ಡೆಂಗ್ಯೂ ಜ್ವರ : ಜಾಗೃತೆ ವಹಿಸಿದರೆ ರೋಗ ತಡೆ ಸಾಧ್ಯ

ಮಳೆಗಾಲ ಪ್ರಾರಂಭವಾಯಿತೆಂದರೆ ಅನೇಕ ಆರೋಗ್ಯ ಸಮಸ್ಯೆಗಳು ಮಾನವನ ದೇಹಕ್ಕಂಟಿಕೊಳ್ಳುತ್ತವೆ. ಅದರಲ್ಲೂ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ ಜ್ವರ. ಕಾಲರಾ, ಮತ್ತು ಚಿಕೂನ ಗುನ್ಯಾ ರೋಗಗಳು ರೋಗಿಯನ್ನು ಹಲವಾರು ದಿನಗಳ ಕಾಲ ಹಾಸಿಗೆಗೆ ತಳ್ಳುತ್ತವೆ. ಆದ್ದರಿಂದ ರೋಗ ಅಂಟಿಕೊಳ್ಳುವದಕ್ಕಿಂತ ಪೂರ್ವದಲ್ಲಿಯೇ ಜಾಗೃತೆ ವಹಿಸಿದರೆ ರೋಗ ತಡೆ ಸಾಧ್ಯ.

ಡೆಂಗ್ಯೂ ಜ್ವರ ಎಂದರೇನು ?

ಎಡಿಸ್ ಇಜಿಪ್ತಿ ಎಂಬ ಸೊಳ್ಳೆ ಕಡಿತದಿಂದ ಬರುವ ರೋಗವೇ ಡೆಂಗ್ಯೂ ಜ್ವರ. ಇದರಿಂದ ಬಳಲುತ್ತಿರುವ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಸಾಮಾನ್ಯ ವ್ಯಕ್ತಿಗೆ ಕಡಿದರೆ ಅವನಿಗೂ ಕೂಡ ಡೆಂಗ್ಯೂ ಜ್ವರ ತಗಲುತ್ತದೆ. ಸೊಳ್ಳೆ ಕಡಿದ ನಾಲ್ಕೈದು ದಿನಗಳಲ್ಲಿ ರೋಗದ ಲಕ್ಷಣಗಳು ಕಂಡು ಬರುತ್ತವೆ. ಶರೀರದಲ್ಲಿರುವ ಬಿಳಿ ರಕ್ತಕಣಗಳನ್ನು ಕಡಿಮೆಗೊಳಿಸಿ, ಅಶಕ್ತತೆಯನ್ನು ತಂದೊಡ್ಡಿ, ತಲೆ ಮೈಕೈ ನೋವು ತೀವ್ರತರವಾದ ಜ್ವರ, ಸ್ನಾಯು ಹಾಗೂ ಕೀಲುಸಂಧುಗಳಲ್ಲಿ ನೋವು ಮತ್ತು ತುರಿಕೆ ಹೀಗೆ ಹಲವಾರು ರೋಗ ಲಕ್ಷಣಗಳು ಗೋಚರಿಸಿಕೊಳ್ಳುತ್ತವೆ. ರೋಗನಿರೋಧಕ ಶಕ್ತಿಕಡಿಮೆ ಹೊಂದಿರುವ ವ್ಯಕ್ತಿಗಳಿಗೆ ಡೆಂಗ್ಯೂ ಜ್ವರ ಹರಡುತ್ತದೆ. ಏಕೆಂದರೆ, ನಾಲ್ಕು ವಿಧಗಳ ವೈರಸ್ಗಳಿಂದ ಕೂಡಿರುವ ಡೆಂಗ್ಯೂ ಜ್ವರ ಮೇಲಿಂದ ಮೇಲೆ ಬಂದೆರಗಿ ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಕುಗಿಸುತ್ತದೆ. ಇದನ್ನುಬ್ರೆಕ್ ಬೋನ್ ಅಥವಾ ಡ್ಯಾಂಡಿ ಜ್ವರ ಎಂದೂ ಸಹ ಕರೆಯುತ್ತಾರೆ.

dengue

ಯಾವ ಪ್ರದೇಶದಲ್ಲಿ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು.

