ಅಪರೂಪದ ಲೀವರ್ ಡಯಾಲಿಸಿಸ್ ಚಿಕಿತ್ಸೆ ನೀಡಿದ ಡಾ.ಸಂದೀಪ ಹುಯಿಲಗೋಳ

ಬಾಗಲಕೋಟೆ: ಲೀವರ್‌ನ ತೀವ್ರ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ನಗರದ ಮೂತ್ರಪಿಂಡ ತಜ್ಞ ಡಾ.ಸಂದೀಪ ಹುಯಿಲಗೋಳ, ಡಯಾಲಿಸಿಸ್ ಯಂತ್ರದ ಮೂಲಕ ಅಪರೂಪದ ಚಿಕಿತ್ಸೆ ನೀಡಿ ಅಪಾಯದಿಂದ ಪಾರುಪಾಡಿದ್ದಾರೆ.
ಬೆಂಗಳೂರು ಹೊರತುಪಡಿಸಿದರೆ ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಚಿಕಿತ್ಸೆ ಪ್ರಯೋಗ ನಡೆದಿದ್ದು, ರೋಗಿಗೆ ಮರುಜೀವ ನೀಡಿದಂತಾಗಿದೆ.
ಬಾಗಲಕೋಟೆ ಜಿಲ್ಲೆಯ 44 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಪಡೆಯಲು ನಗರದ ಡಾ.ಪಾಟೀಲ ಮೆಡಿಕೇರ್ ಆಸ್ಪತ್ರೆಗೆ ಬಂದಿದ್ದರು.
ಯಕೃತ್ತಿನ ತೀವ್ರ ತೊಂದರೆ (ಕ್ರಾನಿಕ್ ಲಿವರ್ ಡಿಸ್ಸಾರ್ಡರ್) ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಹೊಟ್ಟೆಯ ಭಾಗದಲ್ಲಿ ತೀವ್ರ ಸೋಂಕಿನಿಂದ (ಸ್ಪಾಂಟೇನಿಯಸ್ ಬ್ಯಾಕ್ಟೀರಿಯಲ್ ಪೆರಿಟೋನಿಟೀಸ್) ಬಳಲುತ್ತಿದ್ದ ಇವರ ಹೊಟ್ಟೆ ಊದಿಕೊಂಡು ರಕ್ತದೊತ್ತಡ ತುಂಬಾ ಕಡಿಮೆಯಾಗಿತ್ತು.
ಈ ಸಂದರ್ಭದಲ್ಲಿ ಅವರಿಗೆ ಮಾಲಿಕ್ಯುಲರ್ ಎಡ್ಸಾರ್ಪಷನ್ ರಿಸರ್ಕ್ಯುಲೇಟಿಂಗ್ ಸಿಸ್ಟಮ್ (ಎಂಎಆರ್‌ಎಸ್) ಮೂಲಕ ಚಿಕಿತ್ಸೆ ನೀಡಬೇಕಾಗಿತ್ತು. ಈ ಚಿಕಿತ್ಸೆ ವಿಧಾನ ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದೆ ಮತ್ತು ದುಬಾರಿಯಾಗಿದೆ ಎಂಬುದನ್ನು ತಿಳಿದ ಡಾ.ಸಂದೀಪ, ರೋಗಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸಬೇಕೆಂಬ ಕಳಕಳಿಯಿಂದ ಕಿಡ್ನಿ ಡಯಾಲಿಸಿಸ್ ಯಂತ್ರಕ್ಕೆ ಮೂರು ವಿಶೇಷ ಫಿಲ್ಟರ್‌ಗಳನ್ನು ಜೋಡಿಸಿ ಡಬಲ್ ಪ್ಲಾಸ್ಮಾ ಮಾಲಿಕ್ಯುಲರ್ ಎಡ್ಸಾರ್ಪಷನ್ ಸಿಸ್ಟಮ್ (ಡಿಪಿಎಂಎಎಸ್) ವಿಧಾನದ ಮೂಲಕ ಚಿಕಿತ್ಸೆ ನೀಡಿದರು. ಸದ್ಯ ರೋಗಿ ಗುಣಮುಖನಾಗಿದ್ದು, ಮನೆಗೆ ಕಳುಹಿಸಲಾಗಿದೆ.

ಡಾ.ಪಾಟೀಲ ಮೆಡಿಕೇರ್‌ನ ಹಿರಿಯ ವೈದ್ಯ ಡಾ.ಸುಭಾಸ್ ಪಾಟೀಲ ಅವರ ಮಾರ್ಗದರ್ಶನದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಡಯಾಲಿಸಿಸ್ ಹಾಗೂ ನರ್ಸಿಂಗ್ ತಂಡದವರೂ ಸಹಕರಿಸಿದ್ದಾರೆ ಎಂದು ಡಾ.ಸಂದೀಪ ತಿಳಿಸಿದ್ದಾರೆ.

