ಪ್ರಾಣಹಿಂಡುವ ಸಂಧಿವಾತವೇ? ತಡ ಮಾಡಬೇಡಿ

belagavi

ಅಧಿಕ ಬೊಜ್ಜು ಹೊಂದಿರುವ ಆಧುನಿಕ ಮಾನವನ ಒಟ್ಟು ಜೀವಿತಾವಧಿಯ ಸುಮಾರು 40 ವರ್ಷಗಳ ನಂತರ ಶೇ. 1ರಷ್ಟು ಜನರು ವಿವಿಧ ರೀತಿಯ ಸಂಧಿವಾತಗಳಿಂದ ಬಳಲುತ್ತಾರೆ. ಪ್ರತಿದಿನ ರೋಗಿಯ ಪ್ರಾಣ ಹಿಂಡುವ ಈ ವ್ಯಾದಿಗೆ ಮಂಗಳ ಹಾಡಲು ಹಲವು ಉಪಾಯಗಳಿವೆ.

ಸಂಧಿವಾತವು ಯಾವುದೇ ಲಿಂಗ, ವಯಸ್ಸಿನ ಬೇಧವಿಲ್ಲದೇ ಕಾಣಿಸಿಕೊಳ್ಳುವ ಈ ರೋಗವು ಬಾಲ್ಯಾವಸ್ಥೆಯಲ್ಲಿ ಅಪರೂಪವಲ್ಲ. ನಿಗದಿತ ಸಮಯದಲ್ಲಿ ಚಿಕಿತ್ಸೆ ಲಭಿಸದಿದ್ದರೆ ಸಂಧಿನ ತೊಂದರೆ, ಬಗೆಳವಣಿಗೆ ಕುಂಠಿತ, ಮಾನಸಿಕ ಅಸ್ವಸ್ಥತೆಗಳಿಗೆ ಎಡೆಮಾಡಿಕೊಡುವದಲ್ಲದೇ ಬೆನ್ನುಹುರಿ ವ್ಯಾದಿಗೆ ತುತ್ತಾಗಬೇಕಾಗುತ್ತದೆ. ಆರ್ಥ್ರೈಟಿಸ್ (ಸಂಧಿವಾತ) ಎಂದರೇನು?

ಸಂಧಿವಾತವು ರೋಗವಲ್ಲ. ಆದರೆ ಇದು ವಿವಿಧ ರೋಗಗಳ ತವರೂರು. ಬಹಳಷ್ಟು ರೋಗಗಳಲ್ಲಿ ಸಂಧಿನ ಪಾತ್ರ ಅತ್ಯಧಿಕ. ವಾಯು ಸಂಧಿವಾತ (ರ್ಯುಮ್ಯಾಟಾಯ್ಡ), ಎಲುಬು ಸಂಧಿವಾತ( ಅಸ್ಟಿಯೋ) ಸಣ್ಣ ಸಂಧಿನ ಸಂಧಿವಾತ( ಗೌಟ) ಬೆನ್ನೆಲುಬು ಸಂಧಿವಾತ(ಸ್ಪಾಂಡಿಲೈಟಿಸ್) ಹೀಗೆ ವಿವಿಧ ರೀತಿಯ ಸಂಧಿವಾತಗಳಿವೆ. ಖೀವು ಸಾಮಾನ್ಯವಾಗಿದ್ದು, ರಕ್ತನಾಳ ಹಾಗೂ ಸ್ನಾಯು ಕಾಯಿಲೆ ಗಂಭೀರವಾದವುಗಳು. ಆರ್ಥ್ರೈಟಿಸ್ ಕೀಲುಗಳ ಉರಿಯೂತವಾಗಿದೆ. ಅನೇಕ ಕೀಲುಗಳನ್ನು ಬಾಧಿಸುತ್ತದೆ. ವಿವಿಧ ಕಾರಣ ಮತ್ತು ಚಿಕಿತ್ಸಾ ವಿಧಾನಗಳನ್ನು ಹೊಂದಿರುವ 100 ಕ್ಕೂ ಹೆಚ್ಚು ವಿಧದ ಆರ್ಥೈಟಿಸ್‍ಗಳಿವೆ.

