ನಿಷ್ಕಳಂಕ ಕಾಯಕದ ಆಪತ್ಭಾಂದವ ಅಂಬ್ಯುಲನ್ಸ್

ಆಧುನಿಕ ಜಗತ್ತಿನೊಂದಿಗೆ ಜೀವನ ಶೈಲಿ ಬದಲಾಗುತ್ತ ಅತ್ಯಂತ ವೇಗದಲ್ಲಿ ಸಾಗುತ್ತಿದೆ. ಇದರಿಂದ ಆಕಸ್ಮಿಕ ಅವಘಡಗಳು ಸಂಭವಿಸಿ, ಗಾಯಾಳುಗಳು ಆಸ್ಪತ್ರೆಗೆ ತಲುಪವದರೊಳಗೆ ಜೀವಹಾನಿಯಾಗುತ್ತಿವೆ. ಆದ್ದರಿಂದ ಇದನ್ನು ತಪ್ಪಿಸಲು ಮಧ್ಯದಲ್ಲಿರುವ ಸುವರ್ಣ ಘಳಿಗೆಯ ಸದುಪಯೋಗ ಪಡೆದು ಜೀವ ಉಳಿಸುವದಕ್ಕೋಸ್ಕರ ಅತ್ಯಾಧುನಿಕ ಸೌಲಭ್ಯಗಳುಳ್ಳ ಅಂಬ್ಯುಲನ್ಸ್‍ಗಳು ಇಂದು ಕಾರ್ಯಾಚರಣೆ ನಡೆಸುತ್ತಿವೆ. ಟ್ರಾಮಾ ಕೇರ ಟ್ರಾಮಾ ಅಂಬ್ಯುಲನ್ಸ್ ಪ್ರಸ್ತುತ ವೈದ್ಯ ವಿಜ್ಞಾನದಲ್ಲಿ ಹೆಚ್ಚು ಕೇಳಿ ಬರುತ್ತಿದೆ. ಆಕಸ್ಮಿಕ ಅಪಘಾತಗಳಲ್ಲಿ ಸಿಲುಕಿ ಜೀವಭಯವನ್ನು ಎದುರಿಸುತ್ತಿರುವವರಿಗೆ ಸಂಜೀವಿನಿಯಾಗಿ ನಿಲ್ಲಬಲ್ಲ ಸಾಮರ್ಥ್ಯವನ್ನು ಹೊಂದಿರುವದರಿಂದ ಯಮರಾಜನೂ ಸಹಿತ ನಿಸ್ಸಾಯಕನಾಗಿ ಮರಳಿ ಹೋಗುವದರಲ್ಲಿ ಸಂದೇಹವಿಲ್ಲ. ಸಾವಿನ ದವಡೆಯಿಂದ ಆಚೆ ತಂದು ಜೀವದಾನ ನೀಡುವ ಮಹೊನ್ನತ ಸೇವೆಗೆ ಸನ್ನದ್ದವಾಗಿರುತ್ತವೆ. ಸಮಯಬದ್ದ ಮಿತಿಯೊಳಗೆ ಕಾರ್ಯನಿರ್ವಹಿಸುತ್ತಿರುವದರಿಂದ ಇಂದು ಲಕ್ಷಾಂತರ ಸಾವುಗಳು ಮುಂದೂಡಲ್ಪಟ್ಟಿವೆ.