WhatsApp Image 2022 04 10 at 7.28.23 AM

ಹಲವು ಚಿಕಿತ್ಸೆಗೆಳಿಗೆ ಮುನ್ನುಡಿ

ರೋಗಿಗೆ ಆರ್ಥಿಕ ಹೊರೆ ತಪ್ಪಿಸಲು ಹಾಗೂ ಅಗತ್ಯಕ್ಕೆ ಅನುಗುಣವಾಗಿ ಸಂಶೋಧನಾತ್ಮಕ ವಿಧಾನದಲ್ಲಿ ಚಿಕಿತ್ಸೆ ನೀಡುವ ಡಾ.ಸಂದೀಪ ಹುಯಿಲಗೋಳ ಹಲವು ತೊಂದರೆಗಳಿಗೆ ಜಿಲ್ಲೆಯಲ್ಲೇ ಮೊದಲ ಬಾರಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ. ದೇಹದಲ್ಲಿ ಅನವಶ್ಯಕವಾಗಿ ರೋಗ ನಿರೋಧಕಗಳು ಹೆಚ್ಚಾಗಿ ಉಂಟಾಗುವ ಪುಪ್ಪಸ ಹಾಗೂ ನರರೋಗ ತೊಂದರೆಗಳಿಗೆ (ಜಿಬಿ ಸಿಂಡ್ರೋಮ್) ಪ್ಲಾಸ್ಮಾ ಫೆರೆಸಿಸ್ ಚಿಕಿತ್ಸೆಯನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ನೀಡಿದ ಖ್ಯಾತಿ ಇವರದ್ದಾಗಿದೆ. ಅದೇ ರೀತಿ ಚಿಕ್ಕಮಕ್ಕಳಿಗೆ ಹೆಮೋಡಯಾಲಿಸಿಸ್, ಮೂತ್ರಪಿಂಡದ ಬಯಾಪ್ಸಿ, ಎಎನ್‌ಸಿಎ ವ್ಯಾಸ್ಕುಲೈಟಿಸ್, ತೀವ್ರ ತರಹದ ಪಿಡಿ ಮತ್ತು ಸಿಎಪಿಡಿ ಕ್ಯಾಥೇಟರ್ ಅಳವಡಿಕೆಯಂಥ ಸವಾಲಿನ ಚಿಕಿತ್ಸೆಗಳನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಕೈಗೊಂಡ ಹೆಗ್ಗಳಿಗೆ ಇವರಿಗಿದೆ. ರಾಯಲ್ ಕಾಲೇಜ್ ಆಫ್ ಫಿಜಿಷಿಯನ್ಸ್ ಹಾಗೂ ಅಮೆರಿಕನ್ ನೆಫ್ರಾಲಾಜಿ ಸೊಸೈಟಿಯ ಫೆಲೋಷಿಪ್ ಪಡೆದ ಡಾ.ಸಂದೀಪ ವೈದ್ಯಕೀಯ ಶಿಕ್ಷಣದಲ್ಲೂ ವಿಶೇಷ ಆಸಕ್ತಿ ಹೊಂದಿದ್ದು, ಶುಶ್ರೂಷಕರು ಹಾಗೂ ಅರೆವೈದ್ಯರಿಗೆ ವೈದ್ಯಕೀಯ ವಿಷಯಗಳನ್ನು ಕನ್ನಡದಲ್ಲಿ ಕಲಿಸಲು ಪ್ರಿಪೆಡ್ ಮೊಬೈಲ್ ಆ್ಯಪ್ ಕೂಡ ಆರಂಭಿಸಿದ್ದಾರೆ.

ಯಾವುದೇ ಕಾರಣದಿಂದ ಲೀವರ್‌ಗೆ ತೀವ್ರ ತೊಂದರೆಯಾದರೆ, ಸೋಂಕು ತಗುಲಿದರೆ ಡಿಪಿಎಂಎಎಸ್ ಚಿಕಿತ್ಸೆ ನೀಡಬಹುದು. ಲೀವರ್ ಕಸಿ ಮಾಡುವ ಸಂದರ್ಭದಲ್ಲೂ ಅಗತ್ಯವಿದ್ದರೆ ಈ ಚಿಕಿತ್ಸೆ ನೀಡಲಾಗುತ್ತದೆ. ಬೆಂಗಳೂರು ಹೊರತುಪಡಿಸಿದರೆ ಕರ್ನಾಟಕದ ಉಳಿದ ಭಾಗಗಗಳಲ್ಲಿ ಈ ಚಿಕಿತ್ಸೆ ಸಿಗುವುದು ವಿರಳ. ರೋಗಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯಲಿ ಎಂಬ ಕಾಳಜಿಯಿಂದ ಮೊದಲ ಬಾರಿ ಈ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೇವೆ.
ಡಾ.ಸಂದೀಪ ಹುಯಿಲಗೋಳ, ಮೂತ್ರಪಿಂಡ ತಜ್ಞ, ಬಾಗಲಕೋಟೆ

Popular Doctors

Related Articles