ಅಮೇರಿಕಾದ ವಿರ್ಜಿನ ನಡುಗಡ್ಡೆ, ಕ್ಯೂಬಾ ಮತ್ತು ಮದ್ಯ ಅಮೇರಿಕಾದಲ್ಲಿ ಹೆಚ್ಚಾಗಿ ಕಂಡುಬಂದ ರೋಗ ಇತ್ತೀಚೆಗೆ ಭಾರತದಲ್ಲಿ ವ್ಯಾಪಿಸಿದೆ. ಅದರಲ್ಲಿಯೂ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಅತ್ಯಂತ ವೇಗವಾಗಿ ಹಬ್ಬಿಕೊಳ್ಳುತ್ತಿದೆ. ಅಲ್ಲಿಗೆ ಹೋದ ಪ್ರವಾಸಿಗರು ಡೆಂಗ್ಯೂಜ್ವರವನ್ನು ಹೊತ್ತುಕೊಂಡು ಬಂದು ವಿವಿಧ ಪ್ರದೇಶಗಳಿಗೆ ಹರಡುತ್ತಾರೆ. ಡೆಂಗ್ಯೂ ಜ್ವರ ಸಾಮಾನ್ಯವಾಗಿ ನೈರುತ್ಯ ಏಷ್ಯಾದ ಥೈಲ್ಯಾಂಡ, ವಿಯೆಟ್ನಾಮ ಸಿಂಗಾಪೂರ ಮತ್ತು ಮಲೇಶಿಯಾ ದೇಶಗಳಲ್ಲಿ ಅತ್ಯಧಿಕ ಪ್ರಕರಣಗಳು ಪತ್ತೆಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಅಂಕಿ ಅಂಶಗಳ ಪ್ರಕಾರ ಸುಮಾರು 50 ಕೋಟಿ ಜನ ಡೆಂಗ್ಯು ಜ್ವರ ಹಾಗೂ 5 ಲಕ್ಷಕ್ಕೂ ಅಧಿಕ ಜನ ಡೆಂಗ್ಯೂ ರಕ್ತಸ್ರಾವದಿಂದ ಪ್ರತಿವರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಶೇ. 40 ರಷ್ಟು ಜನ ವಿಶ್ವದಾದ್ಯಂತ ಡೆಂಗ್ಯೂ ಜ್ವರ ಮತ್ತು ಡೆಂಗ್ಯೂ ರಕ್ತಸ್ರಾವದಿಂದ ಸಾವನ್ನಪ್ಪುತ್ತಿದ್ದಾರೆ.

ಹೇಗೆ ಹರಡುತ್ತದೆ ?

ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಎಡಿಸ್ ಇಜಿಪ್ತಿ ಎಂಬ ಸೊಳ್ಳೆಯಿಂದ ಹರಡುತ್ತದೆ. ನೀರಿನಿಂದ ತುಂಬಿರುವ ಹೂವಿನ ಕುಂಡ, ಪ್ಲಾಸ್ಟಿಕ್ ಚೀಲಗಳಲ್ಲಿ ಬಿಸಾಡಿದ ಕ್ಯಾನಗಳಲ್ಲಿ ತೆರೆದ ನೀರಿನ ಟ್ಯಾಂಕಗಳಲ್ಲಿ ಜಾತಿಯ ಸೊಳ್ಳೆಗಳ ಸಂತಾನೋತ್ಪತ್ತಿಯಾಗುತ್ತದೆ. ಒಂದೇ ಬಾರಿ ಸೊಳ್ಳೆ ಕಚ್ಚಿದರೂ ಕೂಡ ಡೆಂಗ್ಯೂ ಜ್ವರ ಬಂದೆರಗುತ್ತದೆ.

ಲಕ್ಷಣಗಳು.

