ಮಧ್ಯಮವರ್ಗಕ್ಕೆ ಹೊಸ ಆರೋಗ್ಯ ಯೋಜನೆ
ನವದೆಹಲಿ (ಪಿಟಿಐ): ಸಾರ್ವಜನಿಕ ಆರೋಗ್ಯ ಯೋಜನೆ ಅಡಿಯಲ್ಲಿ ಇನ್ನೂ ಸೇರ್ಪಡೆಯಾಗದ ಮಧ್ಯಮ ವರ್ಗದ ಜನರಿಗಾಗಿ ಹೊಸ ಆರೋಗ್ಯ ಯೋಜನೆ ರೂಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ನೀತಿ ಆಯೋಗ ಹೇಳಿದೆ.
‘ದೇಶದಲ್ಲಿ, ಕೆಳಹಂತದಲ್ಲಿರುವ ಶೇ 40ರಷ್ಟು ಜನರು ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯುತ್ತಿದ್ದಾರೆ. ಇವರನ್ನು ಹೊಸ ಯೋಜನೆಯಿಂದ ಹೊರಗಿಡಲಾಗುವುದು’ ಎಂದು ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಿಳಿಸಿದ್ದಾರೆ.
‘ಶೇ 50ರಷ್ಟು ಮಧ್ಯಮವರ್ಗದವರಿಗೆ ಯಾವುದೇ ವೈದ್ಯಕೀಯ ಸೌಲಭ್ಯಗಳಿಲ್ಲ. ಆದ್ದರಿಂದ ಈ ವರ್ಗದ ಜನರಿಗೆ ದೀರ್ಘಾವಧಿಗೆ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಮಾರ್ಗಸೂಚಿಗಳನ್ನು ಹಾಕಿಕೊಳ್ಳಲಾಗಿದೆ’
ಎಂದು ಆಯೋಗದ ಸಲಹೆಗಾರ (ಆರೋಗ್ಯ) ಅಲೋಕ್ ಕುಮಾರ್ ತಿಳಿಸಿದ್ದಾರೆ.
‘ಎಸ್‌ಡಿಜಿ ಸಾಧಿಸಲು ಸಾರ್ವಜನಿಕ ಆರೋಗ್ಯ ಯೋಜನೆ ಮಹತ್ವದ್ದು’: ‘ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) 2030 ‘ಅಜೆಂಡಾ ಸಾಧಿಸಲು ಸಾರ್ವಜನಿಕ ಆರೋಗ್ಯ ಯೋಜನೆ ಮಹತ್ವದ ಅಂಶವಾಗಿದ್ದು, ಈ ನಿಟ್ಟಿನಲ್ಲಿ ಯೋಜನೆ ಜಾರಿಗೆ ಭಾರತ ಬದ್ಧವಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
‘ವೈದ್ಯಕೀಯ ಉತ್ಪನ್ನಗಳ ಲಭ್ಯತೆ: ಸುಸ್ಥಿರ ಅಭಿವೃದ್ಧಿ ಗುರಿ 2030’ ಕುರಿತು ಅಂತರರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ
ಅವರು, ‘ಎಲ್ಲರಿಗೂ ಉನ್ನತ ದರ್ಜೆಯ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ ನಿರಂತರ ಕ್ರಮ ಕೈಗೊಳ್ಳುತ್ತಿದೆ. ವೈದ್ಯಕೀಯ ಉತ್ಪನ್ನಗಳ ಲಭ್ಯತೆ, ಅವುಗಳ ಕಾನೂನುಬದ್ಧ ಮಾರಾಟ ವ್ಯವಸ್ಥೆ ಕಲ್ಪಿಸುವುದು ಈ ಗುರಿ ತಲುಪಲು ಮಹತ್ವದ್ದಾಗಿದೆ. ಸಮಾವೇಶದ ಮುಖ್ಯ ಉದ್ದೇಶ ಇದೇ ಆಗಿದೆ’ ಎಂದಿದ್ದಾರೆ.
ಸಚಿವಾಲಯ – ಗೇಟ್ಸ್ ಫೌಂಡೇಷನ್ ಒಪ್ಪಂದ
ನವದೆಹಲಿ (ಪಿಟಿಐ): ಪ್ರಾಥಮಿಕ ಆರೋಗ್ಯ ಸೌಲಭ್ಯ ಒದಗಿ
ಸುವ ಕೇಂದ್ರದ ಯೋಜನೆಗಳಿಗೆ ತಾಂತ್ರಿಕ ಹಾಗೂ ನಿರ್ವಹಣಾ ನೆರವು ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವಾಲಯದ ಜತೆ ಬಿಲ್ ಆ್ಯಂಡ್ ಮೆಲಿಂದಾ ಗೇಟ್ಸ್ ಫೌಂಡೇಷನ್ ಸಹಕಾರ ಒಪ್ಪಂದವೊಂದನ್ನು ಮಾಡಿಕೊಂಡಿದೆ.