ಬಿರು ಬಿಸಿಲಲ್ಲಿ ಎಲ್ಲರೂ ಅರಿಸಿತಿನ್ನುವ ಹಣ್ಣು ಕಲ್ಲಂಗಡಿ. ಆ ಹಣ್ಣಿನ ಆಕರ್ಷಕ ಹೊರಮೈ,ಇನ್ನೂ ಹೆಚ್ಚು ಆಕರ್ಷಕವಾದ ಒಳಗಿನ ತಿರುಳು,ಮತ್ತು ರುಚಿಯಲ್ಲಿ ಸಿಹಿ ಹಾಗೂ ವಿಶೇಷವಾದ ಕಂಪು, ಬೇಸಿಗೆಯಲ್ಲಿ ತಂಪನ್ನೆರೆಯುವ ವಿಶೇಷಗುಣ, ಸಾಮಾನ್ಯರಿಗೂ ಕೈಗೆಟಕುವ ಬೆಲೆಯಲ್ಲಿ ದೊರೆಯುವ ಈ ಹಣ್ಣು ತುಂಬಾ ಜನಪ್ರಿಯ. ಜೊತೆಗೆ ವಿಶೇಷವಾದ ಪೋಷಕಾಂಶಗಳು ಹಾಗೂ ಇನ್ನಾವುದೇ ಹಣ್ಣುಗಳಲ್ಲಿ ದೊರೆಯದಿರುವ ಹಲವು ಸಸ್ಯಜನ್ಯ ರಸಾಯನಿಕಗಳನ್ನು ಒಳಗೊಂಡಿರುವುದರಿಂದದ ಈ ಹಣ್ಣಿನ ಬಗ್ಗೆ ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳೋಣ.
ಕಲ್ಲಂಗಡಿ ಹಣ್ಣಿನ ಕೆಲ ಸ್ವಾರಸ್ಯಕರ ಸಂಗತಿಗಳು:
- ಈ ಹಣ್ಣುಗಳು ಕೃಷಿ ಪ್ರಾರಂಭವಾದದ್ದು ಆಫ್ರಿಕಾ ಖಂಡದಲ್ಲಿ. ಪ್ರಸ್ತುತ ಈ ಹಣ್ಣುಗಳು ವಿಶ್ವದಾದ್ಯಂತದ ದೊರೆಯುವ ಸ್ಥಿತಿ ತಲುಪಿದೆ.
- ಕ್ರಿಸ್ತ ಶಕ ಪೂರ್ವ 5000 ವರ್ಷಗಳಷ್ಟು ಪುರಾತನವಾದ ಈಜಿಪ್ಟ್ ನ ಪಿರಮಿಡ್ ಗಳಲ್ಲಿಯೂ ಕೂಡ ಇವುಗಳು ದೊರೆತಿವೆ.
- ಸೌತೆ ಹಾಗೂ ಕುಂಬಳಕಾಯಿ ಜಾತಿಯ ಹಣ್ಣು ಗಳಾಗಿದ್ದು ಇದೇ ಜಾತಿಯ ಇನ್ನು ಕೆಲವು ಹಣ್ಣುಗಳಾದ ಟರ್ಬುಜ್ ಮುಂತಾದವು ಹಣ್ಣುಗಳು ಇಷ್ಟೇ ಜನಪ್ರಿಯವಾಗಿವೆ.
- ಪ್ರಸ್ತುತ ಚೀನಾದೇಶ ದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಈ ಹಣ್ಣುಗಳನ್ನು ಬೆಳೆಯುತ್ತಿದ್ದು ವಿಶ್ವದ ಪ್ರತಿಶತ 67 ರಷ್ಟು ಹಣ್ಣುಗಳನ್ನು ಚೀನಾದಲ್ಲಿಯೇ ಬೆಳೆಯುತ್ತಾರೆ.
