ಡಾ.ಎಮ್.ಎಮ್.ತೋರಗಲ್
ಸಂಶೋಧಕರು
ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವಿಗೆ ಸಂತಾನೋತ್ಪತ್ತಿ ಅತೀ ಅವಶ್ಯವಾದ ಪ್ರಕ್ರಿಯೆ. ಇದರ ಮೇಲೆಯೇ ಜೀವಿಯ, ಅಸ್ತಿತ್ವ ಹಾಗೂ ವಂಶಾಭಿವೃದ್ದಿ ಅವಲಂಬಿತವಾಗಿದೆ. ಚಾಲ್ರ್ಸ ಡಾರ್ವಿನ ಹೇಳಿದ ಅಸ್ತಿತ್ವಕ್ಕಾಗಿ ಹೋರಾಟ (Survival of the Fittest) ಸಿದ್ದಾಂತದ ಪ್ರಕಾರ, ಅಸ್ತಿತ್ವದ ಹೋರಾಟದಲ್ಲಿ ಯಾವ ಜೀವಿ ಸಮರ್ಥವಾಗಿದೆಯೋ ಆ ಜೀವಿ ಮಾತ್ರ ಬಹು ಪೀಳಿಗೆಯವರೆಗೂ ಭೂಮಿಯ ಮೇಲೆ ಅಸ್ತಿತ್ವದಲ್ಲಿರುತ್ತದೆ. ಸಮರ್ಥ ಎಂಬುದು, ಜೀವಿಯ ಬುದ್ದಿಶಕ್ತಿ ಅಥವಾ ತೋಳ್ಬಲವನ್ನು ಅವಲಂಭಿಸಿಲ್ಲ, ಬದಲಾಗಿ “ಸಂತಾನೋತ್ಪತಿ ಕ್ರಿಯೆಯನ್ನು ಅವಲಂಬಿಸಿದೆ. ಇದು ಮಾನವನ ಅಸ್ತಿತ್ವಕ್ಕೂ ಕೂಡ ಅನ್ವಯಿಸುತ್ತದೆ. ಸಂತಾನೊತ್ಪತ್ತಿ ಕ್ರಿಯೆ ಸಾಧ್ಯವಾಗದೆ ಹೋದರೆ ಮನು ಕುಲಕ್ಕೂ ಭೂಮಿಯ ಮೇಲೆ ಉಳಿಗಾಲವಿಲ್ಲ ಎಂದೆ ಲೆಕ್ಕ..!
ಸಂತಾನೋತ್ಪತ್ತಿ ಎಂದರೆ ಗಂಡು ಹಾಗೂ ಹೆಣ್ಣು ಜೀವಿಯ ಅಂಡಾಣುಗಳು ಗರ್ಭಕೋಶದಲ್ಲಿ ಸಮ್ಮಿಲಿತಗೊಂಡು, ಒಂದು ಪರಿಪೂರ್ಣ ಜೀವಿಯಾಗುವತ್ತ ಬೆಳೆವಣಿಗೆ ಹೊಂದುವ ಕ್ರಿಯೆ. ಅನೇಕ ಬಾರಿ ಸಂತಾನೊತ್ಪತ್ತಿಯಲ್ಲಿ ಪ್ರಮುಖ ಪಾತ್ರವಹಿಸುವ ಅಂಗಾಂಗಳಲ್ಲಿ ಉಂಟಾಗುವ ತೊಂದರೆಗಳಿಂದಾಗಿ ಸಂತಾನೊತ್ಪತ್ತಿ ಕ್ರಿಯೆ ಸಾಧ್ಯವಾಗುವುದಿಲ್ಲ. ಇದನ್ನು ಬಂಜೆತನ ಎನ್ನುವರು. ಬಂಜೆತನ ಎಂಬುದು ಕೇವಲ ಸ್ತ್ರೀಯರಿಗೆ ಸಂಭಂದಿಸಿದ ಸಮಸ್ಯೆ ಅಲ್ಲ. ಕೇವಲ ಸ್ತ್ರೀಯರನ್ನೆ ದೋಷಿಸುವ ಪುರುಷ ಪ್ರಧಾನ ಸಮಾಜಕ್ಕೆ ಇತ್ತೀಚಿನ ಸಂಶೋಧನಾ ವರದಿಯ ಪ್ರಕಾರ ಬಂಜೆತನಕ್ಕೆ ಪುರುಷ (ಶೇ 50%) ಹಾಗೂ ಮಹಿಳೆಯರ (ಶೇ 50%) ಸಮಾನ ಪಾಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದಾದ್ಯಂತ ಶೇ.15ರಷ್ಟು ದಂಪತಿಗಳು ಬಂಜೆತನದ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಭಾರತದಲ್ಲಿ ಒಟ್ಟು ಜನಸಂಖ್ಯೆಯ ಶೇ. 25ರಷ್ಟು ದಂಪತಿಗಳು ಬಂಜೆತನದಿಂದ ಬಳಲುತ್ತಿದ್ದಾರೆ. ಅಂದರೆ ಪ್ರತಿ ಆರು ದಂಪತಿಗಳಲ್ಲಿ ಒಂದು ದಂಪತಿ ಬಂಜೆತನವನ್ನ ಎದುರಿಸುತ್ತಿದ್ದಾರೆ.
ಜಗತ್ತಿನೆಲ್ಲೆಡೆ ಬಂಜೆತನ ಎಂಬುದು ಬಹುದೊಡ್ಡ ಸಮಸ್ಯೆ. ಬಂಜೆತನದಿಂದ ಹೊರಬಂದು ಮಗುವನ್ನು ಪಡೆಯಲು ಪ್ರನಾಳೀಯ ಫಲೀಕರಣ (IVF) ಹಾಗೂ ಇಕ್ಸಿ (ICSI) ಎಂಬ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನದ ಪ್ರಕ್ರಿಯೆಗಳು ಮುಂಚೂಣಿಯಲ್ಲಿವೆ. ಇವುಗಳ ಮೂಲಕ ಸಂತಾನ ಭಾಗ್ಯವನ್ನು ಕಲ್ಪಿಸುವ ತಂತ್ರಜ್ಞರೆ, ಭ್ರೂಣಶಾಸ್ತ್ರಜ್ಞರು (Embryologist).
ಪ್ರತಿ ವರ್ಷ ಈ ದಿನವನ್ನು ಅಂತರಾಷ್ಟ್ರೀಯ ಭ್ರೂಣಶಾಸ್ತ್ರಜ್ಞರ ದಿನವೆಂದು ಆಚರಿಸಲಾಗುತ್ತದೆ.
ಇತಿಹಾಸ: ಅದು ದಿ. 25 ಜುಲೈ 1978- ಡಾ.ಪೆಟ್ರಿಕ್, ಜೀನ್ ಪರ್ಡಿ ಮತ್ತು ರಾಬರ್ಟ ಎಡ್ವರ್ಡ ಎಂಬ ಮೂವರು ಸಂಶೋಧಕರು ನಡೆಸಿದ ಮೊದಲ ಪ್ರನಾಳೀಯ ಫಲೀಕರಣ ತಂತ್ರಜ್ಞಾನದ ಫಲವಾಗಿ, ಜಗತ್ತಿನ ಮೊಟ್ಟ ಮೊದಲ ಪ್ರನಾಳ ಶಿಶು ಸೃಷ್ಟಿಸುವಲ್ಲಿ ಲೂಯಿಸ್ ಜಾಯ್ ಬ್ರೌನ್ ಯಶಸ್ವಿಯಾಗಿದ್ದರು. ಈ ತಂತ್ರಜ್ಞಾನವನ್ನು ಮೊಟ್ಟ ಮೊದಲಿಗೆ ಜಗತ್ತಿಗೆ ಪರಿಚಯಿಸುವ ರೇಸ್‍ನಲ್ಲಿ ಇಂಗ್ಲೆಂಡ ಹಾಗೂ ಭಾರತೀಯ ವಿಜ್ಞಾನಿಗಳಿದ್ದರು. ಆದರೆ ಭಾರತೀಯ ವಿಜ್ಞಾನಿಯೊಬ್ಬರು ಏಕಾಂಗಿಯಾಗಿ ಪ್ರಯತ್ನದಲ್ಲಿದ್ದರು.
