ಟ್ರಯಲ್ ಸಕ್ಸಸ್ ಆದ್ರೆ ಜಗತ್ತಿನಲ್ಲಿ ರಾರಾಜಿಸಲಿದೆ ಕುಂದಾನಗರಿ!
ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಮಹಾಮಾರಿ ಕೊರೊನಾಗೆ ಮೂಗುದಾರ ಹಾಕಲೆಂದೇ ಜಗತ್ತಿನ ಹಲವು ರಾಷ್ಟ್ರಗಳು ಲಸಿಕೆಯ ಸಂಶೋಧನೆಯಲ್ಲಿ ತೊಡಗಿವೆ. ಭಾರತದಲ್ಲಿ ಕೂಡ ಐಸಿಎಂಆರ್ ಹಾಗೂ ಭಾರತ ಬಯೋಟೆಕ್ ಸಂಸ್ಥೆಯ ಅಡಿಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಕಂಡು ಹಿಡಿಯಲಾಗಿದ್ದು, ಮೆಡಿಕಲ್ ಟ್ರಯಲ್ಗೂ ದೇಶದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೋವ್ಯಾಕ್ಸಿನ್ ಮೆಡಿಕಲ್ ಟ್ರಯಲ್ಗೆ ಐಸಿಎಂಆರ್ ದೇಶದ 13 ಆಸ್ಪತ್ರೆಗಳನ್ನು ಗುರುತಿಸಿದ್ದು, ಕರುನಾಡಿನ ಪ್ರತಿಷ್ಠಿತ ಆಸ್ಪತ್ರೆಯೂಂದು ಆಯ್ಕೆಯಾಗಿದೆ.
ಬೆಳಗಾವಿಯ ಜೀವನ ರೇಖಾ ಆಸ್ಪತ್ರೆ ಕೋವ್ಯಾಕ್ಸಿನ್ ಲಸಿಕೆಯ ಮೆಡಿಕಲ್ ಟ್ರಯಲ್ಗೆ ಅವಕಾಶ ಪಡೆದಿದೆ. ಬಹುನಿರೀಕ್ಷಿತ ಕೋವ್ಯಾಕ್ಸಿನ್ಗೆ ಮೆಡಿಕಲ್ ಟ್ರಯಲ್ಗೆ ಆಯ್ಕೆಯಾಗಿರುವ ರಾಜ್ಯದ ಏಕೈಕ ಆಸ್ಪತ್ರೆ ಎಂಬ ಕೀರ್ತೀಗೂ ಬೆಳಗಾವಿಯ ಜೀವನ ರೇಖಾ ಆಸ್ಪತ್ರೆ ಪಾತ್ರವಾಗಿದೆ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಅಮೀತ್ ಭಾತೆ ನೇತೃತ್ವದಲ್ಲಿ ಐವರು ಹಿರಿಯ ವೈದ್ಯರನ್ನು ಒಳಗೊಂಡ ತಂಡ ಮೆಡಿಕಲ್ ಟ್ರಯಲ್ಗೆ ಸಿದ್ಧಗೊಂಡಿದ್ದಾರೆ.
ಮೆಡಿಕಲ್ ಟ್ರಯಲ್ ನಡೆಯೋದು ಹೇಗೆ?
ಆರೋಗ್ಯವಂತ ನಾಗರಿಕರ ಮೇಲೆ ಕೋವ್ಯಾಕ್ಸಿನ್ ಟ್ರಯಲ್ ನಡೆಯಲಿದೆ. ಸ್ವಇಚ್ಛೆಯಿಂದ ಬರುವ ನಾಗರಿಕರ ಆರೋಗ್ಯ ತಪಾಸಣೆಗೆ ಒಳಪಡಿಸಿ ಅವರು ಆರೋಗ್ಯವಾಗಿದ್ರೆ ಮಾತ್ರ ಕೋವ್ಯಾಕ್ಸಿನ್ ಲಸಿಕೆಯ ಪ್ರಯೋಗ ನಡೆಸಲಾಗುತ್ತಿದೆ. ಈಗಾಗಲೇ ಕೊರೊನಾ ಸೋಂಕು ತಗುಲಿದವರ ಮೇಲೆ ಕೋವ್ಯಾಕ್ಸಿನ್ ಮೆಡಿಕಲ್ ಟ್ರಯಲ್ ಮಾಡಲು ಬರುವುದಿಲ್ಲ. ನೂರರಿಂದ ಇನ್ನೂರು ಆರೋಗ್ಯವಂತ ನಾಗರಿಕರ ಮೇಲೆ ಪ್ರಯೋಗ ನಡೆಯಲಿದೆ. ವ್ಯಾಕ್ಸಿನ್ ಕೊಟ್ಟ ಮೇಲೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿರುವುದು ಗೊತ್ತಾಗುತ್ತದೆ. ಟ್ರಯಲ್ಗೆ ಒಳಪಟ್ಟ ಎಲ್ಲರ ಸ್ಯಾಂಪಲ್ ಕಲೆಕ್ಟ್ ಮಾಡಿ ವರದಿಯನ್ನು ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾಗೆ ಕಳಿಸಿಕೊಡಲಾಗುವುದು ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ಅಮೀತ್ ಭಾತೆ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಮೆಡಿಕಲ್ ಟ್ರಯಲ್ಗೆ ಬೆಳಗಾವಿ ಆಯ್ಕೆ ಆಗಿದ್ದೇಗೆ?
