ಜೀವ ಉಳಿಸುವ ಮಹೋನ್ನತ ಕಾರ್ಯವೇ ಅಂಗಾಂಗದಾನ

2018ರಲ್ಲಿ ಪ್ರಥಮ ಬಾರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಹೃದಯ ಕಸಿ ಮಾಡಿದಾಗ ಹೀಗೂ ಮಾಡಬಹುದೇ ಎಂದು ಮೂಗಿನ ಮೇಲೆ ಕೈಯಿಟ್ಟುಕೊಂಡವರೇ ಅಧಿಕ. ನಂತರ ಅದು ನಿರಂತರವಾಯಿತು. ಕಳೆದ ಜುಲೈನಲ್ಲಿ ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 17 ವರ್ಷದ ಬಾಲಕಿಯೋರ್ವಳು ಮೆದುಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದಳು. ಅವಳ ಹೃದಯವನ್ನು ಧಾರವಾಡದಿಂದ ಗ್ರೀನ್ ಕಾರಿಡಾರ (ಹಸಿರು ಪಥ) ಮೂಲಕ ಬೆಳಗಾವಿಗೆ ತಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿರುವ ಯುವಕನಿಗೆ ಜೋಡಿಸಿದ್ದು, ಸಾಕಷ್ಟು ಗಮನ ಸೆಳೆಯಿತು. ಇದಾದ ಬಳಿಕ ಬೆಳಗಾವಿಯಿಂದ ಕಿಡ್ನಿ ಮತ್ತು ಲೀವರ ರವಾನೆಯಾದಾಗಲೂ ಕೂಡ ಭಾರಿ ಚರ್ಚೆಯನ್ನು ಹುಟ್ಟು ಹಾಕಿತು. ಇದರಿಂದ ಅಂಗಾಂಗಳನ್ನು ಕೂಡ ದಾನ ಮಾಡಿದರೆ ಇನ್ನೊಬ್ಬರ ಜೀವ ಉಳಿಯುತ್ತದೆ ಎಂಬುದನ್ನು ಕೆಲವರು ಅರಿತುಕೊಂಡಿರುವದಂತೂ ಸತ್ಯ.

ಅಂಗಾಂಗ ದಾನಕ್ಕೆ ಜಾತಿ, ಮತ, ಧರ್ಮ, ಸಂಪತ್ತು ಯಾವುದೂ ಅಡ್ಡಿಯಾಗಲಾರದು. ಅನೇಕ ಸಂದರ್ಭಗಳಲ್ಲಿ ಕೇವಲ ಜೀವವನ್ನು ಉಳಿಸುವ ಮಹೋನ್ನತ ಕಾರ್ಯ ನಡೆಯುತ್ತದೆ. ಅಪಘಾತ ಅಥವಾ ಇನ್ಯಾವುದೇ ಸಂದರ್ಭದಲ್ಲಿ ತೀವ್ರ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡಾಗ ತಮ್ಮ ಪ್ರೀತಿಪಾತ್ರರನ್ನು ತೀರಾ ಅನಿರಿಕ್ಷಿತವಾಗಿ ಕಳೆದುಕೊಳ್ಳುತ್ತಾರೆ. ಆದರೆ ಎಲ್ಲಿಯೋ ಮೂಲೆಯೊಂದರಲ್ಲಿ ಮಾನವೀಯತೆ ಎದ್ದುಬಂದು ಇತರರಿಗೆ ಸಹಾಯ ಮಾಡುವ ನಿರ್ಧಾರ ತೆಗೆದುಕೊಳ್ಳುವದಿದೆಯಲ್ಲ ಅದು ಬಹಳ ಮುಖ್ಯ ಮತ್ತು ನಿಜವಾದ ಜೀವ ಉಳಿಸುವ ಕಳಕಳಿ. ದಾನಿಗಳಲ್ಲಿರುವ ಅತ್ಯದ್ಭುತವಾದ ದಯೆಯು ಇನ್ನೊಬ್ಬರಿಗೆ ಎರಡನೇ ಜೀವನಕ್ಕೆ ಅವಕಾಶ ಮಾಡಿಕೊಡಲಿದೆ.

