ಬೆಂಗಳೂರು : ಕಳೆದ ನಾಲ್ಕು ವರ್ಷದ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್ 19 ಕೊರೊನಾ ರೋಗವೂ ವಿಶ್ವದಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಿ ಹಲವರ ಸಾವಿಗೆ ಕಾರಣವಾಗಿತ್ತು. ಈಗ ಮತ್ತೆ ಅದೇ ಡಿಸೆಂಬರ ತಿಂಗಳು ಬಂದಿದೆ ಮತ್ತೆ ಚೀನಾದಲ್ಲಿ ಕರೊನಾ ರೀತಿಯ ವೈರಸ್ ದಾಳಿ ಮಾಡಿದ್ದು, ಮಕ್ಕಳ ಶ್ವಾಸಕೋಶ ವ್ಯವಸ್ಥೆಗೆ ತೊಂದರೆಯನ್ನುಂಟು ಮಾಡಿದೆ. ಚೀನಾದಲ್ಲಿ ಅನೇಕ ಆಸ್ಪತ್ರೆಗಳು ರೋಗಿಗಳಿಂದ ತುಂಬಿವೆ. ಇದರಿಂದ ಸರಕಾರವು ಮುನ್ನೆಚ್ಚರಿಕಾ ಕ್ರಮವಾಗಿ ಅನೇಕ ಜಾಗೃತೆಯನ್ನು ವಹಿಸಿದೆ. ಆರೋಗ್ಯ ಮತ್ತು ಕುಟುಮಭ ಕಲ್ಯಾಣ ಇಲಾಖೆಯು ಮಕ್ಕಳ ಮೇಲೆ ತೀವ್ರ ನಿಗಾ ವಹಿಸಲು ಎಲ್ಲ ರಾಜ್ಯಗಳಿಗೆ ಸೂಚಿಸಿದೆ.
ಚೀನಾದ ಉತ್ತರ ಭಾಗದ ಮಕ್ಕಳಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ ರೀತಿಯ ಪ್ರಕರಣಗಳು ರಾಜ್ಯದಲ್ಲಿ ಹರಡದಂತೆ ತಡೆಯಲು ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಆರೋಗ್ಯ ಸಿಬ್ಬಂದಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಶೀತ ಮತ್ತು ಜ್ವರ 5 ರಿಂದ 7 ದಿನಗಳು ಇರಲಿವೆ. ಎಳೆ ಮಕ್ಕಳು, ವೃದ್ಧರು, ಗರ್ಭಿಣಿಯರು, ಗಂಭೀರ ಸ್ವರೂಪದ ಅನಾರೋಗ್ಯ ಸಮಸ್ಯೆ ಇರುವವರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಜನರು ವಹಿಸಬೇಕಾದ ಎಚ್ಚರಿಕೆ : ಕೆಮ್ಮುವಾಗ ಮತ್ತು ಶೀನುವಾಗ ಕರವಸ್ತ್ರದಿಂದ ಬಾಯಿ, ಮೂಗು ಮುಚ್ಚಿ- ಕೊಳ್ಳುವುದು, ಸೋಪಿನಿಂದ ಕೈ ತೊಳೆದುಕೊಳ್ಳುವುದು, ಶೀತ-ಜ್ವರ ಬಾಧೆ ಇದ್ದರೆ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವದು ಸೇರಿದಂತೆ ವಿವಿಧ ಕ್ರಮಗಳ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ. ರಂದೀಪ್ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳ సిಬ್ಬಂది ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ನ್ಯುಮೋನಿಯಾ ಚಿಕಿತ್ಸೆಗೆ ಅಗತ್ಯವಿರುವ ಮಾತ್ರೆಗಳು ಹಾಗೂ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ಅಗತ್ಯವಿರುವಷ್ಟು ಪಿಪಿಇ ಕಿಟ್ಗಳನ್ನು ದಾಸ್ತಾನು ಮಾಡಿಕೊಳ್ಳುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಶೀತ-ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆಗಳುಳ್ಳ ಪ್ರಕರಣಗಳನ್ನು ಆರೋಗ್ಯ ಇಲಾಖೆಯ ಪೋರ್ಟಲ್ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಯಾವುದೇ ಪ್ರದೇಶಗಳಲ್ಲಿ ಈ ಪ್ರಕರಣಗಳ ಸಂಖ್ಯೆ ಅನಿಯಮಿತ ಪ್ರಮಾಣದಲ್ಲಿ ಹೆಚ್ಚಳವಾದರೆ ವಿಶೇಷ ನಿಗಾ ಇರಿಸಬೇಕು. ಇಂತಹ ಪ್ರಕರಣಗಳ ಪರೀಕ್ಷಾ ವರದಿಗಳ ಕುರಿತು ಆರೋಗ್ಯ ಇಲಾಖೆಯ ಪೋರ್ಟಲ್ನಲ್ಲಿ ಮಾಹಿತಿ ದಾಖಲಿಸಬೇಕು ಎಂದು ಸುತ್ತೋಲೆಯಲ್ಲಿ ನೀಡಲಾಗಿದೆ.