- ಟರ್ಕಿಯ ನಂತರ ನಮ್ಮ ದೇಶ ಮೂರನೇ ಸ್ಥಾನದಲ್ಲಿದೆ.
- ಜಪಾನ್ ನಲ್ಲಿ ಆಯತಾಕಾರದ ಹಾಗೂ ಬೇರೆ ಬೇರೆ ಆಕಾರಗಳಲ್ಲಿ ಈ ಹಣ್ಣುಗಳನ್ನು ಬೆಳೆಯುವಂತೆ ವಿನ್ಯಾಸ ಮಾಡಿರುತ್ತಾರೆ.
- ಈ ಹಣ್ಣುಗಳಲ್ಲಿ 1200 ತಳಿಗಳು ಇರಬಹುದೆಂದು ಅಂದಾಜಿಸಲಾಗಿದೆ.
- ಈ ಹಣ್ಣಿನ ಎಲ್ಲ ಭಾಗಗಳು ಸೇವಿಸಲು ಯೋಗ್ಯವಾಗಿವೆ, ಹಾಗೂ ಅವುಗಳಲ್ಲಿ ವಿಶೇಷ ಪೋಷಕಾಂಶಗಳಿವೆ. ಹಣ್ಣಿನ ಮೇಲ್ಮೈ , ತಿಳಲು ಹಾಗೂ ಬೀಜಗಳು ಎಲ್ಲವುಗಳನ್ನು ತಿನ್ನಬಹುದು.
- ಗಿನ್ನೆಸ್ ದಾಖಲೆ ಪಡೆದ ಹಣ್ಣಿನ ತೂಕ 122 ಕೆ ಜಿ ಎಂದರೆ ನಂಬುತ್ತೀರಾ ?
ಪೋಷಕಾಂಶಗಳ ಪ್ರಮಾಣಗಳು 100 ಗ್ರಾಂ ಹಣ್ಣಿನಲ್ಲಿ :
- ಕ್ಯಾಲೋರಿ ಗಳು 30 ಕಿ ಕ್ಯಾ.
- ನೀರಿನ ಅಂಶ 91.45 ಗ್ರಾಂ.
- ಸಕ್ಕರೆ ಅಂಶಗಳು 6.2 ಗ್ರಾಂ.
- ನಾರಿನಂಶ 0.4 ಗ್ರಾಂ.
- ಕೊಬ್ಬು 0.15 ಗ್ರಾಂ
- ಪ್ರೋಟೀನ್ 0.61 ಗ್ರಾಂ
- ಜೀವನ ಸತ್ವಗಳು
” A ಹಾಗೂ beta-carotene 330ಎಂಸಿಜಿ
” C 8.1ಮಿ.ಗ್ರಾಂ
ಹಾಗೂ “ಬಿ “ಜೀವನ ಸತ್ವದ ವಿವಿಧ ಘಟಕಗಳು - ಖನಿಜಗಳು : ಕ್ಯಾಲ್ಸಿಯಂ,ಕಬ್ಬಿಣ, ಮೆಗ್ನೀಷಿಯಂ, ಮ್ಯಾಂಗನೀಸ್, ಪೊಟ್ಯಾಶಿಯಂ ಹಾಗೂ ಸತುವು ( Zinc)
- ಲೈಕೋಪಿನ್ (Lycopene ) 4532ಎಂಸಿಜಿ
- ಕೋಲೀನ್ 4.1 ಮಿ ಗ್ರಾಂ.
- ಸಿಟ್ರುಲಿನ್ ಅಮೈನೋ ಆಸಿಡ್ ಈ ಹಣ್ಣಿನಲ್ಲಿ 2 ವಿಶೇಷ ಸಸ್ಯಜನ್ಯ ರಾಸಾಯನಿಕಗಳು
( Phyto Chemicals ) ಇರುತ್ತವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.
1.ಲೈಕೋಪಿನ್ (Lycopene ): ಈ ರಾಸಾಯನಿಕವಿರುವ ದರಿಂದಲೇ ಹಣ್ಣು ಹಾಗೂ ತರಕಾರಿ ಗಳಿಗೆ ಕೆಂಪು ಅಥವಾ ನಸುಗೆಂಪು ಬಣ್ಣ ಬರುತ್ತದೆ. ಉದಾ : ಕಲ್ಲಂಗಡಿ ಟೊಮ್ಯಾಟೊ, ಸೀಬೆ( ಪೇರಲ )ಪಪ್ಪಾಳೆ,ಮಾವು ಹಾಗೂ ಗ್ರೇಪ್ ಫ್ರೂಟ್.
ಇದು ನಮ್ಮ ದೇಹದಲ್ಲಿ ಲಭ್ಯವಿರುವ ಎಲ್ಲಾ ಉತ್ಕರ್ಷಣ ನಿರೋಧಕ ಗಳಲ್ಲಿ ಅತ್ಯಂತ ಹೆಚ್ಚು ಶಕ್ತಿಶಾಲಿಯಾಗಿದ್ದು, ಮುಕ್ತ ಅಣುಗಳನ್ನು (Free Radicals)ಉತ್ಕರ್ಷಣೆ ಯಾಗದಂತೆ ನಿಗಾವಹಿಸುತ್ತದೆ. ಮುಕ್ತ ಅಣುಗಳ ಉತ್ಕರ್ಷಣೆ ಯಿಂದಲೇ ದೇಹದಲ್ಲಿ ಕ್ಯಾನ್ಸರ್ ಹಾಗೂ ವಿವಿಧ ರೋಗಗಳು ಹಾಗೂ ಮುಪ್ಪು ಉಂಟಾಗುತ್ತದೆ. ಆದ್ದರಿಂದ ಲೈಕೋಪಿನ್ ಯುಕ್ತ ಆಹಾರ ಸೇವನೆಯಿಂದ ಈ ಎಲ್ಲ ರೋಗಗಳನ್ನು ಹಾಗೂ ಅವುಗಳಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಗಳನ್ನು ತಕ್ಕಮಟ್ಟಿಗೆ ತಡೆಯಬಹುದು.
a) ಕ್ಯಾನ್ಸರ್ : ಪ್ರೋಸ್ಟೇಟ್,ಸ್ತನಗಳ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಗಳನ್ನು ತಡೆಯುವಲ್ಲಿ ಹಾಗೂ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಹರಡುವಿಕೆಯನ್ನು ತಡೆಯಲು ಶಕ್ತ
ವೆಂದು ಹಲವು ಅಧ್ಯಯನಗಳಲ್ಲಿ ಕಂಡುಬಂದಿದೆ
b) ಹೃದಯಾಘಾತ ಹಾಗೂ ರಕ್ತನಾಳಗಳ ಜಿಡ್ಡುಗಟ್ಟು ಯುವಿಕೆ ಯನ್ನು ತಡೆಯುತ್ತದೆಯಲ್ಲದೆ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯಕಾರಿಯಾಗಿದೆ.
c) ಕಣ್ಣಿನ ಅಕ್ಷಿಪಟಲ ಹಾಗೂ ಮಸೂರ (Lens) ಗಳ ಆರೋಗ್ಯವನ್ನು ಕಾಪಾಡುತ್ತದೆ, ಆದ್ದರಿಂದ, ದೃಷ್ಟಿದೋಷವನ್ನು ನಿವಾರಿಸುತ್ತದೆ.
