ತಂದೆಯ ಶರೀರವನ್ನೇ ಛೇದನೆಮಾಡಿ ವೈದ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದು, ವೈದ್ಯಕೀಯ ಕ್ಷೇತ್ರದಲ್ಲ್ಲಿ ಇತಿಹಾಸ ಸೃಷ್ಟಿಸಿದ ಡಾ. ಮಹಾಂತೇಶ ರಾಮಣ್ಣವರ ಅವರ ಕಾರ್ಯ ವಿಶ್ವದಾದ್ಯಂತ ಸಂಚಲನವನ್ನೇ ಸೃಷ್ಟಿಸಿತು. 2010 ರ ನವಂಬರ್ 13 ರಂದು ಕೆಎಲ್ಇ ವಿಶ್ವವಿದ್ಯಾಲಯದ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಶರೀರ ಛೇದನ ಮಾಡುವದನ್ನು ಎಲ್ಲರೂ ಬೆರಗುಗಣ್ಣಿನಿಂದ ನೋಡುತ್ತಿದ್ದರು. ಆದರೆ ಈ ಘಟನೆ ಕರ್ನಾಟಕ ಹಾಗೂ ದೇಶದ ಅನೇಕ ಕಡೆ ಜನರು ಪ್ರೇರಣೆಗೊಂಡು ನೇತ್ರ ಮತ್ತು ದೇಹದಾನ ಮಾಡಲು ಸ್ವಇಚ್ಛೆಯಿಂದ ಮುಂದೆ ಬರುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 2000 ಕ್ಕಿಂತ ಹೆಚ್ಚು ಜನರು ತಮ್ಮ ಶರೀರ ಮತ್ತು ನೇತ್ರಗಳನ್ನು ಕರ್ನಾಟಕದ ವಿವಿಧ ವೈದ್ಯಕೀಯಕಾಲೇಜ್ಗಳಿಗೆದಾನಮಾಡಿದ್ದಾರೆ.
ಕೆಎಲ್ಇ ವಿಶ್ವವಿದ್ಯಾಲಯದ ಜೆಎನ್ಎಂಸಿಯ ಅಂಗ ರಚನೆ ವಿಭಾಗದಲ್ಲಿ 1300 ಕ್ಕೂ ಹೆಚ್ಚು ಜನ ದೇಹದಾನಕ್ಕೆ ಉಯಿಲು ಬರೆದುಕೊಟ್ಟಿದ್ದಾರೆ. ಕೆಎಲ್ಇ ಸಂಸ್ಥೆಯ ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ 266 ಜನ ದೇಹದಾನಕ್ಕೆ ಹೆಸರು ದಾಖಲು ಮಾಡಿದ್ದಾರೆ. ದೇಹದಾನಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ದೇಹದಾನಿಗಳ ಸಂಖ್ಯೆ 2000 ದಾಟಿದೆ. ಮಾನವೀಯ ಮೌಲ್ಯಗಳ ಸಾಕಾರಕ್ಕಾಗಿ ಮಿಡಿಯುವ ಒಂದು ಸಂಘಟನೆ ಅಥಣಿ ತಾಲೂಕಿನ ಶೇಗುಣಸಿಯ ರಾಷ್ಟ್ರೀಯ ಬಸವ ದಳ. ಡಾ. ರಾಮಣ್ಣವರ ಪ್ರತಿಷ್ಠಾನದ ಕಾರ್ಯದಿಂದ ಪ್ರೇರಣೆಗೊಂಡು ಗ್ರಾಮದ ಜನರಲ್ಲಿ ನೇತ್ರದಾನ ಹಾಗೂ ದೇಹದಾನಕ್ಕೆ ಮುಂದಾಗುವಂತೆ ತಿಳುವಳಿಕೆ ಮೂಡಿಸಿತು. ಇದರ ಪರಿಣಾಮವಾಗಿ 5000 ಜನಸಂಖ್ಯೆಯುಳ್ಳ ಗ್ರಾಮದಲ್ಲಿ ಈಗ 130 ಜನರು ನೇತ್ರ ಹಾಗೂ ದೇಹದಾನ ಮಾಡುವ ವಾಗ್ದಾನ ಮಾಡಿ ಉಳಿದವರಿಗೆ ಮಾದರಿಯಾಗಿದ್ದಾರೆ. ಈ ಮೂಲಕ ಶೇಗುಣಸಿ ದೇಹದಾನಿಗಳ ಗ್ರಾಮ ಎಂಬ ಹೆಸರು ಮಾಡಿದೆ.
