ವೈದ್ಯಕೀಯ ಸೇವೆ ಮಾನವೀಯ ಕಳಕಳಿಯುಳ್ಳದ್ದು

ಸ್ವಾತಂತ್ರ್ಯ ಹೋರಾಟಗಾರ, ಪ್ರಸಿದ್ದ ವೈದ್ಯ, ಶಿಕ್ಷಣ ತಜ್ಞ ಹಾಗೂ ಅದಕ್ಕಿಂತ ಮುಖ್ಯವಾಗಿ ರಾಜಕಾರಣಿಯಾಗಿ ದಶಕದವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಡಾ. ಬಿ ಸಿ ರಾಯ್ ಅವರ ಸ್ಮರಾಣಾರ್ಥವಾಗಿ ಪ್ರತಿ ವರ್ಷ ಜುಲೈ 1 ರಂದು ದೇಶದಲ್ಲಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಡಾ. ರಾಯ್ ಅವರು ಇತಿಹಾಸದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದು, ಎಫ್‍ಆರ್‍ಸಿಎಸ್ ಹಾಗೂ ಎಂಆರ್‍ಸಿಪಿ ಪಡೆದುಕೊಂಡವರಾಗಿದ್ದಾರೆ. ಅಲ್ಲದೇ 4 ಫೆಬ್ರುವರಿ 1961ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ತಮ್ಮ ಜೀವಿತಾವಧಿಯಲ್ಲಿ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಿದ ಹೆಗ್ಗಳಿಕೆ ಅವರದು.ಅವರೊಬ್ಬರು ಮಾನವೀಯ ಕಳಕಳಿಯುಳ್ಳ ವೈದ್ಯರು.

ವೈದ್ಯರಾಗಿದ್ದುಕೊಂಡು ರಾಜಕಾರಣವನ್ನು ಪ್ರವೇಶಿಸಿ ಬಡವರಿಗಾಗಿ ಆಸ್ಪತ್ರೆಯನ್ನು ಕಟ್ಟಿಸಿದರು. 1948ರ ಜನವರಿ 23ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ, ಸುಮಾರು14 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ವೈದ್ಯಕೀಯ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಡಾ. ಬಿ.ಸಿ ರಾಯ್ ಅವರ ಸೇವೆಯ ಸವಿ ನೆನಪಿಗಾಗಿ 1976ರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದವರಿಗಾಗಿ ಬಿ.ಸಿ.ರಾಯ್ ಪ್ರಶಸ್ತಿಯನ್ನು ಆರಂಭಿಸಲಾಯಿತು. ವೈದ್ಯ ಬಂಧುಗಳು ತಮ್ಮ ವೃತ್ತಿ ಜೀವನದ ಏಳು ಬೀಳುಗಳನ್ನೆಲ್ಲಾ  ವಿಮರ್ಶಿಸಿಕೊಂಡು ಆತ್ಮಾವಲೋಕನ ಮಾಡಿಕೊಂಡು ರೋಗಿಗಳ ಸೇವೆಗೆ ತಮ್ಮನ್ನು ಪುನಃ ಅರ್ಪಿಸಿಕೊಳ್ಳುವ  ದಿನವೆಂದರೂ ತಪ್ಪಲ್ಲ.

