ಕಿಡ್ನಿಗಳು ಬಲಿಷ್ಠವಾದ ರಾಸಾಯನಿಕ ತಯಾರಿಸುವ ಕಾರಖಾನೆಗಳು

ಆಧುನಿಕತೆ, ಪಾಶ್ಚಿಮಾತ್ಯ ದೇಶಗಳ ಆಹಾರ ಪದ್ದತಿ ಮತ್ತು ಇನ್ನಿತರ ಕಾರಣಗಳಿಂದ ಭಾರತದ ನಗರ ಪ್ರದೇಶಗಳಲ್ಲಿ ಕಿಡ್ನಿ ರೋಗಿಗಳ ಸಂಖ್ಯೆ ಅಧಿಕಗೊಳ್ಳುತ್ತಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಕಿಡ್ನಿ ತೊಂದರೆಗೆ ಒಳಗಾಗುವವರ ಸಂಖ್ಯೆ ಪ್ರತಿ ವರ್ಷ ಶೇ. 6 ಬೆಳವಣಿಗೆಯಲ್ಲಿ ಏರಿಕೆಯಾಗುತ್ತಿದ್ದು, ಶೇ. 22ರಷ್ಟು ಜನರು ಕಿಡ್ನಿ ಪೂರ್ಣ ಹಾಳಾದ ರೋಗಿಗಳ ಗುಂಪಿಗೆ ಸೇರಿಕೊಳ್ಳುತ್ತಿದ್ದಾರೆ. ಸದ್ಯ ಸುಮಾರು 80 ಲಕ್ಷದಿಂದ 1 ಕೋ.ಗೂ ಅಧಿಕ ಜನ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದು, 1.22 ಲಕ್ಷ ರೋಗಿಗಳು ಕಿಡ್ನಿ ಕಸಿಗಾಗಿ ಕಾಯುತ್ತಿದ್ದಾರೆ. ಆದರೆ ಕೇವಲ 4 ಸಾವಿರ ಜನರಿಗೆ ಮಾತ್ರ ಕಿಡ್ನಿ ಲಭ್ಯವಾಗುತ್ತಿವೆ. ರಾಜ್ಯದಲ್ಲಿ ಅಂದಾಜು 3 ಸಾವಿರ ಹಾಗೂ ಬೆಳಗಾವಿಯಲ್ಲಿ 300ಕ್ಕೂ ಅಧಿಕ ಕಿಡ್ನಿ ಹಾಳಾದ ರೋಗಿಗಳಿದ್ದು, ಇವರಲ್ಲಿ 90ಕ್ಕೂ ಅಧಿಕ ರೋಗಿಗಳು ಕಿಡ್ನಿ ಕಸಿಗಾಗಿ ಕಾಯುತ್ತಿದ್ದಾರೆ. ಅದ್ದರಿಂದ ಕಿಡ್ನಿ ಹಾಳಾಗದಂತೆ ಎಚ್ಚರಿಕೆವಹಿಸಬೇಕು ಎನ್ನುತ್ತಾರೆ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ನೆಫ್ರಾಲಾಜಿಸ್ಟ ಡಾ. ರವಿ ಸಾರವಿ.