ಸಾವಿರಾರು ವರ್ಷಗಳ ಹಿಂದೆ 10ನೇ ಶತಮಾನದ ಆಚೀಚೆ ಮಾನಸಿಕ ಸಮಸ್ಯೆ ಹಾಗೂ ಕುಷ್ಠ ರೋಗದಿಂದ ಬಳಲುವ ರೋಗಿಗಳನ್ನು ಕುದರೆ ಬಂಡಿಗಳ ಮುಖೇನ ಒತ್ತಾಯಪೂರ್ವಕವಾಗಿ ಚಿಕಿತ್ಸೆಗಾಗಿ ಕಳುಹಿಸಲಾಗುತ್ತಿತ್ತೆಂದು ಇತಿಹಾಸ ಹೇಳುತ್ತದೆ. ಇದಕ್ಕೆ ಮೂಲ ಪಿತೃ ಆಂಗ್ಲರು. 11ನೇ ಶತಮಾನದಲ್ಲಿ ಯುದ್ದಭೂಮಿಯ ಗಾಯಾಗಳನ್ನು ಚಿಕಿತ್ಸಾ ಸ್ಥಳಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದುವೇ ಋಗ್ಣವಾಹಕದ ಮೂಲ ಎಂದು ನಂಬಿಕೆ. ಆದರೆ ಇವುಗಳಿಗೆ ಬಲವಾದ ಸಾಕ್ಷಾಧಾರಗಳು ದೊರೆಯುವುದಿಲ್ಲ. ಆದರೆ ಇತಿಹಾಸದ ಪುಟಗಳನ್ನು ಇನ್ನೂ ತಿರುವಿ ಹಾಕಿದಾಗ ಕ್ರಿ. ಶ. 1487 ನೆನಪಾಗುತ್ತದೆ. ಸ್ಪೇನ್ ರಾಣಿ ಇಸೆಬಿಲ್ಲಾ ಇದನ್ನು ಬಳಸಿಕೊಂಡಳು. ಪ್ರಪ್ರಥಮವಾಗಿ ಮಿಲಟರಿ ಆಸ್ಪತ್ರೆಗಳನ್ನು ನಿರ್ಮಿಸಿ, ಅಲ್ಲಿಗೆ ಯುದ್ದಪೀಡಿತ ಗಾಯಾಳುಗಳನ್ನು ವಾಹನದ ಮೂಲಕ ಯುದ್ದಭೂಮಿಯಿಂದ ಸಾಗಿಸಲಾಗುತ್ತಿತ್ತು.

ಪ್ರಮುಖ ಬದಲಾವಣೆ ಕಂಡಿದ್ದು, 1766 ರಿಂದ 1842ರ ಮದ್ಯೆ. ನೆಪೊಲಿಯನ್ ಬೊನಾಪಾರ್ಟೆಯ ವೈದ್ಯಾಧಿಕಾರಿ ಡೊಮೆನಿಕ್ ಜೀನ್ ಲಾರ್ರೆ ಎರಡು ಅಥವಾ ನಾಲ್ಕು ಕುದುರೆಗಳ ಬಳಕೆ ಮಾಡಿಕೊಂಡು ಅತ್ಯಂತ ವೇಗವಾಗಿ ಗಾಯಾಳುಗಳನ್ನು ಸಾಗಿಸುವ ಹೊಸ ಅಂಬ್ಯುಲನ್ಸ್ ಪದ್ದತಿಯನ್ನು ತೋರ್ಪಡಿಸಿದನು. ಇದಕ್ಕೆ ಹಾರುವ ಅಂಬ್ಯುಲನ್ಸ ಎಂದು ಕರೆಯಲಾಯಿತು ಇದು ಇತಿಹಾಸ.

ಆಧುನಿಕ ಸ್ಪರ್ಶ: 1832ರಲ್ಲಿ ಲಂಡನನಲ್ಲಿ ಕಾಲರಾ ರೋಗಿಗಳನ್ನು ವೇಗವಾಗಿ ಹೊತ್ತೊಯ್ಯುವ ಕಾರ್ಯ ಆರಂಭವಾಯಿತು. 1861 ರಿಂದ 1865ರ ಸಮಯದಲ್ಲಿ ಅಮೇರಿಕಾ ನಾಗರೀಕ ಯುದ್ದ ಕಾಲದಲ್ಲಿ ಜೊಸೆಫ್ ಬರ್ನೆಸ್ ಮತ್ತು ಜೊನಾಥನ್ ಲೆಟರಮ್ಯಾನ ಎಂಬುವವರು ಸುಸಜ್ಜಿತ ಚಿಕಿತ್ಸೆಯನ್ನು ವಾಹನದೊಳಗೆ ನೀಡುವ ಕಾಯಕಕ್ಕೆ ಮುನ್ನುಡಿ ಹಾಕಿದರು. ಇನ್ನು 1865ರಲ್ಲಿ ಪ್ರಪ್ರಥಮ ಬಾರಿಗೆ ಸಂಪೂರ್ಣ ಆಸ್ಪತ್ರೆ ಆಧಾರಿತ ವೈದ್ಯಕೀಯ ಸೇವೆಯು ಸಿನ್ಸಿನಾಟಿ ಓಯಿಯೋ ಆಸ್ಪತ್ರೆಯ ಅಂಬ್ಯುಲನ್ಸನಲ್ಲಿ ಕಾಣಬಹುದಾಗಿತ್ತು. ಈ ಆಸ್ಪತ್ರೆ ಆಗಿನ ಸಂದರ್ಭದಲ್ಲಿ (1870) 1401 ತುರ್ತು ಕರೆಗಳಿಗೆ ಓಗೊಟ್ಟು ರೋಗಿಗಳನ್ನು ಕರೆತಂದು ಜೀವ ಉಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದವು.

