ಮೇ ಮೂರನೇ ವಾರವನ್ನು ವಿಶ್ವ ಥೈರಾಯ್ಡ್ ಜಾಗೃತಿ ವಾರ ಹಾಗೂ ಮೇ 25 ನ್ನು ವಿಶ್ವ ಥೈರಾಯ್ಡ್ ದಿನವೆಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಥೈರಾಯ್ಡ್ ದಿನಾಚರಣೆಯು ಥೈರಾಯ್ಡ್ ರೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಗುರಿ, ಸಮಯಕ್ಕೆ ಸರಿಯಾದ ರೋಗ ಪತ್ತೆ ಹಾಗೂ ಚಿಕಿತ್ಸೆಯ ಮಹತ್ವವನ್ನು ತಿಳಿಸುತ್ತದೆ.
ಸಾಮಾನ್ಯವಾಗಿ ಕೆಲವರು ಥೈರಾಯಿಡ್ ರೋಗದ ಕುರಿತು ತಪ್ಪು ತಿಳಿದುಕೊಂಡಿರುತ್ತಾರೆ. ಅದನ್ನು ಸರಿಪಡಿಸಿ ಸಾಮನ್ಯವಾದ ಅರಿವು ಮೂಡಿಸಲು ಪ್ರಯತ್ನಿಸುತ್ತೇವೆ,
ಹೈಪೋಥೈರಾಯ್ಡಿಸಮ್: ಸುಮಾರು 10 ಜನ ಭಾರತೀಯರಲ್ಲಿ ಓರ್ವ ವ್ಯಕ್ತಿಯು ಹೈಪೋಥೈರಾಯ್ಡಿನಿಂದ ಬಳಲುತ್ತಿರುತ್ತಾನೆ. ಕಡಿಮೆ ಚಟುವಟಿಕೆ ಹೊಂದಿದ್ದರೆ ಹೈಪೋ ಥೈರಾಯ್ಡ್ ಎನ್ನುತ್ತಾರೆ. ಈ ಸ್ಥಿತಿಯಲ್ಲಿ ಥೈರಾಯ್ಡ್ ಗ್ರಂಥಿಯು ದೇಹದ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಹಾರ್ಮೋನುಗಳನ್ನು ಉತ್ಪಾದಿಸುವುದಿಲ್ಲ. ಪುರುಷರಿಗಿಂತ ಮಹಿಳೆಯರಲ್ಲಿ ಅತ್ಯಧಿಕವಾಗಿ ಕಂಡು ಬರುತ್ತದೆ.
ಮಿಥ್ಯ : ದೈಹಿಕ ಸಂಪರ್ಕದಿಂದ ಹೈಪೋಥೈರಾಯ್ಡಿಸಮ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.
ಇಲ್ಲ. ದೈಹಿಕ ಸಂಪರ್ಕದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹೈಪೋಥೈರಾಯ್ಡಿಸಮ್ ಹರಡುವುದಿಲ್ಲ. ಇದು ಯಾವುದೇ ನಿರ್ದಿಷ್ಟ ಆಹಾರದಿಂದ ಉಂಟಾಗುವುದಿಲ್ಲ. ಸಾಮಾನ್ಯವಾಗಿ, ಇದು ಆನುವಂಶಿಕತೆ ಅಥವಾ ಅಯೋಡಿನ್ ಕೊರತೆಯಿಂದಾಗಿ ಕಂಡು ಬರುತ್ತದೆ. ಆದರೆ ಈಗ ಅಯೋಡಿಕರಿಸಿದ ಉಪ್ಪನ್ನು ಸೇವಿಸುವುದರಿಂದ, ಅನುವಂಶಿಕವಾಗಿ ಕಂಡು ಬರುವದೇ ಹೆಚ್ಚು.
ಮಿಥ್ಯ 2: ಹೈಪೋಥೈರಾಯ್ಡ್ ರೋಗಿಗಳು ಹೂಕೋಸು, ಎಲೆಕೋಸು ಸೇವಿಸಬಾರದು.
ಇಲ್ಲ. ಹೈಪೋಥೈರಾಯ್ಡ್ ರೋಗಿಗಳು ಖಂಡಿತವಾಗಿಯೂ ಹೂಕೋಸು, ಎಲೆಕೋಸು ಸೇವಿಸಬಹುದು. ಹೂಕೋಸು ಕಡಿಮೆ ಪ್ರಮಾಣದಲ್ಲಿ ಗಾಯ್ಟ್ರೋಜೆನ್‌ಗಳನ್ನು ಹೊಂದಿದೆ. ಈ ತರಕಾರಿಗಳನ್ನು ನಿರಂತರವಾಗಿ ಸೇವಿಸಿದರೆ ಮಾತ್ರ ಥೈರಾಯ್ಡ್ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಅವುಗಳನ್ನು ಸೇವಿಸುವದರಿಂದ ಥೈರಾಯ್ಡ್ ಸ್ಥಿತಿಗೆ ಯಾವುದೇ ಹಾನಿಯಾಗುವುದಿಲ್ಲ.