d). ಮೆದುಳಿನ ವಿವಿಧ ಜೈವಿಕ ಕ್ರಿಯೆಗಳಲ್ಲಿ ಭಾಗವಹಿಸುವುದರಿಂದ ಒಳ್ಳೆಯ ಸ್ಮರಣಶಕ್ತಿ, ತೀಕ್ಷ್ಣ ಬುದ್ಧಿ ವಯೋಮಾನ ಸಹಜ ಮರೆವು ಹಾಗೂ ಅಲ್ಝೆಮೆರ್ ರೋಗ ವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
2.ಸಿಟ್ರು ಲೀನ್( Citruline): ಈ ಅಮೈನೋ ಆಸಿಡ್ ಅನ್ನು ಮೊಟ್ಟಮೊದಲಿಗೆ ಕಲ್ಲಂಗಡಿ ಹಣ್ಣಿನಿಂದಲೇ ಬೇರ್ಪಡಿಸಲಾಯಿತು. ಇದು ಹಲವಾರು ರೋಗಗಳನ್ನು ಗುಣಪಡಿಸುವಲ್ಲಿ ಪ್ರಯೋಜನಕಾರಿಯಾಗಿದೆ. ದಣಿವು, ನಿಶಕ್ತತೆ, ರಕ್ತದೊತ್ತಡ ನಿಯಂತ್ರಣ,ಮಧುಮೇಹ ನಿಯಂತ್ರಣ ಹೃದಯದ ಆರೋಗ್ಯ ಹಾಗೂ ಪುರುಷರ ಜನನೇಂದ್ರಿಯ ಉದ್ರೇಕ ದೌರ್ಬಲ್ಯ (Erectile Dysfunction) ಮತ್ತು ಸ್ಪರ್ಧಾಳುಗಳ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ.
ಸಿಟ್ರುಲೀನ್ ಅಮೈನೊ ಆಸಿಡ್ ದೇಹದಲ್ಲಿ ಆರ್ಜಿನೀನ್ ಆಗಿ ಪರಿವರ್ತನೆಗೊಳ್ಳುತ್ತದೆ. ರಕ್ತನಾಳಗಳ ಪ್ರಸರಣಕ್ಕೆ ಬೇಕಾಗುವ ನೈಟ್ರಿಕ್ ಆಸಿಡ್ ಈ ಆರ್ಜಿನಿನ್ ನಿಂದ ಉತ್ಪತ್ತಿಯಾಗುತ್ತದೆ. ರಕ್ತನಾಳಗಳ ಪ್ರಸರಣ ಕ್ರಿಯೆಯು ಹೃದಯಾಘಾತವನ್ನು ತಡೆಯಲು,ರಕ್ತದೊತ್ತಡ ನಿಯಂತ್ರಣ ಹಾಗೂ ಜನನೇಂದ್ರಿಯದ ಉದ್ರೇಕಗೊಳ್ಳುವಿಕೆಗೆ ಕಾರಣವಾಗಿರುತ್ತದೆ.
ಈ ಹಣ್ಣಿನಲ್ಲಿ ಪ್ರತಿಶತ 90ರಷ್ಟು ನೀರು ಹಾಗೂ ಪೊಟ್ಯಾಷಿಯಂ ಪ್ರಮಾಣ ಹೆಚ್ಚಿರುವುದರಿಂದ ಬೇಸಿಗೆಯಲ್ಲಿ ಹಣ್ಣು ಅಥವಾ ಹಣ್ಣಿನ ರಸ ಸೇವನೆಯಿಂದ ದೇಹದಲ್ಲಿ ದಣಿವು ದೂರವಾಗಿ ಚೈತನ್ಯ ತುಂಬುತ್ತದೆ.