299442932 7824036307637809 3857128679687126456 n 1

ಭಾರತದಲ್ಲಿ ನ್ಯಾಶನಲ್ ಆರ್ಗನ್ ಆ್ಯಂಡ ಟಿಸ್ಸ್ಯು ಟ್ರಾನ್ಸಪ್ಲಾಂಟ ಆರ್ಗನೈಸೇಶನ್ (ನೊಟ್ಟೊ) ಪ್ರಕಾರ ಪ್ರತಿ ವರ್ಷ 5 ಲಕ್ಷ ಜನರು ಅಂಗಾಂಗ ದಾನ ಮಾಡಬೇಕು. ಆದರೆ, 1 ಮಿಲಿಯನ್ ಜನರಿಗೆ ಕೇವಲ 0.34 ಜನ ಅಂಗಾಂಗ ದಾನ ಮಾಡುತ್ತಿದ್ದು, ಇದು ವಿಶ್ವದಲ್ಲಿಯೇ ಅತೀ ಕಡಿಮೆ. ಇದರಿಂದ ಅಂಗಾಂಗ ಲಭ್ಯತೆಯ ಕೊರತೆಯಿಂದ ಪ್ರತಿದಿನ 17 ಜನರು ಸಾವನ್ನಪ್ಪುತ್ತಿದ್ದಾರೆ. ಆದರೆ ಸ್ಪೇನನಲ್ಲಿ 35.1, ಅಮೇರಿಕಾದಲ್ಲಿ 21.9 ಜನರು ಅಂಗಾಂಗ ದಾನ ಮಾಡುತ್ತಿದ್ದಾರೆ. 1.8 ಲಕ್ಷ ಜನರು ಕಿಡ್ನಿಗಾಗಿ ಕಾಯುತ್ತಿದ್ದರೆ ಅದರಲ್ಲಿ ಕೇವಲ 6 ಸಾವಿರ ಜನರಿಗೆ ಮಾತ್ರ ಕಸಿ ಮಾಡಲಾಗಿದೆ. 2 ಲಕ್ಷ ಜನರು ಲೀವರಗಾಗಿ ಕಾಯುತ್ತಿದ್ದರೆ, ವರ್ಷಕ್ಕೆ ಕೇವಲ 25 ರಿಂದ 30 ಸಾವಿರ, 50 ಸಾವಿರ ರೋಗಿಗಳು ಹೃದಯ ಕಸಿಗಾಗಿ ಕಾಯುತ್ತಿದ್ದು, ಅದರಲ್ಲಿ 10 ರಿಂದ 15 ರೋಗಿಗಳಿಗೆ, 1 ಲಕ್ಷ ಜನರಲ್ಲಿ ಕೇವಲ 25 ಸಾವಿರ ನೇತ್ರಗಳನ್ನು ಕಸಿ ಮಾಡಲಾಗುತ್ತಿದೆ. ವಿಶ್ವದಲ್ಲಿಯೇ ಅತೀ ಹೆಚ್ಚು ಅಂಗಾಂಗ ದಾನದಲ್ಲಿ ಅಮೆರಿಕ ಮುಂದಿದ್ದು, ಚೀನಾ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ವಾರ್ಷಿಕ ಅಂಗಾಂಗ ದಾನಗಳ ಸಂಖ್ಯೆ 2013ರಲ್ಲಿ 4,990 ಹಾಗೂ 2019ರಲ್ಲಿ 12,745. ಇದನ್ನೆಲ್ಲ ಹೋಲಿಸಿದರೆ ಬೇಡಿಕೆಗಿಂತ ದಾನಿಗಳ ಸಂಖ್ಯೆ ಅತೀ ಕಡಿಮೆ ಇದೆ. ಆದರೂ ಕೂಡ ಕೋವಿಡ್ ಸಮಯದಲ್ಲಿ ಶೇ. 30ರಷ್ಟು ಕುಸಿತಗೊಂಡಿತ್ತು. ಆದರೆ ಈಗ ಅದು ಸುಧಾರಣೆ ಕಾಣುತ್ತಿದೆ.