ವೈದ್ಯಕೀಯ ಕ್ಷೇತ್ರಕ್ಕೆ ಬರುವ ಮುಂದಿನ ಯುವ ಪೀಳಿಗೆಗೆ ಶರೀರ ರಚನಾಶಾಸ್ತ್ರದ ಕುರಿತು ಸಂಪೂರ್ಣ ತಿಳುವಳಿಕೆ ಬರಲಿ ಎಂಬ ಏಕೈಕ ಉದ್ದೇಶದಿಂದ ಬೈಲಹೊಂಗಲದ ಡಾ ಬಸವಣ್ಣೆಪ್ಪ ರಾಮಣ್ಣವರ ನಂತರ ಅವರ ಪುತ್ರ ಡಾ ಮಹಾಂತೇಶ ರಾಮಣ್ಣವರ ಕೈಗೊಂಡ ದೇಹದಾನ ಜಾಗೃತಿ ಇಂದು ಆಂದೋಲನ ರೂಪ ಪಡೆದುಕೊಂಡಿದೆ. ದೇಹದಾನ ಈಗ ಎಲ್ಲ ಕಡೆ ವ್ಯಾಪಕವಾಗಿ ಹರಡುತ್ತಿರುವ ಸಂದೇಶ. ರಕ್ತದಾನದಷ್ಟೇ ದೇಹದಾನ ಸಹ ಬಹಳ ಮುಖ್ಯ ಎಂಬ ಜಾಗೃತಿ ರಾಜ್ಯದ ಬಹುತೇಕ ಕಡೆ ಪರಿಣಾಮ ಬೀರುತ್ತಿದೆ. ವೈದ್ಯ ವಿದ್ಯಾರ್ಥಿಗಳಿಗೆ ಮಾನವ ಶರೀರದ ಪರಿಚಯ ಇರಲೇಬೇಕು ಎಂದು ಡಾ ಬಿ ಎಸ್ ರಾಮಣ್ಣವರ ಯಾವಾಗಲೂ ಪ್ರತಿಪಾದಿಸುತ್ತಿದ್ದರು. ಆದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅವರು ತಮ್ಮ ದೇಹದಾನವನ್ನು ಆಸ್ಪತ್ರೆಗೆ ದಾನ ಮಾಡಿದ್ದರು. ನಂತರ ಅವರ ಇಚ್ಛೆಯಂತೆ ಅವರ ಮಗ ಡಾ ಮಹಾಂತೇಶ ಅವರೇ ತಂದೆಯ ದೇಹ ಛೇದ ಮಾಡಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ ಇಡೀ ಜಗತ್ತೇ ಬೆರುಗುಗೊಳ್ಳುವಂತೆ ಮಾಡಿದ್ದು ಈಗ ಇತಿಹಾಸ.
ಆಗ ಆರಂಭವಾದ ದೇಹದಾನ ಜಾಗೃತಿ ಹಾಗೂ ಸಾಮಾಜಿಕ ಕಾರ್ಯ ಇಂದು ಎಲ್ಲ ಕಡೆ ಬಹಳ ದೊಡ್ಡದಾಗಿ ಪಸರಿಸಿದೆ. ಸತ್ತ ಮೇಲೆ ತಮ್ಮ ದೇಹ ಮಣ್ಣಲ್ಲಿ ಮಣ್ಣಾಗಿ ಅಥವಾ ಬೂದಿಯಾಗಿ ಹೋಗದೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗಲಿ ಎಂಬ ಅರಿವು ಜನರಲ್ಲಿ ಮೂಡುತ್ತಿದೆ. ಸತ್ತನಂತರವೂ ಸಮಾಜ ಸೇವೆ ಮಾಡಬೇಕೆನ್ನುವವರಿಗೆ ಡಾ ಮಹಾಂತೇಶ ರಾಮಣ್ಣವರ ಆರಂಭಿಸಿರುವ ದೇಹದಾನ ಚಳವಳಿ ಒಳ್ಳೆಯ ಅವಕಾಶ ಒದಗಿಸಿಕೊಟ್ಟಿದೆ. ಮಣ್ಣಲ್ಲಿ ಮಣ್ಣಾಗುವ, ಇಲ್ಲವೆ ಸುಟ್ಟು ಬೂದಿಯಾಗುವ ಪಾರ್ಥಿವ ಶರೀರಕ್ಕೆ ಸಾರ್ಥಕತೆ ಬರುತ್ತಿದೆ. ದೇಹದಾನ ಚಳುವಳಿಯ ಉದ್ದೇಶವೂ ಈಡೇರುತ್ತಿದೆ.