ಕೋವಿಡ್ ನಿಯಂತ್ರಣಕ್ಕೆ ಈ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೋವಿಡ್ ಚಿಕಿತ್ಸೆಗೆ ನಿಗದಿಪಡಿಸಿದ್ಧ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಸನ್ನದ್ಧತೆ ಕುರಿತು ಪರಿಶೀಲನೆ ನಡೆಸಬೇಕು. ಹಾಸಿಗೆಗಳ ಲಭ್ಯತೆ, ವೈದ್ಯರು, ಅರೆವೈದ್ಯಕೀಯ ಮತ್ತು ಇತರ ಸಿಬ್ಬಂದಿಯ ಲಭ್ಯತೆ, ಪಿಪಿಇ ಕಿಟ್, ಆಮ್ಲಜನಕ, ಔಷಧಿಗಳ ದಾಸ್ತಾನಿನ ಕುರಿತು ಖಚಿತಪಡಿಸಿಕೊಳ್ಳಬೇಕು. ನ್ಯುಮೋನಿಯಾ ಸೋಂಕಿನಿಂದ ಉದ್ಭವಿಸಬಹುದಾದ ಪರಿಸ್ಥಿತಿ ಎದುರಿಸಲು ಆಸ್ಪತ್ರೆಗಳನ್ನು ಸಜ್ಜುಗೊಳಿಸಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.
ಸಮುದಾಯ ಹಂತದಲ್ಲಿ ತೀವ್ರ ನಿಗಾ ಇರಿಸಬೇಕು. ಒಂದೇ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ನ್ಯುಮೋನಿಯಾ ಪ್ರಕರಣಗಳು ಪತ್ತೆಯಾದಲ್ಲಿ (ಕ್ಲಸ್ಟರ್) ಆ ಬಗ್ಗೆ ವಿಶೇಷ ನಿಗಾ ಇರಿಸಬೇಕು. ಕೋವಿಡ್ ಸೋಂಕು ದೃಢಪಡದೇ ಉಸಿರಾಟದಿಂದ ಸಾವು ಸಂಭವಿಸಿದ ಪ್ರಕರಣಗಳಲ್ಲಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸಬೇಕು. ಎಲ್ಲ ವೈರಾಣು ಸಂಶೋಧನಾ ಕೇಂದ್ರಗಳು ಮತ್ತು ಪ್ರಯೋಗಾಲಯಗಳನ್ನೂ ಸನ್ನದ್ಧ ಸ್ಥಿತಿಯಲ್ಲಿಡಬೇಕು ಎಂದು ಸೂಚಿಸಲಾಗಿದೆ.
ಆರೋಗ್ಯ ಇಲಾಖೆಯು ವೈದ್ಯಕೀಯ ಸೌಲಭ್ಯಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲು ಮುಂದಾಗಿದೆ.