ಸೊಳ್ಳೆ ಕಚ್ಚಿದ ಬಳಿಕ 3-15 (ಸಾಮಾನ್ಯವಾಗಿ 5-8) ದಿನಗಳ ಒಳಗಾಗಿ ಡೆಂಗ್ಯೂವಿನ ರೋಗಲಕ್ಷಣಗಳು ಕಂಡುಬರುತ್ತವೆ. ಡೆಂಗ್ಯೂ ಪ್ರಾರಂಭವಾಗುವದೇ ಶೀತಚಳಿ, ತಲೆನೋವು, ಕಣ್ಣುಉರಿ, ಸೊಂಟುನೋವು ಕೀಲುಸಂಧುಗಳಲ್ಲಿ ನೋವು, ತುರಿಕೆ ಮತ್ತು ಅಶಕ್ತತೆಯಿಂದ ದೇಹದ ತಾಪಮಾನ ಅತ್ಯಂತ ವೇಗದಲ್ಲಿ 104 f (40 c) ಜೊತೆ ಹೃದಯ ಬಡಿತ ಮತ್ತು ಕಡಿಮೆ ರಕ್ತದೊತ್ತಡ ಉಂಟಾಗುತ್ತದೆ. ಕಣ್ಣುಗಳು ರಕ್ತವರ್ಣಮಯವಾಗುತ್ತವೆ. ಮುಖದ ಮೇಲೆ ಕಡು ಗುಲಾಬಿ ಕಲೆಗಳು ಮತ್ತು ಕುತ್ತಿಗೆಯಲ್ಲಿ ಬಾವು ಕಂಡು ಮಾಯವಾಗುತ್ತದೆ. ಜ್ವರ ಮತ್ತು ಬೇರೆ ಲಕ್ಷಣಗಳು 2 – 4 ದಿನಗಳೊಳಗಾಗಿ ಬೆವರು ಸಮೇತ ತಾಪ ತೀವ್ರಗೊಳ್ಳುತ್ತದೆ. ಜ್ವರದ ಜೊತೆಗೆ ಮುಖವನ್ನು ಹೊರತುಪಡಿಸಿ ದೇಹದ ತುಂಬೆಲ್ಲ ಊತ ಮತ್ತು ತಿಳಿ ಕೆಂಪು ಬಾವು ಉಂಟಾಗುತ್ತದೆ. ಡೆಂಗ್ಯೂ ವೈರಸ್ಗಳು ಬಿಳಿ ರಕ್ತಕಣಗಳ ಮೇಲೆ ದಾಳಿ ನಡೆಸಿ, ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಲಕ್ಷಣಗಳು ಕಂಡು ಬಂದರೆ ಜೀವಕ್ಕೆ ತುಂಬಾ ಅಪಾಯಕಾರಿ ಹಾಗೂ ಮಾರಣಾಂತಿಕ ಘಟ್ಟ.

ಚಿಕಿತ್ಸೆ

ವೈರಸ್ಗಳಿಂದ ಬರುವ ಡೆಂಗ್ಯೂ ಜ್ವರಕ್ಕೆ ಪ್ರತ್ಯೇಕ ಚಿಕಿತ್ಸೆ ಮತ್ತು ರೋಗನಿರೋಧಕ ಔಷಧಿಗಳಿಲ್ಲ. ರೋಗದ ಜೊತೆಗೆ ಬಂದಂತಹ ಜಠಿಲತೆಯ ಲಕ್ಷಣಗಳಿಗೆ ಚಿಕಿತ್ಸೆ ನೀಡಬಹುದು. ನೀಡಿದ ಚಿಕಿತ್ಸೆ ಅದಕ್ಕೆ ಹೊಂದಿಕೊಳ್ಳುವದು ತುಂಬಾ ಮುಖ್ಯ. ಅಸ್ಪಿರಿನ್ ಮತ್ತು ರೋಗನಿರೋಧಕ ಔಷಧಿಗಳನ್ನು ನಿರ್ಭಂಧಿಸಲಾಗಿದೆ. ಅಸೆತಾಮಿನೊಫೆನ್ (ಪ್ಯಾರಾಸೆಟಮೋಲ್) ಮತ್ತು ಕೊಡೈನ್ ಔಷಧಿಗಳನ್ನು ತೀವ್ರತರವಾದ ತಲೆನೋವು ಕೀಲುಸಂಧು ಮತ್ತು ಸ್ನಾಯು ನೋವು ನಿವಾರಣೆಗೆ ನೀಡಬಹುದು. ಡೆಂಗ್ಯೂ ಜ್ವರದ ಕೊನೆಯ ಹಂತ ಸಾವು ಅಲ್ಲ. ಕೇವಲ ಶೇ. 1 ರಷ್ಟು ರೋಗಿಗಳಲ್ಲಿ ಮಾತ್ರ ಕೊನೆಯ ಹಂತ ತಲುಪಿರುತ್ತದೆ. ನಿಶಕ್ತತೆ ಜೊತೆಗೆ ಜ್ವರ, ಕೀಲುಸಂಧುಗಳಲ್ಲಿ ನೋವು ಕಾಣಿಸುತ್ತದೆ. ಆದರೆ ಇದರಿಂದ ಚೇತರಿಸಿಕೊಳ್ಳಲು ಬಹಳ ದಿನಗಳು ಬೇಕಾಗುತ್ತದೆ.

