ಕೋರೋನಾ ( ಕೋವಿಡ್ 19 ) ಕಳೆದ 18 ತಿಂಗಳುಗಳಿಂದ ವಿಶ್ವದಾದ್ಯಂತ ಜನ ಜೀವನದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿದೆ. ನಮ್ಮ ದೇಶದಲ್ಲಿ ಕಳೆದ ಮಾರ್ಚ್ 22ರಿಂದ ಪ್ರಾರಂಭವಾದ ಲಾಕ್ ಡೌನ್, ತದನಂತರ ಕ್ರಮೇಣ ಲಾಕ್ಡೌನ್ ತೆರವುಗೊಳಿಸಿದ ನಂತರ ಈಗ ಮತ್ತೆ ಕಳೆದ ಮಾರ್ಚ್ ಸ್ಥಿತಿಗೆ ತಲುಪಿದ್ದೇವೆ. ಮೊದಲನೇ ಅಲೆ ಗಿಂತ ಎರಡನೆಯ ಅಲೆ ಹೆಚ್ಚು ಭೀಕರ ಹಾಗೂ ಭಯಾನಕವಾಗಿ ತೋರುತ್ತದೆ. ಎರಡನೆಯ ಅಲೆ ಹಬ್ಬುವ ತೀವ್ರತೆ ವೈದ್ಯ ಲೋಕವನ್ನು ದಂಗುಬಡಿಸಿದೆ. ಇದು ಜನಸಾಮಾನ್ಯರಿಗೆ ಸಮಾಜಕ್ಕೆ , ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹಲವಾರು ಪಾಠಗಳನ್ನು ಕಲಿಸಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳ ದಿದ್ದರೆ ಮೂರನೇ ಅಲೆ ಇನ್ನೂ ಭೀಕರವಾದೀತು.
ಕಳೆದ ಒಂದು ವರ್ಷದಿಂದ ನಾನು ಕೊರೋನಾ ರೋಗಿ ಗಳ ಚಿಕಿತ್ಸೆಯಲ್ಲಿ ತೊಡಗಿದ್ದೇನೆ. ಕೋವಿಡ್ ಲಸಿಕೆಯನ್ನು 16 ನೇಯ ಜನೆವರಿ 2021 ರಂದು ಕೋವಿಡ್ ಸೇನಾನಿಗಳಿಗಾಗಿ ಕೊಡಲು ಬಿಡುಗಡೆ ಮಾಡಲಾಯಿತು. 1ನೇ ಮಾರ್ಚ್ 2021 ರಿಂದ ಎರಡನೇ ಹಂತದ ಲಸಿಕಾಕರಣ ಅರವತ್ತು ವರ್ಷದ ಮೇಲ್ಪಟ್ಟವರಿಗೆ ಹಾಗೂ 45 ವರ್ಷದ ಮೇಲ್ಪಟ್ಟವರು ಮಧುಮೇಹ,ರಕ್ತದೊತ್ತಡ, ಹೃದಯ ರೋಗಿಗಳು ಮುಂತಾದವರಿಗೆ ಪ್ರಾರಂಭಿಸಲಾಯಿತು.ಲಸಿಕಾಕರಣವನ್ನು ಸಮರೋಪಾದಿಯಲ್ಲಿ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆ ತೆಗೆದುಕೊಂಡಿದ್ದರೆ ಪ್ರಾಯಶ: ಎರಡನೆಯ ಅಲೆಯ ಭೀಕರತೆಯ ಚಿತ್ರ ಇಷ್ಟು ಭಯಾನಕವಾಗುತ್ತಿ ರಲಿಲ್ಲ ವೇನೋ ? ಲಸಿಕಾಕರಣ ಪ್ರಕ್ರಿಯೆಯಲ್ಲಿ ಮೇಲೆ ತೋರಿಸಿದ ಎರಡೂ ಗುಂಪಿನ ಜನರು ಹೆಚ್ಚಿನ ಉತ್ಸಾಹದಿಂದ ಭಾಗಿಯಾಗಯಾಗಲಿಲ್ಲ. ಪ್ರಾಯಶಃ ಹೆಚ್ಚಿನ ಜನರಿಗೆ ಲಸಿಕೆ ಮಹತ್ವ ಗೊತ್ತಿಲ್ಲವೇನೋ? ಎಂದು ತೋರುತ್ತದೆ.