ಮಾನವನ ದೇಹ ರಚನೆ ಹಲವು ಸಂರ್ಕೀಣತೆಗಳಿಂದ ಕೂಡಿದೆ. ಇದರ ಧ್ಯಯನ ನಿರಂತರವಾಗಿ ನಡೆಯುತ್ತಿದೆ, ಎಲ್ಲ ರೋಗಗಳ ಪತ್ತೆ, ಚಿಕಿತ್ಸೆ ಶಮನ ವೈದ್ಯ ಶಾಸ್ತ್ರ ಅಂದುಕೊಂಡತೆ ಸದಾ ನಡೆಯುವದಿಲ್ಲ. ಹೊಸ ಹೊಸ ರೋಗಗಳು ಹೊಸ ಸವಾಲುಗಳ ಸರ್ವಕಾಲದಲ್ಲಿಯೂ ಎದುರಾಗುತ್ತಿರುತ್ತದೆ. ಹೀಗಿರುವಾಗ ವೈದ್ಯರಾದವರು ಮಾನವನ ದೇಹ ಒಳಗೊಂಡಿರುವ ಪಂಚೇಂದ್ರಿಯಗಳು, ಮಿದುಳು, ಹೃದಯ, ಶ್ವಾಶಕೋಶ, ಅನ್ನನಾಳ, (ದೊಡ್ಡ ಮತ್ತು ಸಣ್ಣ ಕರಳು) ಮುತ್ರಕೋಶಗಳಲ್ಲಿನ ಅಂರ್ತಗತ ನೂರಾರು ಸಂಗತಿಗಳ ಬಗ್ಗೆ ಆಳವಾದ ಅಧ್ಯಯನ ಮಾಡಬೇಕಾಗುತ್ತದೆ. ಇದು ಕೇವಲ ಸೈದ್ದಾಂತಿಕವಾಗಿ ತಿಳಿದರೆ ಸಾಲದು. ಪ್ರತಿಯೊಂದು ಅಂಗಾಂಗಗಳ ಬಗ್ಗೆ ಪ್ರಾಯೋಗಿಕ ಅರಿವು ಅಗತ್ಯ. ಜೀವಂತ ವ್ಯಕ್ತಿಗಳ ಅಂಗಾಂಗಗಳನ್ನು ಕತ್ತರಿಸಿ ಅಧ್ಯಯನ ನಡೆಸಲು ಸಾಧ್ಯವಿಲ್ಲ. ಇದಕ್ಕೆ ಸಂಸ್ಕರಿಸಲ್ಪಟ್ಟಿರುವ ಮೃತದೇಹವೇ ಉತ್ತಮ ಜ್ಞಾನ ಭಂಡಾರ. ಇಂತಹ ಪ್ರಾಯೋಗಿಕ ಅರಿವು ಮೂಡಿದಾಗ ಮಾತ್ರ ಪ್ರತಿಯೊಬ್ಬರೂ ಭವಿಷ್ಯದ ಯಶಸ್ವಿ ವೈದ್ಯರಾಗಬಲ್ಲರು.
ದೇಹದಾನದ ಲಾಭಗಳು
ಯಾವುದೇ ಧರ್ಮದ ವ್ಯಕ್ತಿಯು ಮರಣಾ ನಂತರ ಆಯಾಧರ್ಮದ ಸಂಪ್ರದಾಯದಂತೆ ಶವ ಸಂಸ್ಕಾರವನ್ನು ವಿಭಿನ್ನ ರೀತಿಗಳಿಂದ ಮಾಡುತ್ತಾರೆ. ಶವವನ್ನು ಸುಡುವದಕ್ಕೆ 400-500 ಕೆ.ಜಿ. ಕಟ್ಟಿಗೆಯನ್ನು ಬಳಸಲಾಗುತ್ತದೆ. ಇದಕ್ಕಾಗಿ ಮರಗಿಡಗಳನ್ನು ಕಡಿಯುವುದರಿಂದ ಅರಣ್ಯ ಸಂಪತ್ತು ನಶಿಸುವದಲ್ಲದೆ ವಾಯು ಮಾಲಿನ್ಯವುಂಟಾಗುತ್ತದೆ. ಶವವನ್ನು ಹೂಳುವುದರಿಂದ ಸುಮಾರು 50 ಅಡಿ ಜಾಗ ಬೇಕು. ಕೆಲವು ಗಾಮೀಣ ಪ್ರದೇಶಗಳಲ್ಲಿ ಸ್ಮಶಾನಗಳ ಕೊರತೆಯಿಂದ ಎಲ್ಲಿ ಬೇಕಾದಲ್ಲಿ ಶವಗಳನ್ನು ಹೂಳಿ ಸಾರ್ವಜನಿಕ ಪ್ರದೇಶಕ್ಕೆ ತೊಂದರೆಯಾಗುತ್ತದೆ. ಕೆಲ ಸಮುದಾಯದಲ್ಲಿ ಶವವನ್ನು ಹೂಳುವದು ಹಾಗೂ ಸುಡದೇ ಹಾಗೆಯೇ ಗಾಳಿಯಲ್ಲಿ ಇಟ್ಟು ಹದ್ದುಗಳಿಗೆ ತಿನ್ನಲು ಬಿಟ್ಟಿರುತ್ತಾರೆ. ಇದರಿಂದ ಪರಿಸರ ಮಾಲಿನ್ಯವುಂಟಾಗುವುದಲ್ಲದೇ ಹದ್ದುಗಳ ಹಾರಾಟದಿಂದ ಕೆಲವೊಮ್ಮೆ ವಿಮಾನಸಂಚಾರಕ್ಕೆ ಅಡಚಣೆಯುಂಟಾಗುತ್ತದೆ. ದೇಹದಾನದಿಂದ ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂಬುದು ಡಾ. ಮಹಾಂತೇಶ ರಾಮಣ್ಣವರ ಹೇಳಿಕೆ.
