ಕಳೆದ ವರ್ಷದ ವಿಶ್ವ ಮಾನಸಿಕ ಅರೋಗ್ಯ ದಿನದ ನೆನಪು ಇನ್ನೂ ಹಸಿಯಾಗಿರುವಾಗಲೇ ಮತ್ತೆ ಅಕ್ಟೋಬರ್ ೧೦ ಬಂದಿದೆ. ಹೋದ ವರ್ಷ ಇದೇ ಅಕ್ಟೋಬರ್ ೧೦ ರಂದು ನೆರೆದ ನಾಲ್ಕಾರು ಜನಗಳ ಮುಂದೆ ಮನಸಿಕ ಆರೋಗ್ಯದ ಮಹತ್ವ ಸಾರಿ ಬೆನ್ನು ತಟ್ಟಿಸಿಕೊಂಡು, ಎದೆ ಉಬ್ಬಿಸಿಕೊಂಡು, ಇಡ್ಲಿ ವಡೆ ಭುಂಜಿಸಿ ಮನೆಗೆ ಹಿಂತಿರುಗಿತ್ತಿದ್ದಾಗ ಮತ್ತದೇ ಹುಡುಗ ಧುತ್ತನೇ ಎದುರಾದ…ಸ್ನಾನ ಕಾಣದ ಕೊಳಕು ಮೈ, ತನ್ನಷ್ಟಕ್ಕೆ ತಾನೇ ನಗುತ್ತ, ಕೈ ಸನ್ನೆ ಮಾಡುತ್ತಾ, ಏನೇನನ್ನೋ ಅರಚುತ್ತಾ ನನ್ನ ಕಾರಿನ ಮುಂದೆ ಹಾಯ್ದು ಹೋದ. ಆ ದೃಶ್ಯವು ನನ್ನಲ್ಲಿ ಬೆಳಗ್ಗಿನ ಕಾರ್ಯಕ್ರಮದ “ಯಶಸ್ವೀ ಭಾವ” ಮೂಡಿಸಿದ್ದ ಜಂಭವನ್ನು ಹೊಸಕಿ ಹಾಕಿ ಬಿಟ್ಟಿತು, ಆತ್ಮವಿಮರ್ಶೆಗೆ ಎಡೆ ಮಾಡಿ ಕೊಟ್ಟಿತು.
ಹೌದು, ಕಳೆದ ೩-೪ ದಶಕಗಲ್ಲಿ ಮನೋರೋಗಗಳ ಚಿಕಿತ್ಸೆ, ಮಾನಸಿಕ ಆರೋಗ್ಯದ ಸಂಬಂಧ ಪಟ್ಟ ಸಂಶೋಧನೆಗಳು ತ್ವರಿತ ಗತಿಯಲ್ಲಿ ವಿಕಾಸವಾಗಿವೆ. ಜನಸಾಮಾನ್ಯರಲ್ಲಿ ಮನೋರೋಗಗಳ ಬಗ್ಗೆ ಇದ್ದ ಮೌಢ್ಯವೂ ತಕ್ಕ ಮಟ್ಟಿಗೆ ಇಳಿಮುಖವಾಗಿದೆ. ಮನೋರೋಗಗಳು ಹಾಗೂ ಮನೋರೋಗಿಗಳ ಬಗ್ಗೆ ಇದ್ದ “ಅಸ್ಪೃಶ್ಯತಾ ಭಾವ” ಕೊಂಚ ತಗ್ಗಿದೆ. ಆದರೂ…..ಮೂಢ ನಂಬಿಕೆಗಳೂ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ.