ಮಿಥ್ಯ 3: ಹೈಪೋಥೈರಾಯ್ಡಿಸಮ್ ಇರುವ ಮಹಿಳೆಯರು ಗರ್ಭಿಣಿಯಾಗಲು ಸಾಧ್ಯವಿಲ್ಲ.
ಸಂಪೂರ್ಣ ಸುಳ್ಳು. ಹೈಪೋಥೈರಾಯ್ಡ್ ಇರುವ ಮಹಿಳೆಯರು ಖಂಡಿತವಾಗಿಯೂ ಗರ್ಭಿಣಿಯಾಗಬಹುದು. ಹೈಪೋಥೈರಾಯ್ಡ್ ಮಹಿಳೆಯರು ತಮ್ಮ ವೈದ್ಯರ ಸಲಹೆಯಂತೆ ಥೈರಾಯ್ಡ್ ಚಿಕಿತ್ಸೆ ಪಡೆಯುವದು ಮುಖ್ಯ. ಅವರ ಥೈರಾಯ್ಡ್ ಹಾರ್ಮೋನ್ ಮಟ್ಟವು ಸಾಮಾನ್ಯವಾದ ನಂತರ ಗರ್ಭ ಧರಿಸಬಹುದು.
ಮಿಥ್ಯ 4: ಥೈರಾಯ್ಡ್ ಔಷಧಿಗಳಿಂದ ಮೂತ್ರಪಿಂಡ, ಹೃದಯದ ಮೇಲೆ ಅಡ್ಡ ಪರಿಣಾಮ ಬೀರಬಲ್ಲದು.
ಇಲ್ಲ. ಲೆವೊಥೈರಾಕ್ಸಿನ್ ಎನ್ನುವ ಔಷಧವನ್ನು ಹೈಪೋಥೈರಾಯಿಡ ಚಿಕಿತ್ಸೆಗೆ ನೀಡಲಾಗುತ್ತದೆ. ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲ. ವೈದ್ಯರ ಸಲಹೆ ಮೇರೆಗೆ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡರೆ ಮೂತ್ರಪಿಂಡ, ಹೃದಯ ಅಥವಾ ದೇಹದ ಯಾವುದೇ ಅಂಗಾಂಗಗಳಿಗೆ ಪರಿಣಾಮ ಬೀರುವುದಿಲ್ಲ. ಬದಲಾಗಿ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ದೇಹದ ಅಂಗಾಂಗಗಳ ಕಾರ್ಯನಿರ್ವಹಣೆಗೆ ಥೈರಾಯ್ಡ್ ಹಾರ್ಮೋನ್ ಅಗತ್ಯವಿದೆ.
ಮಿಥ್ಯ 5: ವ್ಯಾಯಾಮ, ಯೋಗ ಥೈರಾಯ್ಡ್ ಗುಣಪಡಿಸಲು ಸಹಾಯ ಮಾಡುತ್ತದೆ.
ಇಲ್ಲ. ವ್ಯಾಯಾಮ ಮತ್ತು ಯೋಗ ಸಾಮಾನ್ಯ ಆರೋಗ್ಯಕ್ಕೆ ಒಳ್ಳೆಯದು. ಆದರೆ ಹೈಪೋಥೈರಾಯ್ಡಿಸಮ್ ಚಿಕಿತ್ಸೆಯಲ್ಲಿ ಯಾವುದೇ ಪಾತ್ರವಿಲ್ಲ.ಥೈರಾಯ್ಡ್ ಸಮಸ್ಯೆಯನ್ನು ತಡೆಗಟ್ಟಲು ಅಥವಾ ಗುಣಪಡಿಸಲು ಸಹಾಯ ಮಾಡುವ ನಿರ್ದಿಷ್ಟ ವ್ಯಾಯಾಮ ಅಥವಾ ಯೋಗ ಇಲ್ಲ.
ಮಿಥ್ಯ 6: ಬೆಳಿಗ್ಗೆ ಚಹಾದೊಂದಿಗೆ ನನ್ನ ಟ್ಯಾಬ್ಲೆಟ್ ತೆಗೆದುಕೊಳ್ಳಬಹುದು.