ಎರಡು ಪ್ರಮುಖ ವಿಧಗಳು :

ಆಸ್ಟಿಯೋಆರ್ಥ್ರೈಟಿಸ್ (ಓಎ) ಮತ್ತು ರುಮಟಾಯಿಡ ಆರ್ಥ್ರೈಟಿಸ್ (ಆರ್‍ಎ). ಇದು ಮಕ್ಕಳು, ಹದಿಹರೆಯದವರು ಮತ್ತು ಯುವಜನತೆಯಲ್ಲೂ ಕಂಡುಬರುತ್ತದೆ. ಆರ್ಥ್ರೈಟಿಸ್ ಪುರುಷರಿಗಿಂತ ಮಹಿಳೆಯರಲ್ಲಿ ಹಾಗೂ ಅಧಿಕ ತೂಕ ಹೊಂದಿರುವ ವ್ಯಕ್ತಿಗಳಲ್ಲಿ ಕಂಡುಬರುತ್ತದೆ.

ಆರ್ಥ್ರೈಟಿಸ್‍ನ ಲಕ್ಷಣಗಳು :

ಕೀಲು ನೋವು, ಬಿಗಿತ, ಊತ, ಕೀಲುಗಳಲ್ಲಿ ಚಲನೆಯ ಶಕ್ತಿ ಕಡಿಮೆಯಾಗುವುದು ಇದರ ಸಾಮಾನ್ಯ ಲಕ್ಷಣಗಳಾಗಿವೆ. ಆರ್ಥ್ರೈಟಿಸ್ ಹೊಂದಿರುವ ಅನೇಕ ವ್ಯಕ್ತಿಗಳು ಬೆಳಿಗಿನ ಸಮಯ ಲಕ್ಷಣಗಳು ಹದಗೆಡುವುದನ್ನು ಹೆಚ್ಚಾಗಿ ಗಮನಿಸುತ್ತಾರೆ ಹಾಗೂ ದಿನ ಕಳೆದಂತೆ ಉತ್ತಮವೆನಿಸುವಂತೆ ಭಾಸವಾಗುತ್ತದೆ. ಆರ್‍ಎ, ಎಸ್‍ಎಲ್‍ಇ (ಲೂಪಸ್), ಸ್ಕ್ಲೆರೋಡರ್ಮಾ, ಸ್ಯೋಗ್ರೆನ್ಸ್‍ನಂತಹ ಕೆಲವು ವಿಧದ ಆರ್ಥ್ರೈಟಿಸ್‍ಗಳು ಕಣ್ಣು, ಶ್ವಾಸಕೋಶ, ಹೃದಯ, ಉದರಕರುಳಿನ ವ್ಯವಸ್ಥೆಯಂತಹ ಶರೀರದ ಅನೇಕ ಅಂಗಗಳಿಗೆ ಬಾಧಿಸಿ ಮಾರಣಾಂತಿಕವಾಗಿರುತ್ತದೆ.

ಆರ್ಥ್ರೈಟಿಸ್‍ಗೆ ಕಾರಣಗಳೇನು?