ಈ ಹಣ್ಣಿನಲ್ಲಿ ಖೋಲಿನ್ ಎಂಬ ಇನ್ನೊಂದು ಪೋಷಕಾಂಶ, ದೇಹದಲ್ಲಿಯ ಸ್ನಾಯುಗಳ ಹಾಗೂ ನರಗಳಲ್ಲಿಯ ಸಂದೇಶಗಳು ಸುಗಮವಾಗಿ ಹಾಗೂ ತೀವ್ರಗತಿಯಲ್ಲಿ ಪ್ರವಹಿಸಲು ಪ್ರಚೋದಿಸುತ್ತವೆ,ಆದ್ದರಿಂದ ಸ್ನಾಯುಗಳು ನರಗಳು ಹಾಗೂ ಮೆದುಳಿನಲ್ಲಿ ಜೈವಿಕ ಕ್ರಿಯೆಗಳು ಸರಾಗವಾಗಿ ಚಲಿಸುವಂತೆ ಮಾಡುತ್ತದೆ. ಆದ್ದರಿಂದ ಸ್ನಾಯುಗಳಲ್ಲಿ ನೋವು ಹಾಗೂ ದಣಿವು ದೂರವಾಗಿ ದೇಹದಲ್ಲಿ ಚೈತನ್ಯ ತುಂಬುತ್ತದೆ.
ಚರ್ಮ ಹಾಗೂ ಕೂದಲುಗಳ ಆರೋಗ್ಯ : ಈ ಹಣ್ಣಿನಲ್ಲಿ “ಸಿ” ಜೀವಸತ್ವ ಹಾಗೂ ಪ್ರತಿಶತ 90ರಷ್ಟು ನೀರು ಪೊಟ್ಯಾಷಿಯಂ ಸಿಟ್ರೊಲಿನ್,ಖೋಲಿನ್ ಹಾಗೂ ಅರ್ಜಿನಿನ್ ಗಳು ಇರುವುದರಿಂದ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆಯಲ್ಲಿ ಚರ್ಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹಾಗೂ ” ಸಿ” ಜೀವಸತ್ವ ಒದಗಿಸಿ ಚರ್ಮದ ಕಾಂತಿಯನ್ನು ಹೆಚ್ಚಿಸುವುದಲ್ಲದೆ ಚರ್ಮದ ಮೃದುತ್ವವನ್ನು ಕಾಪಾಡುತ್ತದೆ. ಚರ್ಮದ ಸುಕ್ಕುಗಳನ್ನು ನಿವಾರಿಸಲು ಸಹಾಯಮಾಡುತ್ತದೆ. ಹಾಗೆಯೇ ಕೂದಲಿನ ಸರಿಯಾದ ಬೆಳವಣಿಗೆ ಹಾಗೂ ಕೂದಲು ಉದುರದಂತೆ ಕಾಪಾಡುತ್ತದೆ.
ಹಣ್ಣಿನ ತೊಗಟೆ (ಸಿಪ್ಪೆ ) ಸೇವಿಸಬಹುದೇ ?
ಹೆಚ್ಚು ಜನರು ಇದನ್ನು ಸೇವಿಸದೆ ಎಸೆಯುತ್ತಾರೆ. ಇದು ತಿರುಳಿನಷ್ಟು ರುಚಿಕರ ವಲ್ಲದಿದ್ದರೂ ತೊಗಟೆಯಲ್ಲಿ ವಿಶೇಷ ಪೋಷಕಾಂಶಗಳಿರುವುದರಿಂದ ಇದನ್ನು ಎಸೆಯ ಕೂಡದು. ಇದರಲ್ಲಿ ಸಿಟ್ರುಲಿನ್ ಉಳಿದೆಲ್ಲ ಹಣ್ಣಿನ ಭಾಗಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇವುಗಳ ಲಾಭಗಳ ಬಗ್ಗೆ ಈಗಾಗಲೇ ತಿಳಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ ಕೂಡ ಇರುತ್ತದೆ. ನಾರಿನ ಅಂಶದಿಂದ ಜಠರ ಹಾಗೂ ಕರುಳುಗಳ ಆರೋಗ್ಯ, ಹೃದಯದ ಆರೋಗ್ಯ ಹಾಗೂ ಮಧುಮೇಹ ನಿಯಂತ್ರಣ ಸಾಧ್ಯ.