ಒಮ್ಮೆ ಕಿಡ್ನಿ ಹಾಳಾದರೆ ಅದಕ್ಕೆ ಡಯಾಲಿಸಿಸ್ (ರಕ್ತ ಶುದ್ದೀಕರಣ) ಅಥವಾ ಕಿಡ್ನಿ ಕಸಿ (ಕಿಡ್ನಿ ಟ್ರಾನ್ಸಪ್ಲಾಂಟೇಶನ್) ಮಾಡಬೇಕಾಗುತ್ತದೆ. ಉನ್ನುಳಿದ ಯಾವುದೇ ಚಿಕಿತ್ಸೆ ಇಲ್ಲವೇ ಇಲ್ಲ. ಕಿಡ್ನಿ ಕಸಿ ಮಾಡಲು ಮುಖ್ಯವಾಗಿ ರೋಗಿ, ಅವರ ಸಂಭಂಧಿಕರು ಹಾಗೂ ವೈದ್ಯರ ಸಾಂಘಿಕ ಯತ್ನವೇ ಯಶಸ್ಸಿನ ಮಂತ್ರ. ಕಿಡ್ನಿ ದಾನಿ, ರೋಗ ಪತ್ತೆ, ಕಾನೂನಿಗನುಗುಣವಾಗಿ ಅನುಮತಿ ಪಡೆದು ಕಿಡ್ನಿ ಕಸಿ ಮಾಡಬೇಕಾಗುತ್ತದೆ. ನಿರಂತರ ಡಯಾಲಿಸಿಸ್‌ನಿಂದ ಆ ಕುಟುಂಬ ಆರ್ಥಿಕವಾಗಿ ಸಾಕಷ್ಟು ಬಳಲಿರುತ್ತದೆ. ಆದ್ದರಿಂದ ಪ್ರಥಮವಾಗಿ ಕಿಡ್ನಿ ಹಾಳಾಗದಂತೆ ಎಚ್ಚರಿಕೆ ವಹಿಸಬೇಕು. ಕಿಡ್ನಿಗಳು ಬಲಿಷ್ಠವಾದ ರಾಸಾಯನಿಕ ತಯಾರಿಸುವ ಕಾರಖಾನೆಗಳು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಕಿಡ್ನಿಗಳು ದೇಹದಲ್ಲಿ ತ್ಯಾಜ್ಯ ಪದಾರ್ಥ ಮತ್ತು ಔಷಧೀಯಗಳನ್ನು ತೆಗೆದುಹಾಕುವದಲ್ಲದೇ, ಎಲುಬುಗಳಿಗೆ ಅವಶ್ಯವಿರುವ ವಿಟ್ಯಾಮಿನ್ ‘ಡಿ’ ತಯಾರಿಸುತ್ತವೆ. ರಕ್ತದೊತ್ತಡ ನಿಯಮಿತವಾಗಿರಲು ಹರ‍್ಮೋನಗಳನ್ನು ಬಿಡುಗಡೆಗೊಳಿಸಿ, ದೇಹದಲ್ಲಿರುವ ನೀರಿನಾಂಶವನ್ನು ಸಮತೋಲನದಲ್ಲಿಡುತ್ತದೆ. ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ನಿಯಂತ್ರಣದಲ್ಲಿಡುತ್ತದೆ.
ರೋಗಲಕ್ಷಣ
ಆಯಾಸ ಮತ್ತು ಸುಸ್ತು. ಮೂತ್ರವಿಸರ್ಜಿಸುವಾಗ ತೊಂದರೆ ಹಾಗೂ ನೋವು. ನೊರೆ ಭರಿತ ಮೂತ್ರ. ಮೂತ್ರದಲ್ಲಿ ರಕ್ತ. ತೀವ್ರ ಬಾಯಾರಿಕೆ. ರಾತ್ರಿ ಸಮಯದಲ್ಲಿ ಮೂತ್ರವಿಸರ್ಜನೆ ಹೆಚ್ಚಾಗುವಿಕೆ. ಕಣ್ಣಿನ ಸುತ್ತ, ಮುಖ, ಕೈ, ಹೊಟ್ಟೆ, ಪಾದದಲ್ಲಿ ಭಾವು ಕಂಡು ಬರುತ್ತದೆ. ಇದರಿಂದ ಕಿಡ್ನಿಗೆ ತೊಂದರೆಯಾಗಿದೆ ಎಂದರ್ಥ. ಆದ್ದರಿಂದ ತಜ್ಞವೈದ್ಯರಿಂದ ಸಲಹೆ ಹಾಗೂ ಚಿಕಿತೆಯನ್ನು ಪಡೆದುಕೊಳ್ಳಬೇಕು.
