ಚೀನಾದಲ್ಲಿ ಕಾಣಿಸಿಕೊಂಡಿರುವುದು ಹೊಸ ತಳಿಯ ‘ನೊವೆಲ್ ಕೊರೋನರಿ ವೈರಸ್’ (2019–nCoV). ಬಹುಮಟ್ಟಿಗೆ ಇದು ‘ಸಾರ್ಸ್’ನ ಸ್ವರೂಪದ್ದೇ ಆಗಿದೆ. ಕೊರೋನಾ ವೈರಸ್ (CoV) ಸಾಮಾನ್ಯವಾಗಿ ನೆಗಡಿ ಹಾಗೂ ಶ್ವಾಸಕೋಶದ ಸೋಂಕಿಗೆ ಕಾರಣವಾಗುವ ವೈರಸ್. ಆದರೆ ಈಗ ಸಾರ್ಸ್ನಷ್ಟು ಅಪಾಯಕಾರಿಯಲ್ಲ ಎನ್ನಲಾಗಿದೆ. ಸೋಂಕಿಗೆ ಒಳಗಾದವರಲ್ಲಿ ಜ್ವರ, ಕೆಮ್ಮು, ಉಸಿರಾಡಲು ಕಷ್ಟವಾಗುವುದೇ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಇನ್ನಷ್ಟು ತೀವ್ರವಾದರೆ, ಸೋಂಕಿತರು ನ್ಯುಮೋನಿಯಾಕ್ಕೆ ಒಳಗಾಗುತ್ತಾರೆ, ಮೂತ್ರಪಿಂಡ ವಿಫಲವಾಗಬಹುದು, ಅಷ್ಟೇ ಅಲ್ಲ ಈ ವೈರಸ್ ಪ್ರಾಣಕ್ಕೂ ಕುತ್ತು ತರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಪತ್ತೆ ಯಾವಾಗ?
ಶ್ವಾಸಕೋಶದ ಮೇಲೆ ಈ ಅತ್ಯಧಿಕ ಒತ್ತಡ ಹೇರುವ ಈ ವೈರಸ್ ವೈರಸ್, ಚೀನಾದಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ‘ವುಹಾನ್ ನಗರದಲ್ಲಿ ಕೆಲವರು ನ್ಯುಮೋನಿಯಾಕ್ಕೆ ಒಳಗಾಗಿದ್ದು, ಅದರ ಕಾರಣಗಳು ನಿಗೂಢವಾಗಿವೆ’ ಎಂಬ ಮಾಹಿತಿಯನ್ನು ಚೀನಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಕಚೇರಿಗೆ ಅಲ್ಲಿನ ಅಧಿಕಾರಿಗಳು 2019ರ ಡಿಸೆಂಬರ್ 31ರಂದು ನೀಡಿದ್ದರು.
ಈ ರೋಗಕ್ಕೆ ‘ನೊವೆಲ್ ಕೊರೋನಾ ವೈರಸ್’ ಕಾರಣ ಎಂಬುದನ್ನು ಜನವರಿ 7ರಂದು ಸಂಶೋಧನೆ ಮತ್ತು ನಿರಂತರ ಅಧ್ಯಯನದ ಮೂಲಕ ಪತ್ತೆ ಮಾಡಿದ್ದರು. ಇದಾದ ಬಳಿಕ ಈ ರೋಗವನ್ನು ತಡೆಯಲು ಯಾವರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆಯು ವಿವಿಧ ರಾಷ್ಟ್ರಗಳಿಗೆ ಸೂಚಿಸಿತ್ತು.‘ಅಂತರರಾಷ್ಟ್ರೀಯ ಆರೋಗ್ಯ ನಿಯಮಾವಳಿಗೆ ಅನುಗುಣವಾಗಿ ಎಲ್ಲಾ ರಾಷ್ಟ್ರಗಳೂ ತುರ್ತು ಸನ್ನಿವೇಶಗಳನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ಸಂಸ್ಥೆ ಸಲಹೆ ನೀಡಿದೆ.
ಮೂಡಿದ ಭಯ:
ಈ ಸೋಂಕಿಗೆ ಒಳಗಾಗಿ ಒಂಬತ್ತು
ಮಂದಿ ಸತ್ತಿರುವುದು ಮತ್ತು 400ಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿರುವುದು ಚೀನಾದಲ್ಲಿ ಮಾತ್ರವಲ್ಲದೆ, ಇತರ ರಾಷ್ಟ್ರಗಳಲ್ಲೂ ಭಯ ಮೂಡಿಸಿದೆ. ಥಾಯ್ಲೆಂಡ್, ಜಪಾನ್ ಹಾಗೂ ದಕ್ಷಿಣ ಕೊರಿಯಾದಲ್ಲೂ ಸೋಂಕಿತರು ಪತ್ತೆಯಾಗಿದ್ದು ಚಿಂತೆಗೆ ಕಾರಣವಾಗಿದೆ.
‘ಚೀನಾಕ್ಕೆ ಹೋಗುವಾಗ ಎಚ್ಚರ
ದಿಂದಿರಿ’ ಎಂದು ಅನೇಕ ರಾಷ್ಟ್ರಗಳು ತಮ್ಮ ದೇಶದ ನಾಗರಿಕರಿಗೆ ಸಲಹೆ ನೀಡಿವೆ. ಭಾರತ ಸೇರಿದಂತೆ ವಿವಿಧ
ರಾಷ್ಟ್ರಗಳ ವಿಮಾನ ನಿಲ್ದಾಣಗಳಲ್ಲಿ
ಚೀನಾದಿಂದ ಬರುವ ಪ್ರಯಾಣಿಕರ ತಪಾಸಣಾ ವ್ಯವಸ್ಥೆ ಮಾಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಸಭೆ ನಡೆಸಿ ಈ ಸೋಂಕಿನ ಬಗ್ಗೆ ಚರ್ಚೆ ನಡೆಸಿದೆ.