ಪ್ರೊ.(ಡಾ.) ಎಂ.ವಿ.ಜಾಲಿ, ಎಂಡಿ, ಎಫ್‍ಆರ್‍ಸಿಪಿ (ಲಂಡನ್)
ವೈದ್ಯಕೀಯ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು,
ಕೆ.ಎಲ್.ಇ.ಎಸ್ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬೆಳಗಾವಿ ಹಾಗೂ
ಪ್ರಾಧ್ಯಾಪಕರು, ಮಧುಮೇಹ (ಮೆಡಿಸಿನ್) ಜೆ.ಎನ್.ಮೆಡಿಕಲ್ ಕಾಲೇಜು, ಬೆಳಗಾವಿ– 590010
ಕೊರೊನಾ ವೈರಸ್ ತ್ವರಿತ ಗತಿಯಲ್ಲಿ ವ್ಯಾಪಿಸುತ್ತಿರುವುದು ಜಗತ್ತಿನ ಬಹುತೇಕ ದೇಶಗಳಲ್ಲಿ ಆತಂಕ ಸೃಷ್ಟಿಸಿದೆ. ಭಾರತದಲ್ಲಿಯೂ ಈ ವೈರಸ್ ಬಹು ದೊಡ್ಡ ಆವಾಂತರ ಸೃಷ್ಟಿಸುತ್ತಿದ್ದು ಇಡೀ ದೇಶವನ್ನೇ ಲಾಕ್‍ಡೌನ್ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದಲ್ಲಿಯೂ ಕೊರೊನಾ ವೈರಸ್ ಈಗಾಗಲೇ ಹಲವರ ಜೀವ ಬಲಿ ಪಡೆದಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಈ ವೈರಸ್ ಹಾವಳಿಗೆ ತುತ್ತಾಗದೇ ಆರೋಗ್ಯವಾಗಿರಬೇಕಾದರೆ ಕೆಲವೊಂದು ಕಟ್ಟುನಿಟಿನ ಕ್ರಮಗಳನ್ನು ಅನುಸರಿಸಲೇಬೇಕು.
ಮಧುಮೇಹದಿಂದ ಬಳಲುತ್ತಿರುವ ಮತ್ತು ನಮ್ಮ ಆಸ್ಪತ್ರೆಯ ಮಧುಮೇಹ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿರುವ ಹಲವಾರು ಜನರು ಇತ್ತೀಚೆಗೆ ನನಗೆ ದೂರವಾಣಿ, ವಾಟ್ಸಪ್ ಮತ್ತು ಈಮೇಲ್ ಮೂಲಕ ಸಂಪರ್ಕಿಸಿ ಕೊರೊನಾ ವೈರಸ್ ತಗುಲದಂತೆ ಹೇಗೆ ಎಚ್ಚರಿಕೆ ವಹಿಸಬೇಕು? ಮತ್ತು ಮಧುಮೇಹದಿಂದ ಬಳಲುತ್ತಿರುವ ತಮಗೆ ಈ ಕೊರೊನಾ ವೈರಸ್‍ನಿಂದ ಯಾವ ರೀತಿಯ ಅಪಾಯಗಳು ಎದುರಾಗಬಹುದು? ಅದರಿಂದ ಹೇಗೆ ರಕ್ಷಣೆ ಪಡೆದುಕೊಳ್ಳಬೇಕು? ಯಾವ ಯಾವ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಬೇಕು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಮಧುಮೇಹ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕೊರೊನಾ ವೈರಸ್ ಹೆಚ್ಚು ಹಾನಿಯನ್ನುಂಟು ಮಾಡುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ರೋಗಿಗಳು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಆತಂಕಕ್ಕೆ ಒಳಗಾಗುವುದರಿಂದ ಸಕ್ಕರೆಯ ಮಟ್ಟವನ್ನು ನಿಗದಿತ ಪ್ರಮಾಣದಲ್ಲಿ ಕಾಯ್ದುಕೊಳ್ಳುವುದು ಅಸಾಧ್ಯ. ಆತಂಕಕ್ಕೆ ಒಳಗಾದರೆ ನಿಮ್ಮ ದೇಹದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗಿ ಆರೋಗ್ಯದಲ್ಲಿ ಏರುಪೇರು ಆಗುವ ಎಲ್ಲಾ ಸಾಧ್ಯತೆಗಳಿವೆ. ಇದರಿಂದ ಅನಾರೋಗ್ಯ ಉಂಟಾಗುತ್ತದೆ. ಈ ವಿಷ ಚಕ್ರಕ್ಕೆ ಸಿಲುಕದಂತೆ ಸಮಚಿತ್ತದಿಂದ ಇರುವುದನ್ನು ರೂಢಿಸಿಕೊಳ್ಳಿ. ನಿಮ್ಮ ಸಕ್ಕರೆ ಮಟ್ಟ ಹತೋಟಿಯಲ್ಲಿದ್ದರೆ ನಿಮ್ಮ ರೋಗ ನಿರೋಧಕ ಶಕ್ತಿ ಬಲಿಷ್ಠವಾಗಿರುತ್ತದೆ. ಕೊರೊನಾ ವೈರಸ್ ವಿರುದ್ಧ ಹೋರಾಡಲು ನಿಮ್ಮ ರೋಗನಿರೋಧಕ ಶಕ್ತಿ ಸಶಕ್ತವಾಗಿರುತ್ತದೆ. ಆದ್ದರಿಂದ ನಿಮ್ಮ ಸಕ್ಕರೆ ಮಟ್ಟ ಹತೋಟಿಯಲ್ಲಿ ಇಟ್ಟುಕೊಳ್ಳುವುದು ಅತ್ಯಾವಶ್ಯಕ.
ಬಿಕ್ಕಟ್ಟಿನ ಈ ಸಂದರ್ಭದಲ್ಲಿ ನಿಮ್ಮ ವೈದ್ಯರನ್ನು ಭೇಟಿ ಮಾಡಿ ಅಥವಾ ಅವರಿಂದ ಸಲಹೆ ಪಡೆದುಕೊಳ್ಳಿ. ಜತೆಗೆ ತಜ್ಞ ವೈದ್ಯರು ಸಲಹೆ ಮಾಡಿದಂತೆ, ಪಥ್ಯಾಹಾರ, ನಿಯಮಿತ ವ್ಯಾಯಾಮ ಮಾಡುವ ಮೂಲಕ ಮನೆಯಲ್ಲಿನ ಜನರೊಂದಿಗೆ ಆಹ್ಲಾದಕರ ವಾತಾವರಣದಲ್ಲಿ ಪರಸ್ಪರ ಸಂತಸದಿಂದ ಇರಬೇಕು. ನೀವು ಮಧುಮೇಹಿಗಳು ಎನ್ನುವ ಕಾರಣಕ್ಕೆ ಹೆಚ್ಚಿನ ಅಪಾಯಗಳೇನೂ ಇಲ್ಲ. ಪದೇ ಪದೇ ಕೈ ತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜತೆಗೆ ವೈಯಕ್ತಿಕ ಶುಚಿತ್ವಕ್ಕೆ ಮಹತ್ವ ಕೊಟ್ಟು ಆರೋಗ್ಯ ಕಾಪಾಡಿಕೊಳ್ಳಬೇಕು.
ಟಿವಿ, ರೇಡಿಯೋ, ಪತ್ರಿಕೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕೊರೊನಾ ವೈರಸ್ ಹರಡುವಿಕೆಯ ಕ್ಷಣ ಕ್ಷಣದ ಮಾಹಿತಿ ಲಭ್ಯವಾಗುತ್ತಿದೆ. ದಿನದ 24ಘಿ7 ಸುದ್ದಿ ವಾಹಿನಿಗಳ ಮಾಹಿತಿಯ ಮಹಾಪೂರ ಹಲವು ಗೊಂದಲಗಳಿಗೂ ಕಾರಣವಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಹಲವಾರು ಸುಳ್ಳು ಸುದ್ದಿಗಳೂ ಜನರ ಮಾನಸಿಕ ನೆಮ್ಮದಿ ಹಾಳು ಮಾಡಿರುವುದು ಸತ್ಯ. ಒತ್ತಡಗಳಿಗೆ ಒಳಗಾದಾಗ ಸಹಜವಾಗಿ ಸಕ್ಕರೆಯ ಮಟ್ಟದಲ್ಲಿ ಏರುಪೇರು ಆಗುತ್ತದೆ. ಇಂಥ ಒತ್ತಡಗಳಿಗೆ ಒಳಗಾಗದೇ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಬೇಕು.
