ಅತ್ಯಾಧುನಿಕ ಕ್ಯಾನ್ಸರ ಆಸ್ಪತೆ ಫೆಬ್ರುವರಿಯಲ್ಲಿ ಜನಸೇವೆಗೆ ಅರ್ಪಣೆ: ಡಾ. ಕೋರೆ

ಉತ್ತರ ಕರ್ನಾಟಕದಲ್ಲಿ ಕ್ಯಾನ್ಸರ ರೋಗಿಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಚಿಕಿತ್ಸೆಗಾಗಿ ಅಲೆದಾಡುತ್ತ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಸಾವಿನಂಚಿಗೆ ತೆರಳುತ್ತಿದ್ದಾರೆ. ಆದ್ದರಿಂದ ಕ್ಯಾನ್ಸರ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಮುಂಬರುವ 2021ರ ಫೆಬ್ರುವರಿಯಲ್ಲಿ ಕರ್ನಾಟಕದಲ್ಲಿಯೇ ಪ್ರಥಮವಾಗಿ ಸುಸಜ್ಜಿತ ಹಾಗೂ ಅತ್ಯಾಧುನಿಕ ವೈದ್ಯಕೀಯ ಸಲಕರಣೆಯುಳ್ಳ ಕ್ಯಾನ್ಸರ ಆಸ್ಪತ್ರೆಯನ್ನು ಜನಸೇವೆಗೆ ಅರ್ಪಿಸಲಾಗುವದು ಎಂದು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರಿಂದಿಲ್ಲಿ ಹೇಳಿದರು.

ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹಿಂಬದಿಯಲ್ಲಿ ನಿರ್ಮಿಸಲಾಗುತ್ತಿರುವ ಆಸ್ಪತ್ರೆಯ ಕಟ್ಟಡದ ಕಾಮಗಾರಿ ಪ್ರಗತಿ ಹಾಗೂ ಗುಣಮಟ್ಟವನ್ನು ಪರಿಶೀಲಿಸಿ ಮಾತನಾಡಿದರು, 200 ಕೋ ರೂ.ಗಳ ವೆಚ್ಚದಲ್ಲಿ 200 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದ್ದು,ಕಟ್ಟಡದ ಕಾಮಗಾರಿ ಇದೇ ಡಿಸೆಂಬರ ವೇಳೆಗೆ ಪೂರ್ಣಗೊಳ್ಳಲಿದ್ದು, ಮುಂದಿನ ಫೆಬ್ರುವರಿ ವೇಳೆ ಸಂಪುರ್ಣ ಕಾಮಗಾರಿ ಮುಗಿಸಿ, ವೈದ್ಯಕೀಯ ಸಲಕರಣೆಗಳನ್ನು ಜೋಡಿಸಿ ಜನಸೇವೆಗೆ ಅರ್ಪಿಸಲಾಗುವದು ಎಂದು ತಿಳಿಸಿದರು.

ಈಗಾಗಲೇ ಪ್ರತಿದಿನ 40ಕ್ಕೂ ಅಧಿಕ ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಕ್ಯಾನ್ಸರ ಸಂಬಂಧಿತ ಎಲ್ಲ ರೀತಿಯ ಚಿಕಿತ್ಸೆಯನ್ನು ನೀಡಲಾಗುತ್ತದೆ. 100ಕ್ಕೂ ಅಧಿಕ ರೋಗಿಗಳಿಗೆ ಕಿಮೋಥೆರಪಿ ನೀಡಬಹುದು. ಕ್ಯಾನ್ಸರ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವದರೊಂದಿಗೆ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯೂ ಆಗಲಿದೆ. ಅದಕ್ಕಾಗಿ ಉಕ ಗೋವಾ ಹಾಗೂ ದ. ಮಹಾರಾಷ್ಟ್ರ ಭಾಗದಲ್ಲಿಯೇ ಪ್ರಥಮವಾಗಿ ಬೆಳಗಾವಿಯಲ್ಲಿ ಅತ್ಯಾಧುನಿಕವಾದ ವೈದ್ಯಕೀಯ ಯಂತ್ರೋಪಕರಣಗಳನ್ನು ಅಳವಡಿಸಿ ರೋಗಿಗಳ ಆರೈಕೆಗೆ ಅರ್ಪಿಸಲಾಗುತ್ತದೆ ಎಂದು ವಿವರಿಸಿದರು.

ಸದ್ಯಕ್ಕೆ ರೆಡಿಯೋಥೆರಪಿ ನೀಡಲು 3 ಯಂತ್ರೋಪಕರಣ ಹಾಗೂ ಶಸ್ತ್ರಚಿಕಿತ್ಸೆಗೆ ಅಗ್ಯತವಿರುವ ಅತ್ಯಾಧುನಿಕ ಕೊಠಡಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಪ್ರಸಕ್ತ ಪ್ರತಿ ತಿಂಗಳು ಸುಮಾರು 130ಕ್ಕೂ ಅಧಿಕ ರೋಗಿಗಳು ಹೊಸದಾಗಿ ಕಂಡು ಬರುತ್ತಿದ್ದಾರೆ. ಅವರಿಗೆ ಒಂದೇ ಸೂರಿನಡಿ ಕ್ಯಾನ್ಸರ ಸಂಬಂಧಿತ ಎಲ್ಲ ವಿಧವಾದ ಚಿಕಿತ್ಸೆ ನೀಡಲು ಈ ಆಸ್ಪತ್ರೆಯು ಸಹಕಾರಿಯಾಗಲಿದೆ ಎಂದ ಅವರು, ಕ್ಯಾನ್ಸರ ರೋಗಕ್ಕೆ ಸೂಕ್ತ ಚಿಕಿತ್ಸೆ ದೊರೆಯಲಿಲ್ಲ ಎನ್ನುವ ಕೊರಗು ಉಳಿಯಬಾರದು. ಅದಕ್ಕಾಗಿ ಈ ಭಾಗದಲ್ಲಿ ಕ್ಯಾನ್ಸರ ಚಿಕಿತ್ಸಾ ಬೃಹತ ಆಸ್ಪತ್ರೆ ನಿರ್ಮಿಸಲಾಗುತ್ತದೆ. ಈಗಾಗಲೇ ಶೇ. 50ರಷ್ಟು ಕಾಮಗಾರಿ ಮುಗಿದಿದ್ದು, ಇನ್ನುಳಿದ ಕಾಮಗಾರಿಯನ್ನು ಬೇಗ ಮುಗಿಸಬೇಕೆಂದು ಗುತ್ತಿದಾರರಿಗೆ ಸೂಚಿಸಿದರು.

ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ. ವಿ ಎಸ್ ಸಾಧುನವರ, ಶಂಕರಣ್ಣ ಮುನವಳ್ಳಿ, ಎಸ್ ಸಿ ಮೆಟಗುಡ್, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಕಾಹೆರ ಕುಲಪತಿ ಡಾ. ವಿವೇಕ ಸಾವೋಜಿ, ವೈಜಾಗನ ಟಾಟಾ ಮೆಮೋರಿಯಲ್ ಕ್ಯಾನ್ಸರ ಆಸ್ಪತ್ರೆಯ ನಿರ್ದೇಶಕರಾದ ಡಾ. ಉಮೇಶ ಮಹಾಂತಶೆಟ್ಟಿ, ಡಾ. ಕುಮಾರ ವಿಂಚುರಕರ, ಡಾ. ಇಮ್ತಿಯಾಜ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here