ಸೇವಿಸುವ ವಿಧಾನ : ಈ ಭಾಗಗಳನ್ನು ತುಂಡರಿಸಿ ನಿಂಬೆಹಣ್ಣಿನ ರಸವನ್ನು ಬೆರೆಸಿ ರುಚಿಗೆ ತಕ್ಕಂತೆ ಉಪ್ಪು ಖಾರ, ಮಸಾಲೆ ಪುಡಿ ಸಿಂಪಡಿಸಿ ಸೇವಿಸಬಹುದು. ಇಲ್ಲವೇ ಅದನ್ನು ಹೆರೆದು ದೋಸೆ ಹಿಟ್ಟಿನಲ್ಲಿ ಬೆರೆಸಿ ಉತ್ತಪ್ಪ ದಂತೆ ಸೇವಿಸಬಹುದು. ಸಣ್ಣಗೆ ತುಂಡರಿಸಿ ಉಪ್ಪಿನಕಾಯಿಯ ತರ
(ಸೌತೆಕಾಯಿ ಉಪ್ಪಿನಕಾಯಿ ) ತಯಾರಿಸಿ ಸೇವಿಸಬಹುದು.
ಹಣ್ಣಿನ ಬೀಜಗಳು: ಈ ಹಣ್ಣಿನ ಬೀಜಗಳ ಲ್ಲಿಯೂ ಕೂಡ ವಿಶೇಷವಾದ ಪೋಷಕಾಂಶಗಳಿರುವುದರಿಂದ ಅವುಗಳನ್ನು ಉಗಿಯ ಕೂಡದು. ಬೀಜಗಳನ್ನು ಶೇಖರಿಸಿ ತೊಳೆದು ಒಣಗಿಸಿ ರುಚಿಗೆ ತಕ್ಕಂತೆ ಉಪ್ಪು ಹಾಗೂ ಮಸಾಲೆ ಪುಡಿಯೊಡನೆ ಹುರಿದು ಸೇವಿಸಬಹುದು. ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮ್ಯಾಗ್ನಿಷಿಯಂ, ಕಬ್ಬಿಣ, ಝಿಂಕ್, ತಾಮ್ರ, ಪೊಟ್ಯಾಶಿಯಂ, ಬಿ ಜೀವನ ಸತ್ವದ ಘಟಕಗಳು
( ಪೋಲಿಕ್ ಆಸಿಡ್ ) ಹಾಗೂ ಸಿ ಜೀವಸತ್ವ ಗಳು ಲಭ್ಯವಿರುತ್ತವೆ. ಹುರಿದ ಬೀಜಗಳ ಪುಡಿಮಾಡಿ ಆಹಾರದ
ಮೇಲೆ ಸಿಂಪಡಿಸಿ ಸೇವಿಸಬಹುದು
ಹಣ್ಣಿನರಸ: ಹೆಚ್ಚು ನೀರು ಹಾಗೂ ಸಕ್ಕರೆ ಬೆರೆಸದೆ ಸೇವಿ ಸಬೇಕು. ರಸದಲ್ಲಿ ಹಣ್ಣಿನಲ್ಲಿರುವ ಎಲ್ಲ ಪೋಷಕಾಂಶಗಳು ದೊರೆಯುತ್ತವೆ. ರಸವನ್ನು ಫ್ರಿಜ್ ನಲ್ಲಿಟ್ಟು ಅಥವಾ ಮಂಜುಗಡ್ಡೆಯನ್ನು ಬೆರೆಸಿದ ತಂಪುಪಾನೀಯ ಬೇಸಿಗೆಯ ಬಿಸಿಲಿನಲ್ಲಿ ತುಂಬಾ ಆಹ್ಲಾದಕರ. ನಿಂಬೆ ಹಣ್ಣಿನ ರಸದ ಜೊತೆಗೆ ಬೆರೆಸಿ ಸೇವಿಸಬಹುದು ಇದರಿಂದ ಹೆಚ್ಚಿನ ಜೀವನ ಸತ್ವ “ಸಿ” ಪಡೆಯಬಹುದಲ್ಲದೆ ಹೆಚ್ಚಿನ ರುಚಿ ಹಾಗೂ ಕಂಪು ನೀಡುತ್ತದೆ.