ದೇಹದಾನ ಮಾಡುವದರಿಂದ ಯಾವುದೇ ತೊಂದರೆ ಇಲ್ಲ ಎಂಬ ಸಂದೇಶವನ್ನು ಆಯಾ ಸಮಾಜದ ಮಠಾದೀಶರಿಂದ ಮಾಡಿಸಿದರೆ ಆದರ ಪರಿಣಾಮವೇ ಬೇರೆ ಎಂಬುದನ್ನು ಅರಿತ ಡಾ ಮಹಾಂತೇಶ ರಾಮಣ್ಣವರ ಈ ನಿಟ್ಟಿನಲ್ಲಿ ರಾಜ್ಯದ ಅನೇಕ ಕಡೆ ಧಾರ್ಮಿಕ ಮುಖಂಡರಿಂದಲೇ ಜನ ಜಾಗೃತಿ ಕಾರ್ಯ ಅರಂಭ ಮಾಡಿದ್ದಾರೆ. ವಿವಿಧ ಕಡೆಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸಿ ಅಲ್ಲಿ ದೇಹದಾನದ ಮಹತ್ವದ ಬಗ್ಗೆಯೇ ತಿಳಿಹೇಳುತ್ತಿದ್ದಾರೆ. ದೇಹದಾನದಿಂದ ಪ್ರೇರಿತಗೊಂಡು ಈಗ ಅಂಗಾಂಗ ದಾನಗಳ ಜಾಗೃತಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಜನರಿಗೂ ಮರಣೋತ್ತರ ಪರೀಕ್ಷೆ ಹಾಗೂ ಶರೀರ ಛೇದನದ ವೈದ್ಯಕೀಯ ಪರಿಭಾಷೆ ಅರ್ಥವಾಗಿದೆ. ಇದರಿಂದ ತಾವೂ ಸಹ ದೇಹದಾನ ಮಾಡಬಹುದು ಎಂಬ ಅರಿವು ಅವರಿಗೆ ಆಗುತ್ತಿದೆ. ಆರಂಭದಲ್ಲಿ ಬೆರಳಣಿಕೆಯಲ್ಲಿ ಜನರು ದೇಹದಾನಕ್ಕೆ ಹೆಸರು ನೊಂದಾಯಿಸುತ್ತಿದ್ದರು. ಈಗ ಒಂದೊಂದು ಕಡೆ ಇಡೀ ಕುಟುಂಬದವರು ದೇಹ ದಾನಕ್ಕೆ ಹೆಸರು ನೋಂದಾಯಿಸಿದ್ದಾರೆ. ಇದೆಲ್ಲ ಬೆಳವಣಿಗೆಯಿಂದ ಅಲೋಪಥಿಕ್ ಕಾಲೇಜ್ಗಳ ಜೊತೆಗೆ ಆಯುರ್ವೇದ ಮತ್ತು ಹೋಮಿಯೋಪಥಿ ಕಾಲೇಜ್ಗಳಿಗೂ ಶವಗಳು ಸಿಗುತ್ತಿವೆ. ವೈದ್ಯಕೀಯ ಕಾಲೇಜುಗಳು ಅನಾಥ ಶವಗಳಿಗಾಗಿ ಕಾಯುವುದು ಕಡಿಮೆಯಾಗಿದೆ.