ಕ್ಷಯರೋಗ ಚಿಕಿತ್ಸಾ ಆಂದೋಲನ ಯಶಸ್ವಿಗೊಳಿಸಿ– ಡಾ.ಬೊಮ್ಮನಹಳ್ಳಿ
ಬೆಳಗಾವಿ: ಕ್ಷಯರೋಗದಿಂದ ಬಳಲುತ್ತಿರುವ ಜನರಿಗೆ ಸೂಕ್ತ ಉಚಿತ ಚಿಕಿತ್ಸೆ ಜತೆಗೆ ಆಪ್ತ ಸಮಾಲೋಚನೆ ಮೂಲಕ ರೋಗ ನಿವಾರಣೆಗೆ ಒತ್ತು ನೀಡಬೇಕು. ಅದೇ ರೀತಿ ಜಿಲ್ಲೆಯ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಜು.17) ನಡೆದ ಆರೋಗ್ಯ ಇಲಾಖೆಯ ವಿವಿಧ ವಿಷಯಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷಯರೋಗ ಬಾರದಂತೆ ತಡೆಯಲು ಜನರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು. ಅದೇ ರೀತಿ ರೋಗ ಗುಣಮುಖರಾಗಲು ಆರು ತಿಂಗಳು ನಿರಂತರ ಚಿಕಿತ್ಸೆ ಮುಂದುವರಿಸಬೇಕಿರುವುದರಿಂದ ಸೋಂಕಿತರ ಕುಟುಂಬದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಅಪೌಷ್ಟಿಕತೆ, ಎಚ್‍ಐವಿ ಹಾಗೂ ಮಧುಮೇಹ ಸಮಸ್ಯೆಗಳಿಂದಾಗಿ ಕ್ಷಯರೋಗ ನಿವಾರಣೆಗೆ ದೊಡ್ಡ ಸವಾಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ವಿವರಿಸಿದರು.
ತಂಬಾಕು ನಿಯಂತ್ರಣಕ್ಕೆ ಸೂಚನೆ:
ನಿಯಮಾವಳಿ ಉಲ್ಲಂಘಿಸಿ ಅನಧಿಕೃತವಾಗಿ ತಂಬಾಕು ಮಾರಾಟ ಮಾಡುವುದನ್ನು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಶಾಲಾ ಆವರಣದ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಶಾಲೆಯಲ್ಲಿ ಯಾವುದೇ ಖಾಸಗಿ ಕಂಪನಿಯು ಯಾವುದೇ ಬಗೆಯ ತಿನಿಸುಗಳನ್ನು ಉಚಿತವಾಗಿ ಹಂಚಲು ಅವಕಾಶ ನೀಡಬಾರದು ಎಂದು ತಿಳಿಸಿದರು.
ನಿಯಮ ಉಲ್ಲಂಘಿಸಿ ತಂಬಾಕು ಮಾರಾಟ ಕಂಡುಬಂದರೆ ಪೊಲೀಸ್ ನೆರವಿನೊಂದಿಗೆ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು ಹಾಗೂ ಶಾಲಾ ಆವರಣದಲ್ಲಿ ತಂಬಾಕು ಮಾರಾಟ ನಿಷೇಧಕ್ಕೆ ಸಂಬಂಧಿಸಿದಂತೆ ಫಲಕಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.
ತಂಬಾಕು ಕೊಟ್ಪಾ-2003 ಕಾಯ್ದೆ ಪರಿಣಾಮಕಾರಿ ಜಾರಿ; ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಡಾ.ಬೊಮ್ಮನಹಳ್ಳಿ ತಿಳಿಸಿದರು.
ತಂಬಾಕು ಸೇವನೆಯಿಂದ ಉಲ್ಬಣಿಸುವ ಕಾಯಿಲೆಗಳಿಂದ ಭಾರತದಲ್ಲಿ ಪ್ರತಿವರ್ಷ ಅಂದಾಜು ಹತ್ತು ಲಕ್ಷ ಜನರು ಸಾವನ್ನಪ್ಪುತ್ತಾರೆ ಎಂದು ಡಾ.ತುಕ್ಕಾರ ಸಭೆಯಲ್ಲಿ ವಿವರಿಸಿದರು.
ಮಂಗನ ಕಾಯಿಲೆ(ಕೆ.ಎಫ್.ಡಿ):
ಮಂಗನ ಕಾಯಿಲೆ ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಕಾಯಿಲೆ ನಿವಾರಣೆಗೆ ಅಗತ್ಯವಾದ ಔಷಧಿಗಳ ದಾಸ್ತಾನು ಇಟ್ಟುಕೊಳ್ಳಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.