ಈ ಲೇಖನದ ಮೂಲಕ ಸಾಮಾನ್ಯ ಜನರಲ್ಲಿ ಲಸಿಕೆಯ ಬಗ್ಗೆ ಅರಿವು ಮೂಡಿಸುವ ಒಂದು ಚಿಕ್ಕ ಪ್ರಯತ್ನವನ್ನು ಕೈಗೊಳ್ಳುತ್ತಿದ್ದೇನೆ.
ಕೊರೋನಾ ಒಂದು ಸೂಕ್ಷ್ಮಾತಿಸೂಕ್ಷ್ಮ ಕಣವಾದ ವೈರಸ್ ನಿಂದ ಹಬ್ಬುವ ರೋಗ. ಕೊರೋನಾ ಗುಂಪಿನ ವೈರಸ್ ನಿಂದ ಆಗುವ ರೋಗಗಳು ಮನುಷ್ಯ ಜಾತಿಗೆ ಹೊಸದೇನಲ್ಲ. ಈ ಮೊದಲೂ ಕೂಡ ಕೆಮ್ಮು ನೆಗಡಿಯಂತಹ ಕಾಯಿಲೆಗಳನ್ನು ಉಂಟುಮಾಡುತ್ತಿದ್ದವು.
ಡಿಸೆಂಬರ್ 2019 ರ ಕೊನೆಯ ವಾರದಲ್ಲಿ ಚೀನಾ ದೇಶದ ಊಹಾನ್ ಪ್ರಾಂತದಲ್ಲಿ ಪ್ರಾರಂಭವಾದ ಈ ಬೇನೆ SARS COVID 2 ಎಂಬ ವೈರಸ ದಿಂದ ಆಗಿದ್ದನ್ನು ಸೂಕ್ಷ್ಮಣು ಜೀವಿ ತಜ್ಞರು ಖಚಿತಪಡಿಸಿದ್ದಾರೆ. ಬಾವಲಿ ಗಳಲ್ಲಿರುವ ಈ ವೈರಸ್ ಕಾರಣಾಂತರಗಳಿಂದ ಚೀನಾ ದೇಶದ ಊಹಾನ್ ದಲ್ಲಿ ಮನುಷ್ಯರಲ್ಲಿ ಪ್ರಾರಂಭವಾದ ಈ ಬೇನೆ ವಿಶ್ವದಾದ್ಯಂತ ಹಬ್ಬಿತು. ತೀವ್ರತೆಯಿಂದ ಈ ಬೇನೆ ಹರಡಲು ಮನುಷ್ಯರಲ್ಲಿ ಈ ಸೂಕ್ಷ್ಮಣು ವನ್ನು ಎದುರಿಸುವ ರೋಗನಿರೋಧಕ ಶಕ್ತಿ ಇಲ್ಲದಿರುವುದು. ರೋಗದ ವಿರುದ್ಧ ರೋಗನಿರೋಧಕ ಶಕ್ತಿ ಉತ್ಪತ್ತಿ ಆಗಬೇಕಾದರೆ ಮನುಷ್ಯನಲ್ಲಿ ಆಯಾ ರೋಗದ ಪ್ರತಿಕಾಯಗಳು (Anti- Bodies) ದೇಹದಲ್ಲಿ ಉತ್ಪತ್ತಿಯಾಗಬೇಕು. ಇವುಗಳು ಉತ್ಪತ್ತಿಯಾಗಬೇಕಾದರೆ ರೋಗದ ಕ್ರಿಮಿಗಳು( ವೈರಸ್ ) ದೇಹವನ್ನು ಆಕ್ರಮಿಸಿದ ನಂತರವೇ ಸಾಧ್ಯ. ಗೊತ್ತಿರದ ಶತ್ರುವಿನ ಹಠಾತ್ ದಾಳಿಯಿಂದ, ಬೆಂಕಿಯು ಗಾಳಿಯ ಜೊತೆ ಸೇರಿಕೊಂಡಾಗ ಕಾಳ್ಗಿಚ್ಚಿನಂತೆ ಹಬ್ಬವಂತೆ ಕೋವಿಡ್ ರೋಗ ಜಗತ್ತಿನಾದ್ಯಂತ ಹಬ್ಬುತ್ತಿದೆ. ಈ ರೋಗ ಹಬ್ಬುವುದನ್ನು ತಡೆಯಬೇಕಾದರೆ ಜನರಲ್ಲಿ ಆ ರೋಗದ ವಿರುದ್ಧ ಪ್ರತಿಕಾಯಗಳು ತಯಾರಾಗಬೇಕು. ಶೇಕಡ 60%ರಷ್ಟು ಜನರಲ್ಲಿ ಈ ರೋಗದ ವಿರುದ್ಧ ಪ್ರತಿಕಾಯಗಳು ಇದ್ದಾಗ ಮಾತ್ರ ಈ ರೋಗವನ್ನು ಜನರಲ್ಲಿ ತೀವ್ರವಾಗಿ ಹರಡುವುದನ್ನು ತಡೆಯಲು ಸಾಧ್ಯವಾಗುವುದು. ಇದನ್ನೇ “ಹಿಂಡಿನ ಪ್ರತಿರಕ್ಷೆ “( Herd Immunity ) ಎಂದು