ಆರೋಗ್ಯವೇ ಭಾಗ್ಯ. ಆರೋಗ್ಯಕ್ಕಿಂತ ಯಾವುದೂ ಮೇಲಲ್ಲ. ಸದೃಢ ದೇಹದೊಂದಿಗೆ ಆರೋಗ್ಯಯುತವಾಗಿರುವದು ಜೀವನದ ಕಲೆ. ಆಹಾರ ಪದ್ಧತಿ, ಜೀವನ ಶೈಲಿ ಸೇರಿದಂತೆ ಅನೇಕ ಕ್ರಮಗಳು ನಮ್ಮ ಆರೋಗ್ಯದ ಮೇಲೆ ನೇರ ಅಥವಾ ಪರೋಕ್ಷ ಪರಿಣಾಮ ಬೀರುತ್ತವೆ. ಆದ್ದರಿಂದ ಕಾಯಿಲೆಗೆ ತುತ್ತಾಗುವ ಮುಂಚೆ ಅದರ ಕುರಿತು ಎಚ್ಚರಿಕೆ ವಹಿಸುವದು ಹಾಗೂ ತಡೆಗಟ್ಟಲು ಜಾಗೃತೆವಹಿಸುವದು ಅತೀ ಮುಖ್ಯ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) “ಸಮಾಜದ ಯೋಗಕ್ಷೇಮ’ ಎಂಬ ಪರಿಕಲ್ಪನೆಯಡಿ ಎ.7ರಂದು ವಿಶ್ವ ಆರೋಗ್ಯ ದಿನಾಚರಣೆ ಆಚರಿಸಲಿದೆ.
ಆರೋಗ್ಯ ಪೂರ್ಣ ಜೀವನಕ್ಕೆ ಕೆಲವು ಟಿಪ್ಸ್‌ಗಳನ್ನು ನೀಡಿದ್ದಾರೆ.
ಕೋವಿಡ್ ನಂತರದ ಜೀವನ.
ಎಂದೂ ಕೇಳರಿಯದ ಮಹಾಮಾರಿ ಕೊರೊನಾ ಎಂಬ ವೈರಸ್ ಜನ ಸಾಮಾನ್ಯರಲ್ಲಿ ಭೀತಿಯನ್ನುಂಟು ಮಾಡಿ ಆರೋಗ್ಯವಲಯನ್ನೇ ಅಲುಗಾಡಿಸಿತು. ಅನೇಕ ಜನರ ಇದರಿಂದ ಬಳಲಿದರು ಮತ್ತು ಜೀವವನ್ನು ಕಳೆದುಕೊಂಡರು. ಪ್ರಸಕ್ತ ಸಾಲಿನಲ್ಲಿ ಅದರ ತೀವ್ರತೆಯ ಪ್ರಮಾಣ ಕಡಿಮೆಯಾಗಿದೆ. ಮುಂದೆ ಈ ರೀತಿಯ ವೈರಸ್ ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಲಸಿಕೆ ಪಡೆದಿರುವುದು ಸಾಕಷ್ಟು ರೀತಿಯಲ್ಲಿ ಪರಿಣಾಮ ಬೀರಿದೆ. ಕೋವಿಡ್ ಮುಗಿಯಿತು ಎಂಬ ಮಾನಸಿಕತೆಯಲ್ಲಿ ಸಂಪೂರ್ಣ ಮೈಮರೆವು ಒಳ್ಳೆಯದಲ್ಲ. ಮಕ್ಕಳು, ವಯಸ್ಸಾದವರು, ಶ್ವಾಸಕೋಶ, ಕಿಡ್ನಿ ಸಂಬಂಧಿಸಿದ ಕಾಯಿಲೆ ಇರುವವರು ಜನದಟ್ಟಣೆಯ ಪ್ರದೇಶದಿಂದ ದೂರ ಇರಬೇಕು ಎಂದು ತಜ್ಞವೈದ್ಯರು ಎಚ್ಚರಿಕೆ ನೀಡುತ್ತಾರೆ.