ಡೆಂಗ್ಯೂ ಹಿಮೊರೇಜಿಕ್ ಜ್ವರ ಎಂದರೇನು ?

ಹತ್ತು ವರ್ಷ ವಯಸ್ಸಿಗಿಂತ ಕೆಳಗಿರುವ ಮಕ್ಕಳಲ್ಲಿ ಕಂಡು ಬರುವ ಡೆಂಗ್ಯೂ ಹಿಮೊರೆಜಿಕ್ (ರಕ್ತಸ್ರಾವ) ಜ್ವರವು ಒಂದು ನಿರ್ಧಿಷ್ಠವಾದ ರೋಗ. ಹೊಟ್ಟೆ ನೋವು, ರಕ್ತಸ್ರಾವ ಮತ್ತು ರಕ್ತ ಪರಿಚಲನೆ ಬಿದ್ದು ಹೋಗುತ್ತಿದೆ. ಡೆಂಗ್ಯೂ ಹಿಮೊರೆಜಿಕ್ ಜ್ವರವನ್ನು ಫಿಲಿಪೈನ್, ಥೈಯ ಮತ್ತು ಆಗ್ನೆಯ ಏಷ್ಯಾ ದೇಶಗಳಲ್ಲಿ ಹೆಮರ್ಜಿಕ (ರಕ್ತಸ್ರಾವ) ಜ್ವರ ಮತ್ತು ಡೆಂಗ್ಯೂ ಶಾಕ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.

ಡೆಂಗ್ಯೂ ಹೆಮರ್ಜಿಕ್ ಜ್ವರವು ತೀವ್ರ ಜ್ವರ ಮತ್ತು ತಲೆನೋವಿನಿಂದ ಪ್ರಾರಂಭಗೊಳ್ಳುತ್ತದೆ. ಗಂಟಲು ಜೊತೆಗೆ ಶ್ವಾಸಕೋಶ ಮತ್ತು ಅನ್ನನಾಳದ ತೊಂದರೆ, ವಾಂತಿ ಮತ್ತು ಹೊಟ್ಟನೋವು ಬರುತ್ತದೆ. 2-6 ದಿನಗಳ ನಂತರ ಒಮ್ಮಿಂದೊಮ್ಮಲೆ ಬಿದ್ದುಹೋಗಿ ಗರ ಬಡಿದಂತಾಗುತ್ತದೆ. ಸ್ಥಗಿತವಾದ ನಾಡಿ, ಬಾಯಿಸುತ್ತ ಹಾಗೂ ತುಟಿಗಳು ನೀಲಾವರ್ಣಕ್ಕೆ ತಿರುಗುತ್ತವೆ.