ಕರೆಯುತ್ತಾರೆ. ಇದು ಉಂಟಾಗಬೇಕಾದರೆ ಹೆಚ್ಚು ಜನರು ಸೋಂಕಿತ ರಾಗಬೇಕು ಇಲ್ಲವೇ, ಬೇರೆ ಯಾವುದೇ ವಿಧಾನದ ಮೂಲಕ “ಪ್ರತಿ ರಕ್ಷೆ” ಉತ್ಪತ್ತಿಯಾಗುವಂತೆ ಮಾಡಬೇಕು. ಈ ವಿಧಾನಕ್ಕೆ “ಪ್ರತಿರಕ್ಷಣೆ ” ( Immunisation)ಎಂದು ಕರೆಯುತ್ತಾರೆ. ಇಮ್ಮುನೈಸೇಶನ್ ಪ್ರಕ್ರಿಯೆಯಲ್ಲಿ ವ್ಯಾಕ್ಸಿನ್ ಅಥವಾ ಲಸಿಕೆ ಅಥವಾ ಪ್ರತಿರೋಧಕ ಚುಚ್ಚುಮದ್ದನ್ನು ಕೊಡುತ್ತಾರೆ. ವ್ಯಾಕ್ಸಿನ್ ದಲ್ಲಿ ರೋಗವನ್ನುಂಟು ಮಾಡುವ ಸೂಕ್ಷ್ಮಜೀವಿಗಳನ್ನು ( ಸಜೀವ, ಶಕ್ತಿಗುಂದಿದ ) ಅಥವಾ ನಿರ್ಜೀವ ( Killed ) ಅಥವಾ ಸೂಕ್ಷ್ಮಜೀವಿಗಳ ಪ್ರೋಟೀನ್
( Antigen ) ಅನ್ನು ಚುಚ್ಚು ಮುದ್ದಿನ ಮೂಲಕ, ಬಾಯಿಯ ಮುಖಾಂತರ( ಪೋಲಿಯೋ ಲಸಿಕೆ ) ಅಥವಾ ಶ್ವಾಸದ ಮುಖಾಂತರ ದೇಹದಲ್ಲಿ ಸೇರಿಸುತ್ತಾರೆ. ದೇಹವು ಈ ಸೂಕ್ಷ್ಮಾಣುಗಳನ್ನು ಎದುರಿಸುವಂತಹ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಲಸಿಕೆಯನ್ನು ಕೊಟ್ಟ ನಂತರ ಆ ಸೂಕ್ಷ್ಮಣುವಿನಿಂದ ಆಗುವ ಕಾಯಿಲೆ ಪೂರ್ಣಪ್ರಮಾಣದಲ್ಲಿ ಆಗದೆ ಕೆಲವು ಜನರಲ್ಲಿ ಅಲ್ಪಮಟ್ಟಿಗೆ ಜ್ವರ, ಮೈಕೈನೋವು, ಅಸ್ವಸ್ಥತೆ 24 ರಿಂದ 48 ಗಂಟೆಗಳವರೆಗೆ ಉಂಟಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.ಲಸಿಕೆಯನ್ನು ಕೊಟ್ಟ ನಂತರ ಕೆಲವು ದಿನಗಳಲ್ಲಿ ಸೂಕ್ಷ್ಮಾಣುಗಳನ್ನು ಎದುರಿಸುವ ಪ್ರತಿಕಾಯಗಳು ದೇಹದಲ್ಲಿ ಉತ್ಪತ್ತಿಯಾಗುತ್ತವೆ. ಪೂರ್ಣಪ್ರಮಾಣದಲ್ಲಿ ರೋಗವನ್ನು ಎದುರಿಸುವಷ್ಟು ರೋಗನಿರೋಧಕ ಶಕ್ತಿ ಉಂಟಾಗಲು ಪೂರ್ವ ನಿರ್ಧಾರಿತ ಪ್ರಮಾಣದಲ್ಲಿ ಹಾಗೂ ಅವಧಿಯಲ್ಲಿ ಲಸಿಕೆಯನ್ನು ತೆಗೆದುಕೊಳ್ಳಬೇಕು. ಲಸಿಕೆಗಳ ಯಶಸ್ಸನ್ನು ಅರಿಯಬೇಕಾದರೆ ಮೈಲಿಬೇನೆ ನಿರ್ಮೂಲನೆ, ಪೋಲಿಯೋ ನಿರ್ಮೂಲನೆ ಹಾಗೂ ಇನ್ನೂ ಹಲವಾರು ರೋಗಗಳು ಚಿಕ್ಕಮಕ್ಕಳಲ್ಲಿ, ಹಾಗೂ ವಯಸ್ಕರಲ್ಲಿ ನೂರಕ್ಕೆ ನೂರರಷ್ಟು ಯಶಸ್ವಿಯಾದದ್ದು ಸರ್ವವಿಧಿತ ವಿರುತ್ತದೆ.
