ಆಧುನಿಕತೆ ದಿನಗಳಲ್ಲಿ ಹೃದಯದ ರಕ್ತ ನಾಳಗಳ ರೋಗಗಳು ಅಧಿಕವಾಗುತ್ತಿದ್ದು, ಹೃದಯ ಶಸ್ತ್ರಚಿಕಿತ್ಸೆಗಳು ಹೆಚ್ಚಾಗಲು ಪ್ರಮುಖ ಕಾರಣ. ಅತ್ಯಂತ ಕ್ಲಿಷ್ಟಕರವಾದ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಲು ಅರವಳಿಕೆ ತಜ್ಞರು ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂದು ಕೆಎಲ್ಇ ಅಕಾಡೆಮಿ ಆಫ್ ಹಾಯರ್ ಎಜುಕೇಶನ ಅ್ಯಂಡ ರಿಸರ್ಚನ ಕುಲಸಚಿವ ಡಾ. ವಿ.ಎ. ಕೋಠಿವಾಲೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಹೃದಯ ಅರವಳಿಕೆ ತಜ್ಞರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹೃದಯ ಶಸ್ತ್ರಚಿಕಿತ್ಸೆ ಅತ್ಯಂತ ಸಂಕೀರ್ಣತೆಯಿಂದ ಕೂಡಿದ್ದು, ಶಸ್ತ್ರಚಿಕಿತ್ಸಾ ತಜ್ಞವೈದ್ಯರ ಬೆನ್ನೆಲುಬಾಗಿ ಅರವಳಿಕೆ ತಜ್ಞರು ಕಾರ್ಯನಿರ್ವಹಿಸುತ್ತಾರೆ. ತಜ್ಞವೈದ್ಯರೊಂದಿಗೆ ಅರವಳಿಕೆ ತಜ್ಞರು ಕಯಜೋಡಿಸಿದಾಗ ಮಾತ್ರ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಲು ಸಾಧ್ಯವೆಂದು ಅವರು ಹೇಳಿದರು.
ಶಸ್ತ್ರಚಿಕಿತ್ಸೆ ನಡೆದಿರುವಾಗ ಅರವಳಿಕೆ ತಜ್ಞರು ರೋಗಿಯ ರಕ್ತದೊತ್ತಡ, ಹ್ರದಯ ಬಡಿತ, ಕೃತಕ ಉಸಿರಾಟದ ಪ್ರಕ್ರಿಯೆ, ಅವಶ್ಯವಿರುವ ಔಷಧಿಗಳನ್ನು ಸಮತೋಲಿತ ಮಟ್ಟದಲ್ಲಿ ನೀಡಿ, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಗೆ ನೋವಾಗದಂತೆ ನಿಗಾವಹಿಸುತ್ತಾರೆ. ಶಸ್ತ್ರಚಿಕಿತ್ಸಾ ತಜ್ಞವೈದ್ಯರ ಜೊತೆ ಸಮನ್ವಯ ಸಾಧಿಸಿ ರೋಗಿಯು ಸುರಕ್ಷಿತವಾಗಿ, ಶೀಘ್ರ ಗುಣಮುಖವಾಗಲು ಅರವಳಿಕೆ ತಜ್ಞರು ಶ್ರಮಿಸುತ್ತಾರೆ ಎಂದ ಅವರು, ಈ ಭಾಗದಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದ್ದು, ನೂತನ ಆವಿಷ್ಕಾರ, ಕಸಿ, ಶಸ್ತ್ರಚಿಕಿತ್ಸೆಗಳಲ್ಲಿ ಸದಾ ಒಂದು ಹೆಜ್ಜೆ ಮುಂದಿದೆ ಎಂದು ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ ಎಮ್ ವಿ ಜಾಲಿ ಅವರು ಮಾತನಾಡಿ, ಅರವಳಿಕೆ ವಿಜ್ಞಾನ ಅತ್ಯಂತ ಕ್ಷಿಪ್ರವಾಗಿ ಬೆಳೆಯುತ್ತಿದ್ದು, ಅತ್ಯಾಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತ, ಸಾಕಷ್ಟು ಸುಧಾರಣೆಗೊಳ್ಳುತ್ತಿದೆ. ಇದರಿಂದ ಶಸ್ತ್ರಚಿಕಿತ್ಸಾ ವೈದ್ಯರಿಗೂ ಹಾಗೂ ರೋಗಿಗಳಿಗೂ ಅನುಕೂಲಕರ ವಾತಾವರಣ ಕಲ್ಪಿಸಿದೆ. ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರಗಳಲ್ಲಿ ನಡೆಯುವ ಪರಿಣಿತಿ, ಅವಿಷ್ಕಾರ ಹಾಗೂ ಜ್ಞಾನದ ಸದುಪಯೋಗ ಪಡೆದುಕೊಂಡು ಅತ್ಯಂತ ಕ್ಲಿಷ್ಟಕರ ಮತ್ತು ಸವಾಲಿನ ಶಸ್ತ್ರಚಿಕಿತ್ಸೆ ನೆರವೇರಿಸಲು ಅರವಳಿಕೆ ತಜ್ಞರು ಸನ್ನದ್ದರಾಗಬೇಕೆಂದು ಕರೆ ನೀಡಿದರು.
ಡಾ. ಆರ್ ಬಿ ನೇರ್ಲಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಡಾ. ಆನಂದ ವಾಘರಾಳಿ ಸ್ವಾಗತಿಸಿ, ಪರಿಚಯಿಸಿದರು. ಡಾ. ಶರಣಗೌಡಾ ಪಾಟೀಲ ವಂದನಾರ್ಪಣೆ ಮಾಡಿದರು. ಹಿರಿಯ ಸಂಪನ್ಮೂಲ ವ್ಯಕ್ತಿಗಳಾದ ಡಾ. ರಿಚರ್ಡ ಸಾಲ್ಡಾನಾ, ಡಾ. ಸಮೀರ ಅಂಬರ್, ಡಾ. ಶಾಂತನು ಶಾಸ್ತ್ರಿ, ಡಾ. ಕಾರ್ತೀಕೇಯನ್, ಡಾ ನಿತಿನ ಮಹಾಂತಶೆಟ್ಟಿ, ಡಾ. ಸಮ್ರಾಟ ಸೇರಿದಂತೆ ಮುಂತಾದವರು ಉಪನ್ಯಾಸ ನೀಡಿದರು.
ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದಿಂದ ಸುಮಾರು 100ಕ್ಕೂ ಅಧಿಕ ಅರವಳಿಕೆ ತಜ್ಞರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.