ತ್ಯಾಂಕ್ಯೂ ಡಾಕ್ಟರ್…

  • ಒಂದು ಕ್ಷಣ ನಿಂತರೂ ಸಾಕು ಜೀವವೇ ಹೋಗಿಬಿಡುತ್ತೆ ಅಂತಿರುವ ಹೃದಯದ ಅಷ್ಟೂ ಅಭಿದಮನಿ, ಅಪಧಮನಿ, ಕವಾಟ, ರಕ್ತನಾಳಗಳನ್ನು ನಿಯಂತ್ರಣಕ್ಕೆ ತಂದಿಟ್ಟುಕೊಂಡು ಹೊಸ ಹೃದಯವನ್ನೇ ಕಸಿ ಮಾಡುವ ಡಾಕ್ಟರ್.. ನೀವು
    ಮತ್ತೊಬ್ಬ ದೇವರಾ?
  • ಮೆದುಳೆಂಬ ಮಾಯೆಯ ಸಾವಿರ ಸಿಕ್ಕಿನ ನರಗಳ ವ್ಯೂಹವನ್ನು ಬೇಧಿಸಿ ತಪ್ಪಿಹೋಗಿರುವ ಒಂದು ತಂತುವನ್ನು ತಂದು ಮತ್ತೆ ಜೋಡಿಸಿ ಕಳೆದುಹೋಗಿರುವ ಸಂಪರ್ಕವನ್ನು ಜೋಡಿಸುತ್ತೀರಲ್ಲಾ.. ಕಟ್ಟಿರುವ ನೆತ್ತರ ಗಟ್ಟಿಯನ್ನು ಕಿತ್ತೆಸೆದು ಹೊಸ ಜೀವ ತುಂಬುತ್ತೀರಲ್ಲಾ.. ನೀವು
    ದೇವರಾ?
  • ಕೈಗೆ ಸಿಗದ ಮನಸಿನ, ಒಳಮನಸಿನ, ಜಾಗೃತ, ಸುಪ್ತ, ಸುಷುಪ್ತ ಮನಸುಗಳ ಆಂತರ್ಯಗಳನ್ನೆಲ್ಲ ಅದು ಹೇಗೆ ಬಗೆದು ನೋಡುತ್ತೀರೋ.. ಕಳೆದು ಹೋದ ನೆನಪುಗಳನ್ನು ಅದು ಹೇಗೆ
    ತುಂಬುತ್ತೀರೋ- ದೇವರಿಗೇ ಗೊತ್ತು.
  • ಗರ್ಭ ಕಟ್ಟಿದ ನಾಲ್ಕನೇ ವಾರಕ್ಕೆ ಹೊಟ್ಟೆಯಲ್ಲಿ ಮಲಗಿರುವ ಭ್ರೂಣದ ಅದಷ್ಟೂ ಚರಿತ್ರೆ, ಭವಿಷ್ಯವನ್ನು ಓದಬಲ್ಲವರು ನೀವು. ಯಾರೆಂದರೆ ಯಾರಿಗೂ
    ಕಾಣದಂತೆ ಕುಳಿತಿರುವ ಈ ಸೃಷ್ಟಿ ವಿಚಿತ್ರದ ಕ್ಷಣ ಕ್ಷಣದ ಬೆಳವಣಿಗೆಗಳನ್ನು, ಅದರ ತಲ್ಲಣಗಳನ್ನು ದಾಖಲಿಸಬಲ್ಲ ನಿಮ್ಮ ಅತಿಮಾನುಷ ಶಕ್ತಿಯ
    ಮೂಲವೆಲ್ಲಿದೆ?
  • ರಕ್ತ ಸೋರಿ ಸೋರಿ ಸಾವಿರ ಗಾಯಗಳೊಂದಿಗೆ ಬಂದು ಬಿದ್ದ ವಸ್ತುಶ: ಜೀವಚ್ಛವದಲ್ಲಿ ನಿಮಿಷ ಮಾತ್ರದಲ್ಲಿ ಹೊಸ ಜೀವ ಸಂಚಲನೆಯಾಗುವಂತೆ
    ಮಾಡುವ ನಿಮಗೆ ಆ ನೆತ್ತರು, ಆ ಹರಿದ ಚರ್ಮ, ಮುರಿದ ಮೂಳೆಗಳ ನಡುವೆ ಸೂಜಿ ತೂರಿಸಿ ಹೊಲಿಯುವ ಮಾನಸಿಕ ಶಕ್ತಿ ಕೊಟ್ಟಿದ್ಯಾರು?
  • ಅಂಗಕ್ಕೆ ಅಂಗ, ಲಿಂಗಕ್ಕೆ ಲಿಂಗ, ಕೊನೆಗೆ ಜೀವಕ್ಕೆ ಜೀವ ಕೊಡುವ ಆ ಪರಮ ಶಕ್ತಿಯನ್ನು ನಿಮ್ಮಲ್ಲಿ ತುಂಬಿದ್ದು ಆ ದೇವರಾ? ಅಥವಾ ನೀವೇ ದೇವರಾ?
    ಏನೇ ಆದರೂ ಒಂದಿನಿತೂ ಅವಸರವಿಲ್ಲದೆ, ಒಂದಿನಿತೂ ತಪ್ಪಿಲ್ಲದೆ, ಒಂದಿನಿತೂ ಸಿಟ್ಟಿಲ್ಲದೆ ಪ್ರಾಣ ಶಕ್ತಿ ತುಂಬೋ ನಿಮ್ಮ ಶಕ್ತಿಯ ಹಿಂದಿರುವುದು ಯಾವುದು?- ಹಾಕಿಕೊಂಡಿರೋ ಬಿಳಿ ಕೋಟಾ? ಕೈಯಲ್ಲಿ ಹಿಡಿದಿರೋ ಆ ಸ್ಪೆತೋಸ್ಕೋಪಾ?

