ಬೇಸಿಗೆ ಕಾಲದಲ್ಲಿ ಸೂರ್ಯನ ತೀಕ್ಷ್ಣ ಕಿರಣಗಳಿಂದ ಶರೀರದಲ್ಲಿ ಅತಿ ಸ್ವೇದ ಉತ್ಪತ್ತಿಯಾಗಿ ನಿರ್ಜಲೀಕರಣ, ತ್ವಚಾ ಅಲರ್ಜಿ ರೋಗಗಳು ಮತ್ತು ಜೀವಸತ್ವಗಳ ಕೊರತೆ ಉಂಟಾಗುತ್ತದೆ. ಅತೀ ತಾಪವು ಶರೀರವನ್ನು ಪೀಡಿಸುವುದಲ್ಲದೇ ಏಕಾಗ್ರತೆಯಲ್ಲಿ ವ್ಯತ್ಯಾಸ, ಶಾರೀರಿಕ ದಣಿವು ಮತ್ತು ನಿದ್ರಾಹಾನಿಯನ್ನುಂಟು ಮಾಡುತ್ತದೆ. ತಾಜಾ, ಸುಲಭವಾಗಿ ಜೀರ್ಣವಾಗುವ ಮತ್ತು ಶರೀರವನ್ನು ತಂಪಾಗಿ ಇಡುವ ಹಣ್ಣು-ಹಂಪಲು, ತರಕಾರಿಗಳು, ಜ್ಯೂಸ್ ಹಾಗೂ ಮಿಲ್ಕ ಶೇಕಗಳನ್ನು ಸೇವಿಸಬೇಕು.
ತರಕಾರಿಗಳು
ಸೋರೆಕಾಯಿ : ಇದು ಶರೀರದ ಉಷ್ಣತೆಯನ್ನು ತಗ್ಗಿಸಿ ಶೀತ ಅನುಭವ ನೀಡುತ್ತದೆ. ಇದರ ಪಲ್ಯೆ ಹಾಗೂ ಜ್ಯೂಸ್ ತಯಾರಿಸಿ ಸೇವಿಸಬಹುದು. ಕಹಿ ಸೋರೆಕಾಯಿ ಆರೋಗ್ಯಕ್ಕೆ ಹಾನಿಕರ.
ಕುಂಬಳಕಾಯಿ: ಇದರಲ್ಲಿ ಎಂಟಿ ಆಕ್ಸಿಡಂಟ್ಸ್, ಕ್ಯಾರೋಟಿನ್ ಹಾಗೂ ಪಾಲಿಪಿನಾಲ್ಸ್ ಹೇರಳವಾಗಿರುವುದರಿಂದ ಶರೀರದ ಉಷ್ಣತೆಯನ್ನು ನಿಯಂತ್ರಿಸುತ್ತದೆ.
ಹೀರೆಕಾಯಿ: ಇದು ಹೊಟ್ಟೆಯಲ್ಲಿನ ಆಮ್ಲತೆಯನ್ನು ಕಡಿಮೆಮಾಡುವುದರಿಂದ ಅಲ್ಸರನ್ನು ತಡೆಗಟ್ಟುತ್ತದೆ.
ಚವಳಿಕಾಯಿ : ಇದು ನರಕೋಶಗಳಿಗೆ ಚೈತನ್ಯ ನೀಡಿ ದಣಿವನ್ನು ನಿವಾರಿಸುತ್ತದೆ.
ಬೂದು ಕುಂಬಳಕಾಯಿ : ಇದು ಶರೀರವನ್ನು ತಂಪಾಗಿಸುವ ಗುಣ-ಧರ್ಮಗಳನ್ನು ಹೊಂದಿದೆ.
ಸಿಹಿ ಮೆಕ್ಕೆಜೋಳ: ಇದರಲ್ಲಿ ಸ್ಟಾರ್ಚ, ಲೂಟಿನ್ ಹಾಗೂ ಜಿಜಾಂಥಿನ್ ಹೇರಳವಾಗಿರುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
ಇವುಗಳಷ್ಟೇ ಅಲ್ಲದೇ, ಕುಂಬಳ ಕಾಯಿಯನ್ನು ಹೋಲುವ ಚೀನೀಕಾಯಿ, ಎಲೆಕೋಸು, ಹೂಕೋಸು, ಬ್ರೊಕೊಲಿ, ದೊಡ್ಡ ಮೆಣಸಿನಕಾಯಿ, ಟೊಮ್ಯಾಟೊ, ಬದನೆಕಾಯಿ, ಹಾಗಲಕಾಯಿ, ಸವತೆಕಾಯಿ, ಸಬ್ಬಸಿಗೆ, ಕೋತಂಬರಿ ಸೊಪ್ಪು, ಪಾಲಕ ಸೊಪ್ಪು, ಕಾಲೇ (ಕೋಸುಗಡ್ಡೆ), ಟರ್ನಿಪ್ (ಸವಿಮೂಲಂಗಿ), ಮೆಂತೆಬೀಜ, ಅಜಮೋದಾ (ಸೆಲೆರಿ), ಬಡೇಸೋಪು, ಬದಾಮು, ಮಜ್ಜಿಗೆ, ಮೊಸರು, ಯೋರ‍್ಟ್ ಮತ್ತು ಏಲಕ್ಕಿಗಳನ್ನು ಬಳಸಬಹುದು.
ಜೀರಿಗೆ : ಇವುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿವಸ ಬೆಳಿಗ್ಗೆ ಕುಡಿಯಬೇಕು.
ಗಸಗಸೆ: ಇವುಗಳನ್ನು ರಾತ್ರಿ ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಸುಖ ನಿದ್ರೆಯಾಗಿ ಶರೀರ ತಂಪಾಗುವುದು.
ಅಗಸೆ ಬೀಜ : ಇದರಲ್ಲಿ ಎಂಟಿ ಆಕ್ಸಿಡಂಟ್ಸ್ ಹೇರಳವಾಗಿರುವುದರಿಂದ ಬೇಸಿಗೆಯಲ್ಲಿ ತ್ವಚಾ ಹಾಗೂ ಕೇಶದ ಆರೋಗ್ಯ ಕಾಪಾಡುತ್ತದೆ.
ತುಳಸಿ ಬೀಜ: ಇವುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿವಸ ಬೆಳಿಗ್ಗೆ ಪಿಲ್ಟರ್ ಮಾಡದೇ ಕುಡಿಯಬೇಕು.
ಆಮ್ ಪನ್ನಾ: ಇದನ್ನು ಅಪಕ್ವ ಮಾವಿನ ಹಣ್ಣಿನಿಂದ ತಯಾರಿಸಲಾಗುತ್ತದೆ. ಇದು ಬೇಸಿಗೆಯ ಬಾಯಾರಿಕೆಯನ್ನು ತಡೆಗಟ್ಟುತ್ತದೆ.
ಪುದಿನಾ ರಸ: ಒಂದು ಗ್ಲಾಸ್ ನೀರಿನಲ್ಲಿ ಪುದಿನಾರಸ ಹಾಗೂ ಸ್ವಲ್ಪ ನಿಂಬೆ ರಸ ಸೇರಿಸಿ ಕುಡಿಯುವುದರಿಂದ ಪಚನಾಂಗ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಒಣ ಹಣ್ಣುಗಳು (ಡ್ರಾಯ್ ಪ್ರೂಟ್ಸ್): ಒಣ ಖರ್ಜೂರ, ಅಂಜೂರ, ಒಣ ದ್ರಾಕ್ಷಿ ಹಾಗೂ ಎಪ್ರಿಕಾಟ್ (ಜಲ್ದುರು ಹಣ್ಣು)ಗಳನ್ನು ಸೇವಿಸಬಹುದು.