ರೋಗ ನಿರೋಧಕ ಶಕ್ತಿ ವೃದ್ದಿಸುವ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಮನೆ ಸಹಿತವಾಗಿ ನಾವಿರುವ ಪರಿಸರದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲೇ ಬೇಕು. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವವರು ಕೊರೊನಾದಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ಕೊರೊನಾ ವೈರಸ್ ಶ್ವಾಸಕೋಶಕ್ಕೆ ಹಾನಿ ಮಾಡಿದ್ದರೆ ಅದು ಸರಿಹೋಗುವುದಿಲ್ಲ. ಆಗಾಗ ಉಸಿರಾಟದ ಸಮಸ್ಯೆ, ಅಸ್ತಮಾ ರೀತಿಯಲ್ಲೂ ಕಾಣಿಸಿಕೊಳ್ಳಬಹುದು. ನಿರಾಸಕ್ತಿ, ಮೈ-ಕೈ ನೋವು, ಸುಸ್ತಾಗುವುದು ಇತ್ಯಾದಿ ಕಾಣಸಿಕೊಳ್ಳುತ್ತಿರಬಹುದು. ಇದಕ್ಕೆಲ್ಲ ವೈದ್ಯರ ಸಲಹೆಯೊಂದಿಗೆ ಚಿಕಿತ್ಸೆ ಪಡೆಯುವುದು ಒಳ್ಳೆಯದು.
ಬೇಸಗೆಯಲ್ಲಿ ದಿನಕ್ಕೆ ಕನಿಷ್ಠ 3ರಿಂದ ನಾಲ್ಕು ಲೀಟರ್ ನೀರು ಕುಡಿಯಲೇ ಕುಡಿಯುವದರಿಂದ ಆರೋಗ್ಯಯುತವಾಗಿರಬಹುದು. ಬೇಸಗೆಯಲ್ಲಿ ಕಿಡ್ನಿ ಸ್ಟೋನ್ ಸಹಿತವಾಗಿ ಕೆಲವೊಂದು ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನೀರು ಹೆಚ್ಚೆಚ್ಚು ಕುಡಿಯಬೇಕು. ದೇಹ ಒಣಗಲು ಬಿಡಬಾರದು. ಆದಷ್ಟು ಆಹಾರ ಸೇವನೆಯಲ್ಲಿ ಎಚ್ಚರ ವಹಿಸಬೇಕು. ನಿದ್ರೆ ಚೆನ್ನಾಗಿ ಮಾಡಬೇಕು.
ಮಳೆಗಾಲದ ಎಚ್ಚರ
ಬೇಸಗೆ ಕಾಲ ಮುಗಿ ಯುತ್ತಿದ್ದಂತೆ ಮಳೆಗಾಲ ಆರಂಭವಾಗುತ್ತದೆ. ಮಳೆ ಗಾಲದಲ್ಲಿ ಜ್ವರ, ಶೀತ, ಕೆಮ್ಮು ಇತ್ಯಾದಿ ದಿಢೀರ್ ಅಸ್ವಸ್ಥತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಳೆಗಾಲದ ಬಹುತೇಕ ಕಾಯಿಲೆಗಳ ಮೂಲ ಸೊಳ್ಳೆಗಳು. ಸೊಳ್ಳೆ ಉತ್ಪತ್ತಿಯಾಗುವ ಸ್ಥಳಗಳನ್ನು ಗುರುತಿಸಿ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕಳೆದ ಎರಡು ವರ್ಷಗಳಿಂದ ಮಲೇರಿಯಾ ಪ್ರಮಾಣ ಕಡಿಮೆಯಾಗಿದೆ. ಇದಕ್ಕೆ ಹಲವು ಕಾರಣಗಳು ಇರಬಹುದು. ಡೆಂಗ್ಯೂ, ಚಿಕನ್‌ಗುನ್ಯ ಇತ್ಯಾದಿ ಕಾಯಿಲೆಗಳು ಮಳೆಗಾಲದಲ್ಲಿ ಹೆಚ್ಚೆಚ್ಚು ಇರುತ್ತದೆ. ಜ್ವರ, ಶೀತ, ಕೆಮ್ಮು ಒಟ್ಟಿಗೆ ಕಾಣಿಸಿಕೊಂಡ ತತ್‌ಕ್ಷಣವೇ ಮಾತ್ರೆ ತೆಗೆದುಕೊಳ್ಳುವ ಆವಶ್ಯಕತೆ ಇಲ್ಲ. ಒಂದು ದಿನ ಕಳೆದರೂ ಕಡಿಮೆಯಾಗದೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ ಅವರಿಂದ ಸಲಹೆ ಪಡೆದೇ ಔಷಧ ಸೇವನೆ ಮಾಡಬೇಕು. ಎರಡು ಅಥವಾ ಮೂರು ದಿನದಿಂದ ಜ್ವರ ಮಾತ್ರ ಕಾಣಿಸಿಕೊಂಡಲ್ಲಿ ಪರೀಕ್ಷೆಗೆ ಒಳಪಡಿಸಿ ಅನಂತರ ಔಷಧ ಪಡೆಯಬೇಕಾಗುತ್ತದೆ. ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದೇ ಅತೀ ಮುಖ್ಯ.
