ಸ್ತನಗಳು ಮಹಿಳೆಯ ಹೆಮ್ಮೆಯ ಹೆಗ್ಗುರುತು, ತಾಯ್ತನದ ಮುಖ್ಯ ಸಾಧನ ಎಂದು ಗುರುತಿಸಲ್ಪಡುತ್ತವೆ. ವೈದ್ಯಶಾಸ್ತ್ರದ ಪ್ರಕಾರ ಸ್ತನ ಎನ್ನುವುದು ಸಂಕೀರ್ಣ ರಚನೆಯುಳ್ಳ ಒಂದು ದೈಹಿಕ ಅಂಗ. ಬೇರೆ ಅಂಗಗಳಂತೆ ಇದಕ್ಕೂ ನಿರ್ದಿಷ್ಟ ಕರ್ತವ್ಯಗಳಿವೆ. ಹಾಗೆಯೇ ಅದರದೇ ಆದ ಸಮಸ್ಯೆಗಳಿವೆ. ಭಾರತದ ಪ್ರತಿ ಇಪ್ಪತ್ತೆರಡು ಮಹಿಳೆಯರ ಪೈಕಿ ಓರ್ವ ಗ್ರಾಮೀಣ ಹಾಗೂ ಪ್ರತಿ ಎಂಟು ಮಹಿಳೆಯರಲ್ಲಿ ಓರ್ವ ನಗರ ಮಹಿಳೆಯು ಸ್ತನ ಕ್ಯಾನ್ಸರನಿಂದ ಬಳಲುತ್ತಿರುತ್ತಾಳೆ.
ಮಹಿಳೆಯರಲ್ಲಿ ಸಾಮಾನ್ಯವಾಗಿ ಸ್ತನ ಕ್ಯಾನ್ಸರ ಕಂಡುಬರುತ್ತಿದ್ದು, ಶೇ. 14ರಷ್ಟು ಭಾರತೀಯ ಮಹಿಳೆಯರಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರಲ್ಲಿ ಪತ್ತೆಯಾಗುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಮಹಿಳೆಯರಿಗೆ ಬಂದೆರಗುವ ಎಲ್ಲ ಕ್ಯಾನ್ಸರ್‌ಗಳ ಪ್ರಮಾಣ ಶೇ 27ರಷ್ಟಿದ್ದು, 29 ಮಹಿಳೆಯರಲ್ಲಿ ಓರ್ವ ಮಹಿಳೆಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಅಧಿಕವಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಈ ರೋಗಿಗಳ ಸಂಖ್ಯೆ ಹೆಚ್ಚು. ಗಂಭೀರ ಸ್ವರೂಪದಲ್ಲಿದ್ದಾಗ ಇದನ್ನು ಗುಣಪಡಿಸುವದು ಕಠೀಣ. ಶೇ. 50ರಷ್ಟು ಭಾರತೀಯ ಮಹಿಳೆಯರಲ್ಲಿ 3-4 ನೇ ಹಂತದಲ್ಲಿ ಪತ್ತೆಯಾಗುತ್ತಿದ್ದು, ಶೇ. 60ರಷ್ಟು ಮಹಿಳೆಯರು ಸ್ತನ ಕ್ಯಾನ್ಸರನಿಂದ ಗುಣಮುಖರಾಗುತ್ತಿದ್ದಾರೆ ಎಂದು ಭರವಸೆ ಮೂಡಿಸುತ್ತಾರೆ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಕ್ಯಾನ್ಸರ ತಜ್ಞವೈದ್ಯರಾದ ಡಾ. ಕುಮಾರ ವಿಂಚುರಕರ ಅವರು.