1887ರಲ್ಲಿ ಸೆಂಟ ಜಾನ್ ಅಂಬ್ಯುಲನ್ಸ ಬ್ರ್ರಿಗೇಡ ಮತ್ತು 1910ರಲ್ಲಿ ಸೆಂಟ ಜೇಮ್ಸ್ ಗೇಟ್‍ನ ಡಬ್ಲಿನ್ ಬ್ರಿಗೇಡ ವ್ಯಾಪಕವಾದ ಪ್ರಥಮ ಅಂಬ್ಯುಲನ್ಸ ಸೇವೆಯನ್ನು ಉಚಿತವಾಗಿ ಸಾರ್ವಜನಿಕವಾಗಿ ಆರಂಭಿಸಿದವು. ಕಾಲಾನಂತರದಲ್ಲಿ 20ನೇ ಶತಮಾನದ ಆದಿ ಮತ್ತು ಮಧ್ಯಭಾಗದಲ್ಲಿ ಅಟೊಮೊಬೈಲ್ ಕ್ಷೇತ್ರದಲ್ಲಿ ಗಣನೀಯ ಬೆಳವಣಿಗೆಯ ಪರಿಣಾಮವಾಗಿ ಅಂಬ್ಯುಲನ್ಸಗಳಿಗೆ ಹೊಸಜೀವ ಬಂದಿತು. 1905ರಲ್ಲಿ ಪ್ರಥಮ ಬಾರಿಗೆ ಅಂಬ್ಯುಲನ್ಸ ಸೇವೆಯನ್ನು ಮೂರು ಚಕ್ರಗಳುಳ್ಳ ವಾಹನದ ಮೂಲಕ ಪ್ರಥಮ ಹಾಗೂ ದ್ವೀತಿಯ ಜಾಗತಿಕ ಯುದ್ದಗಳಲ್ಲಿ, ಕೋರಿಯಾ ಯುದ್ದದಲ್ಲಿ ಯುದ್ದೋಪಾದಿಯಲ್ಲಿ ಅಂಬ್ಯುಲನ್ಸ ಸಾರ್ವಜನಿಕ ಬದುಕಿಗೆ ಕಾಲಿಟ್ಟಿದೆ. ಇತ್ತೀಚಿಗಂತೂ ಇದರಲ್ಲಾದ ಬೆಳವಣಿಗೆಗಳು ಅಗಣಿತ. ಏನೆಲ್ಲಾ ವೈದ್ಯ ಕೌಶಲ್ಯಗಳನ್ನು ಬಳಸಿಕೊಳ್ಳಬೇಕಾಗಿದೆಯೋ ಅವೆಲ್ಲವೂ ಇಂದಿನ ಅಂಬ್ಯುಲನ್ಸ (ಋಗ್ಣವಾಹಕ)ಗಳಲ್ಲಿ ಇವೆ.

ಸೇಂಟ ಜಾನ್ಸ ಅಂಬ್ಯುಲನ್ಸ ಭಾರತೀಯ ಶಾಖೆಯು ವೈದ್ಯಕೀಯ ಪ್ರಥಮ ಚಿಕಿತ್ಸೆಯ ತರಬೇತಿಯನ್ನು 23 ರಾಜ ಕೇಂದ್ರ, 9 ರೇಲ್ವೆ ಕೇಂದ್ರ, 3 ಕೇಂದ್ರಾಡಳಿತ ಕೇಂದ್ರ, 670 ಪ್ರಾದೇಶಿಕ ಮತ್ತು ಸ್ಥಳೀಯ ಕೇಂದ್ರಗಳು 29 ಜಿಲ್ಲಾ ಕೇಂದ್ರ ಇನ್ನೀತರ 2400 ಕೇಂದ್ರಗಳಲ್ಲಿ ಅಂಬ್ಯುಲನ್ಸ ಸೇವೆಯನ್ನು ಪ್ರಾರಂಭಿಸಿ ಅಂಬ್ಯುಲನ್ಸ ಅನ್ನು ಇನ್ನಷ್ಟು ಜನಸ್ನೇಯಿಯಾಗಿಸಿತು. ಪ್ರಥಮ, ದ್ವೀತೀಯ ವಿಶ್ವ ಹಾಗೂ ಕೋರಿಯನ್ ಯುದ್ದದಲ್ಲಿ ಮಿಲಿಟರಿ ಪಡೆಗಳು ಏರ ಅಂಬ್ಯುಲನ್ಸ ಮೂಲಕ ಗಾಯಾಳುಗಳನ್ನು ಚಿಕಿತ್ಸಾ ಕೇಂದ್ರಕ್ಕೆ ಸಾಗಿಸುವಲ್ಲಿ ಕಾರ್ಯನಿರತವಾದವು.