ಆಹಾರ ಪದ್ಧತಿ ಪಾಲನೆ
ಪ್ರತಿಯೊಬ್ಬರಿಗೂ ಅವರದ್ದೇ ಆಹಾರ ಪದ್ಧತಿ ಇರುತ್ತದೆ. ಆರೋಗ್ಯಪೂರ್ಣ ಜೀವನಕ್ಕೆ ಬೇಕಾದ ಕೆಲವೊಂದು ಪ್ರಮುಖ ಅಂಶಗಳು ಆಹಾರ ಪದ್ಧತಿಯಲ್ಲೇ ಅಡಗಿರುತ್ತದೆ. ಈ ನಿಟ್ಟಿನಲ್ಲಿ ಸೊಪ್ಪು, ತರಕಾರಿ, ನಾರಿನ ಅಂಶಗಳು ಇರುವ ಪದಾರ್ಥಗಳ ಸೇವನೆ ಮಾಡಬೇಕು. ಕೊಬ್ಬಿನ ಅಂಶ ಕಡಿಮೆ ಇರುವ ಆಹಾರಕ್ಕೆ ಆದ್ಯತೆ ನೀಡಬೇಕು. ಜಂಕ್ ಫುಡ್‌ಗಳಿಂದ ಮಕ್ಕಳನ್ನು ಆದಷ್ಟು ದೂರ ಇರಿಸಬೇಕು. ಮಾಂಸ ಆಹಾರ ಸೇವನೆ ಮಾಡುವವರು ಮನೆಯಲ್ಲೇ ಸಿದ್ಧಪಡಿಸಿ ಕೊಂಡು ಉಪಯೋಗಿ ಸುವುದು ಒಳ್ಳೆಯದು. ರಸ್ತೆಬದಿ ಆಹಾರದಿಂದ ಆದಷ್ಟು ಅಂತರ ಕಾಯ್ದುಕೊಳ್ಳಬೇಕು.
ವ್ಯಾಯಾಮ
ಸದೃಢ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಅತೀ ಮುಖ್ಯ. ಇದಕ್ಕೆ ಪರ್ಯಾಯವಾದುದು ಯಾವುದೂ ಇಲ್ಲ. ನಿತ್ಯವೂ 30ರಿಂದ 45 ನಿಮಿಷ ಜೋರಾದ ನಡಿಗೆ ಮಾಡಬೇಕು. ಮಕ್ಕಳು, ವಯಸ್ಕರೂ ಎಲ್ಲರೂ ಮಾಡಬೇಕು. ಸೂರ್ಯನಮಸ್ಕಾರ ಸಹಿತವಾಗಿ ಸರಳ ಯೋಗಗಳನ್ನು ನಿತ್ಯ ಮಾಡಬೇಕು. ದಿನದಲ್ಲಿ ಕನಿಷ್ಠ 30ರಿಂದ 60 ನಿಮಿಷ ವ್ಯಾಯಾಮಕ್ಕಾಗಿ ಮೀಸಲಿಡಲೇ ಬೇಕು.
ಹೃದಯ
ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ನಿತ್ಯ ವಾಕಿಂಗ್ ಮಾಡಬೇಕು. ದೇಹದಲ್ಲಿ ಸಕ್ಕರೆ ಅಂಶ(ಶುಗರ್) ಮತ್ತು ಕೊಬ್ಬಿನ ಅಂಶ, ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥ ಅತಿಯಾದ ಸೇವನೆ ಹೃದಯಕ್ಕೆ ಒಳ್ಳೆಯದಲ್ಲ. ಸಿಹಿ ಮತ್ತು ಕೊಬ್ಬಿನ ಅಂಶ ಇರುವ ಆಹಾರ ಪದಾರ್ಥವನ್ನು ಆದಷ್ಟು ಕಡಿಮೆ ಮಾಡಬೇಕು. ಮದ್ಯಪಾನ ಹಾಗೂ ತಂಬಾಕು ಉತ್ಪನ್ನ ಸೇವನೆಯಿಂದ ದೂರ ಇರಬೇಕು. ಹೃದಯಾಘಾತ ಎಂದರೆ ರಕ್ತನಾಳದಲ್ಲಿ ಬ್ಲಾಕ್ ಆಗುವುದು. ಇಂತಹ ಸಂದರ್ಭದಲ್ಲಿ ತತ್‌ಕ್ಷಣವೇ ಸಮೀಪದ ಕ್ಲಿನಿಕ್ ಅಥವಾ ಆಸ್ಪತ್ರೆಗೆ ಭೇಟಿ ನೀಡಬೇಕು.