ಕಿಡ್ನಿ ಸೋಂಕು ಹೇಗೆ ತಡೆಯಬಹುದು
ಕಿಡ್ನಿಗೆ ತಗುಲಿದ ಸೋಂಕು ತಡೆಗಟ್ಟಲು ಸರಿಯಾದ ದಾರಿ ಎಂದರೆ ನಿಮ್ಮಬ್ಲಾಡರ ( ಮೂತ್ರ ಕೋಶ) ಮತ್ತು ಯುರೆಥ್ರಾ (ಮೂತ್ರನಾಳ) ಅನ್ನು ಬ್ಯಾಕ್ಟಿರಿಯಾದಿಂದ ಮುಕ್ತಗೊಳಿಸಿ.
ಹೆಚ್ಚಾಗಿ ದ್ರವ ಪದಾರ್ಥವನ್ನು ಕುಡಿಯುವದು. ನಿಯಮಿತವಾಗಿ ಮೂತ್ರ ವಿಸರ್ಜನೆ ಮಾಡುವದು. ಮೂತ್ರ ವಿಸರ್ಜನೆ ನಂತರ ಮೂತ್ರಾಂಗವನ್ನು ಸ್ವಚ್ಚಗೊಳಿಸಿಕೊಳ್ಳುವದು. ಮೂತ್ರಾಂಗವನ್ನು ಆರೋಗ್ಯಯುತವಾಗಿಟ್ಟುಕೊಳ್ಳುವದು. ಮಲಬ್ಬದತೆಗೆ ಚಿಕಿತ್ಸೆ. ಲೈಂಗಿಕ ಕ್ರಿಯೆಯ ನಂತರ ಮೂತ್ರವಿಸರ್ಜಿಸುವದನ್ನು ಮಾಡಬೇಕು. ಇದರಿಂದ ಕಿಡ್ನಿಗೆ ತಗಲುವ ಸೋಂಕು ತಡೆಗಟ್ಟಲು ಸಾಧ್ಯವಾಗುತ್ತದೆ.

kidney


ಧೂಮಪಾನ ತ್ಯಜಿಸಿ
ಧೂಮಪಾನವು ನಿಮ್ಮ ಕಿಡ್ನಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ರಕ್ತದೊತ್ತಡದ ಔಷಧವು ನಿಮ್ಮ ಕಿಡ್ನಿಯ ಮೇಲೆ ನೇರ ದುಷ್ಪರಿಣಾಮ ಬೀರುತ್ತದೆ. ರಕ್ತ ಸಂಚಾರ ನಿಧಾನಗೊಂಡಾಗ ಕಿಡ್ನಿಯ ಖಾಯಿಲೆಯು ಅಧಿಕಗೊಳ್ಳುತ್ತದೆ. ತಂಪು ಪಾನೀಯಗಳನ್ನು ಸೇವಿಸುವದರಿಂದ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಕಿಡ್ನಿ ಹರಳುಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ತಂಪು ಪಾನೀಯ ಹಾಗೂ ಸಹಿಯಾದ ಹಣ್ಣುಗಳ ರಸದೊಂದಿಗೆ ಸೋಡಾ ಬೆರೆಸಿ ಸೇವಿಸುವದರಿಂದ ಶೇ. 61ರಷ್ಟು ಕಿಡ್ನಿಯ ಖಾಯಿಲೆಯ ಬೆಳವಣಿಗೆಯ ಅಪಾಯವಿರುತ್ತದೆ. ಅತಿಯಾದ ನೋವು ಹಾಗೂ ಭಾವು ನಿವಾರಕ ಮಾತ್ರೆಗಳನ್ನು ನಿರಂತರವಾಗಿ ತೆಗೆದುಕೊಳ್ಳಬೇಡಿ. ನೀವು ಕಿಡ್ನಿ ಖಾಯಿಲೆಯನ್ನು ಹೊಂದಿದ್ದರೆ ಅಥವಾ ಕಿಡ್ನಿಯ ಕರ‍್ಯವಿಧಾನ ಕಡಿಮೆಯಾಗಿದ್ದರೆ, ನೀವು ತೆಗೆದುಕೊಳ್ಳುವ ಈ ಮಾತ್ರೆಗಳು ಹಾನಿಕಾರವಾಗುತ್ತವೆ.