ಅಂಗಾಂಗ ದಾನದಲ್ಲಿಯೂ ಎರಡು ವಿಧಗಳಿದ್ದು, ಜೀವಂತ ದಾನಿ ಹಾಗೂ ಮೆದುಳು ನಿಷ್ಕ್ರೀಯಗೊಂಡ ದಾನಿ ಎಂಬುದು. ಇದರಲ್ಲಿ ಜೀವಂತ ದಾನಿಯು ಒಂದು ಕಿಡ್ನಿ ಹಾಗೂ ಲೀವರ ನೀಡಬಹುದು. ಆದರೆ ಮೆದುಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುವ ವ್ಯಕ್ತಿಯು ತನ್ನ ಹೃದಯ, ಎರಡೂ ಕಿಡ್ನಿ, ಶ್ವಾಸಕೋಶ, ಲೀವರ, ಕಣ್ಣು, ಚರ್ಮವನ್ನು ದಾನವಾಗಿ ನೀಡಿದರೆ ಇದರಿಂದ ಸುಮಾರು 8 ಜನರ ಜೀವ ಉಳಿಯುತ್ತದೆ.

ವ್ಯಕ್ತಿಯು ಬದುಕಿರುವಾಗಲೇ ಅಂಗಾಂಗ ದಾನ ಮಾಡಲು ಪ್ರತಿಜ್ಞೆ ಮಾಡಬಹುದು. ಆದರೆ ಕುಟುಂಬ ಸದಸ್ಯರಿಗೆ ಈ ವಿಷಯವನ್ನು ಮನದಟ್ಟು ಮಾಡುವದರ ಜೊತೆಗೆ ಕುಟುಂಬ ಹಾಗೂ ಸ್ನೇಹಿತರಲ್ಲ್ಲಿ ಅರಿವು ಮೂಡಿಸಬೇಕು. ಇದರೊಂದಿಗೆ ಇನ್ನೋಮದು ವಿಧಾನವೂ ಉಂಟು, ಯಾವುದೇ ವ್ಯಕ್ತಿಯು ಅನರೋಗ್ಯ ಇಲ್ಲವೇ ಅಪಘಾತಕ್ಕೋಳಗಾಗಿ ಮೆದುಳು ನಿಷ್ಕ್ರೀಯವಾದರೆ, ಆ ವ್ಯಕ್ತಿಯು ತನ್ನ ಅಂಗಾಂಗಗಳನ್ನು ದಾನ ಮಾಡಬಹುದು. ಆದರೆ ಮೆದುಳು ನಿಷ್ಕ್ರೀಯ ಎಂಬುದನ್ನು ತಜ್ಞ ವೈದ್ಯರು ಹಾಗೂ ಅವರ ತಂಡವು ಸಮಗ್ರವಾಗಿ ತಪಾಸಿಸಿದ ಬಳಿಕವಷ್ಟೇ ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂಬುದನ್ನು ನಿರ್ಣಯಿಸಲಾಗುತ್ತದೆ. ಆಗ ಕುಟುಂಬ ಸದಸ್ಯರು ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದರೆ ಮಾತ್ರ ಅಂಗಾಂಗಗಳನ್ನು ತೆಗೆದು, ಅಗತ್ಯವಿರುವ ವ್ಯಕ್ತಿಗೆ ನಿಗದಿತ ಸಮಯದೊಳಗೆ ಕಸಿ ಮಾಡಲಾಗುತ್ತದೆ.

