ಬೆಳಗಾವಿ, ಸುವರ್ಣಸೌಧ (ಕರ್ನಾಟಕ ವಾರ್ತೆ)ಡಿ.22; ಕೋವಿಡ್ ವೈರಾಣು ಪುನಃ ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ತೀವ್ರವಾಗಿ ಹಬ್ಬುತ್ತಿದ್ದು, ಮುಂಜಾಗ್ರತೆಯಾಗಿ ರಾಜ್ಯದಲ್ಲಿ ಕೊರೋನಾ ತಡೆಗಟ್ಟಲು ಮುಖ್ಯಮಂತ್ರಿಗಳು ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ವಿಡಿಯೋ ಸಂವಾದ ನಡೆಸಿ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ವಿಧಾನಸಭೆಯಲ್ಲಿಂದು ಸದನಕ್ಕೆ ಮಾಹಿತಿ ನೀಡಿದ ಸಚಿವ ಡಾ.ಕೆ.ಸುಧಾಕರ್ ಅವರು, ಸಭೆಯಲ್ಲಿ ಚರ್ಚಿಸಿದಂತೆ ಎಂಟು ವಿಷಯಗಳನ್ನು ನಿರ್ಧರಿಸಲಾಗಿದೆ. ಟೆಸ್ಟಿಂಗ್ ಪ್ರಮಾಣ ಹೆಚ್ಚಿಸುವುದು,ಎಲ್ಲಾ ತೀವ್ರ,ನೆಗಡಿ,ಕೆಮ್ಮು,ಜ್ವರ (ಐಎಲ್‍ಐ/ಸಾರಿ) ಪ್ರಕರಣಗಳನ್ನು ಪರೀಕ್ಷೆ ಮಾಡುವುದು,ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ ಆಗಮಿಸುವ ಪ್ರಯಾಣಿಕರಲ್ಲಿ ಶೇ.2ರಷ್ಟು ಪ್ರಯಾಣಿಕರನ್ನು ರ್ಯಾಂಡಮ್ ಟೆಸ್ಟಿಂಗ್ ಮಾಡುವುದು, ತಾಲೂಕು,ಜಿಲ್ಲಾ ಆಸ್ಪತ್ರೆಗಳಲ್ಲಿ,ಖಾಸಗಿ ಆಸ್ಪತ್ರೆಗಳಲ್ಲಿ ಕೆಲ ಹಾಸಿಗೆಗಳನ್ನು ಮೀಸಲಿಡುವುದು,ಎಲ್ಲರಿಗೂ ಬೂಸ್ಟರ್ ಡೋಸ್ ಕಡ್ಡಾಯಗೊಳಿಸುವುದು, ಗ್ರಾಮ ಮಟ್ಟದಲ್ಲಿ ವಿಶೇಷ ಕ್ಯಾಂಪುಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.ಕೇಂದ್ರ ಸರ್ಕಾರದ ಜೊತೆ ನೇರ ಸಂಪರ್ಕದಲ್ಲಿದ್ದು ಲಸಿಕಾಕರಣ ಹೆಚ್ಚಿಸುವುದು ಸೇರಿದಂತೆ ಎಂಟು ವಿಷಯಗಳನ್ನು ಅನುಸರಿಸುವ ಮೂಲಕ ಈ ಹಿಂದಿನ ಮೂರು ಅಲೆಗಳನ್ನು ಎದುರಿಸಿದಂತೆ ಸಮರ್ಥ ನಿರ್ವಹಣೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸದನಕ್ಕೆ ತಿಳಿಸಿದರು.