ಸ್ತನ ಕ್ಯಾನ್ಸರ್: ಸ್ತನದೊಳಗಿನ ಜೀವಕೋಶಗಳಲ್ಲಿ ಬೆಳೆಯುವ ಮಾರಕ ಗಡ್ಡೆಯ ಮಾರಣಾಂತಿಕ ಸಮಸ್ಯೆ. ಸ್ತನದೊಳಗೆ ಹಾಲು ಉತ್ಪಾದಿಸುವ ಗ್ರಂಥಿಗಳ ಕಿರುಹಾಲೆಗಳ ಜೀವಕೋಶಗಳಲ್ಲಿ ಸ್ತನ ಕ್ಯಾನ್ಸರ್ ಆರಂಭವಾಗಬಹುದು ಅಥವಾ ಕಿರುಹಾಲೆಗಳಿಂದ ಮೊಲೆತೊಟ್ಟುಗಳಿಗೆ ಹಾಲು ಹಾಯಿಸುವ ನಾಳಗಳಲ್ಲಿ ಈ ಸಮಸ್ಯೆ ಮೊದಲು ಕಾಣಿಸಬಹುದು. ಸ್ತನ ಕ್ಯಾನ್ಸರ್ ಕೂಡ ಆನುವಂಶಿಕತೆಗೆ ಸಂಬಂಧವಿದೆ. ಶೇ 5 ರಿಂದ 10 ರಷ್ಟು ಕ್ಯಾನ್ಸರ್ ರೋಗಗಳು ಮಾತ್ರ ನಮ್ಮ ತಂದೆ ತಾಯಿ ಅಥವಾ ಅನುವಂಶಿಕತೆಯಿಂದ ಬಳುವಳಿಯಾಗಿರುತ್ತವೆ. ಆದರೆ ಶೇ 90 ರಷ್ಟು ಸ್ತನ ಕ್ಯಾನ್ಸರ್ ವಯೋಸಹಜ, ಇನ್ನೀತರ ಕಾರಣಗಳು ಮತ್ತು ಜೀವನಶೈಲಿಯಿಂದ ಬರುತ್ತವೆ. ಇದು ವಯಸ್ಸಾದಂತೆ ಹೆಚ್ಚುತ್ತಾ ಹೋಗುತ್ತದೆ.
ಇತ್ತೀಚಿನ ಸಮೀಕ್ಷೆಯ ಪ್ರಕಾರ ಮಹಿಳೆಯರಲ್ಲಿ ಸ್ತನ ಮತ್ತು ಯುಟೆರಸ್ (ಸರ್ವೈಕ್ಸ್) ಸಾಮಾನ್ಯ. ಅಂದಾಜು 7,12,758 ಜನರು ಕ್ಯಾನ್ಸರನಿಂದ ಬಳಲುತ್ತಿದ್ದು, 2025ಕ್ಕೆ 806218 ಜನರು ಅದರಲ್ಲಿ 2,38,908 ಸ್ತನ, 1,11,328 ಲಂಗ್ (ಶ್ವಾಸಕೋಶ) ಹಾಗೂ 90060 ಜನ ಬಾಯಿ ಕ್ಯಾನ್ಸರಗೆ ಒಳಗಾಗಲಿದ್ದಾರೆ. ಕ್ಯಾನ್ಸರನಿಂದ ಬಳಲುತ್ತಿರುವ ಅತೀ ಹೆಚ್ಚು ರೋಗಿಗಳನ್ನು ಕೇರಳ ರಾಜ್ಯ ಹೊಂದಿದ್ದು, ಎರಡನೇ ಸ್ಥಾನದಲ್ಲಿ ಮಿಜೋರಾಮ, ನಂತರದಲ್ಲಿ ಹರ್ಯಾಣಾ, ದೆಹಲಿ ಮತ್ತು ಕರ್ನಾಟಕ ರಾಜ್ಯಗಳು ಇವೆ. ಅತ್ಯಧಿಕ ಸಾವು ಸಂಭವಿಸುತ್ತಿರುವದು ಮಿಜೋರಾಮ ರಾಜ್ಯದಲ್ಲಿ. ಮುಂಬೈ, ದೆಹಲಿ, ಬೆಂಗಳೂರು, ಭೋಪಾಲ,ಕೋಲ್ಕತಾ, ಚೆನ್ನೈ ಹಾಗೂ ಅಹ್ಮದಾಬಾದ ನಗರಗಳಲ್ಲಿ ಅಧಿಕ. 25 ರಿಂದ 50 ವರ್ಷದೊಳಗಿನ ಶೇ. 50ರಷ್ಟು ಮಹಿಳೆಯರಲ್ಲಿ ಕಂಡುಬರುತ್ತಿದ್ದು, ಶೇ. 70ರಷ್ಟು ಪೀಡಿತರು ಮರಣಕ್ಕೆ ತುತ್ತಾಗುತ್ತಿದ್ದಾರೆ.