ಮಧುಮೇಹಿಗಳು ಕಲ್ಲಂಗಡಿ ಹಣ್ಣು ಸೇವಿಸಬಹುದೇ ?
ಮಧುಮೇಹಿಗಳು ಯಾವುದೇ ಹಣ್ಣನ್ನು ಸೇವಿಸುವ ಮುಂಚೆ ಗಮನಿಸಬೇಕಾದ ಸಂಗತಿಗಳು :
- ಹಣ್ಣಿನಲ್ಲಿರುವ ಕಾರ್ಬೋಹೈಟ್ರೇಟ್ (ಸಕ್ಕರೆ )ಪ್ರಮಾಣ
- ಹಣ್ಣಿನ a. ಗ್ಲೈಸೆಮಿಕ್ ಸೂಚ್ಯಂಕ ( ಜಿ ಆಯ್ ) : ಆಯಾ ಆಹಾರವು ರಕ್ತದಲ್ಲಿನ ಗ್ಲೂಕೋಸನ್ನು ಹೆಚ್ಚಿಸುವ ಕ್ಷಮತೆ ಹಾಗೂ
b.ಗ್ಲೈಸೆಮಿಕ್ ಲೋಡ್ ( ಜಿ ಎಲ್ ): ಸೇವಿಸಿದ ಆಹಾರದ ಪ್ರಮಾಣ.
100ಗ್ರಾಂ. ಹಣ್ಣಿನಲ್ಲಿ 6.2 ಗ್ರಾಂ ನಷ್ಟು ಸಕ್ಕರೆ ಅಂಶವಿರುತ್ತದೆ.
ಈ ಹಣ್ಣಿನ ಜಿ ಆಯ್ 72 % ಇರುವುದರಿಂದ, ಈ ಹಣ್ಣು ಮೇಲ್ನೋಟಕ್ಕೆ ಮಧುಮೇಹಿಗಳಿಗೆ ಸೂಕ್ತವೆನಿಸುವದಿಲ್ಲ. ಆದರೆ ಈ ಹಣ್ಣಿನಲ್ಲಿ ಪ್ರತಿಶತ 90ರಷ್ಟು ನೀರಿನ ಅಂಶವಿರುವುದು.ಈ ಹಣ್ಣಿನ ಜಿ ಎಲ್ ಅತಿ ಕಡಿಮೆ ಅಂದರೆ 2 ರಿಂದ 5 ಇರುವುದು. 250 ಗ್ರಾಂ ನಷ್ಟು ಹಣ್ಣು ಸೇವಿಸಿದಾಗಲೂ ಕೇವಲ 15 ಗ್ರಾಂಗಳಷ್ಟು ಕಾರ್ಬೋಹೈಡ್ರೇಟ್ ಸೇವಿಸಿದಂತಾಗುತ್ತದೆ. ಅದು ಕೇವಲ 60 ರಿಂದ 65 ಕ್ಯಾಲೋರಿ ಗೆ ಸಮವಾಗುತ್ತದೆ
ಜೊತೆಗೆ ವಿವಿಧ ಜೀವನ ಸತ್ವಗಳು A ಮತ್ತು C, ನಾರಿನಂಶ, ಲೈಕೋಪೀನ್,ಹಾಗೂ ಸಿಟ್ರುಲೀನ ನಂಥ ಉತ್ಕರ್ಷಣ ನಿರೋಧಕ ಹಾಗೂ ಅಮೈನೋ ಆಸಿಡ್ ಗಳು ದೊರಕುತ್ತವೆ. ಇವುಗಳ ಲಾಭಗಳ ಬಗ್ಗೆ ಸಂಕ್ಷಿಪ್ತವಾಗಿ ಈಗಾಗಲೇ ತಿಳಿಸಲಾಗಿದೆ.
