ಓರ್ವ ವ್ಯಕ್ತಿ ನೀಡುವ ಅಂಗಾಂಗದಿಂದ 8 ಜನರ ಜೀವ ಉಳಿಸಬಹುದು: ಡಾ. ನೇರ್ಲಿ

ಭಾರತದಲ್ಲಿ 10 ಲಕ್ಷ ಜನರಿಗೆ ಕೇವಲ ಶೇ. 7.9ರಷ್ಟು ಮಾತ್ರ ಜನರು ಅಂಗಾಂಗಳನ್ನು ದಾನ ಮಾಡುತ್ತಿದ್ದು, ಅಂಗಾಂಗ ಕಸಿಗಾಗಿ ಕಾಯುತ್ತಿರುವವರಲ್ಲಿ ಪ್ರತಿದಿನ 17 ಜನರು ಸಾವಿಗೀಡಾಗುತ್ತಿದ್ದಾರೆ. ದೇಶದಲ್ಲಿ ಮಾನವನ ಅಂಗಾಂಗಳ ಲಭ್ಯತೆ ಅತೀ ಕಡಿಮೆ ಇದೆ. 1006755 ಜನರು ವಿವಿಧ ಅಂಗಾಂಗಳ ಕಸಿಗಾಗಿ ಕಾಯುತ್ತಿದ್ದು, ಪ್ರತಿ 9 ನಿಮಿಷಕ್ಕೆ ಓರ್ವ ವ್ಯಕ್ತಿ ಈ ಪಟ್ಟಿಗೆ ಸೇರ್ಪಡೆಗೊಳ್ಳುತ್ತಿದ್ದಾನೆ. ದೇಶದಲ್ಲಿ 39 ಸಾವಿರಕ್ಕೂ ಅಧಿಕ ಆಂಗಾಂಗಳ ಕಸಿ ಮಾಡಿರುವದು ಸಂತೋಷದಾಯಕ. ತಲೆಗೆ ಗಾಯವಾಗಿ ಮೆದುಳು ನಿಷ್ಕ್ರೀಯಗೊಂಡಾಗ ವ್ಯಕ್ತಿಯ ಅಂಗಾಂಗಳನ್ನು ದಾನ ಮಾಡುವದರಿಂದ 8 ಜನರ ಜೀವ ಉಳಿಸಬಹುದು ಎಂದು ಆಸ್ಪತ್ರೆಯ ಅಂಗಾಂಗ ದಾನ ಸಮಿತಿಯ ಹಾಗೂ ಕ್ಲಿನಿಕಲ್ ಡೈರೆಕ್ಟರ ಡಾ. ಆರ್ ಬಿ ನೇರ್ಲಿ ಅವರಿಂದಿಲ್ಲಿ ಹೇಳಿದರು.

ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ವಿಶ್ವ ಅಂಗಾಂಗ ದಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಹತ್ತು ಲಕ್ಷ ಮಂದಿಯಲ್ಲಿ ಸಂಪೂರ್ಣ ಆರೋಗ್ಯಕರವಾಗಿದ್ದು, ತಮ್ಮ ಅಂಗಾಂಗಳನ್ನು ದಾನ ಮಾಡಲು ಅರ್ಹತೆ ಹೊಂದಿರುವವರ ಸಂಖ್ಯೆ 80-100 ಜನ ಮಾತ್ರವೇ. ಹೀಗಾಗಿ ಯಾವಾಗಲೂ ದಾನಿಗಳ ಕೊರತೆಯಿದೆ. ಅಂಗಾಂಗಳನ್ನು ನೀಡುವವರಲ್ಲಿಯೂ ಕೂಡ ಸರಿಯಾದ ಮಾಹಿತಿಯ ಕೊರತೆ ಎದ್ದು ಕಾಣುತ್ತಿದೆ. 10 ಲಕ್ಷ ಜನರಿಗೆ ಅಂಗಾಂಗ ಬೇಕಾಗಿದ್ದು ವರ್ಷಕ್ಕೆ ಕೇವಲ 3500 ಅಂಗಾಂಗಳು ಮಾತ್ರ ಲಭಿಸುತ್ತಿವೆ. ಆದ್ದರಿಂದ ಸಮಾಜದಲ್ಲಿ ಅರಿವು ಮೂಡಿಸಬೇಕಾದ ಕಾರ್ಯವನ್ನು ತೀವ್ರತರವಾದ ಕ್ರಿಯಾ ಯೋಜನೆ ರೂಪಿಸಬೇಕಾಗಿದೆ ಅವರು ವಿವರಿಸಿದರು.

