ಬಾಗಲಕೋಟೆಯ ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ರಾಜ್ಯಮಟ್ಟದ ಪೆಥಾಲಜಿ ಸಮ್ಮೇಳನ ಉದ್ಘಾಟಿಸಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಾತನಾಡಿದರು.
ಬಾಗಲಕೋಟೆ:ನಿಫಾ ವೈರಸ್, ಡೆಂಗಿ, ಚಿಕುನ್ಗುನ್ಯಾ, ಮಲೇರಿಯಾದಂತಹ ಮಾರಣಾಂತಿಕ ಕಾಯಿಲೆಗಳ ನಿಯಂತ್ರಣಕ್ಕೆ ಪೆಥಾಲಜಿಸ್ಟ್ ಹಾಗೂ ಮೈಕ್ರೊಬಯಾಲಜಿಸ್ಟ್ಗಳ ನಡುವೆ ಸಮನ್ವಯ ಅಗತ್ಯವಿದೆ. ಈ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದ ಬಿ.ವಿ.ವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ಶುಕ್ರವಾರ ಆರಂಭವಾದ ರಾಜ್ಯಮಟ್ಟದ ಪೆಥಾಲಜಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಊಹಿಸಲು ಸಾಧ್ಯವಾಗದ ಕಾಯಿಲೆಗಳು ಇಂದು ಜನಸಾಮಾನ್ಯ ರನ್ನು ಕಾಡುತ್ತಿವೆ. ಆ ನಿಟ್ಟಿನಲ್ಲಿ ವಿದೇಶಗಳಲ್ಲಿ ಸಿಗುವಷ್ಟು ಗುಣಮಟ್ಟದ ಆರೋಗ್ಯ ಸವಲತ್ತು ಇಲ್ಲಿ ಸಿಗುವಂತೆ ಮಾಡಬೇಕಿದೆ. ಅದಕ್ಕೆ ಕೇಂದ್ರದ ನೆರವು ಪಡೆಯಲಾಗುವುದು ಎಂದರು.
ರಾಜ್ಯದಲ್ಲಿ ಆರೋಗ್ಯ ಸವಲತ್ತು ಮೇಲ್ದರ್ಜೆಗೇರಿಸಲು ಶೀಘ್ರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಆರೋಗ್ಯ ಸಚಿವರ ಬಳಿಗೆ ರಾಜ್ಯದಿಂದ ನಿಯೋಗ ಕೊಂಡೊಯ್ಯಲಾಗುವುದು. ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಗುಣ ಮಟ್ಟದ ವೈದ್ಯಕೀಯ ಶಿಕ್ಷಣ ಸಿಗುತ್ತಿದೆ. ನಮ್ಮಲ್ಲಿ ಬೇಡಿಕೆಗಿಂತ ಹೆಚ್ಚು ವೈದ್ಯಕೀಯ ಕಾಲೇಜುಗಳು ಇದ್ದರೂ ಅವುಗಳಲ್ಲಿನ ಉತ್ತಮ ಶಿಕ್ಷಣದ ಕಾರಣಕ್ಕೆ ಹೊರ ರಾಜ್ಯದ ವಿದ್ಯಾರ್ಥಿಗಳು ಅಧ್ಯಯನಕ್ಕೆ ರಾಜ್ಯವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ‘ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಕಾರ್ಯಾಧ್ಯಕ್ಷರು ಹಾಗೂ ಶಾಸಕರಾದ ವೀರಣ್ಣ ಚರಂತಿಮಠ ಅವರು ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ರೋಗದಿಂದ ಬಳಲುತ್ತಿವೆ. ಅವರು ಚಿಕಿತ್ಸೆಗೆ ದಾವಣಗೆರೆ ಇಲ್ಲವೇ ಬೆಂಗಳೂರಿಗೆ ಹೋಗಬೇಕಿದೆ. ಬಡವರು ಅಲ್ಲಿಗೆ ಹೋಗಲು ಆಗುವುದಿಲ್ಲ. ಈಗಿರುವ ಚಿಕಿತ್ಸಾ ಕೇಂದ್ರ ದಾನಿಗಳ ನೆರವಿನಿಂದ ನಡೆಯುತ್ತಿದೆ. ನಮ್ಮದೇ ಸಹಕಾರ ಸಂಘ ವಾರ್ಷಿಕ ₹26 ಲಕ್ಷ ದೇಣಿಗೆ ನೀಡುತ್ತಿದೆ. ಹಾಗಾಗಿ ಸರ್ಕಾರದ ನೆರವು ಅಗತ್ಯವಿದೆ‘ ಎಂದ ಅವರು, ಇಂದು ವೈದ್ಯರು ಸಂಶೋಧನಾ ಕ್ಷೇತ್ರದತ್ತ ಹೆಚ್ಚು ಗಮನ ನೀಡುತ್ತಿಲ್ಲ. ಸಂಶೋಧನೆಗೆ ಆದ್ಯತೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ಹಾಗಾಗಿ ಅದಕ್ಕೆ ಹೆಚ್ಚಿನ ಒತ್ತು ನೀಡಿ‘ ಎಂದು ಮನವಿ ಮಾಡಿದರು.
ದೆಹಲಿಯ ಅಖಿಲ ಭಾರತ ವೈದ್ಯಕೀಯ ಸಂಶೋಧನಾ ಸಂಸ್ಥೆಯ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಡಾ.ಚಂದ್ರಶೇಖರ್ ಮಾತನಾಡಿ, ‘ನಿಖರವಾಗಿ ರೋಗ ಪತ್ತೆಗೆ ಹಾಗೂ ತಪ್ಪು ಅಂದಾಜು ಆಗದಂತೆ ತಡೆಯಲು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಬಳಕೆ ಮಾಡಿಕೊಳ್ಳಲು ಈಗ ಹೆಚ್ಚಿನ ಅವಕಾಶವಿದೆ. ಸಂಶೋಧನೆಗೂ ಹೆಚ್ಚಿನ ಅವಕಾಶವಿದೆ. ಜನರಿಗೆ ನೆರವಾಗುವ ಈ ಕಾರ್ಯಕ್ಕೆ ಸಂಸ್ಥೆಯಿಂದ ಆರ್ಥಿಕ ನೆರವು ಸಿಗಲಿದೆ‘ ಎಂದರು.
ಸಮಾರಂಭದಲ್ಲಿ ಹಿರಿಯ ವೈದ್ಯರಾದ ಡಾ.ಪಿ.ಆರ್.ಮಾಲೂರು, ಡಾ.ಜೆ.ಎಚ್.ಮಾರಣ್ಣವರ, ಡಾ. ಮಹಾಂತಪ್ಪ, ಡಾ.ಶ್ರವಣ್ಕುಮಾರ ಅವ ರನ್ನು ಸನ್ಮಾನಿಸಲಾಯಿತು. ಕೆಸಿಐಎಪಿಎಂ ಅಧ್ಯಕ್ಷ ಡಾ.ಎಚ್.ಎನ್.ರವಿಕುಮಾರ, ಎಸ್. ವೈದ್ಯಕೀಯ ಕಾಲೇಜಿನ ಪೆಥಾಲಜಿ ವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್.ಇನಾಮದಾರ ಮಾತನಾಡಿದರು.
ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ, ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಸಿದ್ದಣ್ಣ ಶೆಟ್ಟರ, ಡೀನ್ ಅಶೋಕ ಮಲ್ಲಾಪುರ, ಡಾ.ಸಾಯಿನಾಥ, ಡಾ.ಎಸ್.ವಿಜಯಶಂಕರ್, ಡಾ.ಎಂ.ಪ್ರಭು ಇದ್ದರು.