ನಿಮ್ಮ ಸಕ್ಕರೆಯ ಮಟ್ಟದಲ್ಲಿ ಏರುಪೇರಾದರೆ, ಆಸ್ಪತ್ರೆಗೆ ಹೋಗಲು ಸಾಧ್ಯವಾಗದಿದ್ದರೆ ದೂರವಾಣಿ ಮೂಲಕ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಆಗ ನಿಮ್ಮ ಔಷಧಗಳ ಡೋಸ್‍ನ್ನು ಸರಿಹೊಂದಿಸುವ ಮೂಲಕ ನಿಮ್ಮ ಸಕ್ಕರೆಯ ಮಟ್ಟ ಹತೋಟಿಗೆ ತರಲು ತಜ್ಞ ವೈದ್ಯರು ನಿಮಗೆ ಸಹಾಯ ಮಾಡುತ್ತಾರೆ. ಇದರ ಜತೆಗೆ ನಿಮ್ಮ ಮನೆಗಳಲ್ಲಿಯೇ ನಿಮ್ಮ ಸಕ್ಕರೆಯ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುವ ಮೂಲಕ ನಿಮ್ಮ ಸಕ್ಕರೆಯ ಮಟ್ಟ ಹತೋಟಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಇದು ನಿಮ್ಮ ಆರೋಗ್ಯದ ಸ್ಥಿತಿಗತಿ ತಿಳಿಯಲು ಸಾಧ್ಯವಾಗುತ್ತದೆ. ಒಂದೊಮ್ಮೆ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಏರುಪೇರಾಗುತ್ತಿದ್ದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯವಾಗಿ ಮನೆಯಲ್ಲಿರಿ:
ಲಾಕ್‍ಡೌನ್ ಕಾರಣಕ್ಕೆ ಈಗ ಪ್ರತಿಯೊಬ್ಬರೂ ಮನೆಗಳಲ್ಲಿಯೇ ಬಂಧಿಗಳಾಗಿದ್ದೇವೆ. ಇದನ್ನು ಒಂದು ಶಿಕ್ಷೆ ಎಂದು ಪರಿಭಾವಿಸದೇ ಮನೆಯಲ್ಲಿ ಆರೋಗ್ಯವಾಗಿರುವುದಕ್ಕೆ ಕೆಲವೊಂದು ಸೃಜನಾತ್ಮಕ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು. ಪುಸ್ತಕ ಓದುವುದು, ಸಂಗೀತ ಕೇಳುವುದು, ಸಿನಿಮಾ ನೋಡುವುದು ಅಥವಾ ನಿಮಗಿಷ್ಟದ ವಿಡಿಯೋಗಳನ್ನು ನೋಡುವುದು, ಮನೆಯಲ್ಲಿಯೇ ಇರುವ ಕೈತೋಟದಲ್ಲಿ ಕೆಲಸ ಮಾಡುವುದು ಹೀಗೆ ಹತ್ತು ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಹಿತ–ಮಿತ ಆಹಾರ, ಸಕ್ಕರೆ ರಹಿತ ಪದಾರ್ಥ ಸೇವನೆ, ಪ್ರಿಜ್‍ನಲ್ಲಿ ಶೇಖರಿಸಿಟ್ಟಿರುವ ಆಹಾರಗಳ ವರ್ಜನೆ. ನಿಯಮಿತ ಆಹಾರ ಸೇವನೆ, ವ್ಯಾಯಾಮ ಮತ್ತು ಆಹ್ಲಾದಕರ ವಾತಾವರಣವನ್ನು ಮನೆಯಲ್ಲಿಯೇ ಸೃಷ್ಟಿಸಿಕೊಳ್ಳುವ ಮೂಲಕ ಆರೋಗ್ಯವಂತ ಸುಖ ಜೀವನವನ್ನು ಮಧುಮೇಹಿಗಳು ನಡೆಸಬಹುದು. ಎಲ್ಲರಂತೆ ಮಧುಮೇಹಿಗಳು ಕೊರೊನಾ ವೈರಸ್ ಅಂಟದಂತೆ ಎಚ್ಚರವಹಿಸಬೇಕು.