3 ಅಕ್ಟೊಬರ್ 1978ರ, ದುರ್ಗಾಷ್ಟಮಿಯಂದು ದುರ್ಗಾ” ಎಂಬ ನಾಮಕರಣದೊಂದಿಗೆ ಕನುಪ್ರಿಯಾ ಅಗರವಾಲ್ ಎಂಬ ಭಾರತದ ಮೊದಲ ಹಾಗೂ ಜಗತ್ತಿನ ಎರಡನೇ ಪ್ರನಾಳ ಶಿಶುವನ್ನು ಸುಭಾಷ್ ಮುಖ್ಯೋಪಾಧ್ಯಾಯ ಸೃಷ್ಟಿಸಿದ್ದರು. ದಾಖಲೆಗಳ ಪ್ರಕಾರ ವಿಶ್ವನ ಮೊದಲ ಪ್ರನಾಳ ಶಿಶು ಜನಿಸಿದ 67 ದಿನಗಳ ಬಳಿಕ ಭಾರತದಲ್ಲಿ ದುರ್ಗಾಳ ಜನನವಾಯಿತು. ದುರಾದೃಷ್ಟವೇನೋ ಗೊತ್ತಿಲ್ಲ ಮೊಟ್ಟ ಮೊದಲ ಪ್ರನಾಳ ಶಿಶು (Test tube baby)ವನ್ನು ಸೃಷ್ಟಿಸಿದ ಶ್ರೇಯ ಭಾರತಕ್ಕೆ ಸಲ್ಲಬೇಕಾಗಿತ್ತು. ಆದರೆ ಭಾರತೀಯ ವಿಜ್ಞಾನಿಯ ಪ್ರಯತ್ನವನ್ನು ಆಗಿನ ವ್ಯವಸ್ಥೆ ಪ್ರೊತ್ಸಾಹಿಸದ ಕಾರಣ ಬೇಸತ್ತ ಆ ವಿಜ್ಞಾನಿ 1981ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು..!
ಪ್ರನಾಳೀಯ ಫಲೀಕರಣ (IVF): ವೈಜ್ಞಾನಿಕವಾಗಿ ಇದನ್ನು ಇನ್ ವಿಟ್ರೊ ಫರ್ಟಿಲೈಸೇಷನ್ ಎನ್ನುವರು. ಜೀವ ವಿಜ್ಞಾನದಲ್ಲಿ ಇನ್ ವಿಟ್ರೊ, ಇನ್ ವಿವೋ ಎಂಬೆರಡು ಲ್ಯಾಟಿನ್ ಪದಗಳು ಬಳಕೆಯಲ್ಲಿವೆ. ಇನ್ ವಿವೊ ಎಂದರೆ– ದೇಹದ ಒಳಗೆ ಎಂದರ್ಥ. ಇನ್ ವಿಟ್ರೊ– ಎಂದರೆ ದೇಹದ ಹೊರಗೆ ಅಂದರೆ ಪ್ರಯೋಗಾಲಯದಲ್ಲಿ ಎಂದರ್ಥ. ಪ್ರನಾಳೀಯ ಫಲೀಕರಣವು ಪ್ರಯೋಗಾಲಯಗಳಲ್ಲಿ ಬಳಸುವ ಗಾಜಿನ ತಟ್ಟೆಯಲ್ಲಿ ನಡೆಯುವುದರಿಂದ ಅದಕ್ಕೆ ಈ ಹೆಸರು. ಮಕ್ಕಳನ್ನು ಪಡೆಯಲು ಸಾಧ್ಯವಾಗದೆ ಇರುವ ದಂಪತಿಗಳಿಂದ, ಸಮರ್ಥ ಅಂಡಾಣು ಹಾಗೂ ವಿರ್ಯಾಣುಗಳನ್ನು ಆಯ್ದುಕೊಂಡು, ಸಂತಾನೋತ್ಪತ್ತಿ ಕ್ರಿಯೆಗೆ ಪೂರಕವಾದ ವಾತಾವರಣ ಇರುವ ಗಾಜಿನ ತಟ್ಟೆಯೊಂದರಲ್ಲಿ ಸಮ್ಮೀಲನ ಮಾಡುತ್ತಾರೆ. ಇದು ತಾಯಿಯ ಗರ್ಭದಿಂದಾಚೆ ಅಂಡಾಣುಗಳು ಫಲಿಸುವಂತೆ ಮಾಡುವ ಪ್ರಕ್ರಿಯೆ. ನಂತರ ಭ್ರೂಣದ ಸಮಗ್ರ ಬೆಳವಣಿಗೆಗಾಗಿ ತಾಯಿಯ ಗರ್ಭಕೋಶಕ್ಕೆ ಮರಳಿ ಸ್ಥಳಾಂತರಿಸಲಾಗುವ ವಿದ್ಯಮಾನವನ್ನು ಪ್ರನಾಳೀಯ ಫಲೀಕರಣ(In-vitro Fertilization-IVF) ಎನ್ನುತ್ತಾರೆ. ಇದರ ಯಶಸ್ಸಿನ ಪ್ರಮಾಣವು ಶೇ. 27ರಷ್ಟು ಇದೆ. ಈ ಪ್ರಕ್ರಿಯೆಯ ಮೂಲಕವೇ ಜಗತ್ತಿನೆಲ್ಲೆಡೆ 8 ಮಿಲಿಯನ್ ಮಕ್ಕಳು ಜನಿಸಿದ್ದಾರೆ.
ಇಕ್ಸಿ (ICSI): ಸ್ತ್ರೀಯರಲ್ಲಿರುವ ಗರ್ಭಧಾರಣೆ ಸಮಸ್ಯೆಯನ್ನು ನಿವಾರಿಸಲು ಐ.ವಿ.ಎಫ್. ತಂತ್ರಜ್ಞಾನವಿರುವಂತೆ ಗಂಡು ಮಕ್ಕಳ ಬಂಜೆತನದ ಸಮಸ್ಯೆಯನ್ನು ನಿವಾರಿಸಲು 1992ರಲ್ಲಿ ಪಾಲೆಂಬ್ರೋ ಹಾಗೂ ವ್ಯಾನ್ ಸ್ಟ್ರೇಟ್ ಎಂಬೆರಡು ವಿಜ್ಞಾನಿಗಳು ಸೇರಿ ಇಕ್ಸಿ ಎಂಬ ತಂತ್ರಜ್ಞಾನವನ್ನು ಕಂಡು ಹಿಡಿದರು. ಇಲ್ಲಿ ಸಮರ್ಥವಾಗಿರುವ ವಿರ್ಯಾಣುವೊಂದನ್ನು ಆಯ್ದುಕೊಂಡು ಅದನ್ನು ಯಾಂತ್ರಿಕವಾಗಿ ಅಂಡಾಣುವಿನ ಕೋಶದ್ರವ್ಯದಲ್ಲಿ ಸೇರಿಸುವ ಮೂಲಕ ಕೃತಕವಾಗಿ ಅಂಡಾಣುವನ್ನು ಫಲಿಸುವಂತೆ ಮಾಡಲಾಗುತ್ತದೆ. ಈ ಮೂಲಕ ಗಂಡು ಮಕ್ಕಳಲ್ಲಿರುವ ಯಾವುದೇ ರೀತಿ ಬಂಜೆತನವನ್ನು ಹೋಗಲಾಡಿಸಲಾಗುವುದು. ಈ ತಂತ್ರಜ್ಞಾನದ ಯಶಸ್ಸಿನ ಪ್ರಮಾಣವು ಶೇ 80-85.
