ಏಜೆನ್ಸಿಸ್
ಭಾರತದಲ್ಲಿ ವಾಯುಮಾಲಿನ್ಯ ದಿನೇ ದಿನೇ ಹೆಚ್ಚುತ್ತಿದೆ. ದೇಶದ ರಾಜಧಾನಿಯ ವಾತಾವರಣ ಅಪಾಯಮಟ್ಟ ತಲುಪಿದೆ. ದೀರ್ಘಕಾಲದವರೆಗೂ ಇಂತಹ ಮಲಿನ ಗಾಳಿಯನ್ನು ಸೇವಿಸಿದರೆ ಪಾರ್ಶ್ವವಾಯು ಉಂಟಾಗುವ ಅಪಾಯ ಹೆಚ್ಚಾಗುತ್ತದೆ ಎಂದು ವೈದ್ಯರು ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ.
ಸಲ್ಫೇಟ್ ಮತ್ತು ಬ್ಲ್ಯಾಕ್ ಕಾರ್ಬನ್ನಂತಹ ರಾಸಾಯನಿಕ ಒಳಗೊಂಡ ವಿಷಾನಿಲದ ಸೇವನೆಯಿಂದ ಹೃದಯ ರಕ್ತನಾಳ ಮತ್ತು ಶ್ವಾಸಕೋಶ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಈ ವೈದ್ಯರು.
ಧೂಳಿನ ಕಣಗಳು ಬಹಳ ಅಪಾಯಕಾರಿಯಾಗಿದ್ದು, ರಕ್ತನಾಳಗಳು ಬ್ಲಾಕ್ ಆಗಿ ಅಥವಾ ರಕ್ತ ಸೋರುವಿಕೆ ಮೆದುಳಿಗೆ ಕಾರಣವಾಗುತ್ತವೆ. ಇದರಿಂದ ರಕ್ತ ಸಂಚಾರ ನಿಂತುಹೋಗಿ ಪಾರ್ಶ್ವವಾಯು ಉಂಟಾಗುತ್ತದೆ ಎನ್ನುತ್ತಾರೆ ಏಮ್ಸ್ನ ನರರೋಗ ವಿಭಾಗದ ಪ್ರೋಫೆಸರ್ ಕಾಮೇಶ್ವರ್ ಪ್ರಸಾದ್.
‘ಗಾಳಿಯಲ್ಲಿನ ಧೂಳಿನ ಕಣಗಳು (ಪರ್ಟಿಕ್ಯೂಲೇಟ್ ಮ್ಯಾಟರ್ಸ್) ಬಹಳ ಸಣ್ಣದಾಗಿದ್ದು, ರಕ್ತನಾಳಗಳಲ್ಲಿ ಸುಲಭವಾಗಿ ಹೋಗಬಹುದು ಮತ್ತು ಪಾರ್ಶ್ವವಾಯುವಿನ ತೊಂದರೆಯನ್ನು ತಂದೊಡ್ಡಬಹುದು. ದೀರ್ಘಕಾಲದವರೆಗೆ ಈ ರೀತಿಯ ಗಾಳಿಯನ್ನು ಸೇವಿಸಿದ್ದೇ ಆದಲ್ಲಿ ಅವು, ಮೆದುಳಿನಲ್ಲಿನ ಒಳಪದರವನ್ನು ಹಾಳು ಮಾಡಿ ರಕ್ತಸ್ರಾವಕ್ಕೆ ಕಾರಣವಾಗುತ್ತದೆ’ ಎಂದು ವಿವರಿಸಿದರು.
‘ಕಳೆದ ದಶಕಗಳಿಂದ ಭಾರತದಲ್ಲಿ ಪಾರ್ಶ್ವವಾಯುಗೆ ತುತ್ತಾಗುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಿಂದೆ 60–70 ವಯಸ್ಸಿನವರಿಗೆ ಸ್ಟ್ರೋಕ್ ಆಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ 40 ವರ್ಷ ಹಾಗೂ ಅದಕ್ಕಿಂತ ಚಿಕ್ಕವರೂ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ’ ಎಂದು ಫೋರ್ಟಿಸ್ ನೊಯಿಡಾದಲ್ಲಿ ನರರೋಗ ವಿಭಾಗದ ಮುಖ್ಯಸ್ಥೆ ಜ್ಯೋತಿ ಬಾಲ ಶರ್ಮಾ ತಿಳಿಸಿದರು.
ಮಾಲಿನ್ಯಪೂರಕ ಗಾಳಿಯನ್ನು ಸೇವಿಸುವುದು ಒಂದೇ ಧೂಮಪಾನ ಮಾಡುವುದು ಒಂದೇ. ಎರಡೂ ಮೆದುಳಿನ ಒಳ ಪದರವನ್ನು ಹಾಳುಮಾಡಿ, ಪಾರ್ಶ್ವವಾಯುವಿಗೆ ಕಾರಣವಾಗುತ್ತವೆ ಎಂದು ವಿವರಿಸಿದರು.