ಸಾಧಾರಣವಾಗಿ ಕಂಡುಬರುವ ಸವೆತ ಆಸ್ಟಿಯೋಆರ್ಥ್ರೈಟಿಸ್‍ಗೆ (ಓಎ) ಕಾರಣವಾಗಿದ್ದು, ಇದು ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಆರ್ಥ್ರೈಟಿಸ್ ವಿಧವಾಗಿದೆ. ಕೀಲುಗಳಿಗೆ ಸೋಂಕು ಅಥವಾ ಹಾನಿ ಉಂಟಾದಾಗ ಇದು ಮೃದ್ವಸ್ತಿಯ ಅಂಗಾಂಶಗಳು ಸ್ವಾಭಾವಿಕವಾಗಿ ಕುಸಿಯುವಂತೆ ಪ್ರಚೋದಿಸುತ್ತವೆ. ಈ ರೋಗದ ಕೌಟುಂಬಿಕ ಇತಿಹಾಸವಿದ್ದರೆ ನಿಮಗೆ ಓಎ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮತ್ತೊಂದು ಸಾಮಾನ್ಯ ವಿಧದ ಆರ್ಥ್ರೈಟಿಸ್ ಆದ ಆರ್‍ಎ, ಸ್ವಯಂರೋಗನಿರೋಧಕತೆಯ ಅಸಹಜತೆಯಾಗಿದೆ. ಇದು ನಿಮ್ಮ ಶರೀರದ ರೋಗನಿರೋಧಕ ವ್ಯವಸ್ಥೆ ನಿಮ್ಮದೇ ಶರೀರದ ಅಂಗಾಂಶಗಳ ಮೇಲೆ ದಾಳಿ ಮಾಡುವುದರಿಂದ ಉಂಟಾಗುತ್ತದೆ. ಸಂಶೋಧಕರು ಶರೀರದ ಆರೋಗ್ಯಕರ ಕೀಲುಗಳ ಮೇಲೆ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆ ಏಕೆ ಆಕ್ರಮಣ ಮಾಡುತ್ತದೆ ಎಂದು ತಿಳಿಯಲು ಈಗಲೂ ಪ್ರಯತ್ನಿಸುತ್ತಿದ್ದಾರೆ. ಧೂಮಪಾನ, ಪೆರಿಯೋಡಾಂಟಿಸ್ (ಹಲ್ಲಿನ ಸ್ಥಿತಿ), ವಂಶವಾಹಿ ಮತ್ತು ಹಾರ್ಮೋನಿನ ಸಮಸ್ಯೆಗಳಂತಹ ವಾತಾವರಣದ ಅಂಶಗಳೂ ಸೇರಿದಂತೆ ಕೆಲವು ಅಂಶಗಳು ರುಮಟಾಯಿಡ ಆರ್ಥ್ರೈಟಿಸ್‍ಗೆ ಕಾರಣವಾಗುತ್ತವೆ.

ರೋಗಪತ್ತೆ :

ಆರ್ಥ್ರೈಟಿಸ್ ಲಕ್ಷಣಗಳು ಹೆಚ್ಚಾಗಲು ಸಮಯ ಬೇಕಾಗುತ್ತದೆ ಮತ್ತು ಇದರ ಆರಂಭಿಕ ಲಕ್ಷಣಗಳು ಕೀಲು ಬಾಧೆ, ಊತ ಮತ್ತು ಬಿಗಿತವನ್ನು ಹೊಂದಿರುತ್ತದೆ. ರೋಗಿಗಳಿಗೆ ಆಯಾಸದ ಅನುಭವವೂ ಆಗಬಹುದು. ನಿಮ್ಮ ವೈದ್ಯಕೀಯ ಇತಿಹಾಸ, ಎಕ್ಸ್ರೇ, ದೈಹಿಕ ಮತ್ತು ಪ್ರಯೋಗಾಲಯ ಪರೀಕ್ಷೆಗಳ ನೆರವಿನಿಂದ, ನಿಮ್ಮ ರುಮಟಾಲಜಿಸ್ಟ್ ನಿಮ್ಮ ರೋಗಪತ್ತೆ ಮಾಡುತ್ತಾರೆ ಅಥವಾ ನಿಮಗೆ ಆರ್ಥ್ರೈಟಿಸ್ ರೋಗಪತ್ತೆಗೆ ಯಾರನ್ನು ಸಂಪರ್ಕಿಸಬೇಕೆನ್ನುವ ಸಂದೇಹವಿದ್ದರೆ, ನಿಮ್ಮ ಪ್ರಾಥಮಿಕ ಆರೈಕೆಯ ವೈದ್ಯರನ್ನು ಸಂಪರ್ಕಿಸಿ.

ಚಿಕಿತ್ಸೆ :

ರುಮಟಾಯಿಡ ಆರ್ಥ್ರೈಟಿಸ್ ಒಂದು ಸ್ವಯಂರೋಗನಿರೋಧಕ ಅಸಹಜತೆಯಾದ್ದರಿಂದ, ಇದನ್ನು ಸಂಪೂರ್ಣವಾಗಿ ಗುಣಪಡಿಸುವುದು ಅಸಾಧ್ಯ. ಆದ್ದರಿಂದ, ಉರಿಯೂತ ಮತ್ತು ಊತವನ್ನು ಮಾರ್ಪಡಿತ ರುಮಟಾಯಿಡ ನಿರೋಧಕ ಔಷಧಿಗಳನ್ನು ನೀಡಲಾಗುತ್ತದೆ. (ಡಿಎಂಎಆರ್‍ಡಿಗಳು) ಮೆಥಾಟ್ರೆಕ್ಸೇಟ್, ಹೈಡ್ರಾಕ್ಸಿಕ್ಲೋರೋಕ್ವಿನ್, ಸಲ್ಫಸಲಾಜಿನ್‍ಗಳ ನೆರವಿನಿಂದ ನಿಧಾನಗೊಳಿಸುತ್ತವೆ. ಮೇಲಿನ ಚಿಕಿತ್ಸೆಗೆ ಸ್ಪಂದಿಸದ ರೋಗಿಗಳಿಗೆ ಬಯಾಲಜಿಕ್ಸ್ ಎನ್ನುವ ಹೊಸ ಸಾಲಿನ ಔಷಧಿಗಳನ್ನು ಬಳಸಲಾಗುತ್ತದೆ. ರೋಗಪತ್ತೆಯಾದ ಕೂಡಲೇ ಚಿಕಿತ್ಸೆಯನ್ನು ಬೇಗ ಆರಂಭಿಸಿದಷ್ಟೂ ಕೀಲುಗಳ ಹಾನಿ, ವಿರೂಪತೆ ಮತ್ತು ಸಂಬಂಧಿಸಿದ ನ್ಯೂನತೆಗಳನ್ನು ತಡೆಗಟ್ಟಬಹುದು.

ಶೀಘ್ರ ಸ್ಪಂದನೆ ಮತ್ತು ಕಾರ್ಯವಿಧಾನವನ್ನು ಪುನರ್‍ಸ್ಥಾಪಿಸಲು ಸಾಮಾನ್ಯವಾಗಿ ಸ್ಟೆರಾಯಿಡಗಳನ್ನು ಅಲ್ಪಾವಧಿಗೆ ಬಳಸಲಾಗುತ್ತದೆ. ಕೆಲ ರೋಗಿಗಳಿಗೆ ಸ್ಟೆರಾಯಿಡ ಅಗತ್ಯವಿರುವುದಿಲ್ಲ. ಸ್ಟೆರಾಯಿಡ ಹೊರತಾದ, ಉರಿಯೂತ ನಿರೋಧಕ ಔಷಧಿಗಳನ್ನು (ಎನ್‍ಎಸ್‍ಎಐಡಿ) ನೋವು ನಿವಾರಣೆಗೆ ಕೊಡಲಾಗುತ್ತದೆ. ಕೀಲುಗಳು ಶಾಶ್ವತವಾಗಿ ಹಾನಿ ಅಥವಾ ಚಲನಶೀಲತೆ ಕಡಿಮೆಯಾಗಿದ್ದರೆ ರುಮಟಾಯಿಡ ಆರ್ಥ್ರೈಟಿಸ್ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಅವಶ್ಯವಾಗಿದ್ದು, ಕೀಲು (ಮೊಣಕಾಲು) ಮತ್ತು ಛಪ್ಪೆ ಮರುಜೋಡಣೆ ಹಾಗೂ ನ್ಯೂನತೆಯುಳ್ಳ ಕೀಲುಗಳಿಗೆ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಬೇಕಾಗುತ್ತದೆ.