ನಿಧಾನವಾಗಿ ಹಲ್ಲುಜ್ಜುವಾಗಲೂ ಕೂಡ ವಸಡಿನಿಂದ ರಕ್ತ ಬರುವದು, ಚರ್ಮದ ಮೇಲೆ ರಕ್ತದ ಮಚ್ಚೆಗಳು, ಹನಿಹನಿಯಾಗಿ ರಕ್ತ ಕಾಣಿಸುವದು. ಅಲ್ಲದೇ ಸಾಮಾನ್ಯವಾಗಿ ನ್ಯುಮೋನಿಯಾ ಮತ್ತು ಎದೆಬಡಿತ ಜೋರಾಗುವ ಸಾಧ್ಯತೆ ಅಧಿಕ. ಡೆಂಗ್ಯೂ ಹೆಮರ್ಜಿಕ ಜ್ವರದಿಂದ ಬಳಲುತ್ತಿರುವ ರೋಗಿಗಳು ಯಾವುದೇ ರೀತಿಯ ಗಾಯಗಳಾಗದಂತೆ ಎಚ್ಚರಿಕೆ ವಹಿಸುವದು ಅತ್ಯವಶ್ಯ. ಜ್ವರದಿಂದ ಶೇ. 6 ರಿಂದ 30 ರವರೆಗೆ ಮಕ್ಕಳು ಸಾವನ್ನಪ್ಪುತ್ತಾರೆ,

ಹೇಗೆ ತಡೆಗಟ್ಟಬಹುದು.

ರೋಗ ಬಂದಮೇಲೆ ಜಾಗೃತರಾಗುವದಕ್ಕಿಂತ ಪೂರ್ವದಲ್ಲಿ ಅದು ಅಂಟಿಕೊಳ್ಳದಂತೆ ಎಚ್ಚರಿಕೆ ವಹಿಸುವದು ಅತ್ಯಂತ ಮುಖ್ಯ. ಸೊಳ್ಳೆಕಡಿತದಿಂದ ಪಾರಾಗಲು ಸೊಳ್ಳೆ ಪರದೆಗಳನ್ನು ಉಪಯೋಗಿಸುವದು. ಮತ್ತು ಡೆಂಗ್ಯೂದಿಂದ ಬಳಲುತ್ತಿರುವ ವ್ಯಕ್ತಿಯು ವೈರಸ್ ಇನ್ನೊಬ್ಬರಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕು. ಸೊಳ್ಳೆ ಬತ್ತಿ ಬೇವಿನ ಹೊಗೆ, ಚರ್ಮಲೇಪನಗಳಂತಹ ಮುಂತಾದ ಸೊಳ್ಳೆ ನಿರೋಧಕಗಳನ್ನು ಉಪಯೋಗಿಸಬೇಕು. ಹಗಲು ಹೊತ್ತು ಮಲಗುವ ವಯೋವೃದ್ದರು, ಮಕ್ಕಳು ಮಲಗಿದಾಗ ತಪ್ಪದೇ ಸೊಳ್ಳೆ ಪರದೆ ಉಪಯೋಗಿಸಿ. ಸಿಮೆಂಟ ತೊಟ್ಟಿ, ಹಲವಾರು ದಿನಗಳಿಂದ ನೀರಿನಿಂದ ತುಂಬಿರುವ ಹೂಕುಂಡಗಳಲ್ಲಿನ, ಪ್ಲಾಸ್ಟಿಕ್ ಸೇರಿದಂತೆ ನೀರು ನಿಲ್ಲುವ ವಸ್ತುಗಳನ್ನು ಸಂಪೂರ್ಣ ಖಾಲಿ ಮಾಡಬೇಕು. ಇದರಿಂದ ಸೊಳ್ಳೆಯ ಸಂತಾನೋತ್ಪತ್ತಿ ನಿಂತಂತಾಗುತ್ತದೆ. ಅಲ್ಲದೇ ರೋಗ ನಿಯಂತ್ರಣಕ್ಕೆ ತುಂಬಾ ಸಹಕಾರಿ.

About the Author: Dr. M V Jali, FRCP(London), FRCP(Edin), FRCP(Glasgow)
Chief Editor, Diabetes Doctor (Madhumeha-Vaidya Professor of Diabetology, KAHER J N Medical College

Dr M V Jali
Medical Director & CE, KLES Dr. Prabhakar Kore Hospital & Medical Research Centre Belagavi 590010

Popular Doctors

Related Articles