ರಾಜ್ಯದಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳ ಸಂಖ್ಯೆ ಹೆಚ್ಚಿದ್ದರೂ ಜಗತ್ತಿಗೆ ತುರ್ತಾಗಿ ಬೇಕಿರುವ ಕೊರೊನಾ ಲಸಿಕೆಯ ಮೆಡಿಕಲ್ ಟ್ರಯಲ್ಗೆ ಬೆಳಗಾವಿಯ ಜೀವನ ರೇಖಾ ಆಯ್ಕೆ ಆಗಿದೆ. ಹೊಸದಾಗಿ ಸಂಶೋಧನೆ ಕೈಗೊಳ್ಳುವ ಲಸಿಕೆಗಳ ಮೆಡಿಕಲ್ ಟ್ರಯಲ್ಗೆ ಜೀವನ್ ರೇಖಾ ಆಸ್ಪತ್ರೆ ರಜಿಸ್ಟರ್ ಹೊಂದಿದೆ. ಭಾರತ ಬಯೋಟೆಕ್ ಸಂಸ್ಥೆಯ ಅಡಿಯಲ್ಲಿ ಸಂಶೋಧನೆಗೊಳ್ಳುವ ಬಹುತೇಕ ಲಸಿಕೆಗಳ ಮೆಡಿಕಲ್ ಟ್ರಯಲ್ ಜೀವನ ರೇಖಾ ಆಸ್ಪತ್ರೆಯಲ್ಲಿ ನಡೆದಿವೆ. ಭಾರತ್ ಬಯೋಟೆಕ್ ಸಂಸ್ಥೆಯ ರಜಿಸ್ಟರ್ ಅಲ್ಲಿಯೂ ಜೀವನ್ ರೇಖಾ ಆಸ್ಪತ್ರೆಯ ಹೆಸರಿದೆ. ಈ ಹಿಂದೆ ಭಾರತ್ ಬಯೋಟೆಕ್ ಸಂಸ್ಥೆ ಟೈಫಾಯ್ಡ್ಗೆ ಸಿದ್ಧಪಡಿಸಿದ್ದ ಲಸಿಕೆಯ ಮೆಡಿಕಲ್ ಟ್ರಯಲ್ ಕೂಡ ಬೆಳಗಾವಿಯಲ್ಲೇ ಯಶಸ್ಸಿಯಾಗಿತ್ತು. ಈ ಕಾರಣಕ್ಕೆ ಬಹುನಿರೀಕ್ಷಿತ ಕೋವ್ಯಾಕ್ಸಿನ್ ಲಸಿಕೆಯ ಮೆಡಿಕಲ್ ಟ್ರಯಲ್ಗೆ ಭಾರತ್ ಬಯೋಟೆಕ್ ಸಂಸ್ಥೆ ಹಾಗೂ ಐಸಿಎಂಆರ್ ಜೀವನ ರೇಖಾ ಆಸ್ಪತ್ರೆ ಆಯ್ದುಕೊಂಡಿರಬಹುದು ಎನ್ನುತ್ತಾರೆ ಇಲ್ಲಿನ ವೈದ್ಯರು.
ಟ್ರಯಲ್ ಸಕ್ಸಸ್ ಆದ್ರೆ ಜಗತ್ತಿನಲ್ಲಿ ರಾರಾಜಿಸಲಿದೆ ಕುಂದಾನಗರಿ ಹೆಸರು!
ಭಾರತ ಬಯೋಟೆಕ್ ಸಂಶೋಧಿಸುವ ಬಹುತೇಕ ಹೊಸ ಲಸಿಕೆಗಳು ಹೆಚ್ಚು ಸಕ್ಸಸ್ ಆಗಿದ್ದು ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ. ಜಗತ್ತೇ ಕುತೂಹಲದಿಂದ ಕಾಯುತ್ತಿರುವ ಕೋವ್ಯಾಕ್ಸಿನ್ ಲಸಿಕೆಯ ಮೆಡಿಕಲ್ ಟ್ರಯಲ್ ಸಕ್ಸಸ್ ಆದ್ರೆ ಜಗತ್ತಿನಲ್ಲಿ ಕುಂದಾನಗರಿ ಹೆಸರು ರಾರಾಜಿಸಲಿದೆ. ಕೋವ್ಯಾಕ್ಸಿನ್ಗೆ ಭಾರತ ಅಷ್ಟೇ ಅಲ್ಲದೇ ಜಗತ್ತಿನಲ್ಲಿ ಬೇಡಿಕೆ ಹೆಚ್ಚಾಗಲಿದೆ. ಅಲ್ಲದೇ ಕೋವಿಡ್ಗೆ ಮೊದಲ ಲಸಿಕೆಯೂ ಇದಾಗಲಿದೆ ಎನ್ನುತ್ತಾರೆ ಡಾ. ಅಮೀತ್ ಭಾತೆ ಅವರು.