ಕೋವಿಡ್ -19 ಮಹಾಮಾರಿಯ ಈ ಸಂದರ್ಭದಲ್ಲಿ ತೀವ್ರ ಉಸಿರಾಟ, ಆಗಾಗ ಕೆಮ್ಮು ಹಾಗೂ ದೇಹದ ಬೆಳವಣಿಗೆಯ ತೊಂದರೆಯಿಂದ ಬಳಲುತ್ತಿದ್ದ 8 ತಿಂಗಳ ಮಗುವೊಂದನ್ನು ಚಿಕಿತ್ಸೆಗಾಗಿ ಅವಸರದಿಂಲೇ ಆಸ್ಪತ್ರೆಗೆ ತೆಗೆದುಕೊಂಡು ಬರಲಾಗಿತ್ತು. ಸಮಗ್ರವಾಗಿ ತಪಾಸಿಸಿದಾಗ ಅದಕ್ಕೆ ಜನ್ಮತಃವಾಗಿ ಟ್ರಂಕಸ್ ಅರ್ಟರಿಯೊಸಿಸ್ ಎಂಬ ತೀವ್ರತರವಾದ ಹೃದಯ ಖಾಯಿಲೆಯಿಂದ ಬಳಲುತ್ತಿರುವದು ಕಂಡುಬಂತು. ತುರ್ತಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಿ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ಪ್ರವೀಣ ತಂಬ್ರಳ್ಳಿಮಠ ಹಾಗೂ ಅವರ ತಂಡವು ಯಶಸ್ವಿಯಾಗಿದೆ.
ಟ್ರಂಕಸ್ ಅರ್ಟರಿಯೊಸಿಸ್ ಎಂಬುದು ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯಾಗಿದ್ದು, ಜನ್ಮಪಡೆಯುವ 15000 ಮಕ್ಕಳಲ್ಲಿ ಓರ್ವ ಮಗುವಿಗೆ ಈ ಖಾಯಿಲೆಯು ಕಂಡುಬರುತ್ತದೆ. ಜನ್ಮತವಾಗಿ ಮಕ್ಕಳಲ್ಲಿ ಕಂಡುಬರುವ ಈ ಖಾಯಿಲೆಯು ಅತ್ಯಂತ ಅಪರೂಪ ಮತ್ತು ಕ್ಲಿಷ್ಟಕರವಾಗಿದ್ದು ಸಾಮಾನ್ಯವಾಗಿ ಮುಖ್ಯ ಶ್ವಾಸಕೋಶದ ಎರಡು ನಾಳ( ಅಪಧಮನಿ ಮತ್ತು ಮಹಾಅಪಧಮನಿ)ಗಳಿಗೆ ಬದಲಾಗಿ ಒಂದೇ ಒಂದು ರಕ್ತನಾಳವನ್ನು ಹೊಂದಿರುತ್ತದೆ. ಇದು ಅನುವಂಶಿಕತೆ ಹಾಗೂ ಅನಾರೋಗ್ಯಯುತ ಜೀವನದಿಂದ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಇದರಿಂದ ಒಂದೇ ಮಗುವಿಗೆ ತೀವ್ರ ಸಮಸ್ಯೆಯನ್ನುಂಟು ಮಾಡುತ್ತದೆ.
ಶ್ವಾಸಕೋಶ ಮತ್ತು ಹೃದಯಕ್ಕೆ ರಕ್ತಸಂಚಾರವಾಗಲು ಒಂದೇ ರಕ್ತನಾಳವಿರುವದರಿಂದ ಇದನ್ನು ಬೇರ್ಪಡಿಸುವದು ಅತ್ಯಂತ ಕ್ಲಿಷ್ಟಕರವಾಗಿತ್ತು. ಇಂಥ ಸಮಸ್ಯೆಗಳಿಂದ ಬಳಲುವ ಬಹುತೇಕ ಮಕ್ಕಳು ಸಾವನ್ನಪ್ಪುತ್ತವೆ. ಈ ರೀತಿಯ ತೊಂದರೆಯನ್ನು ಹೊಂದಿದ್ದರೆ ಕೇವಲ ಶಸ್ತ್ರಚಿಕಿತ್ಸೆಯೊಂದೇ ದಾರಿ. ಅಪಧಮನಿ ಮತ್ತು ವೆಂಟ್ರಿಕ್ಯುಲರ ಕೋಣೆಗಳೆರಡನ್ನು ಬೇರೆಬೆರೆಯಾಗಿ ಮಾಡಲಾಗುತ್ತದೆ. 8 ತಿಂಗಳಾದರೂ ಕೇವಲ 3.6 ತಿಂಗಳ ದೇಹದ ತೂಕ ಹೊಂದಿರುವ ಮಗುವಿನ ಶಸ್ತ್ರಚಿಕಿತ್ಸೆ ನೆರವೇರಿಸುವದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಆದರೆ ಡಾ. ಪ್ರವೀಣ ತಂಬ್ರಳ್ಳಿಮಠ ಹಾಗೂ ಅವರ ತಂಡವು ಈ ಶಸ್ತ್ರಚಿಕಿತ್ಸೆಯನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿ ಮಗುವಿನ ಪ್ರಾಣ ಉಳಿಸಿದರು. ಆದರೆ ಮಗು ಚೇತರಿಸಿಕೊಳ್ಳಲು ಬಹಳಷ್ಟು ಸಮಯ ಬೇಕಾಗಿದ್ದರಿಂದ ಸುಮಾರು 2 ವಾರಗಳ ಕಾಲ ಕೃತಕ ಉಸಿರಾಟದ ಹಾಗೂ ಜೀವಸಾಧಕಗಳನ್ನು ಅಳವಡಿಸಲಾಗಿತ್ತು.
ಡಾ. ಶಂಕರಗೌಡಾ ಪಾಟೀಲ, ಡಾ. ಅಭಿಜೀತ ಶಿತೋಳೆ, ಡಾ. ಅಭಿಷೇಕ ಪ್ರಭು, ಚಿಕ್ಕಮಕ್ಕಳ ಇಂಟೆನ್ಸಿವಿಸ್ಟ ಡಾ. ನಿಧಿ, ಅವರು ಶಸ್ತ್ರಚಿಕಿತ್ಸೆಗೆ ಸಾಥ ನೀಡಿದರು. ಆಯುಷ್ಯಮಾನ ಭಾರತ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ಈ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನೇರವೇರಿಸಲಾಗಿದೆ. ಸವದತ್ತಿ ತಾಲೂಕಿನ ಹಳ್ಳಿಯಿಂದ ಬಂದ ಈ ಮಗುವಿನ ಪಾಲಕರು ಮಗುವನ್ನು ಉಳಿಸಿದ ವೈದ್ಯರಿಗೆ ಹೃದಯಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅತ್ಯಂತ ವಿಶೇಷ ವಿಧಾನದ ಮೂಲಕ ಮಗು ಚೇತರಿಸಿಕೊಂಡು ಶ್ವಾಸಕೊಶದ ಒತ್ತಡ ಕಡಿಮೆಯಾಗಿ, ಹೃದಯದ ಕಾರ್ಯ ಸ್ಥಿರವಾಯಿತು. ಜೀವರಕ್ಷಕಗಳನ್ನು ಹಿಂತೆಗೆದುಕೊಳ್ಳಲಾಯಿತು. ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಸಂಸ್ಥೆಯ ಆಡಳಿತ ಮಂಡಳಿ ಹಾಗೂ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಅಭಿನಂದಿಸಿದ್ದಾರೆ.