ವೈದ್ಯರ ದಿನಾಚರಣೆ ಅಂಗವಾಗಿ ಮಹಾಗುರುಗಳಾದ ಡಾ. ಹೆಚ್ ರಾಜಶೇಖರ ಅವರೊಂದಿಗೆ ನಮ್ಮ ಪ್ರತಿನಿಧಿ ಕಿರಣ ನಿಪ್ಪಾಣಿಕರ ಅವರು ನಡೆಸಿದ ಸಂದರ್ಶನದ ಸಾರಾಂಶ
ಡಾ. ಹೆಚ್ ಬಿ ರಾಜಶೇಖರ ಅವರು ಪ್ರಸಿದ್ದ ತಜ್ಞವೈದ್ಯರು, ವೈದ್ಯಕೀಯ ಆಡಳಿತಾಧಿಕಾರಿಗಳು ಹಾಗೂ ಗುರುಗಳಿಗೆ ಗುರುಗಳಾದ ಮಹಾಗುರುಗಳು. ಕರ್ನಾಟಕ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣವು ಉತ್ತುಂಗಕ್ಕೇರಲು ಕಳೆದ 5 ದಶಕಗಳಿಂದ ತಮ್ಮ ವೈದ್ಯಕೀಯ ಸೇವೆಯನ್ನು ಸಮರ್ಪಿಸಿದ್ದಾರೆ. 2 ದಶಕಗಳ ಕಾಲ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಇವರು ಮಹಾವಿದ್ಯಾಲಯದ ಹೆಸರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಸುಮಾರು 16 ಸಾವಿರಕ್ಕೂ ಅಧಿಕ ವೈದ್ಯಕೀಯ ಪದವೀಧರರು ಇಲ್ಲಿಂದ ಉತ್ತೀರ್ಣರಾಗಿ ಹೋಗಿದ್ದಾರೆ. ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿರುವ ಡಾ. ರಾಜಶೇಖರ ಅವರು 1989ರಲ್ಲಿ ಡಾ. ಬಿ ಸಿ ರಾಯ್ ರಾಷ್ಟ್ರೀಯ ಪ್ರಶಸ್ತಿ, 1991ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗೌರವಾನ್ವಿತ ಮಹಾಗುರುಗಳಿಗೆ ಅನೇಕ ಶಿಷ್ಯ ಬಳಗ ಹಾಗೂ ಅವರನ್ನು ಅನುಕರಿಸುವ ಸಾಂಸ್ಕøತಿಕ ಬಳಗವಿದೆ. ವೈದ್ಯರ ದಿನಾಚರಣೆ-2019 ಅಂಗವಾಗಿ ಅವರು allaboutbelgaum.com ಮತ್ತು myarogya.in ವೆಬ್ಸೈಟಗಳಿಗೆ ಸಂದರ್ಶನ ನೀಡಿದ್ದಾರೆ.
ಸರ್, ವೈದ್ಯರ ದಿನಾಚರಣೆಯ ಔಚಿತ್ಯವೇನು?
ಡಾ. ಹೆಚ್ ಬಿ ರಾಜಶೇಖರ: ಸ್ವಾತಂತ್ರ್ಯ ಹೋರಾಟಗಾರ, ಪ್ರಸಿದ್ದ ವೈದ್ಯ, ಶಿಕ್ಷಣ ತಜ್ಞ ಹಾಗೂ ಅದಕ್ಕಿಂತ ಮುಖ್ಯವಾಗಿ ರಾಜಕಾರಣಿಯಾಗಿ ದಶಕದವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಡಾ. ಬಿ ಸಿ ರಾಯ್ ಅವರ ಸ್ಮರಾಣಾರ್ಥವಾಗಿ ಪ್ರತಿ ವರ್ಷ ಜುಲೈ 1 ರಂದು ದೇಶದಲ್ಲಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಡಾ. ರಾಯ್ ಅವರು ಇತಿಹಾಸದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದು, ಎಫ್ ಆರ್ ಸಿ ಎಸ್ ಹಾಗೂ ಎಂ ಆರ್ ಸಿಪಿ ಪಡೆದುಕೊಂಡವರಾಗಿದ್ದಾರೆ. ಅಲ್ಲದೇ 4 ಫೆಬ್ರುವರಿ 1961ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ತಮ್ಮ ಜೀವಿತಾವಧಿಯಲ್ಲಿ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಿದ ಹೆಗ್ಗಳಿಕೆ ಅವರದು. ಅವರು ನಮಗೆಲ್ಲ ಮಾದರಿಯಾಗಿದ್ದಾರೆ.