ಹಿಂಡಿನ ಪ್ರತಿ ರಕ್ಷೆಯನ್ನು ಕನಿಷ್ಠ ಶೇಕಡ 60ರಷ್ಟು ಜನರಲ್ಲಿ ಉಂಟು ಮಾಡುವ ಉದ್ದೇಶದಿಂದ ಜಗತ್ತಿನಾದ್ಯಂತ ವಿಜ್ಞಾನಿಗಳು ಹಗಲಿರುಳು ಶ್ರಮಿಸಿ ಹಲವಾರು ವಿಧದ ಲಸಿಕೆಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಲಸಿಕೆ ತಯಾರಿಕೆ ಸುಲಭವಾದದ್ದಲ್ಲ. ಲಸಿಕೆ ತಯಾರಿಕೆಯಲ್ಲಿ ಹಲವಾರು ಹಂತಗಳಿದ್ದು, ಹಾಗೂ ಅವುಗಳನ್ನು ನಿಯಂತ್ರಿಸುವ ಜಾಗತಿಕ ಸಂಸ್ಥೆಗಳ ಕಟ್ಟು ನಿಟ್ಟಾದ ಮಾರ್ಗದರ್ಶಿ ಸೂತ್ರಗಳಿಗೆ ಅನುಸಾರವಾಗಿ ಲಸಿಕೆಯನ್ನು ತಯಾರಿಸಲು ಹಲವಾರು ವರ್ಷಗಳೇ ಬೇಕು. ಸದ್ಯದ ತುರ್ತು ಪರಿಸ್ಥಿತಿಯನ್ನು ಅರಿತು ಹಲವು ಮಾರ್ಗದರ್ಶಿ ಷರತ್ತುಗಳನ್ನು ಸಡಿಲಿಸಲಾಗಿದೆ. ಲಸಿಕೆ ಲೋಕೋಪಯೋಗಕ್ಕೆ ಬಿಡುಗಡೆಯಾಗುವ ಮುನ್ನ ನಾಲ್ಕು ಹಂತದ ಕಟ್ಟುನಿಟ್ಟಾದ ಪರೀಕ್ಷೆಗೊಳಪಡಿಸಿದ ನಂತರವೇ ಸಾಧ್ಯ. ಮೊದಲನೇ ಹಂತದಲ್ಲಿ ಪ್ರಾಣಿಗಳಲ್ಲಿ ಲಸಿಕೆಯ ಅರ್ಹತೆ, ಹಾಗೂ ಪರಿಣಾಮಗಳು, ಮುಂದಿನ ಹಂತದಲ್ಲಿ ಲಸಿಕೆಯ ಪ್ರಮಾಣವನ್ನು ನಿರ್ಧರಿಸುತ್ತಾರೆ. ಮುಂದಿನ ಹಂತದಲ್ಲಿ ಲಸಿಕೆಯನ್ನು ಸುಮಾರು 250ರಿಂದ 500 ಜನರ ಲ್ಲಿ ಪರೀಕ್ಷೆಗೊಳಪಡಿಸಿ, ಪರಿಣಾಮಗಳನ್ನು ಅಭ್ಯಸಿಸಿ, ಒಳ್ಳೆಯ ಪರಿಣಾಮಗಳು ಇದ್ದರೆ ಮಾತ್ರ ಕೊನೆಯ ಹಂತಕ್ಕೆ ಪರವಾನಿಗೆ ಕೊಡಲಾಗುವುದು. ಈ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ನೊಂದಾಯಿಸಿಕೊಂಡು ಜಗತ್ತಿನ ವಿವಿಧ ಪ್ರದೇಶದ ಜನರನ್ನೊಳಗೊಂಡ ವಿಸ್ತೃತವಾದ
