ಮೂತ್ರಪಿಂಡ ಹಾಳಾಗುವದೆಂದರೇನು?

ದೇಹದಲ್ಲಿರುವ ರಕ್ತವನ್ನು ಸೋಸಿ ಶುದ್ಧೀಕರಿಸುವದಲ್ಲದೆ ಸಂಪೂರ್ಣ ಕಲ್ಮಶವನ್ನು ದ್ರವರೂಪದಲ್ಲಿ ಹೊರಹಾಕುವುದೇ ಮೂತ್ರಪಿಂಡದ ಮುಖ್ಯ ಕೆಲಸ. ಒಂದು ವೇಳೆ ಮೂತ್ರಪಿಂಡದ ಕಾರ್ಯನಿರ್ವಹಣಾ ಶಕ್ತಿ ಕುಂಠಿತಗೊಂಡು ಅದು ನಿಗದಿತವಾದ ಕಾರ್ಯ ಸಾಧಿಸುವಲ್ಲಿ ವಿಫಲವಾದರೆ ಮೂತ್ರಪಿಂಡ ಹಾಳಾಗಿದೆ ಎಂದೇ ಅರ್ಥ.

ಮೂತ್ರಪಿಂಡ ಹಾಳಾಗಿದ್ದನ್ನು ಕಂಡು ಹಿಡಿಯುವದು ಹೇಗೆ?
ರಕ್ತದಲ್ಲಿನ ಕ್ರಿಯಾಟಿನಿನ್ ಹಾಗೂ ಯೂರಿಯಾ ತಪಾಸಣೆಯನ್ನು ಅತ್ಯವಶ್ಯವಾಗಿ ಪರೀಕ್ಷೆಗೊಳಪಡಿಸಬೇಕು. ಈ ಎರಡೂ ರಸಾಯನಿಕಗಳ ಪರೀಕ್ಷೆಯಿಂದ ಕಿಡ್ನಿಯ ಕಾರ್ಯನಿರ್ವಹಣೆಯನ್ನು ಕಂಡು ಹಿಡಿಯಬಹುದು. ಕ್ರಿಯಾಟಿನಿನ್ ಮತ್ತು ಯೂರಿಯಾ ಮಟ್ಟವು ಹೆಚ್ಚಾದರೆ ಮೂತ್ರಪಿಂಡದ ಕಾರ್ಯನಿರ್ವಹಣೆ ಕಡಿಮೆ ಎಂದರ್ಥ. ಕ್ರಿಯಾಟಿನಿನ್ 1 ರಿಂದ 1.6 ಕ್ಕೆ ತಲುಪಿದರೆ ಶೇ.50 ರಷ್ಟು ಮೂತ್ರಪಿಂಡಗಳ ಕಾರ್ಯ ಕಡಿಮೆಗೊಂಡಂತೆ ಎಂದು ವಿವರಿಸುತ್ತಾರೆ ಹಿರಿಯ ನೆಫ್ರೊಲಾಜಿಸ್ಟ ಡಾ. ಎಂ ಎಸ್ ಕರಿಶೆಟ್ಟಿ (ಖಾನಪೇಟ).
ಒಂದು ಕಿಡ್ನಿ ಹಾಳಾದಾಗ ಅಥವಾ ಅದನ್ನು ದೇಹದಿಂದ ಹೊರತೆಗೆದಾಗ ಇನ್ನೊಂದು ಕಿಡ್ನಿಗೆ ಯಾವುದೇ ರೀತಿಯ ತೊಂದರೆಯುಂಟಾಗುವುದಿಲ್ಲ. ಅಲ್ಲದೇ ಆರೋಗ್ಯವಾಗಿರುವ ಇನ್ನೊಂದು ಕಿಡ್ನಿ ಎರಡೂ ಕಿಡ್ನಿಗಳ ಕಾರ್ಯವನ್ನು ನಿರ್ವಹಿಸಬಲ್ಲದು.

