ಕೊರೊನಾ ಪರಿಸ್ಥಿತಿಯಲ್ಲಿ ಕ್ಯಾನ್ಸರ ಪೀಡಿತ ಮಕ್ಕಳ ತೊಂದರೆ ನೀಗಿಸಲು ಆಸ್ಪತ್ರೆಗಳು ಕಂಕಣಬದ್ದವಾಗಿ ನಿಂತಿವೆ. ಯಾವುದೇ ಮಗುವು ಅರಳುವ ಮೊದಲೇ ಕ್ಯಾನ್ಸರನಿಂದ ಕಮರಬಾರದು ಎಂದು ಅನೇಕ ತಜ್ಞವೈದ್ಯರು ಹಗಲಿರುಳು ಅವರ ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದಾರೆ. ವೈದ್ಯೋಹರಿ ನಾರಾಯಣ ಎನ್ನುವಂತೆ ಕ್ಯಾನ್ಸರ ಪೀಡಿತ ಮಕ್ಕಳ ಬಾಳಿನ ಬೆಳಕಾಗಿ ಸೇವೆಗೈಯುತ್ತಿದ್ದಾರೆ. ವಿಶ್ವದಲ್ಲಿ ಪ್ರತಿವರ್ಷ ಸುಮಾರು 3 ಲಕ್ಷಕ್ಕೂ ಅಧಿಕ ಹಾಗೂ ಭಾರತದಲ್ಲಿ 75 ಸಾವಿರಕ್ಕೂ ಅಧಿಕ ಮಕ್ಕಳು ಕ್ಯಾನ್ಸರ ರೋಗದಿಂದ ಬ¼ಲುತ್ತಿರುವದು ಕಂಡು ಬರುತ್ತಿದೆ. ಶೀಘ್ರವಾಗಿ ರೋಗ ಪತ್ತೆಹಚ್ಚಿ ಅವರಿಗೆ ಚಿಕಿತ್ಸೆ ನೀಡುವದರಿಂದ ಅವರನ್ನು ಪ್ರಾಣಾಪಾಯದಿಂದ ಕಾಪಾಡಲು ಸಾಧ್ಯ ಎಂದು ಭರವಸೆಯ ಬೆಳಕನ್ನು ಮೂಡಿಸುತ್ತಾರೆ ಕೆಎಲ್ಇ ಸಂಸ್ಥೆ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಚಿಕ್ಕಮಕ್ಕಳ ಕ್ಯಾನ್ಸರ ತಜ್ಞವೈದ್ಯರಾದ ಡಾ. ಅಭಿಲಾಷಾ ಸಂಪಗಾರ.
ಕ್ಯಾನ್ಸರ ಪೀಡಿತ ಮಗುವಿಗೆ ಶೀಘ್ರವೇ ಚಿಕಿತ್ಸೆ ಪ್ರಾರಂಭಿಸಿದಾಗ ಶೇ. 80ರಷ್ಟು ಗುಣಮುಖರಾಗುವ ಸಾಧ್ಯತೆಯು ಅಧಿಕವಾಗಿದೆ. ಆದರೆ ಇದು ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ಸಾಧ್ಯ. ಭಾರತದಲ್ಲಿ ಶೇ. 50ಕ್ಕಿಂತ ಕಡಿಮೆ. ಗುಣಮುಖ ಪ್ರಮಾಣ ಕಡಿಮೆಯಾಗಲು ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ರೋಗಪತ್ತೆಯಲ್ಲಿ ವಿಳಂಬ, ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗದೇ ಅರ್ಧದಲ್ಲಿಯೇ ಚಿಕಿತ್ಸೆಯನ್ನು ಬಿಟ್ಟುಬಿಡುವದು. ಇದರಿಂದ ಮಕ್ಕಳು ತೀವ್ರ ತೊಂದರೆ ಅನುಭವಿಸಿ ಸಾವೂ ಕೂಡ ಸಂಭವಿಸುತ್ತದೆ. ಆದ್ದರಿಂದ ಮಕ್ಕಳನ್ನು ಪ್ರಾಣಾಪಾಯದಿಂದ ಪಾರು ಮಾಡಲು ಪ್ರಾಥಮಿಕ ಆರೋಗ್ಯ ಕೇಂದ್ರದಿಂದಲೇ ಇದರ ಕುರಿತು ಜಾಗೃತಿಯನ್ನು ಮೂಡಿಸಬೇಕು. ಈಗಾಗಳೆ ಗ್ರಾಮೀಣ ಪ್ರದೇಶದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದು ಅವರ ಮೂಲಕ ಕ್ಯಾನ್ಸರ ಕುರಿತು ಮಕ್ಕಳು ಹಾಗೂ ಪಾಲಕರಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು.
ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ:
ರಕ್ತ ಕ್ಯಾನ್ಸರ, ದುಗ್ಧರಸ(ಟಾನ್ಸೆಲ್ಸ್) ಗ್ರಂಥಿಗಳು, ಮೆದುಳಿನಲ್ಲಿ ಗಡ್ಡೆ, ಎಲುವಿನ ಕ್ಯಾನ್ಸರಗಳಿವೆ.
ಗುಣಲಕ್ಷಣಗಳು:
ಕ್ಯಾನ್ಸರ ರೋಗದಿಂದ ಬಳಲುತ್ತಿರುವ ಮಕ್ಕಳಲ್ಲಿ ಹಲವು ಗುಣಲಕ್ಷನಗಳು ಕಂಡುಬರುತ್ತವೆ. ಶೇ. 85ರಷ್ಟು ಗುಣಲಕ್ಷಣಗಳು ಸಾಮಾನ್ಯವಾಗಿವೆ.