ವೈದ್ಯೋ ನಾರಾಯಣ ಹರಿಃ’ ಎಂದು ವೈದ್ಯರನ್ನು ಪುಜಿಸಲಾಗುತ್ತದೆ. ಆಗ ಎಲ್ಲ ರೋಗಕ್ಕೂ ಒಬ್ಬನೇ ವೈದ್ಯ. ಈಗಂತೂ ಪ್ರತಿ ರೋಗಕ್ಕೊಬ್ಬರಂತೆ ವೈದ್ಯರಿದ್ದಾರೆ. ಮೊದಲೆಲ್ಲಾ ರೋಗವಿಲ್ಲದವನು ಆರೋಗ್ಯವಂತ ಎನ್ನುವ ಮಾತು ಇತ್ತು. ಈಗ ಆರೋಗ್ಯ ಎಂದರೆ ರೋಗವಿಲ್ಲದವನು ಎಂಬರ್ಥವಲ್ಲ. ಯಾರು ಮುಂಜಾನೆ ಏಳುವಾಗ ಉಲ್ಲಸಿತನಾಗಿ ಇರುತ್ತಾನೆಯೋ ಅವನೇ ನಿಜವಾದ ಆರೋಗ್ಯವಂತ ವ್ಯಕ್ತಿ. ಯಾಕೆಂದರೆ ಇಂದಿನ ಜಗತ್ತಿನಲ್ಲಿ ಎಲ್ಲರೂ ಮಧುಮೇಹಿಗಳು ಅಥವಾ ಅಧಿಕ ರಕ್ತದೊತ್ತಡದಿಂದ ಬಳಲುವರೇಇಂದಿನ ಕಾಲಘಟ್ಟದಲ್ಲಿ ರೋಗಿಗಳಿಗೂ ರೋಗ ದಿನ ಬೆಳಗಾಗುವುದರೊಳಗೆ ಗುಣವಾಗಬೇಕು.

Doctors-Day

ತಾಳ್ಮೆ ಸಹನೆ ಎಂಬುದಂತೂ ಇಲ್ಲವೇ ಇಲ್ಲ. ಎಲ್ಲರೂ ಅಂತರ್ಜಾಲದ ಮೂಲಕ ಜಾಲಾಡಿ ರೋಗಗಳ ಬಗ್ಗೆ ಅರ್ಧಂಬರ್ಧ ತಿಳಿದುಕೊಂಡು ವೈದ್ಯರ ಮುಂದೆ ಜಾಣತನ ಪ್ರದರ್ಶಿಸಿ ವೈದ್ಯರ ಹಾದಿ ತಪ್ಪಿಸುವಲ್ಲಿ ಮಹತ್ತರ ಪಾತ್ರ ವಹಿಸುವುದೂ ಉಂಟುರೋಗಿಗಳಿಗಂತೂ ಈಗಿನ ಧಾವಂತ, ವೇಗದ ಜಗತ್ತಿನಲ್ಲಿ ದಿನಬೆಳಗಾಗುವುದರೊಳಗೆ ರೋಗ ವಾಸಿಯಗಬೇಕೆನ್ನುವ ಆಸೆಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದಲ್ಲಿ ವೈದ್ಯ ಮತ್ತು ರೋಗಿಗಳ ನಡುವೆ ಸುಮಧುರ ಬಾಂದವ್ಯ ಮೂಡಲೇ ಬೇಕು. ರೋಗಿಗಳು ಕೂಡ ತಾಳ್ಮೆ ಸಂಯಮ ಕಾಯ್ದುಕೊಳ್ಳಬೇಕು. ವೈದ್ಯರ ಮೇಲೆ ಸಂಪೂರ್ಣ ಭರವಸೆ ಇಡಬೇಕು. ಎಲ್ಲ ಸಮಸ್ಯೆಗಳನ್ನೂ ಮುಕ್ತವಾಗಿ ವೈದ್ಯರ ಬಳಿ ತೆರೆದಿಡಿ. ದಿನ ಬೆಳಗಾಗುವುದರೊಳಗೆ ಯಾವ ವೈದ್ಯರಿಗೂ ಯಾವ ರೋಗವನ್ನು ಗುಣ ಪಡಿಸಲು ಅಸಾಧ್ಯ ಎಂಬ ಸತ್ಯವನ್ನು ರೋಗಿಗಳು ಅರಿತು ಸಂಯಮದಿಂದ ವರ್ತಿಸಿದಲ್ಲಿ ವೈದ್ಯರ ಕೆಲಸ ಸುಲಭವಾಗುವುದರಲ್ಲಿ ಎರಡು ಮಾತಿಲ್ಲ.

