ಉಚಿತ ಇನ್ಸುಲಿನ್ ವಿತರಣಾ ಯೋಜನೆಗೆ ಚಾಲನೆ

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗಾಗಿ ಉಚಿತ ಇನ್ಸುಲಿನ ವಿತರಣಾ ಯೋಜನೆಯನ್ನು ಸಂಸ್ಥೆಯ ಕರ‍್ಯಾಧ್ಯಕ್ಷರು ಹಾಗೂ ಕಾಹೇರನ ಕುಲಾಧಿಪತಿಗಳಾದ ಡಾ. ಪ್ರಭಾಕರ ಕೋರೆ ಅವರು ಇಂದಿಲ್ಲಿ ಜನಸೇವೆಗೆ ಅರ್ಪಿಸಿದರು. ಅಸ್ಟ್ರೇಲಿಯಾದ ಲೈಫ್ ಫಾರ ಎ ಚೈಲ್ಡ್ ಹಾಗೂ ಕೆಎಲ್‌ಇ ಮಧುಮೇಹ ಕೇಂದ್ರ ಜೊತೆಗೂಡಿ ಈ ಯೋಜನೆಯನ್ನು ಜಾರಿಗೊಳಿಸಿವೆ.
ಉಚಿತ ಇನ್ಸುಲಿನ್ ವಿತರಣಾ ಯೋಜನೆಯನ್ನು ಜಾರಿಗೊಳಿಸಿ ಮಾತನಾಡಿದ ಡಾ. ಪ್ರಭಾಕರ ಕೋರೆ ಅವರು, 22 ವರ್ಷಗಳಿಂದ ಮಧುಮೇಹ ಪೀಡಿತ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿರುವದು ಐತಿಹಾಸಿಕ ಕಾರ್ಯ. ಈ ಹಿಂದೆ ಅಲ್ಲಲ್ಲಿ ಕಂಡು ಬರುತ್ತಿದ್ದ ಮಧುಮೇಹ ಇಂದು ಎಲ್ಲ ಮನೆಗಳಲ್ಲಿದೆ. ನಮ್ಮ ಆಹಾರ ಮತ್ತು ಜಡತ್ವ ಜೀವನ ಶೈಲಿಯಿಂದ ಮಧುಮೇಹವು ಆವರಿಸಿಕೊಳ್ಳುತ್ತಿದೆ. ಹಸುಗೂಸಿಗೂ ಮಧುಮೇಹದ ಜೊತೆಗೆ ಸಕಲ ತಪಾಸಣೆ ಮಾಡುವ ಪದ್ದತಿ ಬಂದಿದೆ. ಚಿಕ್ಕ ಮಕ್ಕಳಿಗೆ ಚಿಕಿತ್ಸೆ ದುಬಾರಿಯಾಗಿ ಪರಿಣಮಿಸುತ್ತಿದ್ದು, ಮಧುಮೇಹ ಪೀಡಿತ ಮಕ್ಕಳ ಚಿಕಿತ್ಸಾ ವೆಚ್ಚ ನಿರಂತರವಾಗಿರುತ್ತದೆ. ಆದ್ದರಿಂದ ಕೈಗೆಟಕುವ ದರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೂ ಕೂಡ ಆರೋಗ್ಯ ಸೇವೆ ಕಲ್ಪಿಸಲಾಗುತ್ತಿದೆ. ಅತ್ಯಂತ ಶ್ರಮಜೀವಿಯಾದ ರೈತನಿಗೂ ಕೂಡ ಮಧುಮೇಹ ಬಂದೆರಗುತ್ತಿದೆ. ಇದಕ್ಕೆಲ್ಲ ಕಾರಣ ಆಹಾರ ಪದ್ದತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

WhatsApp Image 2022 09 28 at 5.16.43 PM


ಬೆಳಗಾವಿಯಲ್ಲಿ ಆಸ್ಪತ್ರೆ ಇಲ್ಲದ ಸಂದರ್ಭದಲ್ಲಿ ನಾವು ಒಂದೇ ಸೂರಿನಡಿ 2400 ಹಾಸಿಗೆ, ಬೆಳಗಾವಿ ದಕ್ಷಿಣ ಭಾಗದಲ್ಲಿ 500, ಚಿಕ್ಕೋಡಿ, ಹುಬ್ಬಳ್ಳಿ ಸೇರಿದಂತೆ 4000 ಹಾಸಿಗೆಯ ಆಸ್ಪತ್ರೆಯನ್ನು ತೆರೆಯಲಾಗಿದೆ. ಎಲ್ಲರಿಗೂ ಶಿಕ್ಷಣ, ಆರೋಗ್ಯ ಸೇವೆಯನ್ನು ನೀಡಲಾಗುತ್ತಿದೆ. ಕೆಎಲ್‌ಇ ಸಂಸ್ಥೆಯು ದಾನಿಗಳಿಂದ ನಡೆದಿದೆ. ದಾನವು ಬಡವರಿಗೆ ಮುಟ್ಟುತ್ತದೆ ಎಂಬ ಭಾವನೆಯಿಂದ ಜನರು ಸಂಸ್ಥೆಗೆ ದಾನ ನೀಡುತ್ತಿದ್ದಾರೆ. ಡಾ. ಜಾಲಿ ದಂಪತಿಗಳ ಕಾರ‍್ಯ ಅಭಿನಂದನಾರ್ಹವಾಗಿದೆ ಎಂದು ಶ್ಲಾಘಿಸಿದರು.


ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಹಾಗೂ ಮಧುಮೇಹ ತಜ್ಞವೈದ್ಯರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, 22 ವರ್ಷಗಳ ಹಿಂದೆ ಇಲ್ಲಿಗೆ ಕರೆ ತಂದು ಜವಾಬ್ದಾರಿ ನೀಡಿ, ಕೆಎಲ್‌ಇ ಮಧುಮೇಹ ಕೇಂದ್ರ ತೆರೆಯಲು ಪ್ರೇರೇಪಿಸಿ ಇಂದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯ ಹೆಸರು ಗಳಿಸಲು ಸದಾ ಬೆನ್ನೆಲಬಾಗಿ ಡಾ. ಪ್ರಭಾಕರ ಕೋರೆ ಅವರು ಕಾರ್ಯ ಮಾಡುತ್ತಿದ್ದಾರೆ. 45 ದಿನಗಳ ಹಸಗೂಸಿಗೆ ಇನ್ಸುಲಿನ್ ನೀಡುವದರೊಂದಿಗೆ ಪ್ರಾರಂಭವಾದ ಕಾರ‍್ಯ, ಇಂದು ಎಲ್ಲ ಸವಾಲುಗಳನ್ನು ಎದುರಿಸುವ ಶಕ್ತಿ ನೀಡಿ, ಮಧುಮೆಹ ಪಿಡಿತ ಮಕ್ಕಳು ಇನ್ಸುಲಿನ್ ಚಿಕಿತ್ಸೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸಕಲ ಕಾರ್ಯಕ್ಕೂ ಸಹಕಾರ ನೀಡುತ್ತಿದ್ದಾರೆ ಎಂದು ಸ್ಮರಿಸಿದರು.


ಮಧುಮೇಹ ಕೇಂದ್ರದ ಡಾ. ಸುಜಾತಾ ಜಾಲಿ ಅವರು ಮಾತನಾಡಿ, ಕೇಂದ್ರದ ಕಾರ್ಯ ಗಮನಿಸಿ, ಆಸ್ಟ್ರೇಲಿಯಾದ ಸಂಸ್ಥೆಯು ಇನ್ಸುಲಿನ ನೀಡಿದ್ದು, ಎಲ್ಲ ಮಕ್ಕಳಿಗೆ ಉಚಿತವಾಗಿ ಪೂರೈಸಲು ಕ್ರಮಕೈಕೊಳ್ಳಲಾಗಿದೆ. ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಮಕ್ಕಳು ಇನ್ಸುಲಿನ ಪಡೆಯಲು ತೊಂದರೆಯಾಗುತ್ತಿತ್ತು. ಅದನ್ನು ತಪ್ಪಿಸಲು ನಾವು ಕ್ರಮಕೈಕೊಂಡಿದ್ದು, ಶೇ. 75% ಮಕ್ಕಳು ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಕೆಎಲ್‌ಇ ಮಧುಮೇಹ ಕೇಂದ್ರವು 59 ದೇಶಗಳಲ್ಲಿಯೇ ಅತ್ಯುತ್ತಮ ಆರೈಕಾ ಪ್ರಥಮ ಶ್ರೇಣಿಯ ಕೇಂದ್ರವಾಗಿ ಹೊರಮ್ಮಿದೆ. ಪಾಲಕರು ತೋರುವ ಕಾಳಜಿ ಅತ್ಯಂತ ಖುಷಿ ನೀಡುತ್ತಿದ್ದು, ಡಾ. ಪ್ರಭಾಕರ ಕೋರೆ ಅವರ ಬೆಂಬಲದಿಂದ ಇಂದು ನಾವು ಹಲವಾರು ಮಧುಮೇಹ ಪೀಡಿತ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿಯೂ ಕೂಡ ಹಳ್ಳಿಯಲ್ಲಿರುವ ಮಕ್ಕಳ ಮನೆಗೆ ಇನ್ಸುಲಿನ್ ಕಳುಹಿಸಿಕೊಟ್ಟಿದ್ದೇವೆ. ಅಮೇರಿಕಾದ ಸಂಸ್ಥೆಯೊಂದು 20 ಲಕ್ಷ ಕೊಡಲು ಮುಂದೆ ಬಂದಿದ್ದು, ಅದರ ಮೂಲಕ ಪೌಷ್ಟಿಕಾಂಶ ಆಹಾರ ನೀಡಲು ಯೋಜನೆ ರೂಪಿಸಲಾಗಿದೆ. ಮಾನಸಿಕ ಹಾಗೂ ಭೌತಿಕವಾಗಿ ಅಂಗವಿಕಲರಾದ ಮಕ್ಕಳ ಆರೈಕಾ ಕೇಂದ್ರ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.


ಚಿಕ್ಕಮಕ್ಕಳ ತಜ್ಞವೈದ್ಯರಾದ ಡಾ. ವಿ ಡಿ ಪಾಟೀಲ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ತನ್ಮಯಾ ಮೆಟಗುಡ್, ಡಾ. ಸಂತೋಷ ಪಾಟೀಲ, ಡಾ. ಸಚಿಜಯ ಕಂಬಾರ, ಡಾ. ರಾಜೇಂದ್ರ ದೆಗಿನಾಳ, ಲೀಲಾ ಉಪಸ್ಥಿತರಿದ್ದರು ಡಾ. ಪ್ರಾಚಿ ನಲವಾಡೆ ನಿರೂಪಿಸಿದರು. ಡಾ. ಜ್ಯೋತಿ ವಸೆದಾರ ಅವರು ವಂದಿಸಿದರು.

Popular Doctors

Related Articles