1) ತತ್‍ಕ್ಷಣ ಹಾಳಾಗುವುದು:
ಎಕ್ಯೂಟ್ ಕಿಡ್ನಿ ಇಂಜುರಿ (ತತ್‍ಕ್ಷಣ ಮೂತ್ರಪಿಂಡ ಗಾಯ) ಎಂದು ಕರೆಯಲಾಗುತ್ತದೆ. ದೇಹದಲ್ಲಾದ ಅನಾರೋಗ್ಯಕರ ಬೆಳವಣಿಗೆಯಿಂದ ಕಡಿಮೆ ಅವಧಿಯಲ್ಲಿ ಕಿಡ್ನಿಯ ಕಾರ್ಯಕ್ಷಮತೆ ಕಡಿಮೆಗೊಳ್ಳುತ್ತದೆ. ಇದು ತಾತ್ಕಾಲಿಕ ಮಾತ್ರ.
2) ದೀರ್ಘಕಾಲದ ಮೂತ್ರಪಿಂಡ ರೋಗ :
ಅತ್ಯಧಿಕವಾಗಿ ಮಾರ್ಪಡಿಸಲಾಗದ ಕಾರ್ಯನಿರ್ವಹಣೆಯನ್ನು ಹಲವಾರು ವರ್ಷಗಳವರೆಗೆ ಕಳೆದುಕೊಂಡಿದ್ದರೆ ಅದನ್ನು ದೀರ್ಘಕಾಲೀನ ಮೂತ್ರಪಿಂಡ (ಕ್ರೊನಿಕ್ ಕಿಡ್ನಿ ಡಿಸೀಸ್) ರೋಗವೆಂದು ಕರೆಯುತ್ತಾರೆ. ಇದು ಗುಣಮುಖಪಡಿಸಲಾಗದಂತ ರೋಗವಾಗಿದ್ದು, ಕೊನೆಗೊಮ್ಮೆ ಮೂತ್ರಪಿಂಡ ಸಂಪೂರ್ಣ ಕಾರ್ಯವನ್ನು ನಿಲ್ಲಿಸಿಬಿಡುತ್ತದೆ.

Human kidney anatomy isolated on white vector
ಕಾರಣಗಳು
ರಕ್ತ ಪರಿಚಲನೆ ಕಡಿಮೆಗೊಳ್ಳುವುದು: ಪಚನಕ್ರಿಯೆ ಸರಿಯಾಗದೇ ತೀವ್ರತರವಾದ ಭೇದಿ, ಅಪಘಾತ ಮತ್ತು ಇನ್ನಿತರ ಸಂದರ್ಭದಲ್ಲಿ ರಕ್ತಸ್ರಾವ ಸುಟ್ಟುಕೊಂಡಾಗ ಅಥವಾ ಯಾವುದೇ ರಕ್ತದೊತ್ತಡ ಕಾರಣದಿಂದ ಕಡಿಮೆಯಾದಾಗ ಮೂತ್ರಪಿಂಡಕ್ಕೆ ಕಡಿಮೆ ರಕ್ತ ಪರಿಚಲನೆಗೊಂಡರೆ. ತೀವ್ರತರವಾದ ಸೋಂಕು, ಗಂಭೀರ ಅಶಕ್ತತೆ ಹಾಗೂ ದೀರ್ಘಕಾಲದ ಅಥವಾ ದೊಡ್ಡದಾದ ಶಸ್ತ್ರಚಿಕಿತ್ಸೆ. ತತ್‍ಕ್ಷಣ ಮೂತ್ರಮಾರ್ಗದಲ್ಲಿ ಅಡೆತಡೆಯುಂಟಾಗುವುದು- ಮೂತ್ರಪಿಂಡ ಹರಳು ಮುಖ್ಯ ಕಾರಣ. ಮಲೇರಿಯಾ, ವಿಷಜಂತು (ಹಾವು) ಕಡಿತ, ಬಾನಂತಿಯ ಹೆರಿಗೆಯ ಸಮಯದಲ್ಲಿ ರಕ್ತಸ್ರಾವ, ಕೆಲವು ಔಷಧಿಗಳು ಬೀರುವ ಬಾಹ್ಯ ಪರಿಣಾಮಗಳು.

