10 ದಿನದ ಹಸುಗೂಸಿಗೆ ಹೃದಯ ಶಸ್ತ್ರಚಿಕಿತ್ಸೆ ಮೂಲಕ ಜೀವನದಾನ

ತಾಯಿಯ ಗರ್ಭದಿಂದ ಹೊರಬಂದ ಅವಳಿಜವಳಿ ಮಕ್ಕಳಲ್ಲಿ ಒಂದು ಮಗು ತೀವ್ರ ಉಸಿರಾಟದ ತೊಂದರೆಯಿಂದ ಜೀವನ್ಮರಣದ ನಡುವೆ ಹೋರಾಡುತ್ತಿತ್ತು. ಕೇವಲ 2 ಕೆಜಿಗಿಂತ ಕಡಿಮೆಯಿದ್ದ ಗೋವಾದ 10 ದಿನದ ಹಸುಗೂಸಿಗೆ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಿ ಜೀವನದಾನ ನೀಡುವಲ್ಲಿ ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯಶಸ್ತ್ರಚಿಕಿತ್ಸಾ ವಿಭಾಗ ತಜ್ಞವೈದ್ಯರಾದ ಡಾ. ಪ್ರವೀಣ ತಂಬ್ರಳ್ಳಿಮಠ ಅವರ ತಂಡವು ಯಶಸ್ವಿಯಾಗಿದೆ.

ಗೋವಾದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ ತೀವ್ರವಾದ ಉಸಿರಾಟದ ತೊಂದರೆ, ಎದೆಬಿಗಿತ ಹಾಗೂ ನೀಲಿ ಬಣ್ಣಕ್ಕೆ ತಿರಗುತ್ತಿತ್ತು. ಇದನ್ನು ಕಂಡ ವೈದ್ಯರು ಶೀಘ್ರವೇ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ತೆಗೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ. ಮಗು ಆಸ್ಪತ್ರೆಗೆ ಬಂದ ತಕ್ಷಣವೇ ಪರೀಕ್ಷಿಸಲಾಗಿ ಮಗು ಕೇವಲ 10 ದಿನ ಹಾಗೂ 2 ಕೆಜಿಗಿಂತ ಕಡಿಮೆ ತೂಗುತ್ತಿತ್ತು. ಹೃದಯದಿಂದ ಪಲ್ಮನರಿ ಮತ್ತು ಅರೊಟಾದ ಎರಡು ಮುಖ್ಯ ರಕ್ತನಾಳಗಳ ಮೂಲಕ ರಕ್ತವು ಹೊರಹೋಗುತ್ತಿತ್ತು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಟ್ರಾನ್ಸಪೊಸಿಶನ್ ಆಫ್ ದಿ ಗ್ರೇಟ್ ಆರ್ಟರಿ( ಟಿಜಿಎ) ಎಂದು ಕರೆಯಲ್ಪಡುತ್ತದೆ. ಇದರಿಂದ ಉಸಿರಾಟ ಸೇರಿದಂತೆ ಇನ್ನಿತರ ತೊಂದರೆಯನ್ನು ಮಗು ಅನುಭವಿಸುತ್ತಿತ್ತು. ಈ ರೀತಿಯ ಶಸ್ತ್ರಚಿಕಿತ್ಸೆ ನಡೆಸುವದು ಅತ್ಯಂತ ಕ್ಲಿಷ್ಟಕರ.

ವೈದ್ಯರು ತಡಮಾಡದೇ ನೇರವಾಗಿ ಶಸ್ತ್ರಚಿಕಿತ್ಸಾ ಕೊಠಡಿಗೆ ಸ್ಥಳಾಂತರಿಸಿ ನಿರಂತರ 8 ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ಹೃದಯದ ಮುಖ್ಯ ರಕ್ತನಾಳ ಹಾಗೂ ಪಲ್ಮನರಿ ರಕ್ತನಾಳವನ್ನು ಸರಿಯಾದ ಮಾರ್ಗಕ್ಕೆ ಜೋಡಿಸಿ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಡಾ. ಪ್ರವೀಣ ತಂಬ್ರಳ್ಳಿಮಠ ನೇತೃದ ತಂಡವು ಯಶಸ್ವಿಯಾಗಿದೆ. ನವಜಾತು ಶಿಶು ಹಾಗೂ 2 ಕೆಜಿಗಿಂತ ಕಡಿಮೆ ತೂಕದ ಮಗುವಿನ ಹೃದಯವು 50ಗ್ರಾಮಕ್ಕಿಂತ ಕಡಿಮೆ ತೂಗುತ್ತಿದ್ದರಿಂದ ಶಸ್ತ್ರಚಿಕಿತ್ಸೆ ಅತ್ಯಂತ ಕಠಿಣವಾಗಿತ್ತು. ಹೃದಯದಿಂದ ಪಲ್ಮನರಿ ಮತ್ತು ಅರೊಟಾದ ಎರಡು ಮುಖ್ಯ ರಕ್ತನಾಳಗಳ ಮೂಲಕ ರಕ್ತವು ಹೊರಹೋಗುತ್ತಿತ್ತು. ಇದನ್ನು ನಿಗದಿತ ಹೃದಯದ ಪಂಪಿಂಗ ಚೆಂಬರಗೆ ಜೋಡಿಸಿ, ಮಗುವಿನ ಹೃದಯವನ್ನು ಸರಿಪಡಿಸಲಾಯಿತು. ಈ ರೀತಿಯ ತೊಂದರೆಯುಳ್ಳ ನವಜಾತ ಶಿಶುಗಳು ಜನಿಸಿದ ಒಂದು ತಿಂಗಳೊಳಗಾಗಿ ಮರಣ ಹೊಂದುತ್ತವೆ. ಶಸ್ತ್ರಚಿಕಿತ್ಸೆಯನ್ನು ಗೋವಾದ ಆರೋಗ್ಯ ಯೋಜನೆಯಾದ ದೀನದಯಾಳ ಸ್ವಾಸ್ಥ್ಯ ಸೇವಾ ಯೋಜನೆಯಡಿಯಲ್ಲಿ ನೆರವೇರಿಸಲಾಗಿದೆ.

ಅತ್ಯಂತ ಕ್ಲಿಷ್ಟಕರವಾದ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ತಜ್ಞವೈದ್ಯರಾದ ಡಾ. ಪ್ರವೀಣ ತಂಬ್ರಳ್ಳಿಮಠ, ಡಾ ನಿಕುಂಜ ವ್ಯಾಸ ಅವರಿಗೆ ಅರವಳಿಕೆ ತಜ್ಞವೈದ್ಯರಾದ ಡಾ. ಆನಂದ ವಾಘರಾಳಿ, ಡಾ. ಶರಣಗೌಡ ಪಾಟೀಲ, ಡಾ. ನಿಧಿ ಗೋಯಲ್ ಅವರು ಸಹಕರಿಸಿದರು. ಶಸ್ತ್ರಚಿಕಿತ್ಸೆ ನೇರವೇರಿಸಿದ ನಂತರ ಮಗು ಈಗ ಗುಣಮುಖಗೊಂಡಿದೆ. ಇದರಿಂದ ಮಗುವಿನ ಪಾಲಕರು ಸಂತೋಷಗೊಂಡು ವೈದ್ಯರಿಗೆ, ನರ್ಸಿಂಗ ಸಿಬ್ಬಂದಿಗಳಿಗೆ ಅಭಿನಂದಿಸಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಸಂಸ್ಥೆಯ ಆಡಳಿತ ಮಂಡಳಿ ಹಾಗೂ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here