ಅಂಬ್ಯುಲನ್ಸನ ಅನಿವಾರ್ಯತೆ ಮತ್ತು ಅಗತ್ಯತೆ: ಅಕ್ಷರಶಃ ಅಂಬ್ಯುಲನ್ಸ ಜೀವರಕ್ಷಕ ದೇವತೆಯಾಗಿದೆ. ಸಾವಿಗೆ ಸೆಡ್ಡು ಹೊಡೆದು ಯಮನ ಕಬಂಧಭಾಹುಗಳನ್ನು ತುಂಡರಿಸಿ ಕಾರ್ಯನಿರ್ವಹಿಸುತ್ತಿದೆ. ಆಧುನಿಕ ಭರಾಟೆಯ ಯುಗದಲ್ಲಿ ಆಕಸ್ಮಿಕ ಅಪಘಾತಗಳಿಗೆ ನಮ್ಮನ್ನು ನಾವು ಒಡ್ಡಿಕೊಂಡಿದ್ದೇವೆ. ಮನೋ ದೈಹಿಕ ಈ ಅಪಘಾತಗಳು ಎದುರಾದಾಗ ಸುವರ್ಣ ಘಳಿಗೆಯ ಅವಧಿಯೊಳಗೆ ವೈದ್ಯರಿಗೆ ಅರ್ಪಿಸುವ ಕಾರ್ಯ ಆಗಬೇಕಿದೆ. ಅದನ್ನು ಅಂಬ್ಯುಲನ್ಸ್‍ಗಳು ತಪ್ಪದೇ ನಿರ್ವಹಿಸುತ್ತಿವೆ.