ಯಾವತ್ತೂ ಮುಖದಲ್ಲಿ ಧರಿಸಿರುವ ಆ ಮುಗುಳ್ನಗೆಯಾ?

ಈ ಜಗತ್ತಿನಲ್ಲಿ ಜನ ತನಗಿಂತಲೂ ಹೆಚ್ಚು ನಂಬಿಕೆ ಇಟ್ಟಿರುವುದು ನಿಮ್ಮ ಮೇಲೆ ಡಾಕ್ಟರ್. ಒಂದು ಸಣ್ಣ ನೋವಾದರೂ ಸರಿ, ಮೈ ಸಣ್ಣಗೆ ಬಿಸಿಯಾಗುತ್ತಿದೆ ಅನಿಸಿದರೂ ಸರಿ, ಏನೂ ಬೇಡ, ಕಣ್ಣಂಚಿನಲ್ಲಿ ಪುಟ್ಟ ಕಸವೊಂದು ಬಿದ್ದರೂ ಸಾಕು.. ಮನಸಿನ ಪದರಗಳ ಮೇಲೆ ಹಾದು ಹೋಗುವ ಮೊದಲ ನೆನಪು ನೀವು ಡಾಕ್ಟರ್.

ಹುಟ್ಟಿದ ಪುಟ್ಟ ಮಗುವಿಗೆ ನೀವು ಬೇಕು, ಬೆಳೆದು ನಿಂತ ಹುಡುಗಿಯ ನೋವಿಗೆ ಸಾಂತ್ವನ ಹೇಳಲು ನೀವು ಬೇಕು, ಮೊದಲ ಬಾರಿ ತಾಯಿಯಾಗುವ ಹೆಣ್ಮಗಳಿಗೆ ಮೊದಲ ತಿಂಗಳಿಂದ ಮಗು ಹುಟ್ಟುವ ಆ ಕ್ಷಣದವರೆಗೂ ನೀವೇ ಅಮ್ಮನಾಗಿರಬೇಕು ಡಾಕ್ಟರ್.