ಮಧುಮೇಹಿಗಳು ಈ ಹಣ್ಣನ್ನು ಮಿತವಾಗಿ 200 – 250 ಗ್ರಾಂ ಗಳ ವರೆಗೆ ಸೇವಿಸಿದಲ್ಲಿ ಮಧುಮೇಹ ನಿಯಂತ್ರಣದಲ್ಲಿ ಏರುಪೇರಾಗುವ ಸಂಭವವಗಳು ತುಂಬಾ ಕಡಿಮೆ. ಆದ್ದರಿಂದ ಮಧುಮೇಹಿಗಳು ಕಡು ಬೇಸಿಗೆಯಲ್ಲಿ
1/4 ಭಾಗದಷ್ಟು ಹಣ್ಣನ್ನು ಸೇವಿಸಬಹುದು. ರೋಗ ನಿಯಂತ್ರಣದಲ್ಲಿ ಇಲ್ಲದವರು, ಹಾಗೂ ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳುವವರು ಹಣ್ಣಿನ ಸೇವನೆಯ ನಂತರ ಉಂಟಾಗುವ ರಕ್ತದ ಸಕ್ಕರೆ ಯಲ್ಲಿ ಏರುಪೇರಾಗದ್ದನ್ನು ಖಚಿತಪಡಿಸಿಕೊಂಡು ಹಣ್ಣನ್ನು ಸೇವಿಸಬಹುದು. ಹಣ್ಣನ್ನು ಮಿತವಾಗಿ ಸೇವಿಸಿ, ಆಸ್ವಾದಿಸಿ ಮಧುಮೇಹದಲ್ಲಿ ಏರುಪೇರಾಗದಂತೆ ನೋಡಿಕೊಳ್ಳುವುದೇ ಜಾಣತನ.
ಈ ಹಣ್ಣಿನ ಅಲರ್ಜಿ ಕೆಲವರಲ್ಲಿ ವಿರಳವಾಗಿ ಕಾಣಬಹುದು. ಹಣ್ಣು ಸೇವಿಸಿದಾಕ್ಷಣ ಕೆಮ್ಮು,ತುರಿಕೆ
ತುರಿಸಿದಲ್ಲಿ ಬಾಸುಂಡೆ, ಹೈತಿಕೆ( Urticara ), ಹೊಟ್ಟೆ ನೋವು, ವಾಕರಿಕೆ ವಾಂತಿ ಹಾಗೂ ಬೇಧಿ ಉಂಟಾದಲ್ಲಿ ಅಂತವರು ಹಣ್ಣನ್ನು ಸೇವಿಸ ಕೂಡದು.
ಕಡು ಬೇಸಿಗೆಯಲ್ಲಿ ಈ ಹಣ್ಣುಗಳು ಹಾಗೂ ಹಣ್ಣಿನ ರಸ ದೇಹದ ತೃಷೆ ತಣಿಸುವುದಲ್ಲದೆ ದೇಹದ ದಣಿವು ನಿವಾರಿಸುವುದು ಹಾಗೂ ಮನಸ್ಸಿನಲ್ಲಿ ಉಲ್ಲಾಸ ತರುವುದರ ಜೊತೆಗೆ ಹಲವಾರು ಪೋಷಕಾಂಶಗಳನ್ನು ಒದಗಿಸಿ ದೇಹದ ಆರೋಗ್ಯವನ್ನು ಕಾಪಾಡುವ ವರದಾನವಾಗಿದೆ.
ಲೇಖಕರು,
ಡಾ. ಎ. ಎ. ಪಾಂಗಿ.
ಎಮ್. ಡಿ.,
ಮುಖ್ಯ ವೈದ್ಯರು, ಅನ್ನಪೂರ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
ಅಥಣಿ 591304
ದೂರವಾಣಿ 9448493900
ಇ ಮೇಲ್ draapangi@mail.com