ಆರ್ಥಿಕವಾಗಿ ಹಿಂದುಳಿದಿರುವ (ಬಿಪಿಎಲ್ ಹೊಂದಿರುವ) ಜನರು ಅಂಗಾಂಗಳ ತೊಂದರೆಯಿಂದ ಬಳಲುತ್ತಿರುವವರಿಗೆ ರಾಜ್ಯ ಸರಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ ಅವರು ಅಂಗಾಂಗಳ ಕಸಿಗಾಗಿ ಆರ್ಥಿಕ ಸಹಾಯವನ್ನು ಮಾಡಲಿದ್ದಾರೆ. ಮುಖ್ಯವಾಗಿ ಕಿಡ್ನಿ, ಹೃದಯ ಹಾಗೂ ಲಿವರ ಕಸಿಗಾಗಿ ಈ ಸಹಾಯವು ಲಭಿಸಲಿದೆ ಎಂದು ಜೀವಸಾರ್ಥಕತೆ ಸಂಯೋಜಕರಾದ ಡಾ. ಕಿಶೋರ ಪಡಕೆ ಅವರಿಂದಿಲ್ಲಿ ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಅಂಗಾಂಗಗಳ ಕಸಿ ಕುರಿತು ಉಪನ್ಯಾಸ ನೀಡಿದ ಅವರು, ಅಂಗಾಂಗಳು ಹಾಳಾಗಿ ಅದಕ್ಕೆ ಸರಿಯಾದ ಚಿಕಿತ್ಸೆ ಲಭಿಸದೇ ಅನೇಕ ಜನರು ಸಾವಿಗೀಡಾಗುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಆರ್ಥಿಕ ಸಮಸ್ಯೆ. ಇದನ್ನು ಮನಗಂಡ ರಾಜ್ಯ ಸರಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ ಧನ ಸಹಾಯ ನೀಡಲು ಯೋಜನೆ ರೂಪಿಸಿದೆ. ಹೃದಯ ಕಸಿಗಾಗಿ 10 ಲಕ್ಷ, ಔಷಧೋಪಚಾರಕ್ಕಾಗಿ 1ಲಕ್ಷ, ಲೀವರಗೆ 11 ಲಕ್ಷ, ಔಷಧಕ್ಕೆ 1 ಲಕ್ಷ, ಕಿಡ್ನಿಗೆ 2 ಲಕ್ಷ, ಔಷಧಕ್ಕೆ 1 ಲಕ್ಷ ಹಣವನ್ನು ನೀಡಲಿದೆ ಎಂದು ವಿವರಿಸಿದರು.
ಕಳೆದ ಒಂದು ಜನೆವರಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 60 ಜನರು ಅಂಗಾಂಗಳನ್ನು ದಾನ ಮಾಡಿದ್ದು, ಅದರಲ್ಲಿ 95 ಕಿಡ್ನಿ, 52 ಲೀವರ, 11 ಹೃದಯ, 12 ಲಂಗ್ಸ, 100 ಕಣ್ಣಿನ ಗುಡ್ಡೆ, 26 ಹೃದಯದ ವಾಲ್ವ್, 5 ಜನ ಚರ್ಮ, 1 ಕೈ ದಾನದ ಮೂಲಕ ಕಸಿ ಮಾಡಿ ಹಲವು ಜನರಿಗೆ ಜೀವದಾನ ನೀಡಲಾಗಿದೆ. ಅಪಘಾತದಲ್ಲಿ ಗಾಯಗೊಂಡು ಮೆದಳು ಮೃತಗೊಂಡರೆ ಆ ವ್ಯಕ್ತಿಯ ಆ ವ್ಯಕ್ತಿ ಮರಳಿ ಬರಲು ಸಾಧ್ಯವಿಲ್ಲ ಎಂದು ತಿಳಿದಾಗ, ಅಂಗಾಂಗಗಳನ್ನು ಸ್ವಇಚ್ಚೆಯಿಂದ ನೀಡಿದರೆ ಇನ್ನೊಬ್ಬರ ಬಾಳು ಬೆಳಗುತ್ತದೆ. ಆದ್ದರಿಂದ ಸಮಾಜ ಸೇವಕರು ಹಾಗೂ ಸಾರ್ವಜನಿಕರು ಅಂಗಾಂಗ ದಾನ ಮಾಡಲು ಆ ಕುಟುಂಬದ ಸದಸ್ಯರನ್ನು ಪ್ರೇರೆಪಿಸಬೇಕೆಂದು ಕರೆ ನೀಡಿದ ಅವರು, ಅಪಘಾತದಲ್ಲಿ ಗಾಯಗೊಂಡವರನ್ನು ಮೊದಲು ಜೀವ ಉಳಿಸುವ ಕೆಲಸ ಮಾಡಬೇಕು. ಅವರನ್ನು ಶೀಘ್ರವಾಗಿ ಆಸ್ಪತ್ರೆಗೆ ಸಾಗಿಸಿ ಅವರಿಗೆ ಚಿಕಿತ್ಸೆ ಕೊಡಿಸುವ ಕಾರ್ಯ ಅತ್ಯಂತ ಒಳ್ಳೆಯದು ಎಂದು ಹೇಳಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, ಅಂಗಾಂಗ ದಾನಗಳ ಕುರಿತು ಗ್ರಾಮಿಣ ಭಾಗಗಳ ಜನರಿಗೆ ಜಾಗೃತೆ ಮೂಡಿಸುವದು ಅತ್ಯಂತ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಕಾರ್ಯಪ್ರವೃತ್ತವಾಗಬೆಕಾಗಿದೆ. ಸಕಲ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆ, ವೈದ್ಯಕೀಯ ಮಹಾವಿದ್ಯಾಲಯಗಳು ಇಲ್ಲಿದ್ದು ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಗಳನ್ನು ಇಲ್ಲಿ ಸರಾಗವಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೋಹನ ಫೌಂಡೇಶನನ ಕರ್ನಾಟಕ ಘಟಕದ ಶ್ರೀಧರ ಹಂಚಿನಮನಿ ಅವರು ಮಾತನಾಡಿ, ರಾಜ್ಯದಲ್ಲಿ ಅಂಗಾಂಗ ಕಸಿಗೆ ಅವಶ್ಯವಿರುವ ಸಕಲ ಮಾಹಿತಿಯನ್ನು ರೋಗಿ ಹಾಗೂ ಅವರ ಕುಟುಂಭದ ಸದಸ್ಯರಿಗೆ ಸಮಗ್ರವಾಗಿ ತಿಳಿಸಿಕೊಡಲಾಗುವದು ಎಂದು ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಡಾ. ಆರ್ ಬಿ ನೇರ್ಲಿ, ಹಿರಿಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ರಿಚರ್ಡ ಸಾಲ್ಡಾನಾ, ಡಾ. ರವಿಶಂಕರ ನಾಯಕ, ಡಾ. ಮಲ್ಲಿಕಾರ್ಜುನ ಕರಿಶೆಟ್ಟಿ, ಡಾ. ಪ್ರವೀಣ ತಂಬ್ರಳ್ಳಿಮಠ, ಡಾ. ರಾಜೇಶ ಪವಾರ, ಡಾ. ರಾಜೇಶ ಶೆಣೈ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.