ತಾಜಾ ಹಣ್ಣುಗಳು
ಕಲ್ಲಂಗಡಿ ಹಣ್ಣು: ಇದರಲ್ಲಿ ನೀರಿನಂಶ ಹೇರಳವಾಗಿರುವುದರಿಂದ ನಿರ್ಜಲೀಕರಣ ತಡೆಗಟ್ಟುತ್ತದೆ ಹಾಗೂ ಹೊಟ್ಟೆಯ ಉರಿಯನ್ನು ಶಾಂತಗೊಳಿಸುತ್ತದೆ.
ಕಿತ್ತಳೆ ಹಣ್ಣು: ಇದರಲ್ಲಿ ವಿಟಮಿನ್ ‘ಸಿ’ ಹೇರಳವಾಗಿರುವುದರಿಂದ ಜೀವಕೋಶಗಳ ಹಾನಿ ತಡೆಗಟ್ಟುತ್ತದೆ.
ಎಳೆನೀರು: ಇದರಲ್ಲಿ ವಿಟಮಿನ್ಸ್, ಮಿನರಲ್ಸ್, ಕ್ಯಾಲ್ಸಿಯಂ, ಪೊಟ್ಯಾಶಿಯಂ ಹಾಗೂ ಮ್ಯಾಗ್ನೆಶಿಯಂಗಳು ಹೇರಳವಾಗಿರುವುದರಿಂದ ಬೇಸಿಗೆಯಲ್ಲಿ ಉಂಟಾಗುವ ಅತೀ ಸ್ವೇದ ಹಾಗೂ ನಿರ್ಜಲೀಕರಣವನ್ನು ತಡೆಗಟ್ಟುತ್ತದೆ.
ಆಮಲಕಿ ಹಣ್ಣು (ಬೆಟ್ಟದ ನೆಲ್ಲಿಕಾಯಿ): ಇದು ‘ಸಿ’ ಜೀವಸತ್ವದ ಭಂಡಾರವಾಗಿರುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಬೆಟ್ಟದ ನೆಲ್ಲಿಕಾಯಿ ಹಾಗೂ ಬೇವಿನ ಎಲೆಯ ಪುಡಿಯನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಚರ್ಮ ರೋಗಗಳನ್ನು ಹತೋಟಿಯಲ್ಲಿಡಬಹುದು.
ಇವುಗಳಲ್ಲದೇ, ಖರ್ಬೂಜ, ಹನಿಡೆವ್ ಮೆಲನ್, ಬ್ಲಾö್ಯಕ್ ಬರ‍್ರಿಸ್, ರೆಸ್ಪ್ ಬರ‍್ರಿಸ್, ಸೇಬುಹಣ್ಣು, ಸೀಬೆಕಾಯಿ (ಮರಸೇಬು), ನೆಕ್ಟರಿನ್ಸ್ ಹಣ್ಣು, ಸ್ಟಾçಬೇರಿ, ಬ್ಲೂಬರ‍್ರಿ, ಅವಕಾಡೊ (ಬೆಣ್ಣೆ ಹಣ್ಣು), ಪೀಚ್ ಹಣ್ಣು, ಪೇರಲಹಣ್ಣು, ಕಿವಿಹಣ್ಣು ಹಾಗೂ ನಿಂಬೆಹಣ್ಣು ಸೇವಿಸಬಹುದು.
ಈ ರೀತಿಯಾಗಿ ಮೇಲ್ಕಂಡ ತರಕಾರಿಗಳು, ಹಣ್ಣುಗಳು ಹಾಗೂ ತಾಜಾರಸ (ಜ್ಯೂಸ್)ಗಳನ್ನು ಸೇವಿಸುವುದರಿಂದ ಬೇಸಿಗೆ ಕಾಲದಲ್ಲಿ ಉಂಟಾಗುವ ಶರೀರದ ಹಾನಿಯಿಂದ ತಪ್ಪಿಸಿಕೊಳ್ಳಬಹುದು.
ಡಾ. ಶಿವಶಂಕರಪ್ರಸಾದ. ಎಸ್. ದೇವಲಾಪೂರ
ಬೈಲಹೊಂಗಲ
ಮೊ. 9535568309