ಗುಣಲಕ್ಷಣಗಳು :
ಕಡಿಮೆ ಅಧಿಯಲ್ಲಿ ಮೂತ್ರಪಿಂಡ ತನ್ನ ಕಾರ್ಯವನ್ನು ನಿಲ್ಲಿಸಿದಾಗ ಶೀಘ್ರಗತಿಯಲ್ಲಿ ಕಲ್ಮಶ ಉತ್ಪಾನೆಯಾಗಿ ಅಸಮತೋಲನ ಉಂಟಾಗುತ್ತದೆ. ಈ ಅಸಮತೋಲನೆಯಿಂದ ಕೆಲವೊಂದು ಗುಣಲಕ್ಷಣಗಳು ಕಂಡುಬರುತ್ತವೆ.
ಮೂತ್ರ ವಿಸರ್ಜನೆ ಕಡಿಮೆಯಾಗುವುದು, ಕೈಕಾಲು ಊದಿಕೊಳ್ಳುವುದು, ತೂಕ ಹೆಚ್ಚಾಗುವುದು. ಹಸಿವು ಕಡಿಮೆಯಾಗುವುದು, ವಾಕರಿಕೆ, ವಾಂತಿ, ಆಯಾಸ, ಬಿಕ್ಕಳಿಕೆ, ನಿದ್ರಾಲಸ್ಯ ಹಾಗೂ ಗೊಂದಲಕ್ಕೊಳಗಾಗುವದು. ಎದೆ ಬಿಗಿತ, ಎದೆ ನೋವು, ಉಸಿರಾಟದಲ್ಲಿ ತೊಂದರೆ, ಮೂರ್ಛೆ ಹೋಗುವದು, ವಾಂತಿಯಲ್ಲಿ ರಕ್ತ ಬರುವುದು ಹಾಗೂ ಅಧಿಕ ಪೋಟ್ಯಾಷಿಯಂನಿಂದ ಹೃದಯ ಬಡಿತದಲ್ಲಿ ಏರುಪೇರಾಗುವುದು. ಕೆಲವೊಂದು ರೋಗಿಗಳಲ್ಲಿ ಮೂತ್ರಪಿಂಡ ತೊಂದರೆಯ ಪ್ರಥಮ ಹಂತದಲ್ಲಿರುವಾಗ ಗುಣಲಕ್ಷಣಗಳು ಕಂಡುಬರುವದಿಲ್ಲ. ಆದರೆ ಯಾವುದಾದರೂ ಕಾರಣಕ್ಕೆ ರಕ್ತ ತಪಾಸಣೆ ಮಾಡಿದಾಗ ರೋಗವು ಇರುವುದು ಕಂಡುಬರುತ್ತದೆ.

ರೋಗ ಪತ್ತೆ :
ತತ್‍ಕ್ಷಣ ಕಿಡ್ನಿ ರೋಗಕ್ಕೊಳಗಾಗುವ ಕೆಲವು ರೋಗಿಗಳು ನಿಗಧಿತವಲ್ಲದ ಯಾವುದೇ ರೀತಿಯ ರೋಗ ಲಕ್ಷಣಗಳನ್ನು ಹೊಂದಿರುವುದಿಲ್ಲ. ರಕ್ತ ತಪಾಸಣೆಗೊಳಪಡಿಸಿದಾಗ ಕಿಡ್ನಿ ತೊಂದರೆ ಇದೆ ಎಂದು ದೃಢವಾದರೆ (ಕ್ರಿಯಾಟಿನಿನ್ ಮತ್ತು ರಕ್ತದಲ್ಲಿನ ಯೂರಿಯಾ ಹೆಚ್ಚಾದರೆ) ಮೂತ್ರ ಮತ್ತು ಅಲ್ಟ್ರಾಸೋನೋಗ್ರಾಫಿ ಪರೀಕ್ಷೆಗೊಳ್ಪಡಬೇಕು. ರೋಗಿಯ ಸಂಪೂರ್ಣ ಇತಿಹಾಸ, ರೋಗದ ಗಂಭೀರತೆ ಮತ್ತು ಬೆಳವಣಿಗೆ ಕುರಿತು ಯಾವ ಕಾರಣದಿಂದ ಬಂದಿದೆ ಎಂಬುದನ್ನು ಕಂಡುಹಿಡಿಯಲು ವಿವಿಧ ರೀತಿಯ ತಪಾಸಣೆಗೊಳಪಡಿಸಬೇಕು.