1. ಬಹುದಿನಗಳ ಕಾಲ ಜ್ವರ
2. ಹೊಟ್ಟೆಯಲ್ಲಿ ಗಂಟು, ದೇಹದ ಯಾವುದೇ ಭಾಗದಲ್ಲಿ ಭಾವು ಉಂಟಾಗುವದು.
3. ಬಲಹೀನತೆ ಉಂಟಾಗುವದು. ತೂಕ ಕಡಿಮೆಯಾಗುವದು.
4. ನಿರಂತರವಾದ ಮೂಳೆ ನೋವು
5. ತಲೆನೋವು ಮತ್ತು ವಾಂತಿ
6. ರಕ್ತಸ್ರಾವ
7. ಕಣ್ಣು ಮಂಜು ಮತ್ತು ಕಣ್ಣಿನಲ್ಲಿ ಬಿಳಿ ಚುಕ್ಕೆ
ಒಂದು ಸಾರಿ ಮಕ್ಕಳಲ್ಲಿ ಕ್ಯಾನ್ಸರ ರೋಗವು ಕಂಡು ಬಂದರೆ ಅವರಿಗೆ ವಿಶೇಷ ಚಿಕಿತ್ಸಾ ಕೆಂದ್ರಕ್ಕೆ ಕಳುಹಿಸಿಕೊಡಬೇಕು. ಶೀಘ್ರವೇ ಚಿಕಿತ್ಸೆ ಪ್ರಾರಂಭವಾಗುವದರಿಂದ ಮಕ್ಕಳಲ್ಲಿ ಬಹುತೀಕ್ಷ್ಣವಾದ ಫಲಿತಾಂಶವನ್ನು ಕಾಣಬಹುದಾಗಿದೆ.
ಕ್ಯಾನ್ಸರ ರೋಗದ ಕುರಿತಾಗಿ ಈಗಲೂ ಗ್ರಾಮೀಣ ಪ್ರದೇಶದಲ್ಲಿ ಹಲವು ಮೂಡನಂಬಿಕೆಗಳಿವೆ. ಅವುಗಳನ್ನು ಹೋಗಲಾಡಿಸಿ ರೋಗಪೀಡಿತ ಮಕ್ಕಳಿಗೆ ಚಿಕಿತ್ಸೆಯನ್ನು ನೀಡಬೇಕು. ಆದರೂ ಕೂಡ ಜನರಲ್ಲಿ ಅನೇಕ ಪ್ರಶ್ನೆಗಳು ಉದ್ಭವವಾಗುತ್ತವೆ. ಅವುಗಳಿಗೆ ಉತ್ತರ ಇಲ್ಲಿದೆ.
ಮಕ್ಕಳಲ್ಲಿ ಕ್ಯಾನ್ಸರ ಬರುವದು ಅತೀ ವಿರಳ. ನವಜಾತ ಶಿಶುವಿನಿಂದ ಹಿಡಿದು ಯಾವುದೇ ವಯಸ್ಸಿನಲ್ಲಿ ಕಂಡುಬರಬಹುದು. ಕೆಲವು ಕ್ಯಾನ್ಸರ ಹೊರತುಪಡಿಸಿ ಎಲ್ಲ ರೋಗಗಳು ಅನುವಂಶಿಕವಲ್ಲ. ಸೊಂಕುರಹಿತ ರೋಗ. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಖಿಮೋಥೆರಪಿ ವಿಶೇಷವಾದ ಔಷಧಿಗುಣ ಹೊಂದಿರುವದರಿಂದ ಕ್ಯಾನ್ಸರ ಜೀವಕೋಶಗಳನ್ನು ನಾಶಪಡಿಸುತ್ತದೆ. ಚಿಕಿತ್ಸೆಯನ್ನು ತಡೆದುಕೊಳ್ಳುವ ಶಕ್ತಿ ಮಕ್ಕಳಲ್ಲಿ ಅಧಿಕವಾಗಿದೆ. ಪ್ರಥಮ ಹಂತದಲ್ಲಿ ಚಿಕಿತ್ಸೆಗೊಳ್ಪಟ್ಟಲ್ಲಿ ಶೇ.80ರಷ್ಟು ರೋಗವನ್ನು ಗುಣಪಡಿಸಬಹುದು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಕ್ಯಾನ್ಸರ ರೋಗಕ್ಕೆ ಚಿಕಿತ್ಸೆ ನೀಡಲು ಸರಕಾರದ ಅನೇಕ ಯೋಜನೆಗಳು ಇವೆ. ಆರ್ಥಿಕವಾಗಿ ಹಿಂದುಳಿದವರಿಗಾಗಿ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಧನಸಹಾಯ ಒದಗಿಸುತ್ತಿವೆ. ಅದರಡಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. 200 ಹಾಸಿಗೆಗಳ ಕ್ಯಾನ್ಸರ ಆಸ್ಪತ್ರೆಯು ಶೀಘ್ರದಲ್ಲಿಯೇ ತಲೆ ಎತ್ತಲಿದೆ. ಈಗಾಗಲೇ ಶೇ. 80ರಷ್ಟು ಕಾಮಗಾರಿ ಮುಗಿದಿದ್ದು, ಮುಂದಿನ ವರ್ಷ ಜನಸೇವೆಗೆ ಅರ್ಪಣೆಗೊಳ್ಳಲಿದೆ. ಈ ಭಾಗದಲ್ಲಿ ಕ್ಯಾನ್ಸರ ಆಸ್ಪತ್ರೆಯ ಕೊರತೆ ನೀಗಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ತಿಳಿಸಿದ್ದಾರೆ.
Dr Abhilasha Sampagar Peadiatric Oncologist KLES Dr Prabhakar Kore Hospital & MRC Belagavi
ನಿರೂಪಣೆ: ಬಸವರಾಜ ಸೊಂಟನವರ