( ಸುಮಾರು 20,000 ರಿಂದ 40,000 ) ಜನರಿಗೆ ಲಸಿಕೆಯನ್ನು ಹಾಗೂ ಲಸಿಕೆ ಯಂತಹ ನಕಲು ಔಷಧಿ ಯೊಂದಿಗೆ ಹೋಲಿಕೆ ಮಾಡಿ ಹಲವಾರು ಕಠಿಣ ಪರೀಕ್ಷೆಗಳಿಗೆ ಒಳಪಡಿಸಿದ ನಂತರ, ಪ್ರತಿಶತ 60 ಕ್ಕಿಂತಲೂ ಹೆಚ್ಚು ಜನರಲ್ಲಿ ರೋಗವನ್ನು ತಡೆಯಲು ಯಶಸ್ವಿಯಾದ ನಂತರ , ಹಾಗೂ ಪ್ರತಿಕೂಲ ಪರಿಣಾಮಗಳನ್ನು ಅಭ್ಯಸಿಸಿದ ನಂತರವೇ ಜನರಲ್ಲಿ ಉಪಯೋಗಿಸಲು ಬಿಡುಗಡೆ ಮಾಡಲಾಗುತ್ತದೆ.
ಇನ್ನುಳಿದ ಸಮಯದಲ್ಲಾದರೆ ಲಸಿಕೆಯನ್ನು ಲೋಕೋಪಯೋಗಕ್ಕೆ ಬಿಡುಗಡೆ ಮಾಡಬೇಕಾದರೆ ಹಲವಾರು ವರ್ಷಗಳಷ್ಟು ( 1 ವರ್ಷದಿಂದ – 5 ವರ್ಷಗಳವರೆಗೆ ) ಸಮಯ ತಗಲುತ್ತದೆ. ಕೋವಿಡ್ ಸೃಷ್ಟಿಸಿರುವ ಹಾಹಾಕಾರ ದಿಂದ ಎಚ್ಚೆತ್ತುಕೊಂಡ ಜಾಗತಿಕ ಸಂಸ್ಥೆಗಳು ಈ ಎಲ್ಲ ಘಟ್ಟಗಳಲ್ಲಿ ತೊಡಗುವ ಸಮಯವನ್ನು ಮೊಟಕುಗೊಳಿಸಿ ಹಲವಾರು ಲಸಿಕೆಗಳಿಗೆ ತುರ್ತು ಪರವಾನಿಗೆಯನ್ನು ಕೊಡಲಾಗಿದೆ. ಪ್ರತಿ ಹಂತದಲ್ಲೂ ಸಮಯ ಹಾಗೂ ಪರೀಕ್ಷೆಗಳನ್ನು ಮೊಟುಕು ಗಳಿಸಿರುವುದರಿಂದ ಬಿಡುಗಡೆಯಾದ ಲಸಿಕೆ ಪೂರ್ಣಪ್ರಮಾಣದಲ್ಲಿ ಪರಿಪಕ್ವವಾಗದೇ ಇರುವ ಸಾಧ್ಯತೆಗಳಿವೆ. ಆದ್ದಾಗ್ಯೂ ಕೆಲವು ಲಸಿಕೆ ಗಳಿಗೆ ತುರ್ತು ಉಪಯೋಗದ ಅನುಮೋದನೆಯನ್ನು ಕೊಡಲಾಗಿದೆ. ನಮ್ಮ ದೇಶದಲ್ಲಿ ಇಲ್ಲಿಯವರೆಗೆ ಮೂರು ಲಸಿಕೆ ಗಳಿಗೆ ತುರ್ತುಉಪ ಯೋಗದ ಅನುಮೋದನೆಯನ್ನು ನೀಡಲಾಗಿದೆ. ಅವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸಲಾಗುವುದು
( ಮುಂದುವರಿಯುವುದು )
ಲೇಖಕರು,
ಡಾ. ಎ. ಎ. ಪಾಂಗಿ.
ಎಮ್. ಡಿ.,
ಮುಖ್ಯ ವೈದ್ಯರು, ಅನ್ನಪೂರ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
ಅಥಣಿ 591304
ದೂರವಾಣಿ 9448493900
ಇ ಮೇಲ್ draapangi@mail.com