ಚಿಕಿತ್ಸೆ:
ಸಮಯಕ್ಕೆ ಸರಿಯಾಗಿ ನಿಗದಿತವಾದ ಚಿಕಿತ್ಸೆಯನ್ನು ನೀಡಿದರೆ ತತ್‍ಕ್ಷಣದಲ್ಲಿ ಹಾಳಾದ ಮೂತ್ರಪಿಂಡವನ್ನು ಗುಣಪಡಿಲು ಸಾಧ್ಯ. ಕಿಡ್ನಿ ಹಾಳಾದ ಕಾರಣಕ್ಕೆ ಚಿಕಿತ್ಸೆ. ಔಷಧೀಯ ಚಿಕಿತ್ಸೆ. ಆಹಾರ ಪಥ್ಯ. ಡಯಾಲಿಸಿಸ್ (ರಕ್ತ ಶುದ್ಧೀಕರಣ)
ಮೂತ್ರರೋಗದ ಸೊಂಕು ಅಥವಾ ಮೂತ್ರ ಭಾಗದಲ್ಲಿ ಅಡೆತಡೆಯಿಂದಾಗಿದೆಯೇ ಎಂಬುದನ್ನು ತಿಳಿದುಕೊಂಡು ಚಿಕಿತ್ಸೆ ನೀಡಬೇಕು. ಇದರಿಂದ ಮುಂದೆ ಕಿಡ್ನಿ ಅಧಿಕವಾಗಿ ಹಾಳಾಗುವುದನ್ನು ತಡೆಯಬಹುದು. ಔಷಧಿಗಳು: ಸೊಂಕು ಮತ್ತು ನೋವು ನಿವಾರಕ ಔಷಧಿಗಳಿಂದ ಕಿಡ್ನಿಗೆ ತೊಂದರೆಯುಂಟಾಗಬಹುದು. ಮೂತ್ರಪಿಂಡ ಹಾಳಾಗಲು ಕಾರಣವಾಗುವ ಕೆಲವೊಂದು ಔಷಧಿಗಳನ್ನು ಸೇವಿಸಬಾರದು. ಡೈರೆಟಿಕ್ಸ್: ಕೆಲವೊಂದು ಔಷಧಿಗಳು ಮೂತ್ರ ಪ್ರಮಾಣ ಹೆಚ್ಚಿಸಿ ಬಾವು ಬರುವುದನ್ನು ತಪ್ಪಿಸಿ ಸಹಜ ಉಸಿರಾಟಕ್ಕೆ ದಾರಿಮಾಡಿಕೊಡುತ್ತವೆ. ರಕ್ತದೊತ್ತಡ ಕಡಿಮೆ ಮತ್ತು ಹೆಚ್ಚಾದರೆ, ವಾಕರಿಕೆ, ವಾಂತಿ, ಬಾವು ಹಾಗೂ ಪೋಟ್ಯಾಷಿಯಂ ಹೆಚ್ಚಾಗದಂತೆ ನಿರ್ವಹಿಸುವ ಔಷಧಿಗಳನ್ನು ನೀಡಲಾಗುತ್ತದೆ.

ಆಹಾರ ಪಥ್ಯೆ :
ನಿಗದಿತ ಆಹಾರ ಪಥ್ಯವು ರೋಗದ ಗುಣಲಕ್ಷಣಗಳನ್ನು ಮತ್ತು ಗಂಭೀರತೆಯನ್ನು ಕಡಿಮೆಗೊಳಿಸುತ್ತದೆ. ದೇಹದಲ್ಲಿನ ದ್ರವದ ಹಂತ ಹಾಗೂ ಮೂತ್ರವನ್ನು ಅನುಸರಿಸಿ ಪ್ರತಿದಿನ ಎಷ್ಟು ದ್ರವ ಪದಾರ್ಥವನ್ನು ಸೇವಿಸಬೇಕು ಎಂಬುದನ್ನು ತಿಳಿಸಲಾಗುತ್ತದೆ. ಪೊಟ್ಯಾಷಿಯಂ ಅಧಿಕ ಅಂಶ ಹೊಂದಿರುವ ಆಹಾರವನ್ನು ತ್ಯಜಿಸಿ (ಹಣ್ಣು, ಹಣ್ಣಿನ ರಸ, ಒಣ ಹಣ್ಣುಗಳು ಮುಂತಾದವು) ರಕ್ತದಲ್ಲಿ ಪೋಟ್ಯಾಷಿಯಂ ಅಂಶ ಹೆಚ್ಚಾಗುವದನ್ನು ತಡೆಯಬೇಕು. ಆದಷ್ಟು ಕಡಿಮೆ ಉಪ್ಪು ಸೇವಿಸಬೇಕು.
ಡಯಾಲಿಸಿಸ್ (ರಕ್ತ ಶುದ್ಧೀಕರಣ)
ತತ್‍ಕ್ಷಣ ಕಿಡ್ನಿ ಹಾಳಾದರೆ ಕೆಲವು ರೋಗಿಗಳಿಗೆ ಅತ್ಯಲ್ಪ ಅವಧಿ ಡಯಾಲಿಸಿಸ್‍ನ ಅವಶ್ಯಕತೆ ಇರುತ್ತದೆ. 2-3 ವಾರಗಳ ಕಾಲ ಡಯಾಲಿಸಿಸ್ ಬೇಕಾಗಬಹುದು. ಕೆಲ ಜನರು ಮಧ್ಯದಲ್ಲಿಯೇ ಚಿಕಿತ್ಸೆ ಪಡೆಯುದನ್ನು ಬಿಟ್ಟುಬಿಡುತ್ತಾರೆ. ಇದರಿಂದ ಸಾವು ಸಂಭವಿಸಬಹುದು.

Dr. Khanpet


Symptoms, Diagnosis, Treatment of Kidney Failure. Dialysis and Kidney Transplant are the two options available

Popular Doctors

Related Articles