ಕಾಲು ಮುರಿದುಕೊಂಡು ಬಿದ್ದ ಯುವಕನಿಗೆ, ೪೦ರ ಆಸುಪಾಸಿಗೆ ಕಾಡುವ ಬಿಪಿಗೆ, ಶುಗರಿಗೆ, ಪರೆ ಬಂದ ಕಣ್ಣಿಗೆ, ಕಾಲಿನ ಗಂಟಲ್ಲಿ ಕಾಣಿಸಿಕೊಂಡ ಅಸಾಧ್ಯ ನೋವಿಗೆ, ಮೆನೋಪಾಸ್‌ನ ಆತಂಕದ ಕ್ಷಣಗಳಿಗೆ, ವೃದ್ಧಾಪ್ಯದ ಆ ಒಂಟಿ ಒಂಟಿ ಬದುಕಿಗೆ..
ಜೀವನದ ಪ್ರತಿ ಕ್ಷಣವೂ ಪಕ್ಕದಲ್ಲಿ ನಿಂತು ಸಾಂತ್ವನ ಹೇಳುವವರು.. ದಟ್ ಈಸ್ ಯೂ.. ಡಾಕ್ಟರ್.

ನಿಮ್ಮ ಜೀನಿಯಸ್, ನಿಮ್ಮ ಶಕ್ತಿ, ನೀವು ಕೊಡೋ ಮದ್ದು, ನೀವು ಮಾಡೋ ಆಪರೇಷನ್.. ಅದನ್ನೆಲ್ಲ ನಿಮಗೆ ಯಾರೋ ಕಲಿಸಿಕೊಟ್ಟಿದ್ದಾರೆ.. ಸಾವಿರ ಸಾವಿರ
ವರ್ಷಗಳ ವೈದ್ಯಕೀಯ ವಿಜ್ಞಾನದ ಫಲ ಅಂತ ಒಪ್ಪಿಕೊಳ್ಳಬಹುದು. ಆದರೆ, ಎಂಥ ಪರಿಸ್ಥಿತಿಯಲ್ಲೂ ಏನೂ ಆಗೊಲ್ಲ ಅಂತ ನೀವು ತುಂಬೊ ಧೈರ್ಯ, ಒಮ್ಮೆ ನಿಮ್ಮ ಸಮ್ಮುಖಕ್ಕೆ ಬಂದು ನಿಂತರೆ ಸಾಕು.. ನೀವು ಸಾವಿನ ಕೊನೆಯ ಮನೆಯಿಂದಲೂ ಮೇಲೆತ್ತಿ ತರಬಲ್ಲಿರಿ ಎನ್ನುವ ವಿಶ್ವಾಸ- ಇದೆಲ್ಲ ಹುಟ್ಟಿದ್ದು ಹೇಗೆ ಸಾರ್?

ಎಲ್ಲ ಆಸೆ ಬಿಟ್ಟು ಕಣ್ಣೀರು ಹಾಕುವ ಕಣ್ಣುಗಳಲ್ಲಿ, ಇನ್ನೇನು ಜೀವವೇ ಹೋಯಿತು ಅನ್ನುವ ಕ್ಷಣಗಳಲ್ಲಿ ತಣ್ಣಗೆ ಬೆನ್ನು ತಟ್ಟಿ-ನಾನಿದ್ದೀನಿ, ಹೆದರಬೇಡಿ ಎನ್ನುವ ನಿಮ್ಮ ಮಾತಿನ ಮೇಲೆ ಅಷ್ಟೊಂದು ನಂಬಿಕೆ
ಹುಟ್ಟುತ್ತಲ್ಲ.. ಅದೆಲ್ಲ ಹೇಗೆ ಸಾಧ್ಯ?