ಪುರಾಣದಲ್ಲಿ ಶಿವ ತನ್ನ ಮಗನಾದ ಗಣಪತಿಯ ತಲೆಯನ್ನು ಕತ್ತರಿಸಿದಾಗ, ಆನೆಯ ತಲೆಯನ್ನು ಕಸಿ ಮಾಡಿದರೆ, ಮಹಾಭಾರತದಲ್ಲಿ ಕರ್ಣ ತನ್ನ ದೇಹದ ಕವಚ ಚರ್ಮವನ್ನೇ ನೀಡಿದ್ದಾರೆ. ಆವಾಗಲೇ ಕಸಿ ಮಾಡುತ್ತಿದ್ದರೆ, ತಂತ್ರಜ್ಞಾನ ಅಳವಡಿಸಿಕೊಂಡು, ವೈದ್ಯಕೀಯ ಯಂತ್ರೋಪಕರಣಗಳು, ತಜ್ಞವೈದ್ಯರು ಇದ್ದರೂ ಕೂಡ ಅಂಗಾಂಗಗಳ ದಾನಿಗಳು ಇರದಿದ್ದರೆ ಉಪಯೋಗವಿಲ್ಲ. ಆದ್ದರಿಂದ ಅಂಗಾಂಗಳನ್ನು ದಾನ ಮಾಡಲು ಮುಂದೆ ಬರುವಂತೆ ಪ್ರೇರೆಪಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, ದೇಶÀದಲ್ಲಿ ಅಂಗಾಂಗಳ ದಾನದ ಕುರಿತು ಮಹಾನಗರಗಳಿಗೆ ಹೋಲಿಸಿದರೆ, ಗ್ರಾಮೀಣ ಭಾಗದಲ್ಲಿ ಜಾಗೃತಿ ಮತ್ತು ಮಾಹಿತಿ ಅತ್ಯಂತ ಕಡಿಮೆ. ಉತ್ತರ ಕರ್ನಾಟಕದಲ್ಲಿ ಈಗಾಗಲೇ ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಅಂಗಾಂಗ ಕಸಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಅಂಗಾಂಗ ದಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದ್ದು, ಸರಕಾರೇತರ ಸಂಘಸಂಸ್ಥೆಗಳು ಮುಂದೆ ಬರಬೇಕಾಗಿದೆ. ಅಂಗಾಂಗ ಕಸಿಗಾಗಿಯೇ ಸಕಲ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆ ಎಂದು ತಿಳಿಸಿದರು.

ಇತ್ತೀಚಿಗೆ ಅಂಗಾಂಗಗಳ ವೈಫಲ್ಯ ತೀವ್ರಗತಿಯಲ್ಲಿ ಕಂಡುಬರುತ್ತಿದ್ದು, ಜೀವನ ದುಸ್ತರ ಹಾಗೂ ಅರ್ಥಿಕವಾಗಿಯೂ ದುರ್ಬಲರಾಗುತ್ತಿದ್ದಾರೆ. ಕಿಡ್ನಿ ದಾನ ಮಾಡಿದಂತೆ ಹೃದಯ, ಲಂಗ, ಲೀವರ, ಪಾನಕ್ರಿಯಾ ಸೇರಿದಂತೆ ವಿವಿಧ ಅಂಗಗಳನ್ನು ದಾನ ಮಾಡಬೇಕು. ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡು ಜೀವಂತ ಶವವಾಗಿರುವ ವ್ಯಕ್ತಿಯ ಅಂಗಗಳನ್ನು ಬೇರೊಬ್ಬರಿಗೆ ಕಸಿ ಮಾಡಿ ಅವರ ಜೀವ ಉಳಿಸಬಹುದು ಎಂದು ಹೇಳಿದರು.

ಪ್ಲಾಸ್ಟಿಕ್ ಸರ್ಜರಿ ತಜ್ಞವೈದ್ಯರಾದ ಡಾ. ರಾಜೇಶ ಪವಾರ ಅವರು ಮಾತನಾಡಿ, ಚರ್ಮ ಮತ್ತು ನೇತ್ರದಾನಕ್ಕೆ ಯಾವುದೇ ಕಠಿಣವಾದ ಪ್ರಕ್ರಿಯೆ ಅಥವಾ ನಿರ್ಬಂಧಗಳಿಲ್ಲ. ಮರಣಾ ನಂತರ ಯಾರು ಬೇಕಾದರೂ ಚರ್ಮ ಮತ್ತು ಕಣ್ಣುಗಳನ್ನು ದಾನಮಾಡಬಹುದಾಗಿದೆ. ಈ ಕಾರ್ಯಕ್ಕೆ ರೋಟರಿ ಅವರ ಸಹಕಾರ್ಯ ಬಹುಮುಖ್ಯವಾಗಿದೆ. ದೆಹಲಿ, ಬೆಂಗಳೂರು, ಮಂಗಳೂರು, ಅಹ್ಮದಾಬಾದ ಬಿಟ್ಟರೆ ಬೆಳಗಾವಿಯಲ್ಲಿ ಮಾತ್ರ ಚರ್ಮ ಕಸಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ಸಿದ್ದಲಿಂಗೇಶ್ವರ ನೀಲಿ, ಡಾ . ಎಂ ಎಸ್ ಕರಿಶೆಟ್ಟಿ, ಡಾ. ಅರವಿಂದ ತೆನಗಿ, ಡಾ. ಬಸವರಾಜ ಬಿಜ್ಜರಗಿ, ಡಾ. ರಾಜಶೇಕರ ಸೋಮನಟ್ಟಿ, ಡಾ. ಮಹಾಂತೇಶ ರಾಮಣ್ಣವರ, ಡಾ. ಸತೀಶ ಧಾಮಣಕರ, ವಿಜಯ ಮೋರೆ, ಮೋಹನ ಪ್ರತಿಷ್ಠಾನದ ಶೀತಲ ಮುಂಡಾದ, ನಯನಾ ನೇರ್ಲಿ, ಜೈಂಟ್ಸ್ ಸಹೇಲಿ ಮಹಿಳಾ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here