ಸರ್, ಪ್ರಸ್ತುತ ಸಂದರ್ಭದಲ್ಲಿ ವೈದ್ಯಕೀಯ ವೃತ್ತಿಯು ಉದಾತ್ತವಾಗಿದೆ ಎಂಬ ಅಭಿಪ್ರಾಯಕ್ಕೆ ನೀವು ಬದ್ದರಾಗಿದ್ದೀರಾ ?
ಡಾ. ಹೆಚ್ ಬಿ ರಾಜಶೇಖರ: ಹೌದು, ಬಹಳ, ಈ ವೃತ್ತಿಯು ಅತ್ಯುತ್ತಮ. ಆದರೆ sಸಮಾಜದಲ್ಲಿನ ಮೌಲ್ಯಗಳು ಹಾಗೂ ನೈತಿಕತೆ ಅಂಧಪತನದತ್ತ ಸಾಗುತ್ತಿದ್ದು ವೈದ್ಯಕೀಯ ವೃತ್ತಿಯನ್ನೂ ಕೂಡ ಹಾನಿಗೊಳಿಸಿವೆ. ಬಹಳಷ್ಟು ವೈದ್ಯರು ನಿಜವಾಗಿಯೂ ಅತ್ಯುತ್ತಮ ಬುದ್ದಿಮತ್ತೆಯುಳ್ಳವರಾಗಿದ್ದಾರೆ. ಇತ್ತೀಚಿನ ಕೆಲವು ಘಟನೆಗಳು ವೈದ್ಯ ವೃತ್ತಿಗೆ ಕೆಟ್ಟ ಹೆಸರನ್ನು ತಂದಿವೆ.
ಸರ್, ವೈದ್ಯರ ಮೇಲಿನ ಹಲ್ಲೆಗಳು ಏಕೆ ಹೆಚ್ಚಾಗುತ್ತವೆ ?
ಡಾ. ಹೆಚ್ ಬಿ ರಾಜಶೇಖರ: ಹೆಲ್ಲೆ, ಒರಟು ನಡವಳಿಕೆ ಹಾಗೂ ವೈದ್ಯರ ಮೇಲಿನ ಹಲ್ಲೆಗಳು ಅತ್ಯಂತ ದುಃಖದ ಘಟನೆಗಳು. ಕಳೆದ 5 ವರ್ಷಗಳಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ವೈದ್ಯರಿಂದ ರೋಗಿಗಳ ನಿರೀಕ್ಷೆಗಳು ಬಹಳಷ್ಟು ಇವೆ. ವೈದ್ಯರು ತಮ್ಮ ವೃತ್ತಿಗನುಗುಣವಾಗಿ ಶಕ್ತಮೀರಿ ಪ್ರಯತ್ನಿಸುತ್ತಾರೆ. ವೈದ್ಯರು ಕೂಡ ಮಾನವೀಯತೆ ಉಳ್ಳವರು ಎಂಬುದನ್ನು ಸಮಾಜವು ತಿಳಿದುಕೊಳ್ಳಬೇಕು. ವೈದ್ಯರ ಮೊದಲ ಪ್ರಾಶಸ್ತ್ಯ ಜೀವವನ್ನು ಉಳಿಸುವದಾಗಿರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ರೋಗಿಯು ಸಾವನ್ನಪ್ಪುತ್ತಾನೆ. ವೈದ್ಯರು ದೇವರಲ್ಲ, ಅಲ್ಲದೇ ಪ್ರಸ್ತುತ ತಲೆಮಾರಿನ ವೈದ್ಯರು ಅತ್ಯಂತ ಒತ್ತಡದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರೋಗಿಯು ಆಸ್ಪತ್ರೆಯನ್ನು ತಲುಪಬೇಕಾದರೆ ಮೊದಲೇ ತಡವಾಗಿರುತ್ತದೆ ಹಾಗೂ ಬಹುವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಉನ್ನತ ಸ್ತರದ ಆಸ್ಪತ್ರೆಗಳು ಅತ್ಯಂತ ಕ್ಲಿಷ್ಟಕರವಾದ ಪ್ರಕರಣಗಳಿಗೆ ಚಿಕಿತ್ಸೆ ನೀಡುತ್ತವೆ. ಬಹುವಿಧ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಯು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತ ಗುಣಮುಖವಾಗುತ್ತಾನೆ ಎನ್ನುವ ಸಂದರ್ಭದಲ್ಲಿಯೇ ದುದೃಷ್ಟವಶಾತ ರೋಗಿಯು ಕೊನೆಯುಸಿರೆಳೆಯುತ್ತಾನೆ. ಆಗ ಆತನ ಸಂಬಂಧಿಕರು ಇದನ್ನು ಅರಗಿಸಿಕೊಳ್ಳುವುದಿಲ್ಲ. ಅವರನ್ನು ಸಮಾಧಾನಪಡಿಸುವದು ಕಷ್ಟಕರ. ಅತ್ಯಂತ ಆತ್ಮೀಯರನ್ನು ಕಳೆದುಕೊಂಡ ದುಃಖದಲ್ಲಿದ್ದ ಕೆಲವರು ಅಶಾಂತಿಯನ್ನು ಸೃಷ್ಟಿಸುತ್ತಾರೆ.
ಸರ್, ಕಳೆದ 5 ದಶಕಗಳಿಂದ ತಾವು ವೈದ್ಯಕೀಯ ಸೇವೆ ಸಲ್ಲಿಸುತ್ತೀದ್ದೀರಿ, ವೈದ್ಯರು ಮತ್ತು ರೋಗಿಗಳ ನಡುವೆ ನಂಬಿಕೆ ಆತ್ಮಸ್ಥೈರ್ಯ ಮೂಡಲು ಪರಿಹಾರವೇನು ?
ಡಾ. ಹೆಚ್ ಬಿ ರಾಜಶೇಖರ : ನಾನು ಕೆಲವು ಸಲಹೆಗಳನ್ನು ನೀಡಲು ಬಯಸುತ್ತೇನೆ. ರೋಗಿ ಮತ್ತು ಅವರ ಸಂಬಂಧಿಕರಲ್ಲಿ ವಿಶ್ವಾಸ ತುಂಬಲು ವೈದ್ಯರು ಮುಖ್ಯವಾಗಿ ಆಲೋಚಿಸಬೇಕು. ಅವರೊಂದಿಗೆ ಆಪ್ತಸಮಾಲೋಚನೆ ನಡೆಸದಿರುವದು ಬಹುದೊಡ್ಡ ಸಮಸ್ಯೆ. ಆದ್ದರಿಂದ ವೈದ್ಯರು ವೆಳೆಗೆ ಸರಿಯಾಗಿ ರೋಗಿಯನ್ನು ಭೆಟಿಯಾಗಿ ಪರೀಕ್ಷಿಸಿ, ಅವರ ಸಂಬಂಧಿಕರೊಂದಿಗೆ ಆಪ್ತಸಮಾಲೋಚನೆ ನಡೆಸಿ ಅವರದೇ ಆದ ಭಾಷೆಯಲ್ಲಿ ತಿಳಿಸಿ ಹೇಳಬೇಕು. ಸಾಮಾನ್ಯ ವ್ಯಕ್ತಿಯು ವೈದ್ಯಕೀಯ ಪರಿಭಾಷೆಯನ್ನು ಅರ್ಥ ಮಾಡಿಕೊಳ್ಳಲಾರ. ಆದ್ದರಿಂದ ವೈದ್ಯರು ರೋಗಿಯ ಸಂಬಂಧಿಕರ ಮಟ್ಟಕ್ಕೆ ಹೋಗಿ ಅವರಿಗೆ ತಿಳಿಯುವ ಭಾಷೆಯಲ್ಲಿಯೇ ವಿವರಿಸಬೇಕು. ಚಿಕಿತ್ಸೆ, ಗುಣಮುಖ ಹಾಗೂ ಬಾಹ್ಯ ಪರಿಣಾಮಗಳ ಕುರಿತು ವಿವರವಾಗಿ ತಿಳಿಸಬೇಕು. ಸಂವಹನÀವು ಒಂದು ಕಲೆ, ಅದರಂತೆ ಕೇಳಿ ಅರ್ಥ ಮಾಡಿಕೊಳ್ಳುವದು ಕೂಡ. ವೈದ್ಯಕೀಯ ಶಾಲೆಗಳಲ್ಲಿ ಸಂವಹನದ ಸೂಕ್ಷ್ಮ ವ್ಯತ್ಯಾಸಗಳನ್ನು ಹೇಳಿಕೊಡಲಾಗುವುದಿಲ್ಲ.
ರೋಗಿಯು ವೆಂಟಿಲೇಟರ (ಕೃತಕ ಜೀವ ರಕ್ಷಕ) ಮೇಲೆ ಇದ್ದರೆ ಅಥವಾ ಬಹುದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿದ್ದರೆ, ಶಸ್ತ್ರಚಿಕಿತ್ಸೆ ನಂತರದ ಸಮಸ್ಯೆಗಳು, ಆಸ್ಪತ್ರೆ ಬಿಲ್ಲಿನಲ್ಲಿನ ಹೆಚ್ಚಳ, ಸೇವೆಯಲ್ಲಿನ ವ್ಯತ್ಯಯ, ಗೊಂದಗಲಕ್ಕೀಡು ಮಾಡುವ ಮಾಹಿತಿಗಳು ಸಂಬಂಧಿಕರನ್ನು ಅಶಾಂತಿ ಕಡೆಗೆ ದೂಡುತ್ತವೆ. ಆದ್ದರಿಂದ ಅವರಲ್ಲಿ ನಂಬಿಕೆಯನ್ನು ಬೆಳೆಸಬೇಕು. ಯಾವುದನ್ನು ಮುಚ್ಚಿಡದೇ ನಿರ್ಧಿಷ್ಠವಾಗಿ ಹೇಳಬೇಕು. ರೋಗಿಯ ಸಂಬಂಧಿಕರು ಎರಡನೇ ಅಭಿಪ್ರಾಯ, ವೈದ್ಯರ ಬದಲಾವಣೆ, ಬೇರೊಂದು ಆಸ್ಪತ್ರೆಗೆ ತೆಗೆದುಕೊಂಡು ಹೋಗುವದಿದ್ದರೆ ಪ್ರಾಮಾಣಿಕವಾಗಿ ಪರಿಗಣಿಸಬೇಕು. ಕೊನೆಯದಾಗಿ ವೈದ್ಯರು ರೋಗಿಗಳಿಗೆ ಮತ್ತು ಸಂಬಂಧಿಕರಿಗೆ ಸಮಯವನ್ನು ನೀಡಬೇಕು. ರೋಗಿಯ ಗುಣಮುಖದಲ್ಲಿನ ಪರಿಣಾಮ ಕೆಟ್ಟದ್ದಾಗಿದ್ದರೂ ಕೂಡ ಸಂಬಂಧಿಕರ ಭಾವನೆಯಲ್ಲಿ ವೈದ್ಯರು, ಸಿಬ್ಬಂದಿಗಳು ಹಾಗೂ ಆಸ್ಪತ್ರೆಯು ಚೆನ್ನಾಗಿ ನೋಡಿಕೊಂಡರು ಎಂಬ ಸಂದೇಶ ಹೋಗಬೇಕು. ನಾನು ಮುಖ್ಯವಾಗಿ ಮಾನವೀಯತೆ ಪ್ರತಿಪಾದಿಸುತ್ತೇನೆ. ವೈದ್ಯಕೀಯ ಶಿಕ್ಷಣದಲ್ಲಿ ಸಂವಹನ ಮತ್ತು ನಿರ್ವಹಣಾ ಕೌಶಲ್ಯವನ್ನು ಒಂದು ಭಾಗವನ್ನಾಗಿ ಹೇಳಿಕೊಡಬೇಕೆಂದು ಹೇಳುತ್ತೇನೆ.
ಸರ್, ಚಿಕಿತ್ಸೆ ಮತ್ತು ರೋಗಪತ್ತೆ ವಿಧಾನಗಳಲ್ಲಿ ನಿರಂತರವಾಗಿ ವೆಚ್ಚವು ಹೆಚ್ಚಾಗುತ್ತಿರುವದಕ್ಕೆ ನಿಮ್ಮ ಅಭಿಪ್ರಾಯ ?
ಡಾ. ಹೆಚ್ ಬಿ ರಾಜಶೇಖರ: ಆರೋಗ್ಯ ಕ್ಷೇತ್ರದಲ್ಲಿ ಕಾರ್ಪೋರೇಟ ವಲಯವು ಪಾದಾರ್ಪಣೆ (1985-86) ಮಾಡಿದಾಗಿನಿಂದ ಕ್ಲಿನಿಕಲ್ ಮೆಡಿಸಿನ್ ಹಾಗೂ ಹಾಸಿಗೆ ಬದಿಯ ಸೇವೆಯು ನಿಧಾನವಾಗಿ ಕಣ್ಮರೆಯಾಯಿತು. ವೈದ್ಯಕೀಯ ತಂತ್ರಜ್ಞಾನವನ್ನು ವೈಭವೀಕರಿಸಲಾಯಿತು. ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳು, ವೆಚ್ಚದಾಯಕವಾದ ರೋಗಪತ್ತೆ ವಿಧಾನಗಳು ದೇಶದ ಆರೋಗ್ಯ ಕ್ಷೇತ್ರದ ಸನ್ನಿವೇಶವನ್ನೇ ಬದಲಾಯಿಸಿಬಿಟ್ಟವು. ದುರದುಷ್ಟಕರವೆಂದರೆ ರೋಗಪತ್ತೆ ಮಾಡುವ ಕುಶಾಗ್ರ ಬುದ್ದಿಯು ಕಣ್ಮರೆಯಾಯಿತು. ಅವಶ್ಯಕವಾದ ರೋಗಪತ್ತೆಗಳನ್ನು ಮಾತ್ರ ಮಾಡಬೇಕು. ಆದರೆ ಬಹುತೇಕ ರೋಗಿಗಳು ಈ ವೆಚ್ಚವನ್ನು ಭರಸಲಾಗದ ಆರ್ಥಿಕವಾಗಿ ಹಿಂದುಳಿದ ಜನರಾಗಿರುತ್ತಾರೆ. ಈ ಸಂದರ್ಭದಲ್ಲಿ ಕ್ಲಿನಿಕಲ್ ಮೆಡಿಸಿನ್ ಸುವರ್ಣ ಗುಣಮಟ್ಟದ್ದಾಗಿರುತ್ತದೆ. ವೈದ್ಯಕೀಯ ಶಾಲೆಯಲ್ಲಿ ಕಲಿತ ಕೌಶಲ್ಯ, ಬುದ್ದಿಮತ್ತೆ, ಬುದ್ದಿವಂತಿಕೆಯಿಂದ ಅವಶ್ಯವಿರುವ ಮತ್ತು ಕಡಿಮೆ ರೋಗಪತ್ತೆ ವಿಧಾನಗಳನ್ನು ಮಾಡಿ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದ ಅವರು, ಆರೋಗ್ಯವು ರಾಜ್ಯ ವ್ಯಾಪ್ತಿಗೆ ಒಳಪಡುವರಿಂದ ಸರಕಾರಗಳು ಪ್ರಾಥಮಿಕ ಹಾಗೂ ನಗರ ಆರೋಗ್ಯ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸಿ ಅವಶ್ಯ ಸೌಲಭ್ಯಗಳನ್ನು ಕಲ್ಪಿಸಲು ಗಂಭೀರವಾಗಿ ಚಿಂತಿಸಬೇಕೆಂದು ಒತ್ತಾಯಿಸಿದರು.
ಯುವ ವೈದ್ಯರಿಗೆ ನಿಮ್ಮ ಬುದ್ದಿಮಾತು ಏನು ?
ಡಾ. ಹೆಚ್ ಬಿ ರಾಜಶೇಖರ : ನಿಮ್ಮ ವೃತ್ತಿಯಲ್ಲಿ ಪ್ರಮಾಣಿಕತೆ, ಸಹನಾಭೂತಿ ಗುಣಮಟ್ಟವನ್ನು ಕಾಯ್ದುಕೊಳ್ಳಿ ಎಂದು ಮಾತ್ರ ಹೇಳಬಲ್ಲೆ. ವೈದ್ಯಕೀಯ ಸೇವೆಯು ವ್ಯಾಪಾರವಲ್ಲ, ಇದು ಅತ್ಯುತ್ತಮವಾದ ವೃತ್ತಿ. ವೃತ್ತಿಪರ ಕೌಶಲ್ಯಗಳೊಂದಿಗೆ ಹೊಂದಿಕೊಳ್ಳುತ್ತ, ತಮ್ಮ ಬುದ್ದಿಮತ್ತೆಯನ್ನು ಸದಾ ಚುರುಕುಗೊಳಿಸಿಕೊಳ್ಳುತ್ತಿರಬೇಕು. ವೈದ್ಯರಾದವರು ಖಡ್ಡಾಯವಾಗಿ, ಸಹನಾಭೂತಿ, ಪ್ರೀತಿ ಹಾಗೂ ಮಾನವೀಯತೆಯನ್ನು ಅಳವಡಿಸಿಕೊಂಡವರಾಗಿರಬೇಕು. ಬಡ ಮತ್ತು ನಿರ್ಗತಿಕರಿಗೆ ಉಚಿತ ಸೇವೆ ನೀಡಬೇಕು. ಖಾಯಿಲೆಗಳಿಗೆ ಸಾಧ್ಯವಾದಷ್ಟು ಒಳ್ಳೆಯ ರೀತಿಯ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಯುವ ವೈದ್ಯರು ನಾನು ಮೇಲೆ ಹೇಳಿದ ಸಲಹೆಗಳಿಗೆ ಪ್ರಾಧಾನ್ಯತೆ ನೀಡುತ್ತಾರೆ ಎಂಬ ಭರವಸೆ ನನಗಿದೆ. ಎಲ್ಲರಿಗೂ ವೈದ್ಯರ ದಿನಾಚರಣೆಯ ಹೃದಯಪೂರ್ವಕ ಶುಭಾಷಯಗಳು. ಧನ್ಯವಾದಗಳು.