ವಿಶೇಷವಾಗಿ ಹಳ್ಳಿಗಾಡಿನ ಜನರಲ್ಲಿ ಭೂತ ಪ್ರೇತ, ಮಾಟ ಮಂತ್ರಗಳೇ ಮನೋರೋಗಕ್ಕೆ ಕಾರಣ ಎಂಬ ನಂಬಿಕೆ ಇನ್ನೂ ಇದೇ. ಮನೋರೋಗಗಳ ಬಗ್ಗೆ ಇರುವಷ್ಟೇ ತಪ್ಪು ಕಲ್ಪನೆಗಳು ಅವುಗಳ ಚಿಕಿತ್ಸೆಯ ಬಗ್ಗೆಯೂ ಇದೆ. ಔಷಧಿ ಅಂಗಡಿಯಲ್ಲಿ ಕೆಲಸ ಮಾಡುವ ೧೦ನೆ ಕ್ಲಾಸ್ ಪಾಸು ಮಾಡದ ಹುಡುಗನ ಮಾತು ಕೇಳಿ, ಔಷಧಿಗಳಿಂದ ಮೆದುಳಿನ ಮೇಲೆ ಅಡ್ಡ ಪರಿಣಾಮವಾಗುತ್ತದೆಂದು ನಂಬಿ, ನುರಿತ ವೈದ್ಯರು ಕೊಟ್ಟ ಚಿಕಿತ್ಸೆ ಅರ್ಧಕ್ಕೆ ಬಿಟ್ಟು ರೋಗ ಉಲ್ಬಣಿಸಿಕೊಂಡವರ ಸಂಖ್ಯೆ ಸಾಕಷ್ಟಿದೆ. ಆಪ್ತ ಸಮಾಲೋಚನೆ ಎಂಬ ಚಿಕಿತ್ಸಾ ವಿಧಾನ ಇದೆ ಎಂಬ ಅರಿವೂ ಎಷ್ಟೋ ಜನರಿಗಿಲ್ಲ. ಸರಿಯಾದ ಚಿಕಿತ್ಸೆ ಸಿಗದೇ ಹೀಗೆ ರಸ್ತೆಯ ಮೇಲೆ ಮನೋರೋಗಿಗಳು ನಮ್ಮ ಸಮಾಜದ ಮೌಢ್ಯದ ಪ್ರತಿಬಿಂಬಗಳಾಗಿ ಅಲೆದಾಡುತ್ತಿದ್ದರೆ. ಇದೆಲ್ಲಾ ಸಾಲದೆಂಬಂತೆ ಆಧುನಿಕ ಜೀವನ ಶೈಲಿ ತನ್ನದೇ ಆದ ಸವಾಲನ್ನು ನಮ್ಮ ಮನಗಳ ಮೇಲೆ ಒಡ್ಡಿದೆ.
ಇದೆ ಅಕ್ಟೋಬರ್ ೧೦ ರಂದು ವಿಶ್ವ ಮಾನಸಿಕ ಅರೋಗ್ಯ ದಿನ ಆಚರಿಸಲಾಗುತ್ತಿದೆ. ಈ ವರ್ಷದ ಧ್ಯೇಯ ವಾಕ್ಯ ” ಮಾನಸಿಕ ಆರೋಗ್ಯವನ್ನು ಜಗತ್ತಿನಾದ್ಯಂತ ಎಲ್ಲರ ಆದ್ಯತೆಯಾಗಿಸುವದು” ಆಗಿದೆ. ಬದಲಾಗುತ್ತಿರುವ ಜೀವನಶೈಲಿಯಲ್ಲಿ ಎಲ್ಲರಿಗೂ ಮಾನಸಿಕ ಆರೋಗ್ಯ ಅತೀ ಅವಶ್ಯಕವಾಗಿದೆ ಎಂಬುದರಲ್ಲಿ ಎರೆಡು ಮಾತಿಲ್ಲ. ಮಾನಸಿಕ ಅರೋಗ್ಯ ಕ್ಷೇತ್ರ ಸಾಕಷ್ಟು ಪ್ರಗತಿ ಹೊಂದಿದ್ದರೂ ಇನ್ನೂ ಸಾಗುವ ದೂರ ಸಾಕಷ್ಟಿದೆ.
ಡಾ. ಭೀಮಸೇನ ಟಕ್ಕಳಕಿ