ಏಪ್ರಿಲ್ 1ರಿಂದ ಆರೋಗ್ಯ ಸಂಜೀವಿನಿ

ಆಧುನಿಕತೆಯಲ್ಲಿ ವೈದ್ಯಕೀಯ ವೆಚ್ಚ ದುಬಾರಿಯಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ ವಯದ್ಯಕೀಯ ವೆಚ್ಚವನ್ನು ಭರಿಸಲಾಗದೇ ಚಿಕಿತ್ಸೆಯಿಂದ ಬಹಳಷ್ಟು ಜನರು ದೂರ ಉಳಿಯುವ ಸಂಭವಗಳು ಅಧಿಕ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯ ವಿಮೆ (ಹೆಲ್ತ್ ಇನ್ಶೂರೆನ್ಸ್) ಹೊಂದುವದು ಅತ್ಯವಶ್ಯ. ಆದರೆ, ಅನೇಕ ಜನರು ಆರೋಗ್ಯ ವಿಮೆ ಮಾಡಿಸುವಾಗ ಯಾವ ಕಂಪನಿಯ, ಎಷ್ಟು ವಿಮೆ, ಯಾವ ಆರೋಗ್ಯ ವಿಮೆ ಖರೀದಿಸಬೇಕು. ಯಾವೆಲ್ಲಾ ಸಮಸ್ಯೆಗಳಿಗೆ ಆರೋಗ್ಯ ವಿಮೆಯಲ್ಲಿ ಚಿಕಿತ್ಸೆ ಲಭ್ಯ– ಹೀಗೆ ಹತ್ತಾರು ಪ್ರಶ್ನೆಗಳು ಆರೋಗ್ಯ ವಿಮೆ ಖರೀದಿಸುವ ವ್ಯಕ್ತಿಯನ್ನು ಗೊಂದಲಕ್ಕೆ ನೂಕುತ್ತವೆ.

ಈ ಗೊಂದಲಕ್ಕೆ ಅಂತ್ಯ ಹಾಡಲು ಆರೋಗ್ಯ ಸಂಜೀವಿನಿ ಏಪ್ರೀಲ್ 1 ರಿಂದ ಜಾರಿಗೆ ಬರುತ್ತಿದೆ. ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಏಕರೂಪದ ಆರೋಗ್ಯ ವಿಮೆಯನ್ನು ಗ್ರಾಹಕರಿಗೆ ಒದಗಿಸುವಂತೆ ಎಲ್ಲಾ ವಿಮಾ (ಇನ್ಶೂರೆನ್ಸ್) ಕಂಪನಿಗಳಿಗೆ ಆದೇಶಿಸಿದೆ. ಎಲ್ಲರಿಗೂ ಸೂಕ್ತವೆನ್ನಿಸುವ, ಪ್ರಾಥಮಿಕ ಆರೋಗ್ಯ ವೆಚ್ಚ ಭರಿಸುವ ‘ಆರೋಗ್ಯ ಸಂಜೀವಿನಿ’ ವಿಮೆಯನ್ನು ಸ್ಟ್ಯಾಂಡರ್ಡ್‌ ವಿಮೆಯನ್ನಾಗಿ ರೂಪಿಸಲಾಗಿದೆ. ಏಪ್ರಿಲ್ 1 ರಿಂದ ಎಲ್ಲ ಆರೋಗ್ಯ ಮತ್ತು ಸಾಮಾನ್ಯ ವಿಮಾ ಕಂಪನಿಗಳು ಕಡ್ಡಾಯವಾಗಿ ಆರೋಗ್ಯ ಸಂಜೀವಿನಿ ಪಾಲಿಸಿ ಮಾರಾಟ ಮಾಡಲೇಬೇಕಾಗಿದೆ.

ಕವರೇಜ್ ವ್ಯಾಪ್ತಿ: ಪ್ರಾಥಮಿಕ ಆರೋಗ್ಯ ವೆಚ್ಚ ಭರಿಸುವ ಸ್ಟ್ಯಾಂಡರ್ಡ್ ವಿಮೆಯೇ ಆರೋಗ್ಯ ಸಂಜೀವಿನಿ, ಈ ವಿಮೆಯು ಆಸ್ಪತ್ರೆ ವೆಚ್ಚ, ವೈದ್ಯರ ಶುಲ್ಕ, ಶಸ್ತ್ರ ಚಿಕಿತ್ಸೆ ವೆಚ್ಚ, ಅರಿವಳಿಕೆ ಸಲಹೆಗಾರ ವೆಚ್ಚ, ಔಷಧಿಗಳ ವೆಚ್ಚ, ಕೃತಕ ಉಸಿರಾಟ ವ್ಯವಸ್ಥೆ , ಶಸ್ತ್ರಚಿಕಿತ್ಸೆ ವೆಚ್ಚ, ಕೊಠಡಿ ವೆಚ್ಚ ಸೇರಿದಂತೆ ಮೂಲಭೂತ ಕಡ್ಡಾಯ ಕವರೇಜ್ ಹೊಂದಿರುತ್ತದೆ. ಕಣ್ಣಿನ ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಚಿಕಿತ್ಸೆಗೆ ₹ 40 ಸಾವಿರ ಅಥವಾ ವಿಮಾ ಮೊತ್ತದ ಶೇ 25 ರಷ್ಟು ಪರಿಹಾರ ಲಭ್ಯ.