ಚಹಾ, ಕಾಫಿ ಅಥವಾ ಆಹಾರದ ಜೊತೆಗೆ ಮಾತ್ರೆಯನ್ನು ತೆಗೆದುಕೊಳ್ಳುಬಾರದು. ಯಾವುದೇ ಪಾದಾರ್ಥದೊಂದಿಗೆ ಸೇವಿಸಿದರೆ ಥೈರಾಯ್ಡ್ ಹೀರಿಕೊಳ್ಳುವುದು ಕಡಿಮೆಯಾಗುತ್ತದೆ. ಆದ್ದರಿಂದ, ಮಾತ್ರೆಯನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಒಂದು ಗಂಟೆ ಕಾಲ ನೀರು ಹೊರತುಪಡಿಸಿ ಏನನ್ನೂ ಸೇವಿಸಬಾರದು.
ಮಿಥ್ಯ 7: ಹೈಪೊಥೈರಾಯಿಡ್ ಸಾಮಾನ್ಯ ಸ್ಥಿತಿಗೆ ಬಂದ ನಂತರ ಚಿಕಿತ್ಸೆ ನಿಲ್ಲಿಸಬಹುದೇ.
ಇಲ್ಲ. ಚಿಕಿತ್ಸೆಯ ಕುರಿತು ವೈದ್ಯರ ಸಲಹೆ ಅತ್ಯವಶ್ಯ. ಶೇ. 10 ರಿಂದ 15 ಪ್ರಕರಣಗಳಲ್ಲಿ ಕೆಲವು ಪರೀಕ್ಷೆಗಳನ್ನು ಮಾಡಿದ ನಂತರ ಚಿಕಿತ್ಸೆ ನಿಲ್ಲಿಸಲು ಸಾಧ್ಯವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಚಿಕಿತ್ಸೆ ನಿರಂತರವಾಗಿ ಪಡೆಯಬೇಕಾಗುತ್ತದೆ.
ಮಿಥ್ಯ 8: ಈ ಹೈಪೋಥೈರಾಯ್ಡಿಸಮ್ ಜೀವನದ ಗುಣಮಟ್ಟ ಮತ್ತು ಜೀವಿತಾವಧಿಯ ಮೇಲೆ ಪರಿಣಾಮ ಬೀರುತ್ತದೆ.
ಇಲ್ಲ. ಹೈಪೋಥೈರಾಯ್ಡಿಸಮ್ ಬಹಳ ಹಾನಿಕರವಲ್ಲದ ಸ್ಥಿತಿ. ಇದು ಚಿಂತಿಸುವದು ಅಥವಾ ಹೆದರುವುದು ಅವಶ್ಯವಿಲ್ಲ. ಇದು ಮರಣಕ್ಕೆ ಕಾರಣವಾಗುವುದಿಲ್ಲ. ನಿಮ್ಮ ಮಾತ್ರೆಗಳನ್ನು ನೀವು ನಿಯಮಿತವಾಗಿ ತೆಗೆದುಕೊಂಡು ನಿಮ್ಮ ಥೈರಾಯ್ಡ್ ಹಾರ್ಮೋನ್ ಮಟ್ಟವನ್ನು ಸಾಮಾನ್ಯವಾಗಿಟ್ಟುಕೊಂಡರೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ.
ಮಿಥ್ಯ 9: ಹೈಪೋಥೈರಾಯ್ಡಿಸಮ್ ಇರುವುದರಿಂದ, ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ
ಇಲ್ಲ. ಹೈಪೋಥೈರಾಯ್ಡಿಸಮ್ 2 ರಿಂದ 4 ಕೆಜಿ ತೂಕ ಹೆಚ್ಚಿಸಲು ಮಾತ್ರ ಕಾರಣವಾಗುತ್ತದೆ. ಆದ್ದರಿಂದ ಥೈರಾಯ್ಡ್ ಚಿಕಿತ್ಸೆಯಿಂದ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳುತ್ತೀರಿ. ಹೆಚ್ಚಿನ ಸಮಯ, ಸ್ಥೂಲಕಾಯತೆಯು ಅತಿಯಾದ ಆಹಾರ ಸೇವನೆ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿರುತ್ತದೆ. ಆದ್ದರಿಂದ, ಬೊಜ್ಜು ಕರಗಿಸಲು ಒಳ್ಳೆಯ ಆಹಾರ ಮತ್ತು ವ್ಯಾಯಾಮವನ್ನು ಅನುಸರಿಸಬೇಕು. ಹೈಪೋಥೈರಾಯ್ಡಿಸಮ್ ಖಂಡಿತವಾಗಿಯೂ ನಿಮ್ಮ ತೂಕವನ್ನು ತಡೆಯುವುದಿಲ್ಲ.
ಡಾ. ವಿಕ್ರಾಂತ ಘಟ್ನಟ್ಟಿ
ಎಂಡೋಕ್ರಿನಾಲಾಜಿಸ್ಟ
ಬೆಳಗಾವಿ