ಹೊಸದಿಲ್ಲಿ: ಭಾರತದಲ್ಲಿ ಕೋವಿಡ್ 19 ಲಸಿಕೆ ನೀಡಿಕೆಯು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು 200 ಕೋಟಿಗೂ ಅಧಿಕ ಡೋಸಗಳನ್ನು ದಾಟಿದೆ. ದೇಶದಲ್ಲಿ ದಿ. ೧೬ ಜನೇವರಿ 2021ರಿಂದ ನಡೆದ ಲಸಿಕಾಕರಣ ಕಾರ್ಯಕ್ರಮ ಆರಂಭವಾದ 18 ತಿಂಗಳಲ್ಲಿ ಈ ಯಶಸ್ಸಿನ ಗುರಿಯನ್ನು ತಲುಪಲಾಗಿದೆ.
ಶನಿವಾರ ರಾತ್ರಿಯವರೆಗೂ ದೇಶಾದ್ಯಂತ 199.97 ಕೋಟಿ ಕೋವಿಡ್ ಲಸಿಕೆ ಡೋಸ್ಗಳನ್ನು ನೀಡಲಾಗಿದೆ. ಇದರಲ್ಲಿ ಇದು 5.48 ಕೋಟಿ ಡೋಸ್ಗಳಷ್ಟು ಮುನ್ನೆಚ್ಚರಿಕೆ ಡೋಸ್ (ಬೂಸ್ಟರ್ ಡೋಸ್) ಅನ್ನು ಒಳಗೊಂಡಿದೆ.
ಈ ಹಿಂದಿನ 100 ಕೋಟಿ ಡೋಸ್ಗಳ ಮೈಲುಗಲ್ಲು ತಲುಪಲು 277 ದಿನಗಳನ್ನು ತೆಗೆದುಕೊಂಡಿತ್ತು. ಕಳೆದ ವರ್ಷದ ಸೆಪ್ಟೆಂಬರ್ 17ರಂದು ಒಂದೇ ದಿನ 2.5 ಕೋಟಿ ಲಸಿಕೆ ಡೋಸ್ಗಳನ್ನು ನೀಡಲಾಗಿತ್ತು. ಇದು ಈವರೆಗಿನ ಅತ್ಯಧಿಕ ದಾಖಲೆಯಾಗಿದೆ. ಕೋವಿನ್ ಪ್ರಕಾರ, ದೇಶಾದ್ಯಂತ 14,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಲಸಿಕಾಕರಣ ಕಾರ್ಯಕ್ರಮ ನಡೆಯುತ್ತಿದೆ.
ದೇಶದ ಶೇ 96ರಷ್ಟು ಜನರು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಶೇ 87ರಷ್ಟು ಜನರು ಎರಡೂ ಡೋಸ್ಗಳನ್ನು ಪಡೆದುಕೊಂಡಿದ್ದಾರೆ. ಅವರ್ ವರ್ಲ್ಡ್ ಇನ್ ಡೇಟಾ ನೀಡಿರುವ ಮಾಹಿತಿ ಪ್ರಕಾರ, ಜಗತ್ತಿನ ಜನಸಂಖ್ಯೆಯ ಶೇ 62.1ರಷ್ಟು ಜನರು ಕೊರೊನಾ ವೈರಸ್ ವಿರುದ್ಧ ಸಂಪೂರ್ಣ ಲಸಿಕೆ ಪಡೆದುಕೊಂಡಿದ್ದಾರೆ.
ದೇಶದ 75ನೇ ಸ್ವಾತಂತ್ರೋತ್ಸವದ ಸಂದರ್ಭದ ಸಲುವಾಗಿ ಕೇಂದ್ರ ಆರೋಗ್ಯ ಸಚಿವಾಲಯ 75 ದಿನಗಳ ಕಾಲ ಮುಂಜಾಗ್ರತಾ ಡೋಸ್ ಅಥವಾ ಬೂಸ್ಟರ್ ಡೋಸ್ ಲಸಿಕೆ ಅಭಿಯಾನ ಆರಂಭಿಸಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ಸಿಗಲಿದೆ.
ಇದುವರೆಗೂ 18-59 ವರ್ಷ ವಯೋಮಾನದ 77.10 ಕೋಟಿ ಜನಸಂಖ್ಯೆಯಲ್ಲಿ ಶೇ ಒಂದಕ್ಕಿಂತಲೂ ಕಡಿಮೆ ಮಂದಿ ಬೂಸ್ಟರ್ ಪಡೆದುಕೊಂಡಿದ್ದಾರೆ. 15- 18ರ ವಯೋಮಾನದ ಶೇ 82ರಷ್ಟು ಮಕ್ಕಳು ಮೊದಲ ಡೋಸ್ ಪಡೆದುಕೊಂಡಿದ್ದರೆ, ಶೇ 68ರಷ್ಟು ಜನರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ.
ಆರೋಗ್ಯ ಸಚಿವಾಲಯ ಕಳೆದ ವಾರವಷ್ಟೇ ಕೋವಿಡ್ 19 ಲಸಿಕೆಯ ಎರಡನೇ ಮತ್ತು ಮುಂಜಾಗ್ರತಾ ಡೋಸ್ಗಳ ನಡುವಿನ ಅಂತರವನ್ನು ಎಲ್ಲ ಫಲಾನುಭವಿಗಳಿಗೂ 9 ರಿಂದ 6 ತಿಂಗಳುಗಳಿಗೆ ಇಳಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಈ ಸಾಧನೆ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಭಾರತ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ. 200 ಕೋಟಿ ಲಸಿಕೆ ಡೋಸ್ಗಳ ವಿಶೇಷ ಅಂಕಿಯನ್ನು ದಾಟಿರುವುದಕ್ಕೆ ಎಲ್ಲ ಭಾರತೀಯರಿಗೂ ಅಭಿನಂದನೆಗಳು. ಪ್ರಮಾಣ ಮತ್ತು ವೇಗದಲ್ಲಿ ಭಾರತದ ಲಸಿಕಾಕರಣ ಯೋಜನೆಗೆ ಸಮನಾಗಿಲ್ಲದಂತೆ ಮಾಡುವಲ್ಲಿ ಕೊಡುಗೆ ನೀಡಿರುವ ಎಲ್ಲರ ಬಗ್ಗೆ ಹೆಮ್ಮೆಯಾಗುತ್ತಿದೆ. ಇದು ಕೋವಿಡ್ 19 ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಿದೆ” ಎಂದು ಅವರು ಹೇಳಿದ್ದಾರೆ.