108 ಅಂಬ್ಯುಲನ್ಸ ಸೇವೆಯು ಕರ್ನಾಟಕ ರಾಜ್ಯ ಸೇರಿ ದೇಶದ ಸುಮಾರು 17 ರಾಜ್ಯಗಳಲ್ಲಿ ಸೇವೆಯನ್ನು ನೀಡುತ್ತಿದೆ. ಆಂದ್ರ ಪ್ರದೇಶದ ಮುಖ್ಯಮಂತ್ರಿ ದಿ. ರಾಜಶೇಖರ ರೆಡ್ಡಿ ಅವರು ದೇಶದಲ್ಲಿ ಪ್ರಥಮ ಬಾರಿಗೆ ಈ ಸೇವೆಯನ್ನು ಪ್ರಾರಂಭಿಸಿದರು. ಇಂದು ಈ ಸೇವೆಯು ವಿವಿಧ ಭಾಗಗಳಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ. 108 ಮಾದರಿಯನ್ನು ಎಲ್ಲ ರಾಜ್ಯಗಳಲ್ಲಿ ಅಳವಡಿಸಲಾಗುತ್ತಿದೆ. ಇಲ್ಲಿಯವರೆಗೆ ಲಕ್ಷಾಂತರ ಜೀವಗಳನ್ನು ಉಳಿಸಿದ ಖ್ಯಾತಿ ಇದಕ್ಕೆ ಸಲ್ಲುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೇಂದ್ರ ಸರಕಾರವು ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಏರ್ ಅಂಬ್ಯುಲನ್ಸ್ ಸೇವೆಗೆ ಚಾಲನೆ ನೀಡಲು ಸಜ್ಜಾಗಿದೆ. ಈಗಾಗಲೇ ಹಲವಾರು ಖಾಸಗಿ ಆಸ್ಪತ್ರೆಗಳು ಏರ ಅಂಬ್ಯುಲನ್ಸ ಸೇವೆಯನ್ನು ನೀಡುತ್ತಿವೆ. ಆದರೆ ಅಂಬ್ಯುಲನ್ಸ ಸೇವೆಗೆ ಎಲ್ಲರಿಗೂ ಲಭಿಸುವಂತಾಗಲು ಪರಿಣಾಮಕಾರಿಯಾದ ಕಾರ್ಯಯೋಜನೆಯನ್ನು ರೂಪಿಸಬೇಕಿದೆ. ಪಶ್ಚಿಮ ಘಟ್ಟಗಳ ಪ್ರದೇಶಗಳಿಂದ ಕೂಡಿದ ಭಾಗದಲ್ಲಿ ಇನ್ನೂ ಅಂಬ್ಯುಲನ್ಸ ಸೇವೆ ಮರೀಚಿಕೆಯಾಗಿದೆ. ಹಲವಾರು ಪ್ರದೇಶಗಳಲ್ಲಿ ಗರ್ಭಿಣಿ ಸ್ತ್ರೀಯರು ಹಾಗೂ ಗಂಭಿರ ಖಾಯಿಲೆಗಳಿಂದ ಬಳಲುವ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಇಲ್ಲ. ಗುಡ್ಡಗಾಡು ಪ್ರದೇಶಗಳ ಜನರಿಗೆ ಶೀಘ್ರ ವೈದ್ಯಕೀಯ ಸೌಲಭ್ಯ ಸಿಗುವಂತಾಗಲು ಪರ್ಯಾಯ ಮಾರ್ಗಗಳನ್ನು ಹುಡುಕಿ, ಅವರನ್ನು ಶೀಘ್ರವೇ ಆಸ್ಪತ್ರೆಗೆ ತಲುಪಿಸಿ ಜೀವ ಹಾನಿಯನ್ನು ತಪ್ಪಿಸಬೇಕು.

ಒಂದೇ ಕರೆಗೆ ಓಗೊಟ್ಟು ಓಡಿಬರುವ ಅಂಬ್ಯುಲನ್ಸಗಳು ಅತ್ಯಂತ ಸುರಕ್ಷಿತವಾಗಿ ಅಷ್ಟೇ ವೇಗವಾಗಿ ಕೊಂಡೊಯ್ಯುವ ನಿಷ್ಕಳಂಕ ಕಾಯಕದಲ್ಲಿ ಲೀನವಾಗಿವೆ. ಪ್ರಕೃತಿ ವಿಕೋಪ, ರಸ್ತೆ ಅಪಘಾತಗಳು, ಅಗ್ನಿ ಅನಾಹುತಗಳು ಹಾಗೂ ಇನ್ನಿತರ ಘಟನೆಗಳು ಸಂಭವಿಸಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುವ ಜೀವಕ್ಕೆ ಮರು ಜೀವ ಕಳೆ ತುಬಲು ಇಂದು ಸಾಧ್ಯವಾಗಿದೆ ಎಂದರೆ ಅದಕ್ಕೆ ಅಂಬ್ಯುಲನ್ಸ ಎನ್ನುವ ಆಪತ್ಭಾಂದವನೇ ಕಾರಣ. ಯಾರು, ಏನು, ಎತ್ತ ಎಂಬುದನ್ನು ಗಮನಿಸದೇ ನೇರವಾಗಿ ಆಸ್ಪತ್ರೆಯ ಹಾಸಿಗೆಗೆ ತಂದು ಕಾಲ ಮಿತಿಯಲ್ಲಿಯೇ ತರುವ ಗುರುತರ ಜವಾಬ್ದಾರಿಯನ್ನು ಹೊತ್ತಿರುವ ಮರುಜೀವ ಹೊತ್ತಿಸುತ್ತಿರುವ ಅಂಬ್ಯುಲನ್ಸಗೆ ನನ್ನದೊಂದು ಹೃದಯಪೂರ್ವಕ ಸಲಾಂ…..ನಮಸ್ತೆ.

ಬಸವರಾಜ ಸೊಂಟನವರ

ಜನಸಂಪರ್ಕಾಧಿಕಾರಿ, ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಬೆಳಗಾವಿ

LEAVE A REPLY

Please enter your comment!
Please enter your name here