ಮಾನವೀಯ ಲಕ್ಷಣ:

ವೈದ್ಯಕೀಯ ವೃತ್ತಿ ಎನ್ನುವುದು ಸೇವಾ ಕ್ಷೇತ್ರದ ಪರಿಧಿಯೊಳಗೆ ಬರುವ ಪವಿತ್ರವಾದ ವೃತ್ತಿ. ವೈದ್ಯರು ನೀಡುವ ಸೇವೆಗೆ ಬೆಲೆಕಟ್ಟುವುದು ಖಂಡಿತಾ ಸಾಧ್ಯವಿಲ್ಲ. ರಕ್ತನಾಳಗಳು ತುಂಡಾಗಿ ತೀವ್ರ ರಕ್ತಸ್ರಾವವಾದಾಗ, ಹೃದಯ ಸ್ತಂಬನವಾಗಿ ಎದೆ ಬಡಿತ ನಿಂತುಹೋದಾಗ, ವೈದ್ಯರು ಸಾಕ್ಷಾತ್ ದೇವರಾಗಿ ಕಾಣುತ್ತಾರೆ. ಆದರೆ ಕೆಲವೊಮ್ಮೆ ವೈದ್ಯರ ತೀವ್ರ ಪ್ರಯತ್ನದ ಬಳಿಕವೂ ಸಾವು ಸಂಭವಿಸಿದಲ್ಲಿ, ವೈದ್ಯರನ್ನೇ ಸಾವಿಗೆ ಹೊಣೆಮಾಡಿ ಆಕ್ರಮಣ ಮಾಡುವುದು, ಹಿಂಸಾಚಾರ ಮಾಡುವುದು, ಆಸ್ಪತ್ರೆ ಮೇಲೆ ದಾಳಿ ಮಾಡುವುದು ಮಾನವೀಯತೆಯ ಲಕ್ಷಣವಲ್ಲ.

ಯಾವೊಬ್ಬ ವೈದ್ಯರೂ ತನ್ನ ರೋಗಿ ಸಾಯಬೇಕೆಂದು ಇಚ್ಛಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಎಲ್ಲಾ ವೈದ್ಯರು ಪ್ರಾಮಾಣಿಕವೆಂದು ತಿಳಿಯಬೇಕಿಲ್ಲ. ನೂರರಲ್ಲಿ ಒಬ್ಬರು ಅಪ್ರಾಮಾಣಿಕರು ಇರಲೂ ಬಹುದು. ಎಲ್ಲವೂ ವ್ಯಾಪಾರೀಕರಣಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ವೈದ್ಯರೋಗಿಯ ಸಂಬಂಧವೂ ಹಳಸಿದೆ ಲಕ್ಷಣಗಳು ಕಂಡುಬರುತ್ತಿವೆ. ರೋಗಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸಲು ವೈದ್ಯರು ನಿಡುವ ಔಷಧಿಗಳು ಎಷ್ಟು ಮುಖ್ಯವೋ ಅದೇ ರೀತಿ ವೈದ್ಯರ ಮೇಲಿನ ವಿಶ್ವಾಸ, ನಂಬಿಕೆಗಳು ಅತೀ ಅವಶ್ಯಕ. ವೈದ್ಯರು ಕೂಡಾ ನಿಮ್ಮಂತೆಯೇ ಒಬ್ಬ ಮನುಷ್ಯರು ಅವರಿಗೂ ತಮ್ಮದೇ ಆದ ಇತಿ ಮಿತಿಗಳಿವೆ, ಅವರದ್ದೇ ಆದ ವೈಯಕ್ತಿಕ ಬದುಕು ಇದೆ ಎಂಬುದನ್ನು ರೋಗಿಗಳು ಮನಗಾಣಬೇಕು. ಈ ನಿಟ್ಟಿನಲ್ಲಿ ವೈದ್ಯರು ಮತ್ತು ರೋಗಿಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದಲ್ಲಿ ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬಹುದು.

Popular Doctors

Related Articles