ಅದಲ್ಲ, ಎಂಬಿಬಿಎಸ್, ಆಯುರ್ವೇದ, ಹೋಮಿಯೋಪತಿ, ಇನ್ನೂ ಏನೇನೋ
ಶಾಸ್ತ್ರಗಳನ್ನು ಕಲಿಯುವ ಪಕ್ಕದ ಮನೆಯ ಹುಡುಗ, ಅದುವರೆಗೂ ಬೇಜವಾಬ್ದಾರಿಯುತ ಯುವಕನಾಗಿ ಕಂಡರೂ ಒಮ್ಮೆ ಡಾಕ್ಟರಾದ ಮೇಲೆ ಅಷ್ಟೊಂದು ಬದಲಾವಣೆಯನ್ನು ಆ ಕ್ಷಣದಲ್ಲೇ ಹೇಗೆ ಮಾಡಿಕೊಳ್ಳುತ್ತಾನೆ.. ಅನ್ನೋದೇ ಅಚ್ಚರಿ.

ಗೊತ್ತು ಡಾಕ್ಟರ್.. ಕೈಯಲ್ಲಿರುವ ಸ್ಟೆತೋಸ್ಕೋಪ್, ಮೈಮೇಲಿರುವ ಆ ಶ್ವೇತವಸ್ತ್ರವನ್ನು ಬದಿಗಿಟ್ಟರೆ ನೀವೂ ಎಲ್ಲರ ಹಾಗೆ ಮೂಳೆ ಮಾಂಸದ
ತಡಿಕೆ. ನಿಮಗೂ ಮನೆಯಲ್ಲಿ ಕಾಯೋ ಅಪ್ಪ-ಅಮ್ಮ ಇದ್ದಾರೆ, ಮುದ್ದಿನ ತಂಗಿ, ಅಕ್ಕರೆಯ ಅಣ್ಣ-ತಮ್ಮ, ಪ್ರೀತಿಯ ಮಡದಿ, ಮುದ್ದಿನ ಮಕ್ಕಳು ಎಲ್ಲರೂ
ಇದ್ದಾರೆ. ಅವರೆಲ್ಲ ಸಂತೋಷ-ಸಂಭ್ರಮ, ನೋವುಗಳಿಗೆ ಸ್ಪಂದಿಸುತ್ತಲೇ ಸಾವಿರ ಮಾತುಗಳಿಗೆ ಕಿವಿಯಾಗಿ ಸಾಂತ್ವನ ಹೇಳುತ್ತೀರಲ್ಲಾ.. ಎಲ್ಲಿಂದ ಬಂತೀ ಶಕ್ತಿ?

ಬೇರಾವುದೇ ಶಿಕ್ಷಣ ಪಾಸಾಗಲು ೩೫ ಶೇ. ಮಾರ್ಕ್ಸ್ ಸಾಕಂತೆ. ನೀವು ಮಾಡೋ ಕೆಲಸದಲ್ಲಿ ೧ ಶೇಕಡಾ ಹೆಚ್ಚು ಕಡಿಮೆಯಾದರೂ ಏನೇನೋ
ಆಗಿಹೋಗಬಹುದಲ್ಲಾ.. ಅಂತ ೧೦೦ ಶೇ. ಪರ್ಫೆಕ್ಷನ್ ನಿಮ್ಮಲ್ಲಿ ಹುಟ್ಟಿಕೊಂಡಿದ್ದು ಹೇಗೆ? ನೀವು ಹುಟ್ಟಾ ಅಷ್ಟೊಂದು ಜೀನಿಯಸ್ಸಾ? ಆ ವೃತ್ತಿ ಕಟ್ಟಿಕೊಟ್ಟ ಶಕ್ತಿಯಾ?

