ಯಾವುದೇ ಕಾರಣಕ್ಕೂ ನನಗೆ ಅನಾರೋಗ್ಯ ಕಾಡುತ್ತಿದೆ ಎಂದು ಎದೆಗುಂದದೆ ಅದನ್ನೆ ಸವಾಲಾಗಿ ಸ್ವೀಕರಿಸಿ, ಜೀವನದಲ್ಲಿ ಸಾಧನೆ ಮಾಡಬೇಕು. ಜೀವನದಲ್ಲಿ ನಡೆಯುವ ಚಿಕ್ಕಪುಟ್ಟ ಖುಷಿಗಳನ್ನೆ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡು ಮುನ್ನಗ್ಗಬೇಕು. ಪ್ರತಿಯೊಂದು ಯಶಸ್ಸಿಗೆ ಕಾರಣವಾದ ಘಟನೆಗಳಿಗೆ ಅಭಿನಂದನೆ ಸಲ್ಲಿಸಿ. ಆಗ ನಿಮಗೆ ಮತ್ತಷ್ಟು ಪ್ರೇರಣೆ ಲಭಿಸುತ್ತದೆ ಎಂದು ಕಥೆಗಾರತಿ ಹಾಗೂ ಸಮಾಜ ಸೇವಕಿ ಮೋನಿಕಾ ಕಕ್ಕರ ಅವರು ಕರೆ ನೀಡಿದರು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ವಿಶ್ವ ತಾಯಿಂದಿರ ದಿನಾಚರಣೆ ಅಂಗವಾಗಿ ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ 19 ನೇ ವಾರ್ಷಿಕ ಉಚಿತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಯಶಸ್ಸುಗಳೇ ಜೀವನವನ್ನು ಧನಾತ್ಮಕ ಭಾವನೆಗಳಿಗೆ ಕರೆದುಕೊಂಡು ಹೋಗುತ್ತವೆ. ಸೋತಾಗ ಕುಗ್ಗದೇ ಮತ್ತೆ ಪುಟಿದೇಳಬೇಕು ಎಂದು ಕರೆ ನೀಡಿದರು.
ಸಮಾಜ ಸೇವಕಿ ವೃಂದಾ ಕಲ್ವಾಡ ಅವರು ಮಾತನಾಡಿ, ತಾಯಿಯು ಕೇವಲ ಗುರುವಾಗಿಲ್ಲ. ಮಕ್ಕಳನ್ನು ಸಕಲ ದೃಷ್ಟಿಯಿಂದ ಪೋಷಿಸಿ ತಿದ್ದಿ ತೀಡಿ ಅವರಿಗೆ ಒಂದು ರೂಪ ನೀಡುವಲ್ಲಿ, ಗುರುವಾಗಿ, ಗೆಳತಿಯಾಗಿ, ಸಹೋದರಿಯಾಗಿ ಎಲ್ಲದರಲ್ಲಿ ಅವಳ ಶ್ರಮ ಅತ್ಯಧಿಕವಾಗಿದೆ. ಅದರಲ್ಲಿಯೂ ಮಧುಮೇಹ ಮಕ್ಕಳ ಕಾಳಜಿ ಮಾಡುತ್ತಿರುವದು ಅತ್ಯಂತ ಶ್ಲಾಘನೀಯ ಕಾರ್ಯ. ಅದರಲ್ಲಿಯೇ ತೃಪ್ತಿ ಕಾಣುವ ತಾಯಿ ಸ್ವಾರ್ಥವನ್ನು ಬಿಟ್ಟು ಸಮಾಜಕ್ಕೆ ತನ್ನ ಜೀವನವನ್ನು ಧಾರೆ ಎರೆಯುತ್ತಾಳೆ ಎಂದು ಬಣ್ಣಿಸಿದರು. ಕೇವಲ ದುಡ್ಡಿನಿಂದ ಸಮಾಜ ಸೇವೆಯನ್ನು ಮಾಡಲು ಸಾಧ್ಯವಿಲ್ಲ. ಕೌಶಲ್ಯಾಧಾರಿತ ಶಿಕ್ಷಣ, ಜೀವನ ಶೈಲಿ, ಆರೋಗ್ಯಯುತ ಜೀವನ ಕಲ್ಪಿಸುವಲ್ಲಿ ಸಹಾಯ ಮಾಡಬೇಕೆಂದ ಅವರು, ಡಾ ಜಾಲಿ ದಂಪತಿಗಳ ಕಾರ್ಯ ಶ್ಲಾಘನೀಯ ಎಂದರು.