ಹನ್ನೆರಡು ವರ್ಷ ತುಂಬುವ ಮೊದಲೇ ಋತುಮತಿಯಾದರೆ, 55 ವರ್ಷಗಳ ನಂತರ ಋತುಬಂಧ ಆಗಿರುವ ಮಹಿಳೆಯರು, ಮೂವತ್ತು ವರ್ಷದ ನಂತರ ಮಗುವಿಗೆ ಜನ್ಮ ನೀಡಿದವರು, ಮಕ್ಕಳಿಗೆ ಮೊಲೆಹಾಲು ಕುಡಿಸದವರು ಮತ್ತು ಮಕ್ಕಳಿಲ್ಲದ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬಂದೆರಗುವ ಅಪಾಯ ಅಧಿಕ. ಬೀಡಿ, ಸಿಗರೇಟ್, ತಂಬಾಕು ಮದ್ಯಸೇವನೆ ಮತ್ತು ಹಾರ್ಮೋನ್ ಚಿಕಿತ್ಸೆ ಪಡೆವ ಮಹಿಳೆಯರು ಇದಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ರೋಗಪತ್ತೆ: ಸ್ತನ ತಪಾಸಣೆ ನಡೆಸುವ ಮ್ಯಾಮೋಗ್ರಫಿ, ಬಯಾಪ್ಸಿ ಸೇರಿದಂತೆ ಮುಂತಾದ ಪರೀಕ್ಷೆಗಳು ಮಾತ್ರ ಇದನ್ನು ಧೃಡಪಡಿಸುತ್ತವೆ. ಕ್ಯಾನ್ಸರ್ ಕೆಲವು ಹಾರ್ಮೋನ್‌ಗಳಿಗೆ ತುಂಬ ಸೂಕ್ಷ್ಮವಾಗಿದೆಯೇ, ಒಂದು ನಿರ್ದಿಷ್ಟ ಜೀನ್ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸುತ್ತದೆಯೇ ಎಂಬುದನ್ನು ಕಂಡುಹಿಡಿಯಲಾಗುತ್ತದೆ.
ಲಕ್ಷಣಗಳು
ವೃತ್ತಪರ ತಪಾಸಣೆ ಇಲ್ಲದೇ ಕ್ಯಾನ್ಸರನ ಕೆಲವು ಲಕ್ಷಣಗಳನ್ನು ಮೊದಲೇ ಗುರುತಿಸಬಹುದು.
ಸ್ತನ, ತೊಟ್ಟು ಅಥವಾ ಗಾತ್ರದ್ಲಲಿ ಬದಲಾವಣೆ.
ಸ್ತನ, ತೊಟ್ಟಿನ ಸುತ್ತ ಅಥವಾ ತೊಟ್ಟುಗಳ ಚರ್ಮದ ಬಣ್ಣ, ಮೃದುತ್ವದಲ್ಲಿ ಬದಲಾವಣೆ.
ಕಂಕುಳಿನ ಭಾಗದಲ್ಲಿ ಗಂಟು ಕಾಣಿಸಿಕೊಳ್ಳಬಹುದು. ಮೊಲೆತೊಟ್ಟುಗಳಿಂದ ರಕ್ತ ಸೋರುವದು.