ನಿಮ್ಮ ಆಹಾರದಲ್ಲಿ ಉಪ್ಪನ್ನು ಹೇಗೆ ಕಡಿಮೆ ಮಾಡಬಹುದು
ನೀವು ಅಧಿಕ ರಕ್ತದೊತ್ತಡ, ಹೃದ್ರೋಗ ಅಥವಾ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದರೆ ನೀವು ತೆಗೆದುಕೊಳ್ಳುವ ಉಪ್ಪನ್ನು ಕಡಿಮೆ ಮಾಡಿ. ಪ್ಯಾಕ್ ಮಾಡಲಾದ ಪೌಷ್ಟಿಕಾಂಶ ಭರಿತ ಆಹಾರ ಪದಾರ್ಥಗಳ ಮೇಲೆ ನಮೂದಿಸಲಾದ ವಿವರಣೆಯನ್ನು ಹೋಲಿಕೆ ಮಾಡಿ. ಕಡಿಮೆ ಒಣಗಿದ ಮಾಂಸ ಹಾಗೂ ಮೀನು ಸೇವಿಸಿ. ತಯಾರಿಸಿದ ಪಾಸ್ಟಾ ಸೌಸ್ ಮೇಲಿನ ಉಪ್ಪಿನ ಪ್ರಮಾಣ ಗಮನಿಸಿ. ಆರೋಗ್ಯಯುತ ಉಪಹಾರ, ಹಣ್ಣುಗಳು ಅಥವಾ ತರಕಾರಿಯನ್ನು ಆಯ್ಕೆ ಮಾಡಿಕೊಳ್ಳಿ. ಸೋಯಾ ಸೌಸ್, ಸಾಸಿವೆ ಎಣ್ಣೆ, ಉಪ್ಪಿನಕಾಯಿ, ಮಯೊನ್ನೇಸ್ ಸೇರಿದಂತೆ ಮನೆಯಲ್ಲಿನ ಆಹಾರ ಉಪಯೋಗಿಸಿ.
ಕಿಡ್ನಿ ಖಾಯಿಲೆಯನ್ನು ಹೊಂದಿರುವವರಿಗೆ ಕಿಡ್ನಿ ಕಸಿ ಸರಿಯಾದ ಆಯ್ಕೆಯೇ ?
ಬಹಳಷ್ಟು ರೋಗಿಗಳಿಗೆ ಕಿಡ್ನಿ ಕಸಿಯು ಸರಿಯಾದ ಆಯ್ಕೆ. ಕಿಡ್ನಿ ಕಸಿಯು ಕಿಡ್ನಿ ರೋಗವನ್ನು ಗುಣಪಡಿಸುವುದಿಲ್ಲ, ಆದರೆ ಜೀವಿತಾವಧಿಯನ್ನು ಹೆಚ್ಚಿಸುವದರ ಜೊತೆಗೆ ಗುಣಮಟ್ಟದ ಜೀವನಕ್ಕೆ ಸಹಕಾರಿಯಾಗಬಲ್ಲದು. ಕಿಡ್ನಿ ಕಸಿಯು, ಜೀವಂತ ದಾನಿಗಳಿಂದ ಅಥವಾ ಮೃತ ಮೆದುಳು ವ್ಯಕ್ತಿಗಳಿಂದ ಸಾಧ್ಯವಾಗುತ್ತದೆ. ಕಿಡ್ನಿ ಖಾಯಿಲೆ ಹೊಂದಿರುವವರಿಗೆ ಜೀವಂತ ದಾಣಿಗಳು ನೀಡುವ ಕಿಡ್ನಿ ಕಸಿಯು ಒಳ್ಳೆಯದೆಂದು ಪರಿಗಣಿಸಲಾಗಿದೆ.

ಬಸವರಾಜ ಸೊಂಟನವರ
ಜನಸಂಪರ್ಕ ಅಧಿಕಾರಿಗಳು

Popular Doctors

Related Articles