ಡಾಕ್ಟರ್ ಎನ್ನುವುದೇ ಒಂದು ಅದ್ಭುತ ಡಾಕ್ಟರ್. ಎಲ್ಲರ ಕಣ್ಣಿಗೆ ನೀವೊಬ್ಬ ಪವಾಡ ಪುರುಷ. ನಂಬಿದ ದೇವರ ಮುಂದೆ ಎಲ್ಲ ಕಷ್ಟಗಳನ್ನು ಹೇಳಿಕೊಳ್ಳುವಂತೆ ನಿಮ್ಮ ಮುಂದೆ ಎಲ್ಲವನ್ನೂ ಬಿಚ್ಚಿಡುತ್ತೇವೆ.. ಆತ್ಮೀಯ
ಗೆಳೆಯನ ಹಾಗೆ. ನೀವು ಏನು ಹೇಳಿದರೂ ಮಾಡುತ್ತೇವೆ. ನೀವೊಬ್ಬ ಗೆಳೆಯನಿಗಿಂತ ಗೆಳೆಯನ ಹಾಗೆ, ಮಾರ್ಗದರ್ಶಕನ ಹಾಗೆ. ನೀವು ಮಾಡಿದ
ಸೇವೆಗೆ, ನೀವು ನೀಡಿದ ಪ್ರೀತಿಗೆ, ಬದುಕಿಗೆ ಕೊಟ್ಟ ನೆಮ್ಮದಿಗೆ, ಅದೆಲ್ಲವನ್ನೂ ಇಡಿ ಇಡಿಯಾಗಿ ನೀಡುವ ರೀತಿಗೆ ಯಾವ ಕಾಣಿಕೆ ನೀಡಲಿ, ಯಾವ
ರೀತಿ ಕೃತಜ್ಞತೆ ಹೇಳಲಿ ಡಾಕ್ಟರ್?

ಕೊನೆಗೊಂದು ಮಾತು ಡಾಕ್ಟರ್.. ಮೆಡಿಕಲ್ ಅನ್ನೋದನ್ನು ನೀವು ಪ್ರೊಫೆಷನ್ ಅಂತ ತಿಳ್ಕೊಂಡಿರಬಹುದು. ಆದರೆ, ಜನರ ಪಾಲಿಗೆ ಅದಿನ್ನೂ ಜೀವ ಕಾಪಾಡುವ ಪುಣ್ಯದ ಕೆಲಸ… ಅದೊಂದು ಸೇವೆ. ನಿಮಗೆ ಎಷ್ಟು ದುಡ್ಡು
ಬರುತ್ತೋ, ಕೆಲವರು ತುಂಬ ದುಡ್ಡು ಮಾಡಬೇಕು ಅಂತ ಹೊರಟು ಮಾನವೀಯತೆ ಮರೆತಿದ್ದಾರೋ.. ಗೊತ್ತಿಲ್ಲ.. ಆದರೆ, ಒಬ್ಬ ಒಳ್ಳೆಯ ಡಾಕ್ಟರ್‌ಗೆ
ಅವನ ಪೇಶೆಂಟ್‌ಗಳು ಮಾಡುವ ಹಾರೈಕೆಗಳು, ತೋರಿಸುವ ಪ್ರೀತಿ, ಇಟ್ಟಿರೋ ನಂಬಿಕೆಗಳೇ ಆಸ್ತಿ. ಅದು ದುಡ್ಡಿನಿಂದ ಅಳೆಯಲಾಗದ್ದು, ಅದು
ಕೊಡುವ ನೆಮ್ಮದಿಗೆ ಜಗತ್ತಿನ ಯಾವ ಸಂತೋಷವೂ ಸಾಟಿಯಲ್ಲ.. ಹೌದಾ ಡಾಕ್ಟರ್..?

ಇವತ್ತು ವೈದ್ಯರ ದಿನವಂತೆ.. ನಮ್ಮನ್ನೆಲ್ಲ ಕಾಯುವ ನಿಮಗೊಂದು ಕೃತಜ್ಞತೆ ಹೇಳೋ ದಿನ. ನಮ್ಮ ಬದುಕಿನಲ್ಲಿ ಹೊಸ ಸಂಭ್ರಮವನ್ನು
ನಿತ್ಯ ತುಂಬುತ್ತಿರುವ ನಿಮ್ಮ ಬದುಕೂ ಚೆನ್ನಾಗಿರಲಿ ಡಾಕ್ಟರ್.. ಚೆನ್ನಾಗಿರಲಿ..
ಕೃಷ್ಣಾ ಭಟ್
ಬೆಂಗಳೂರು

Popular Doctors

Related Articles