ಸ್ತನದಲ್ಲಿ ಗಡ್ಡೆ(ಎಲ್ಲ ಗಡ್ಡೆಗಳು ಕ್ಯಾನ್ಸರ ಗಡ್ಡೆಗಳಾಗಿರುವುದಿಲ್ಲ).ಸ್ತನದ ಚರ್ಮದಲ್ಲಿರುವ ರಂಧ್ರಗಳ ಹಿಗ್ಗುವಿಕೆ
ಚಿಕಿತ್ಸೆ:. ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಹಲವು ಸಂಗತಿಗಳ ಆಧಾರದ ಮೇಲೆ ರೂಪಿಸಲಾಗುತ್ತದೆ. ಸ್ತನದಲ್ಲಿರುವ ಗಂಟು ತೆಗೆದುಹಾಕಲು ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಂಡು ಸ್ತನದ ಭಾಗ ಅಥವಾ ಪೂರ್ತಿ ಸ್ತನವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗುತ್ತದೆ. ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕೆಮೊಥೆರಪಿ ಔಷಧಗಳು, (ರೆಡಿಯೋಥೆರಪಿ) ವಿಕಿರಣ ಚಿಕಿತ್ಸೆ ಸ್ತನ ಕ್ಯಾನ್ಸರ್ ಅನ್ನು ನಾಲ್ಕು ಹಂತಗಳಲ್ಲಿ ಗುರುತಿಸಲಾಗುತ್ತದೆ. ಹೆಚ್ಚಿನ ಸಂಖ್ಯೆ ಉಲ್ಬಣವನ್ನು ಸೂಚಿಸುತ್ತದೆ. ಕ್ಯಾನ್ಸರ್ ಯಾವ ವಿಧ, ಯಾವ ಹಂತದಲ್ಲಿದೆ ಎನ್ನುವುದು ಮುಖ್ಯ.
ಟಾರ್ಗೆಟೆಡ್ ಥೆರಪಿ ಈಗ ಚಾಲ್ತಿಯಲ್ಲಿದೆ. ಚಿಕಿತ್ಸೆ ನೀಡುವಾಗ, ಸ್ತನ ಕ್ಯಾನ್ಸರ್‌ನ ಮೂರು ಹಂತಗಳಲ್ಲಿ ಕ್ಯಾನ್ಸರ್ ಗುಣಪಡಿಸುವತ್ತ ಮತ್ತು ಅದು ಮರುಕಳಿಸದಂತೆ ಚಿಕಿತ್ಸೆ ನೀಡಲಾಗುತ್ತದೆ. ನಾಲ್ಕನೇ ಹಂತದಲ್ಲಿ ರೋಗಿಯನ್ನು ಉಳಿಸುವುದು ಮುಖ್ಯ. ಆದರೆ ಈ ಹಂತದಲ್ಲಿ ಗುಣಪಡಿಸುವುದು ಕಷ್ಟ. ಚಿಕಿತ್ಸೆ ಪಡೆದ ಮೇಲೂ ಕೆಲವರಿಗೆ ಔಷಧ ಸೇವನೆ ಕೆಲಕಾಲ ಇರುತ್ತದೆ. ಶಸ್ತ್ರ ಚಿಕಿತ್ಸೆಯಲ್ಲಿ ಸ್ತನ ತೆಗೆದುಹಾಕಿದರೆ ಅದನ್ನು ಮರುರೂಪಿಸುವ ಶಸ್ತ್ರಚಿಕಿತ್ಸೆಯೂ ಆಗಲೇ ನಂತರ ನೆರವೇರಿಸಬಹುದು.
ಪ್ರತಿಯೊಬ್ಬರೂ ಸಮತೋಲಿತ ಆಹಾರ ಸೇವಿಸುವುದು, ಸ್ತನ ಅರಿವು ಮತ್ತು ಮುನ್ನೆಚ್ಚರಿಕೆ ವಹಿಸುವದು. ಜೀವನ ಶೈಲಿ ಬದಲಾವಣೆ, ಆರೋಗ್ಯವರ್ಧಕ ಆಹಾರ, ನಿಯಮಿತ ವ್ಯಾಯಾಮ ರೂಡಿಸಿಕೊಳ್ಳುವದು. ಧೂಮಪಾನ- ಮದ್ಯಸೇವನೆ ಚಟಗಳನ್ನು ತ್ಯಜಿಸುವದು.
ಬಸವರಾಜ ಸೊಂಟನವರ, ಜನಸಂಪರ್ಕ ಅಧಿಕಾರಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ, ಬೆಳಗಾವಿ M: 9739564001