ಕಾಯಿಲೆ ಅಥವಾ ಗಾಯದ ಪರಿಣಾಮ ಬೇಕಾಗುವ ದಂತ ಚಿಕಿತ್ಸೆ, ಪ್ಲಾಸ್ಟಿಕ್‌ ಸರ್ಜರಿ, ಎಲ್ಲ ಡೇ ಕೇರ್‌ ಟ್ರೀಟ್‌ಮೆಂಟ್‌, ಆ್ಯಂಬುಲನ್ಸ್‌ ವೆಚ್ಚ, ಆಸ್ಪತ್ರೆಗೆ ದಾಖಲಾಗುವುದಕ್ಕೆ ಮುಂಚಿನ 30 ದಿನಗಳ ಚಿಕಿತ್ಸೆ, ಆಸ್ಪತ್ರೆ ಚಿಕಿತ್ಸೆಯ ನಂತರದ 60 ದಿನಗಳ ಚಿಕಿತ್ಸೆಗೆ ವಿಮೆ ಪರಿಹಾರ ಸಿಗುತ್ತದೆ.

ತೀವ್ರ ನಿಗಾ (ಐಸಿ) ವೆಚ್ಚ ದಿನಕ್ಕೆ ಗರಿಷ್ಠ ₹ 10 ಸಾವಿರದವರೆಗೆ ಇದೆ. ವಿಶೇಷವೆಂದರೆ ಆಯುಷ್ ಚಿಕಿತ್ಸೆಗಳಿಗೂ ಇಲ್ಲಿ ವಿಮೆ ಕವರೇಜ್ ಸಿಗುತ್ತದೆ. ಆಯುರ್ವೇದ, ಯೋಗ, ನ್ಯಾಚುರೋಪಥಿ, ಯುನಾನಿ, ವೈದ್ಯ ಪದ್ಧತಿಯನ್ನು ಈ ವಿಮೆ ಪರಿಗಣಿಸುತ್ತದೆ. ಆದರೆ, ಕೆಲ ಆಯ್ದ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು 2 ವರ್ಷದಿಂದ 4 ವರ್ಷಗಳ ವೇಯ್ಟಿಂಗ್ ಪೀರಿಯಡ್ (ಕಾಯುವಿಕೆ ಅವಧಿ) ಇದೆ.

ಕವರೇಜ್ ಮೊತ್ತ: ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ಕನಿಷ್ಠ ₹ 1 ಲಕ್ಷ, ಗರಿಷ್ಠ ₹ 5 ಲಕ್ಷದವರೆಗೆ ಇನ್ಶೂರೆನ್ಸ್ ಕವರೇಜ್ ಪಡೆಯಬಹುದು. ವೈಯಕ್ತಿಕ ಆರೋಗ್ಯ ವಿಮೆ ಖರೀದಿಸಿದಾಗ ಕವರೇಜ್ ಮೊತ್ತ ವ್ಯಕ್ತಿಗತವಾಗಿ ಅನ್ವಯವಾಗುತ್ತದೆ. ಫ್ಯಾಮಿಲಿ ಫ್ಲೋಟರ್ ಪಾಲಿಸಿ ಖರೀದಿಸಿದಾಗ ಕವರೇಜ್ ಮೊತ್ತ ಇಡೀ ಕುಟುಂಬಕ್ಕೆ ಇರುತ್ತದೆ. ಮಡದಿ, ಪೋಷಕರು , ಅತ್ತೆ – ಮಾವ, 3 ತಿಂಗಳಾಗಿರುವ ಮಕ್ಕಳನ್ನು ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ ಸೇರಿಸಬಹುದು.

ಅರ್ಹತೆ, ಪಾಲಿಸಿ ಅವಧಿ, ಗ್ರೇಸ್ ಪಿರಿಯಡ್ : 18 ವರ್ಷದಿಂದ 65 ವರ್ಷದೊಳಗಿನ ವ್ಯಕ್ತಿಗಳು ಪಾಲಿಸಿ ಮಾಡಿಸಬಹುದು. ಜೀವಿತಾವಧಿ ನವೀಕರಣಕ್ಕೆ ಅವಕಾಶವಿದೆ. ಒಂದು ವರ್ಷದ ನಂತರ ಪ್ರೀಮಿಯಂ ಪಾವತಿಸಿ ನವೀಕರಣ ಮಾಡಿಸಬೇಕು. ವಾರ್ಷಿಕ ಪ್ರೀಮಿಯಂ ಪಾವತಿಗೆ ನಿಗದಿತ ದಿನಾಂಕದ ನಂತರ 30 ದಿನಗಳ ಗ್ರೇಸ್ ಪೀರಿಯಡ್ (ಹೆಚ್ಚುವರಿ ಅವಧಿ) ಸಿಗುತ್ತದೆ. ಆದರೆ, ಅರೆ ವಾರ್ಷಿಕ, ತ್ರೈಮಾಸಿಕ ಮತ್ತು ಮಾಸಿಕ ಪಾವತಿಗಳಿಗೆ 15 ದಿನ ಗ್ರೇಸ್ ಪೀರಿಯಡ್ ಲಭ್ಯ.

ಪಾವತಿ ಆಯ್ಕೆ: ಪ್ರೀಮಿಯಂ ಮೊತ್ತವನ್ನು ವಾರ್ಷಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಅಥವಾ ಮಾಸಿಕ ಲೆಕ್ಕಾಚಾರದಲ್ಲಿ ಪಾವತಿ ಮಾಡಬಹುದು. ಪ್ರೀಮಿಯಂನ ಮೊತ್ತ ಏಕರೂಪದಲ್ಲಿರುತ್ತದೆ. ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ದರ ವ್ಯತ್ಯಾಸ ಇರುವುದಿಲ್ಲ.

LEAVE A REPLY

Please enter your comment!
Please enter your name here