ಹೃದಯ, ಯಕೃತ್ತು (ಲೀವರ), ಮೂತ್ರಪಿಂಡ, ಚರ್ಮ, ಅಸ್ಥಿಮಜ್ಜೆ, ಶ್ವಾಸಕೋಶ, ಸೇರಿದಂತೆ 8ಕ್ಕೂ ಅಧಿಕ ಅಂಗಾಂಗಗಳನ್ನು ತೆಗೆದು ಅವಶ್ಯವಿರುವ ರೋಗಿಗಳಿಗೆ ಕಸಿ ಮಾಡಬಹುದು, ಆದರೆ ದಾನ ಪಡೆಯುವ ವ್ಯಕ್ತಿಯ ರಕ್ತದ ಗುಂಪಿನ ಆಧಾರದ ಮೇಲೆ ಕಸಿ ನೆರವೇರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೃದಯ ಕಸಿ ಕುರಿತು ಜನರಲ್ಲಿ ಅರಿವು ಮೂಡುತ್ತಿದೆ. ಆದ್ದರಿಂದಲೇ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಕೇವಲ 1 ತಿಂಗಳಲ್ಲಿ 4 ಹೃದಯ ಕಸಿ ಮಾಡಲಾಗಿದೆ. ಇಲ್ಲಿಯವರೆಗೆ 58 ಕಿಡ್ನಿ, 75 ನೇತ್ರ, 24 ಜನರಿಗೆ ಅಲೋಗ್ರಾಫ್ಟ ಮಾಡಲಾಗಿದೆ ಎನ್ನುತ್ತಾರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು.

ಯಾವುದೋ ಒಂದು ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯ ಅಂಗಾಂಗಗಳನ್ನು ಅಂಬ್ಯುಲನ್ಸ ಮೂಲಕ ಶೀಘ್ರವೇ ಸಾಗಿಸಲು ಹೆದ್ದಾರಿಯನ್ನು (ಗ್ರೀನ್ ಕಾರಿಡಾರ) ಹಸಿರು ಪಥವನ್ನಾಗಿ ಮಾಡಿ ದಾನಿಯ ಹೃದಯವನ್ನು ಕೊಂಡೊಯ್ದು ಅಗತ್ಯವಿರುವ ವ್ಯಕ್ತಿಗೆ ಕಸಿ ಮಾಡಲಾಗುತ್ತದೆ. ಈ ಕುರಿತು ಪ್ರಸಾರವಾದ ಸುದ್ದಿಗಳನ್ನು ತಾವು ಮಾದ್ಯಮದಲ್ಲಿ ವೀಕ್ಷಿಸುರಿತ್ತೀರಿ. ಅದರಂತೆ ತಾವುಗಳು ಅಂಗಾಂಗ ದಾನ ಮಾಡಲು ಪಣ ತೊಡಬೇಕಾಗಿದೆ. ಇದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಸ್ಟೇಟ ಆರ್ಗನ್ ಆ್ಯಂಡ ಟಿಸ್ಸ್ಯು ಟ್ರಾನ್ಸಪ್ಲಾಂಟ ಆರ್ಗನೈಜೇಶನ್ ಆಫ್ ಕರ್ನಾಟಕ (SOTTO) https://www.jeevasarthakathe.karnataka.gov.in (ಜೀವಸಾರ್ಥಕತೆ) ವೆಬಸೈಟನಲ್ಲಿ ಅಂಗಾಂಗ ಕಸಿ ಮಾಡುವ ಯಾವುದೇ ಸ್ಥಳೀಯ ಆಸ್ಪತ್ರೆಯಲ್ಲಿ ಅರ್ಜಿ ಸಲ್ಲಿಸಬಹುದು. ಓರ್ವ ವ್ಯಕ್ತಿ ಮಾಡುವ ಅಂಗಾಂಗ ದಾನದಿಂದ 8 ಜನರಿಗೆ ಮರುಜೀವ ನೀಡ ಬಹುದು. ಮರಣದ ನಂತರ ಇನ್ನೊಬ್ಬರಿಗೆ ಸಹಾಯ ಮಾಡಬಹುದು.

ಬಸವರಾಜ ಸೊಂಟನವರ

ಜನಸಂಪರ್ಕ ಅಧಿಕಾರಿಗಳು

ಕೆಎಲಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ

Popular Doctors

Related Articles