ಭಾರತದ ಇತಿಹಾಸದ ಪುಟಗಳನ್ನು ಕೆದಕಿದಾಗ ನೂರಾರು ವರ್ಷಗಳ ಕಾಲ ಜೀವಿಸುತ್ತಿದ್ದ ರಸಋಷಿಗಳು ಆರೋಗ್ಯದ ಮಹತ್ವವನ್ನು ಅರಿತಿದ್ದರು. ದೈವದತ್ತವಾದ ಅತ್ಯದ್ಭುತ ರಚನೆಯುಳ್ಳ ಹೃದಯ ನಮ್ಮದಾಗಿದ್ದು, ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಗೆಳೆಯರ ಮೇಲೆ ನಮ್ಮ ಪ್ರೀತಿ, ವಾತ್ಸಲ್ಯ ಮತ್ತು ಧನಾತ್ಮಕ ಭಾವನೆಗಳನ್ನು ಪ್ರದರ್ಶಿಸಲು ಇದನ್ನು ಬಳಸಬೇಕು. ಹೃದಯವು ಕಮಲದ ಹೂವಿನಂತಿದ್ದು, ಸೌಂದರ್ಯ ಹಾಗೂ ಮುಗ್ಧತೆಯನ್ನು ಕಾಪಾಡಿಕೊಳ್ಳುವಲ್ಲಿ ಸದಾ ನಿರತವಾಗಿರಬೇಕು ಎಂದು ಶಿಕ್ಷಣ ತಜ್ಞೆ, ಖ್ಯಾತ ವೈದ್ಯಕೀಯ ಶಿಕ್ಷಕಿ ಹಾಗೂ ಅತ್ಯುತ್ತಮ ವಾಗ್ಮಿ, ಬೆಂಗಳೂರ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಚಿಕ್ಕಮಕ್ಕಳ ಹೃದಯ ತಜ್ಞವೈದ್ಯರಾದ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ತಿಳಿಸಿದರು.
ಧಾರವಾಡದ ಎಮ್ ಎಮ್ ಜೋಷಿ ಕಣ್ಣಿನ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ಹೃದಯದಿಂದ ಹೃದಯದಿಂದ ಹೃದಯ ಎಂಬ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ನೀವು ಖಿನ್ನತೆ, ಒತ್ತಡ, ನಕಾರಾತ್ಮಕ ಚಿಂತನೆ ಪ್ರಕ್ರಿಯೆ ಮತ್ತು ಪ್ರಕ್ಷುಬ್ಧತೆಯಲ್ಲಿದ್ದಾಗ ಹೃದಯವು ಅದೇ ಕಂಪನಗಳನ್ನು ಹೊರಸೂಸುತ್ತದೆ. ಈ ನಕಾರಾತ್ಮಕ ಕಂಪನಗಳು ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಆದ್ದರಿಂದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಕೂಡ ಸ್ಥಿಮಿತವನ್ನು ಕಳೆದುಕೊಳ್ಳದೇ ಖುಷಿಯಿಂದ ಹಸನ್ಮುಖಿಯಾಗಿದ್ದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತ, ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವದರ ಮೂಲಕ ಉತ್ಸಾಹಭರಿತ ಜೀವನ ನಡೆಸುವಂತೆ ಯುವಕರಿಗೆ ಕರೆ ನೀಡಿದರು.
ಧನಾತ್ಮಕ ಮನೋಭಾವನೆ ಮೂಲಕ ಮನಸ್ಸನ್ನು ಪ್ರಫುಲ್ಲಗೊಳಿಸಿ, ನಿಯಮಿತ ವ್ಯಾಯಾಮ, ದೇಹದ ತೂಕ ಕಡಿಮೆ ಮಾಡುವುದು, ತರಕಾರಿ ಮತ್ತು ಹಣ್ಣುಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೆಕಾಗುತ್ತದೆ. ಭಾರತೀಯ ಪ್ರತಿ ಅಡುಗೆಮನೆಯಲ್ಲಿ ಕಂಡುಬರುವ ಉಪ್ಪು, ಮೈದಾ ಹಾಗೂ ಸಕ್ಕರೆ ಎಂಬ ಮೂರು ವಿಷಗಳಿಂದ ದೂರವಿರಬೇಕು. ರುಚಿಗೆ ತಕ್ಕಷ್ಟು ಮಾತ್ರ ಇವುಗಳನ್ನು ಉಪಯೋಗಿಸಬೇಕು. ಇವುಗಳ ಅತೀಯಾದ ಬಳಕೆಯಿಂದ ಕೇವಲ ಹೃದಯ ಮಾತ್ರವಲ್ಲ ಇನ್ನೀತರ ಖಾಯಿಲೆಗಳಿಗೆ ನಾಂದಿ ಹಾಡಬಹುದು. ಆದ್ದರಿಂದ ಇವುಗಳನ್ನು ಅತೀಯಾಗಿ ಬಳಸಬೇಡಿ. ಮೈದಾದಿಂದ ತಯಾರಿಸಿದ ಆಹಾರಗಳ ಬಳಕೆ ಅತೀಯಾಗಿ ಬೇಡವೇ ಬೇಡ. ಈ ಮೂರು ಬಿಳಿ ವಿಷಗಳಿಂದ ದೂರವಿದ್ದಷ್ಟು ನಿಮ್ಮ ಹೃದಯ ಹಾಗೂ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಅತಿಯಾದ ತಂಬಾಕು ಸೇವನೆ, ಧೂಮಪಾನ, ನಿಯಮಿತವಾಗಿ ಹೆಚ್ಚಿನ ಕ್ಯಾಲೊರಿ ಆಹಾರವನ್ನು ಸೇವಿಸುವುದು, ಮದ್ಯಪಾನ, ಅವ್ಯಕ್ತ ಸಂತೋಷಕ್ಕಾಗಿ ನಶೆ (ಡ್ರಗ್ಸ್) ಸೇವನೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಭಾರತೀಯ ಯುವಕರಲ್ಲಿ ಇತ್ತೀಚಿನ ದಿನಗಳಲ್ಲಿ ಹೃದಯ ಕಾಯಿಲೆ ತೀವ್ರಗೊಳ್ಳುತ್ತಿದ್ದು, ಇದು ಅತ್ಯಂತ ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿ, ಗಂಟಲಿಗೆ ಸವಾಲೊಡ್ಡುವ ಅತೀಯಾದ ಸ್ಪರ್ಧೆಗಳು, ಅಹಂಕಾರ ಮತ್ತು ಅಸೂಯೆ, ತೀವ್ರವಾದ ಆಲೋಚನೆಗಳು ಹೃದಯದ ಕಾರ್ಯನಿರ್ವಹಣೆಗೆ ಒಳ್ಳೆಯದಲ್ಲ. ಹೃದಯಪೂರ್ವಕ, ಕೃತಜ್ಞತಾಭಾವ, ಹಿರಿಯರನ್ನು ಗೌರವಿಸುವುದು ಮತ್ತು ಸಕಾರಾತ್ಮಕ ಭಾವನೆಗಳು ಹೃದಯವನ್ನು ಶಕ್ತಗೊಳಿಸುತ್ತದೆ. ದೇಹಕ್ಕೆ ವಿಶ್ರಾಂತಿ ಅತ್ಯವಶ್ಯ, ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು, ಅನುಭೂತಿ ಹೊಂದಲು ಇದು ಸರಳ, ಧ್ಯಾನ ಮತ್ತು ಅನ್ವೇಷಣೆ ಹೃದಯದ ಅನಿಯಮಿತ ಸಂಪನ್ಮೂಲಗಳು. ಧ್ಯಾನದಿಂದ ಮನಶಾಂತಿ ಅನುಭವಕ್ಕೆ ಬರುತ್ತದೆ. ಅಲ್ಲದೇ ಏಕಾಗ್ರತೆ, ಆಂತರಿಕ ಸಮತೋಲನ ಮತ್ತು ಹೃದಯದ ನಿಜವಾದ ಆರೋಗ್ಯ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಅವರು ವಿವರಿಸಿದರು.
ನಮ್ಮ ಹೃದಯ 80ಬಾರಿ/ನಿಮಿಷ ಮತ್ತು ಪ್ರತಿದಿನ 1,15,200 ಬಡಿತ ಹೊಂದಿರುತ್ತದೆ. ಹೃದಯವು ಒಂದು ದಿನಕ್ಕೆ 2500 – 5000 ಗ್ಯಾಲನ್ ರಕ್ತವನ್ನು ಪಂಪ್ ಮಾಡುತ್ತದೆ. ಮುಖ್ಯವಾಗಿ ನಿಯಮಿತವಾಗಿ ವ್ಯಾಯಾಮ, ಯೋಗ, ಸೈಕ್ಲಿಂಗ್, ಈಜು ಅಥವಾ ಯಾವುದೇ ರೀತಿಯ ಚಟುವಟಿಕೆ ಅತ್ಯಗತ್ಯ ಎಂದರು. ಹುಬ್ಬಳ್ಳಿಯಲ್ಲಿ ಕಳೆದ ಕ್ಷಣಗಳನ್ನು ಹಂಚಿಕೊಂಡರು. ಡಾ. ಎಂ. ಎಂ. ಜೋಶಿ ಮತ್ತು ಅವರ ಕುಟುಂಬದ ಕಾರ್ಯವನ್ನು ಶ್ಲಾಘಿಸಿ, ಕೃತಜ್ಞತೆ ಸಲ್ಲಿಸಿದರು.
ಶಿರಸಿಯ ಡಾ.ಶಿವರಾಮ್ ಅತಿಥಿಗಳನ್ನು ಪರಿಚಯಿಸಿದರು, ಡಾ.ಕೆ.ವಿ.ಸತ್ಯಮೂರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಕೃಷ್ಣ ಪ್ರಸಾದ್ ಅವರು ವಂದಿಸಿದರು. ಡಾ.ಶ್ರೀನಿವಾಸ್ ಜೋಶಿ, ಡಾ. ಗುರುಪ್ರಸಾದ, ಡಾ ಸಂಜೀವ ಕುಲ್ಕರ್ಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 70 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಎಂ ಎಂ ಜೋಶಿ ಕಣ್ಣಿನ ಸಂಸ್ಥೆಯ ಆಡಳಿತಾಧಿಕಾರಿ ಹರೀಶ್ ಮುಂಜಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಇದು ಫೇಸ್ ಬುಕ್ & ಯುಟ್ಯೂಬ್‌ನಿಂದ ಲೈವ್ ಆಗಿತ್ತು.