ಭ್ರೂಣಶಾಸ್ತ್ರಜ್ಞರು: ಭ್ರೂಣಶಾಸ್ತ್ರವು ಜೀವಶಾಸ್ತ್ರದ ಒಂದು ಶಾಖೆಯಾಗಿದ್ದು, ಇಲ್ಲಿ ಲಿಂಗಾಣುಗಳ ಬೆಳವಣಿಗೆ ಫಲೀಕರಣ ಹಾಗೂ ಭ್ರೂಣಗಳ ಕುರಿತಾದ ಅಧ್ಯಯನವನ್ನು ಮಾಡಲಾಗುತ್ತದೆ. ಮಾರ್ಸೆಲ್ಲೋ ಮಾಲ್ಫೀಜಿ ಅವರನ್ನು ಭ್ರೂಣಶಾಸ್ತ್ರದ ಪಿತಾಮಹ ಎನ್ನಲಾಗುತ್ತದೆ.
ಭ್ರೂಣಶಾಸ್ತ್ರ ಅಧ್ಯಯನದಲ್ಲಿ ಅವಕಾಶಗಳು: ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕಾದರೆ ಸಾಮಾನ್ಯವಾಗಿ ಕ್ಲಿನಿಕಲ್ ಸೈನ್ಸ್, ರಿಪ್ರೊಡಕ್ಟೀವ್ ಸೈನ್ಸ್‍ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಆದರೆ ಇದೇ ವಿಷಯದಲ್ಲಿ ಎಮ್.ಡಿ ಹಾಗೂ ಪಿ.ಹೆಚ್.ಡಿ. ಮಾಡಿದರೆ ಹೆಚ್ಚು ಪ್ರಾತಿನಿಧ್ಯವಿದೆ. ಬಂಜೆತನ ನಿವಾರಣಾ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಒಂದು ಅಂದಾಜಿನ ಪ್ರಕಾರ 2018-2028 ರ ನಡುವೆ ಉದ್ಯೋಗಾವಕಾಶಗಳು ಶೇ. 8ರಷ್ಟು ಹೆಚ್ಚಲಿವೆ.
ಮಾನವನಿಗೆ ಸಂತಾನ ಭಾಗ್ಯ ಎಂಬುದು ಪ್ರಮುಖ ಆದ್ಯತೆಯಾಗಿದ್ದು ಇದರಿಂದ ವಂಚಿತನಾಗುವ ಮನುಷ್ಯ ಖಿನ್ನತೆ, ದು:ಖ, ದುಗುಡ, ಹಾಗೂ ನಿರಾಶಾದಾಯಕ ಜೀವನಕ್ಕೆ ಒಳಪಡುತ್ತಾನೆಂದು ಸಂಶೋಧನೆಗಳು ತಿಳಿಸುತ್ತವೆ. ಹಾಗಾಗಿ ಇಂತಹದ್ದೊಂದು ಅವಶ್ಯಕ ಪ್ರಕ್ರಿಯೆಯಲ್ಲಿ ಸಫಲತೆಯನ್ನು ಒದಗಿಸಿವಲ್ಲಿ ಹಾಗೂ ಈ ಎಲ್ಲ ನಿರಾಶಾದಾಯಕ ಮನಸ್ಥಿತಿಯಿಂದ ಅನೇಕರನ್ನು ಹೊರತರುವಲ್ಲಿ, ಪ್ರಮುಖ ಪಾತ್ರ ವಹಿಸುವವರೆ ಈ ಭ್ರೂಣಶಾಸ್ತ್ರ ಪರಿಣಿತರು. ಇಂತಹದ್ದೊಂದು ಮಹತ್ವದ ದಿನದಂದು ಆ ಎಲ್ಲ ಶಾಸ್ತ್ರಜ್ಞರಿಗೆ ಅಂತರಾಷ್ಟ್ರೀಯ ಭ್ರೂಣಶಾಸ್ತ್ರಜ್ಞರ ದಿನಾಚರಣೆಯ ಶುಭಾಷಯವನ್ನು ತಿಳಿಸೋಣ.
ಲೇಖಕರು:
ಸಂಶೋಧಕರು ಮೆಡಿಕಲ್ ಬಯೋಟೆಕ್ನಾಲಜಿ ಹಾಗೂ
ಮೈಕ್ರೋಬಯೋಲಜಿ ಲ್ಯಾಬೋರೋಟರಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.