ಕೃಪೆ: ಪ್ರಜಾವಾಣಿ
ದೇಶದಲ್ಲಿ 27 ಇನ್ಶೂರೆನ್ಸ್ ಕಂಪನಿಗಳಿವೆ. ಇವುಗಳಲ್ಲಿ 400 ರಿಂದ 500 ಮಾದರಿಯ ಆರೋಗ್ಯ ವಿಮೆ ಉತ್ಪನ್ನಗಳಿವೆ. ಒಂದೊಂದು ಕಂಪನಿಯು ತನ್ನದೇ ರೀತಿಯಲ್ಲಿ ನೀತಿ ನಿಬಂಧನೆಗಳನ್ನು ರೂಪಿಸಿಕೊಂಡು ಗ್ರಾಹಕರ ಮೇಲೆ ಹೇರುತ್ತಿದೆ. ಜತೆಗೆ ಇನ್ಶೂರೆನ್ಸ್ ಮಾಡಿಸುವ ಗ್ರಾಹಕರಿಗೆ ಚಿಕಿತ್ಸೆ ಸಿಗದ ಕಾಯಿಲೆಗಳ ಪಟ್ಟಿ ನೀಡುವಾಗ ಒಬ್ಬೊಬ್ಬರು ಒಂದೊಂದು ಕ್ರಮ ಅನುಸರಿಸುತ್ತಿದ್ದಾರೆ.
ಇದೆಲ್ಲದಕ್ಕೂ ಕಡಿವಾಣ ಹಾಕಿ, ಗ್ರಾಹಕರಿಗೆ ಸುಧಾರಿತ ಆರೋಗ್ಯ ವಿಮೆ ಸಿಗುವಂತೆ ಮಾಡಲು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಪಣ ತೊಟ್ಟಿದೆ. ಈಗಾಗಲೇ ಈ ನಿಟ್ಟಿನಲ್ಲಿ ಕರಡು ಮಾರ್ಗಸೂಚಿಯನ್ನು ಪ್ರಕಟಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸದ್ಯದಲ್ಲೇ ಆರೋಗ್ಯ ವಿಮೆಗಳಲ್ಲಿ ಭಾರಿ ಸುಧಾರಣೆ ಜಾರಿಯಾಗಲಿದೆ.
ಹೆಚ್ಚು ರೋಗಗಳಿಗೆ ಸಿಗಲಿದೆ ಚಿಕಿತ್ಸೆ: ಯಾವುದೇ ಆರೋಗ್ಯ ವಿಮೆಯಲ್ಲಿ ನೀವು ಚಿಕಿತ್ಸೆ ಸಿಗದ ರೋಗಗಳ ಪಟ್ಟಿ (exclusions) ಬಗ್ಗೆ ಕೇಳಿಯೇ ಇರುತ್ತೀರಿ. ಪಟ್ಟಿಯಲ್ಲಿ ಸೂಚಿಸಿರುವ ಕಾಯಿಲೆಗಳಿಗೆ ವಿಮೆಯ ಪರಿಹಾರ ಸಿಗುವುದಿಲ್ಲ ಎಂದೇ ಇದರರ್ಥ. ಉದಾಹರಣೆಗೆ ಈವರೆಗೆ ಬಹುತೇಕ ಆರೋಗ್ಯ ವಿಮೆ ಕಂಪನಿಗಳು ಮಾನಸಿಕ ಅಸ್ವಸ್ಥತೆಯನ್ನು ಚಿಕಿತ್ಸೆಗೆ ಪರಿಗಣಿಸುತ್ತಿರಲಿಲ್ಲ.
ಆದರೆ, ‘ಐಆರ್ಡಿಎಐ‘ ಪ್ರಕಟಿಸಿರುವ ಹೊಸ ಕರಡು ಪ್ರಸ್ತಾವನೆಯಂತೆ ಮಾನಸಿಕ ಅಸ್ವಸ್ಥತೆ, ಮಾನಸಿಕ ಖಿನ್ನತೆ, ಪ್ರೌಢಾವಸ್ಥೆಯಲ್ಲಿ ಉಂಟಾಗುವ ಸಮಸ್ಯೆ, ಋತುಬಂಧ, ನರ ಬೆಳವಣಿಗೆ ಸಮಸ್ಯೆ ಹಾಗೂ ಅನುವಂಶಿಕ ಸಮಸ್ಯೆಗಳ ಚಿಕಿತ್ಸೆಗೆ ಇನ್ಶೂರೆನ್ಸ್ ಕಂಪನಿಗಳು ಇನ್ನು ಮುಂದೆ ವಿಮಾ ಪರಿಹಾರ ನೀಡಬೇಕಾಗುತ್ತದೆ.
ಮೂರ್ಛೆರೋಗ, ಹೆಪಟೈಟಿಸ್ ಬಿ, ಅರಳು ಮರಳು ರೋಗ,ಪಾರ್ಕಿನ್ಸನ್ ಕಾಯಿಲೆ, ಎಚ್ಐವಿ ಸೋಂಕು, ಶ್ರವಣದೋಷ ಸೇರಿ 17 ಕಾಯಿಲೆಗಳಿಗೆ ಆರೋಗ್ಯ ವಿಮೆಯ ರಕ್ಷಣೆ ನೀಡಬೇಕೆ ಬೇಡವೇ ಎನ್ನುವ ತೀರ್ಮಾನವನ್ನು ಐಆರ್ಡಿಎಐ ವಿಮಾ ಕಂಪನಿಗಳ ವಿವೇಚನೆಗೆ ಬಿಟ್ಟಿದೆ.
ಕಾಯುವಿಕೆ ಅವಧಿಯಲ್ಲಿ ಸುಧಾರಣೆ: ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಲು ವಿಮಾ ಕಂಪನಿಗಳು 2 ರಿಂದ 3 ವರ್ಷಗಳ ಕಾಯುವಿಕೆ ಅವಧಿ (waiting period) ನಿಗದಿಪಡಿಸುತ್ತಿದ್ದವು. ಆದರೆ, ‘ಐಆರ್ಡಿಎಐ’ ಕರಡು ಮಾರ್ಗಸೂಚಿಯಲ್ಲಿ ಇರುವಂತೆ ವಿಮೆ ಮಾಡಿಸುವಾಗ ವ್ಯಕ್ತಿಯು ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡದ ಬಗ್ಗೆ ತಿಳಿಸಿದ್ದರೆ, 30 ದಿನಗಳಿಗಿಂತ ಹೆಚ್ಚಿಗೆ ಕಾಯುವಿಕೆ ಅವಧಿ ನಿಗದಿ ಮಾಡುವಂತಿಲ್ಲ. ಇದರಂತೆ ರೋಗಿಗೆ ಕೇವಲ 1 ತಿಂಗಳ ಬಳಿಕ ಚಿಕಿತ್ಸೆ ಸಿಗುತ್ತದೆ.
ಅತ್ಯಾಧುನಿಕ ಚಿಕಿತ್ಸಾ ವಿಧಾನಕ್ಕೆ ವಿಮೆ ನಿರಾಕರಿಸುವಂತಿಲ್ಲ:ಅತ್ಯಾಧುನಿಕ ಚಿಕಿತ್ಸಾ ವಿಧಾನಗಳಾದ ರೋಬೊಟಿಕ್ ಸರ್ಜರಿ, ಓರಲ್ ಕಿಮೋಥೆರಪಿ ಸೇರಿ ಪ್ರಮುಖ ವಿಧಾನಗಳಿಗೆ ವಿಮೆ ಕವರೇಜ್ ನಿರಾಕರಿಸುವಂತಿಲ್ಲ.
ಚಿಕಿತ್ಸೆ ಹೊರತುಪಡಿಸಿ, ಕೆಲ ಖರ್ಚುಗಳಿಗೆ ವಿಮೆ: ಒಂದೊಂದು ಆಸ್ಪತ್ರೆಯಲ್ಲಿ ಒಂದೊಂದು ರೀತಿಯ ಬಿಲ್ಲಿಂಗ್ ಪ್ರಕ್ರಿಯೆ ಇದೆ. ಹೀಗಾಗಿ ಇನ್ಶೂರೆನ್ಸ್ ಕ್ಲೇಮ್ ಪ್ರಕ್ರಿಯೆಯಲ್ಲಿ ಸಾಕಷ್ಟು ಗೊಂದಲ ಏರ್ಪಡುತ್ತಿತ್ತು. ಇದನ್ನು ನಿವಾರಿಸಲು ಐಆರ್ಡಿಎಐ ನಾಲ್ಕು ವಿಭಾಗಗಳಲ್ಲಿ ಹೆಚ್ಚುವರಿ ವೆಚ್ಚಗಳನ್ನು ಬೇರ್ಪಡಿಸಿ ಸಲ್ಲಿಸಲು ತಿಳಿಸಿದೆ.
ಸ್ಯಾನಿಟರಿ ಪ್ಯಾಡ್, ಮಕ್ಕಳ ಆಹಾರ, ಇಂಟರ್ ನೆಟ್, ಇ–ಮೇಲ್, ಲಾಂಡ್ರಿ ವೆಚ್ಚ ಸೇರಿ ಇನ್ನಿತರ ಮಾದರಿಯ ಖರ್ಚುಗಳಿಗೆ ವಿಮೆ ಕವರೇಜ್ ನೀಡಬೇಕೇ ಎನ್ನುವುದನ್ನು ‘ಐಆರ್ಡಿಎಐ’ ಇನ್ಶೂರೆನ್ಸ್ ಕಂಪನಿಗಳ ವಿವೇಚನೆಗೆ ಬಿಟ್ಟಿದೆ. ಒಟ್ಟಿನಲ್ಲಿ ಆರೋಗ್ಯ ವಿಮೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ‘ಐಆರ್ಡಿಎಐ’ ಚಿಂತನೆ ನಡೆಸಿರುವುದಂತೂ ಸ್ವಾಗತಾರ್ಹ ಬೆಳವಣಿಗೆ.
(ಲೇಖಕರು: ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ನ ಉಪಾಧ್ಯಕ್ಷರು)
ಕೃಪೆ: ಪ್ರಜಾವಾಣಿ