ಏಮ್ಸ್ ಮಾದರಿಯಲ್ಲಿ ಕಿಮ್ಸ್ ಅಭಿವೃದ್ಧಿ
ಕಿಮ್ಸ್ಗೆ ಶನಿವಾರ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ವಿದ್ಯಾರ್ಥಿಗಳ ಬೇಡಿಕೆ ಆಲಿಸಿದರು
ಹುಬ್ಬಳ್ಳಿ: ಉತ್ತರ ಕರ್ನಾಟಕದ ಜನರಿಗೆ ಪ್ರಮುಖ ಆರೋಗ್ಯ ಕೇಂದ್ರವಾಗಿರುವ ಕಿಮ್ಸ್ ಅಭಿವೃದ್ಧಿ ಅಗತ್ಯವಿದ್ದು, ಇದಕ್ಕೆ ಸರ್ಕಾರದಿಂದ ಎಲ್ಲ ನೆರವು ನೀಡಲಾಗುವುದು. ದೆಹಲಿಯ ಏಮ್ಸ್ ಆಸ್ಪತ್ರೆ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಭರವಸೆ ನೀಡಿದರು.
ಸಚಿವರಾದ ಬಳಿಕ ಮೊದಲ ಬಾರಿಗೆ ಶನಿವಾರ ಕಿಮ್ಸ್ಗೆ ಭೇಟಿ ನೀಡಿದ ಅವರು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ನೀಡಿದ ಬೇಡಿಕೆಗಳ ಪಟ್ಟಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ಅಶ್ವತ್ಥನಾರಾಯಣ, ‘ಸರ್ಕಾರಿ ಆಸ್ಪತ್ರೆಗಳಲ್ಲಿ ಶ್ರೇಷ್ಠ ವೈದ್ಯರು ಇದ್ದಾರೆ. ಪರಸ್ಪರ ಸಂವಹನದ ಮೂಲಕ ಗುಣಮಟ್ಟದ ಚಿಕಿತ್ಸೆ ನೀಡಬೇಕು. ನಿಮ್ಮೆಲ್ಲರ ಸಹಕಾರ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಕಿಮ್ಸ್ನಲ್ಲಿ ಕ್ಯಾನ್ಸರ್ ಕೇಂದ್ರವನ್ನು ಆರಂಭಿಸಲಾಗುವುದು. ಹೊಸದಾಗಿ ನಿರ್ಮಾಣಗೊಂಡಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಬ್ಬಂದಿ ನೇಮಕ ಮತ್ತು ಇನ್ನಿತರ ಸೌಲಭ್ಯಗಳನ್ನು ಆದಷ್ಟು ಬೇಗನೆ ಒದಗಿಸಲಾಗುವುದು’ ಎಂದು ತಿಳಿಸಿದರು.
ಕಿಮ್ಸ್ ಗ್ರಾಹಕರ ಸಹಕಾರಿ ಸಂಘಕ್ಕೆ ತೆರಳಿ ಸಿಬ್ಬಂದಿ ಜೊತೆ ಚರ್ಚಿಸಿದರು. ಬಳಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸೌಲಭ್ಯಗಳನ್ನು ಪರಿಶೀಲಿಸಿದರು.
ಮನವಿ ಸಲ್ಲಿಕೆ: ಕಿಮ್ಸ್ನಲ್ಲಿ ಕೆಲಸ ಮಾಡುತ್ತಿರುವ ನರ್ಸ್ಗಳಿಗೆ ಸುಪ್ರೀಂ ಕೋರ್ಟ್ನ ಆದೇಶದ ಪ್ರಕಾರ ಬಡ್ತಿ ನೀಡಬೇಕು. ಈ ಪ್ರಕ್ರಿಯೆ ಕಾಲಕಾಲಕ್ಕೆ ನಡೆಯುತ್ತಿರಬೇಕು ಎಂದು ಶುಶ್ರೂಷಕರು ಸಚಿವರಿಗೆ ಮನವಿ ಸಲ್ಲಿಸಿದರು.
ಶಾಸಕ ಅರವಿಂದ ಬೆಲ್ಲದ, ವೈದ್ಯಕೀಯ ಅಧೀಕ್ಷಕ ಸಿ. ಅರುಣಕುಮಾರ, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನರ್ ಇದ್ದರು.