ಬೆಂಗಳೂರು: ಕ್ಯಾನ್ಸರ್ ಪತ್ತೆ ಮಾಡುವುದು ಅತ್ಯಂತ ಕಠಿಣ ಮತ್ತು ಹೆಚ್ಚು ಸಮಯ ತಗೆದುಕೊಳ್ಳುವ ಪ್ರಕ್ರಿಯೆ. ಆದರೆ, ಮೆಡಿಕಲ್ ಎಂಜಿನಿಯರಿಂಗ್ ಮತ್ತು ಡಿಜಿಟಲ್ ತಂತ್ರಜ್ಞಾನದಿಂದ ಆ ಪ್ರಕ್ರಿಯೆ ಈಗ ಮತ್ತಷ್ಟು ಸರಳವಾಗಿದೆ. ಕೆಲವು ಹನಿಗಳಷ್ಟು ಜೊಲ್ಲು ಬಳಸಿ ಕ್ಯಾನ್ಸರ್ ಪತ್ತೆ ಮಾಡಬಹುದಾಗಿದೆ.
ಕೇವಲ ಜೊಲ್ಲು ಮಾತ್ರವಲ್ಲ ದೇಹದ ಹಲವು ಅಂಗಾಂಗಗಳ ದ್ರವವನ್ನು ಬಳಸಿ ಆಯಾ ಅಂಗಾಂಗಗಳು ಕ್ಯಾನ್ಸರ್ ಪೀಡಿತವಾಗಲಿವೆಯೇ ಎಂಬುದನ್ನೂ ನಿಖರವಾಗಿ ಪತ್ತೆ ಮಾಡಬಹುದಾಗಿದೆ. ಕೆಲವು ರೀತಿಯ ಕ್ಯಾನ್ಸರ್ಗಳ ರೋಗ ಲಕ್ಷಣಗಳು ತಡವಾಗಿ ಕಾಣಿಸಿಕೊಳ್ಳುತ್ತವೆ. ಆ ವೇಳೆಗಾಗಲೇ ಕ್ಯಾನ್ಸರ್ ನಿಯಂತ್ರಣಕ್ಕೆ ಸಿಗದ ಹಂತವನ್ನು ತಲುಪಿರುತ್ತದೆ. ಈ ಪರೀಕ್ಷೆಯಿಂದ ಅದನ್ನು ತಪ್ಪಿಸಬಹುದಾಗಿದೆ.
‘ಹೊಸ ವಿಧಾನದಿಂದಾಗಿ ವಂಶವಾಹಿ ಮೂಲಕ ಬರುವ ಕ್ಯಾನ್ಸರ್ ಅನ್ನು ಬೇಗನೆ ಪತ್ತೆ ಮಾಡಿ; ವ್ಯಕ್ತಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ಆರಂಭಿಸಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಸ್ಟ್ರಾಂಡ್ ಲೈಫ್ ಸೈನ್ಸಸ್ನ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ.ವಂಶಿ ವೀರಮಚೆನೇನಿ. ಬೆಂಗಳೂರು ತಾಂತ್ರಿಕ ಶೃಂಗಸಭೆಯಲ್ಲಿ ಅವರು ಈ ಕುರಿತು ಸ್ವಾರಸ್ಯಕರ ಮಾಹಿತಿ ಹಂಚಿಕೊಂಡರು.
ಕೆಲವು ಬಗೆಯ ಕ್ಯಾನ್ಸರ್ಗಳು ವಂಶವಾಹಿಯಾಗಿ ಬಂದರೆ, ಇನ್ನು ಕೆಲವು ಬಗೆಯ ಕ್ಯಾನ್ಸರ್ಗಳು ಬೇರೆ ಕಾರಣಗಳಿಂದ ಬರುತ್ತವೆ. ವಂಶವಾಹಿಯಿಂದ ಬರುವ ಕ್ಯಾನ್ಸರ್ಗಳನ್ನು ಪತ್ತೆ ಮಾಡಿದರೆ, ಆ ಕುಟುಂಬದಲ್ಲಿ ಬೇರೆ ಸದಸ್ಯರಿಗೆ ಭವಿಷ್ಯದಲ್ಲಿ ಬಾಧಿಸುತ್ತದೆಯೇ ಎಂಬುದನ್ನು ಮೊದಲೇ ಕಂಡುಕೊಳ್ಳಬಹುದು ಎಂದರು.
ವ್ಯಕ್ತಿಯ ದೇಹದ ಕೋಶಗಳಲ್ಲಿ ವಂಶವಾಹಿ ರೂಪಾಂತರಗೊಳ್ಳುವುದು(ಜೀನ್ ಮ್ಯುಟೇಷನ್) ಕ್ಯಾನ್ಸರ್ಗೆ ಕಾರಣವಾಗುತ್ತದೆ. ಶೇ 5 ರಿಂದ 10 ರಷ್ಟು ಕ್ಯಾನ್ಸರ್ ಪ್ರಕರಣಗಳಿಗೆ ವಂಶವಾಹಿಯೇ ಕಾರಣ. ದೇಹದಲ್ಲಿರುವ ಹಲವು ವಂಶವಾಹಿಗಳು ರೂಪಾಂತರಕ್ಕೆ ಒಳಗಾಗಿ ಕ್ಯಾನ್ಸರ್ಗೆ ಕಾರಣವಾಗುತ್ತವೆ. ಅದರಲ್ಲೂ ವಿಶೇಷವಾಗಿ ಬಿಆರ್ಸಿಎ1 ಮತ್ತು ಬಿಆರ್ಸಿಎ2 ವಂಶವಾಹಿಗಳ ರೂಪಾಂತರದಿಂದ ಅಂಗಾಂಗಗಳ ಸಾಮಾನ್ಯ ಕಾರ್ಯ ನಿರ್ವಹಣೆಗೂ ಬಾಧಕವಾದಾಗ ಸ್ತನ, ಅಂಡಾಶಯ, ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ಅವರು ಹೇಳಿದರು.