ಬೆಂಗಳೂರು: 2019ನೇ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ಸರ್ಕಾರ ಸೀಟ್ ಮ್ಯಾಟ್ರಿಕ್ಸ್ ನೀಡಿದ್ದು, ಎನ್ಆರ್ಐ ಮತ್ತು ಇತರ ವೈದ್ಯಕೀಯ ಸೀಟುಗಳ ಶುಲ್ಕ ಈ ಬಾರಿ ₹ 25 ಲಕ್ಷದಿಂದ 50 ಲಕ್ಷದವರೆಗೂ ಇರಲಿದೆ ಎಂದು ತಿಳಿಸಲಾಗಿದೆ.
ಸೀಟ್ ಮ್ಯಾಟ್ರಿಕ್ಸ್ ಜತೆಗೆ ಶುಲ್ಕದ ವಿವರವನ್ನೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿದೆ. ಎನ್ಆರ್ಐ ಮತ್ತು ಇತರರಿಗೆ ದಂತ ವೈದ್ಯಕೀಯ ಕಾಲೇಜುಗಳ ಶುಲ್ಕ ₹ 2.91 ಲಕ್ಷದಿಂದ ₹8.88 ಲಕ್ಷದವರೆಗೆ ಇರಲಿದೆ. ಇತರ ಸೀಟುಗಳು ಶುಲ್ಕ ಈ ಮೊದಲು ಪ್ರಕಟಿಸಿದಂತೆ ಇರಲಿದೆ.
ವೈದ್ಯಕೀಯ ವಿಭಾಗದಲ್ಲಿ ಸರ್ಕಾರಿ ಸೀಟುಗಳು 3,950, ಖಾಸಗಿ ಸೀಟುಗಳು 1,845, ಎನ್ಆರ್ಐ ಸಿಟುಗಳು 596, ಇತರ ಸೀಟುಗಳು 186, ಹೀಗೆ ಒಟ್ಟು 6,577 ಸೀಟುಗಳು ಲಭ್ಯ ಇವೆ. ದಂತ ವೈದ್ಯಕೀಯ ವಿಭಾಗದಲ್ಲಿ ಸರ್ಕಾರಿ ಸೀಟುಗಳು 915, ಖಾಸಗಿ ಸೀಟುಗಳು 1,255, ಎನ್ಆರ್ಐ ಸೀಟುಗಳು 383, ಇತರ ಸೀಟುಗಳು 121, ಹೀಗೆ 2,674 ಸೀಟುಗಳಿವೆ.
ಜುಲೈ 3ರ ಬೆಳಿಗ್ಗೆ 11ರವರೆಗೆ ಇಚ್ಛೆ ನಮೂದು ನಡೆಯಲಿದೆ. 4ರಂದು ಬೆಳಿಗ್ಗೆ 11ಕ್ಕೆ ಅಣಕು ಸೀಟು ಆಯ್ಕೆ ಪ್ರಕಟವಾಗಲಿದೆ. 4ರಂದು ಮಧ್ಯಾಹ್ನ 2ರಿಂದ 6ರಂದು ಮಧ್ಯಾಹ್ನ 2ರವರೆಗೆ ಇಚ್ಛೆ ಬದಲಾಯಿಸಲು ಅವಕಾಶ ನೀಡಲಾಗಿದೆ. 7ರಂದು ಸಂಜೆ 6 ಗಂಟೆಯ ಬಳಿಕ ಮೊದಲ ಸುತ್ತಿನಲ್ಲಿ ನೀಡಲಾದ ಕಾಲೇಜುಗಳ ಪಟ್ಟಿ ಬಿಡುಗಡೆಯಾಗಲಿದೆ. ಮಾಹಿತಿಗೆ
kea.kar.nic.in ವೆಬ್ಸೈಟ್ ನೋಡಬಹುದು ಎಂದು ಪ್ರಕಟಣೆ ತಿಳಿಸಿದೆ.