ರೋಗಿಗಳು ದೈಹಿಕವಾಗಿ ಸಕ್ರಿಯವಾಗಿರುವುದು ಅತ್ಯಂತ ಮುಖ್ಯ.ಇಲ್ಲದಿದ್ದಲ್ಲಿ ಚಲನಾರಹಿತತೆ ಮರುಕಳಿಸುತ್ತದೆ. ನಡಿಗೆ, ಯೋಗ ಅಥವಾ ಈಜಿನಂತಹ ದೈನಂದಿನ ವ್ಯಾಯಾಮಗಳನ್ನು ನಿರಂತರವಾಗಿ ಮಾಡಬೇಕು. ದೇಹದ ತೂಕ ಕಡಿಮೆ ಮಾಡುವದು ಹಾಗೂ ಆರೋಗ್ಯಕರ ತೂಕ ನಿರ್ವಹಣೆ ಓಎ ಗೆ ಒಳಗಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ತಾಜಾ ಹಣ್ಣು, ತರಕಾರಿ, ಮೀನು, ಒಣಹಣ್ಣುಗಳು ಮತ್ತು ಗಿಡಮೂಲಿಕೆಗಳಂತಹ ಆಂಟಿಆಕ್ಸಿಡೆಂಟ್ ಸಮೃದ್ಧವಾಗಿರುವ ಆಹಾರ ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕರಿದ/ಸಂಸ್ಕರಿಸಿದ ಆಹಾರ ಸೇವನೆ ಕಡಿಮೆ ಮಾಡಿ.

ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡುವುದು ಮುಖ್ಯ.

ರೋಗದ ಸ್ವರೂಪದಿಂದಾಗಿ ಮತ್ತು ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲವಾದ್ದರಿಂದ, ಇದು ರೋಗಿಗಳು ಮತ್ತು ಆರೈಕೆದಾರರಿಗೆ ಅಡಚಣೆರಹಿತ ದೈನಂದಿನ ಜೀವನ ನಡೆಸುವುದು ಸವಾಲಾಗುವಂತೆ ಮಾಡಿದೆ. ಇದು ವಯಸ್ಕರಲ್ಲಿ ನ್ಯೂನತೆಗೆ ಒಂದು ಪ್ರಮುಖ ಕಾರಣವಾಗಿದೆ. ಆದ್ದರಿಂದ, ವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡುವುದು, ಸರಿಯಾದ ಚಿಕಿತ್ಸೆ, ಸಕ್ರಿಯ ಜೀವನಶೈಲಿ ಮತ್ತು ರೋಗದ ಬಗ್ಗೆ ತಿಳಿವಳಿಕೆ ಅತ್ಯಂತ ಮುಖ್ಯ.

ಆರ್ಥ್ರೈಟಿಸ್‍ಅನ್ನು ಗುಣಪಡಿಸಲು ಸಾಧ್ಯವಿಲ್ಲವಾದ್ದರಿಂದ, ನಿಮ್ಮ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಜೀವನದ ಗುಣಮಟ್ಟ ಸುಧಾರಿಸಲು ಸರಿಯಾದ ಚಿಕಿತ್ಸೆ ಪಡೆಯಬೇಕು.

Dr Archana Uppin

ಡಾ ಅರ್ಚನಾ ಎಂ ಉಪ್ಪಿನ
ಎಂ.ಡಿ, ಫೆಲೋ ರುಮಟಾಲಜಿ (ಯೂಲರ್ಕನ್ಸಲ್ಟೆಂಟ್ ರುಮಟಾಲಜಿಸ್ಟ್
ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಬೆಳಗಾವಿ

LEAVE A REPLY

Please enter your comment!
Please enter your name here