ಕಾಹೇರನ ಕುಲಸಚಿವರಾದ ಡಾ. ವಿ ಡಿ ಪಾಟೀಲ ಅವರು ಮಾತನಾಡಿ, ಮಧುಮೇಹ ಮಕ್ಕಳು ಬಹಳ ಆರೋಗ್ಯಯುತ, ಮಧುಮೇಹ ಮಕ್ಕಳ ಪಾಲಕರು ನಿರಂತರವಾಗಿ ಆರೈಕೆ ಮಾಡುವುದು ಕಠಿಣ. ಮಕ್ಕಳಲ್ಲಿ ಧೈರ್ಯ ತುಂಬುತ್ತ ಅವರ ಮನೋಸ್ಥೈರ್ಯವನ್ನು ಗಟ್ಟಿಗೊಳಿಸಬೇಕೆಂದ ಅವರು, ಡಾ. ಜಾಲಿ ದಂಪತಿಗಳ ಕಾರ್ಯ ಶ್ಲಾಘನೀಯ. ಎಲ್ಲ ಮಕ್ಕಳಿಗೆ ಚಿಕಿತ್ಸೆ ಲಭಿಸುವಂತಾಗಲಿ ಸಲಹೆ ನೀಡಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮತ್ತು ಮಧುಮೇಹ ತಜ್ಞವೈದ್ಯರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, ಮಗುವಿಗೆ ಮೊದಲು ತಾಯಿಯೇ ಗುರು. ಮಧುಮೇಹ ಪೀಡಿತ ಮಕ್ಕಳು ಸಾಮಾನ್ಯ ಮಕ್ಕಳಂತೆ ಸಹಜ ಜೀವನ ನಡೆಸಲು ತಯಾರಿಸಲು ವೈದ್ಯರಷ್ಟೇ ತಾಯಿಯ ಪಾತ್ರ ಮುಖ್ಯ. ಅಂತರಾಷ್ಟ್ರೀಯ ಮಧುಮೇಹ ಪ್ರತಿಷ್ಠಾನದಿಂದ ಸಕಲ ಸಹಾಯ ದೊರೆÀಯುತ್ತಿದ್ದು, ಸವಾಲನ್ನು ಎದುರಿಸುವ ಶಕ್ತಿಯನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಚಿಕ್ಕಮಕ್ಕಳ ಮಧುಮೇಹ ತಜ್ಞವೈದ್ಯರಾದ ಡಾ ಸುಜಾತಾ ಜಾಲಿ ಅವರು ಮಾತನಾಡಿ, ಮಧುಮೇಹ ಟೈಪï 1 ಪೀಡಿತ ಸುಮಾರು 420 ಮಕ್ಕಳು ಕೇಂದ್ರದಲ್ಲಿ ದಾಖಲಾಗಿದ್ದು ಅದರಲ್ಲಿ ಸುಮಾರು 350 ಮಕ್ಕಳು ನಿಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕಳ ಚಿಕಿತ್ಸೆ ಯಲ್ಲಿ ಪಾಲಕರ ಪಾತ್ರ ಅತ್ಯಂತ ಮುಖ್ಯವಾಗಿದೆ. ಅಂತರಾಷ್ಟ್ರೀಯ ನಿಯಮನುಸಾರ ಚಿಕಿತ್ಸೆ ನೀಡಲಾಗುತ್ತದೆ. ಥಲಸ್ಲೇಮಿಯಾ ಮಕ್ಕಳಿಗೂ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, 10 ಮಕ್ಕಳಿಗೆ ಬೋನ್ ಮ್ಯಾರೊ ನೆರವೇರಿಸಲಾಗಿದೆ ಎಂದು ವಿವರಿಸಿದರು.
ಮಧುಮೇಹವನ್ನು ನಿಂತ್ರಣದಲ್ಲಿಟ್ಟುಕೊಂಡಿರುವ ಮನೋಜ ಮಲಬಸರಿ, ಯಶಸ್ವಿನಿ ಟಿ ಎನ್. ಹಾಗೂ ಶಿಲ್ಪಾ ಕಟ್ಟಿ ಎಂಬ ತಾಯಿಗೆ ಸ್ವರ್ಣ ಪದಕ ನೀಡಿ ಗೌರವಿಸಲಾಯಿತು. ಶಿಬಿರದಲ್ಲಿ ಸುಮಾರು 110 ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು. ಡಾ. ಆರ್ ಎಸ್ ಮುಧೋಳ ಮಾತನಾಡಿದರು. ಡಾ. ಜ್ಯೋತಿ ವಾಸೇದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಡಾ ನಂದಿತಾ ಪವಾರ ನಿರೂಪಿಸಿದರು ಡಾ. ಸಂಜಯ ಕಂಬಾರ ವಂದಿಸಿದರು.